ನವದೆಹಲಿ: ಕೇಂದ್ರ ಸರ್ಕಾರದ ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡಣೆ (Delimitation Bill) ಮಸೂದೆಗೆ ಈಗಾಗಲೇ ಎನ್ಡಿಎ ಬಣಕ್ಕೆ ಹಲವು ವಿಪಕ್ಷಗಳು ಬೆಂಬಲ ಸೂಚಿಸಿದ್ದು, ಇಂಡಿಯಾ ಮೈತ್ರಿಕೂಟಕ್ಕೆ (INDIA BLOC) ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಸಹ ಮಸೂದೆಗೆ ಬೆಂಬಲ ಸೂಚಿಸಿ ಅಧಿಕೃತ ಘೋಷಣೆ ಮಾಡಿದೆ. ಇದೀಗ ಈ ಕುರಿತು ಚರ್ಚಿಸಿ ಬೆಂಬಲ ಹಿಂಪಡೆಯುವಂತೆ ಸೂಚಿಸಲು ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರ ನಿಯೋಗವು ನವೆಂಬರ್ 29, 2026 ರಂದು ಚೆನ್ನೈನಲ್ಲಿ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಹಾಗೂ ಮುಂಬೈನಲ್ಲಿ ಎನ್ಸಿಪಿ (ಎಸ್ಪಿ) ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿ ಮಾಡಲಿದೆ.
ರಾಹುಲ್ ಗಾಂಧಿ ಮಧ್ಯಾಹ್ನ 2 ರಿಂದ ಸಂಜೆ 5 ರ ನಡುವೆ ಸ್ಟಾಲಿನ್ ಅವರನ್ನು ಭೇಟಿ ಮಾಡಲಿದ್ದು, ನಂತರ ರಾತ್ರಿ 8 ಗಂಟೆಗೆ ಪವಾರ್ ಅವರೊಂದಿಗೆ ಚರ್ಚಿಸಲುವ ಮುಂಬೈಗೆ ಪ್ರಯಾಣಿಸಲಿದ್ದಾರೆ. ವರದಿಗಳ ಪ್ರಕಾರ ರೇವಂತ್ ರೆಡ್ಡಿ, ಡಿಕೆ ಶಿವಕುಮಾರ್ ಮತ್ತು ತೃಣಮೂಲ ಕಾಂಗ್ರೆಸ್ ನಾಯಕರಾದ ಮಮತಾ ಬ್ಯಾನರ್ಜಿ ಮತ್ತು ಅಭಿಷೇಕ್ ಬ್ಯಾನರ್ಜಿ ಮತ್ತು ಆರ್ಜೆಡಿ ಮತ್ತು ಸಮಾಜವಾದಿ ಪಕ್ಷದ ಪ್ರತಿನಿಧಿಗಳು ಸಹ ಎರಡು ಮಿತ್ರಪಕ್ಷಗಳೊಂದಿಗೆ ಚರ್ಚೆಗಾಗಿ ಚೆನ್ನೈ ಮತ್ತು ಮುಂಬೈಗೆ ಪ್ರಯಾಣಿಸುವ ಸಾಧ್ಯತೆಯಿದೆ.
ನವೆಂಬರ್ 30, 2026 ರಿಂದ ಆರಂಭವಾಗಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು 'ಸಂವಿಧಾನದ (132ನೇ ತಿದ್ದುಪಡಿ) ಮಸೂದೆ, 2026' ಅನ್ನು ಮಂಡಿಸಲಿದೆ. ಈ ಮಸೂದೆಯ ಪ್ರಕಾರ, ದೇಶದ ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನಗಳಲ್ಲಿ ಶೇ. 50 ರಷ್ಟು ಏಕರೂಪದ ಹೆಚ್ಚಳ ಮಾಡಲಾಗುತ್ತದೆ ಮತ್ತು 2051 ರವರೆಗೆ ರಾಜ್ಯಗಳ ನಡುವಿನ ಸ್ಥಾನಗಳ ಹಂಚಿಕೆಯ ಅನುಪಾತವನ್ನು ಯಥಾಸ್ಥಿತಿಯಲ್ಲಿ ಇರಿಸಲಾಗುತ್ತದೆ. ಈ ತಿದ್ದುಪಡಿಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗುವುದಿಲ್ಲ ಎಂಬ ಕಾರಣಕ್ಕೆ ಡಿಎಂಕೆ ಮತ್ತು ಎನ್ಸಿಪಿ (ಎಸ್ಪಿ) ಪಕ್ಷಗಳು ಮಸೂದೆಗೆ ಬೆಂಬಲ ಸೂಚಿಸಿವೆ.
ಮಸೂದೆಯು ರಾಜ್ಯಸಭೆಯಲ್ಲಿ ಅಂಗೀಕಾರಗೊಳ್ಳಲು ಕೇಂದ್ರ ಸರ್ಕಾರಕ್ಕೆ ವಿರೋಧ ಪಕ್ಷಗಳ ಕೆಲವು ಸದಸ್ಯರ ಬೆಂಬಲದ ಅಗತ್ಯವಿದೆ. ಡಿಎಂಕೆ ಮತ್ತು ಎನ್ಸಿಪಿ (ಎಸ್ಪಿ) ಬೆಂಬಲ ನೀಡಿದರೆ ಮಸೂದೆ ಸುಲಭವಾಗಿ ಪಾಸ್ ಆಗಲಿದೆ. ಇದನ್ನು ತಡೆಯಲು ಮತ್ತು ವಿರೋಧ ಪಕ್ಷಗಳ ಒಗ್ಗಟ್ಟು ಪ್ರದರ್ಶಿಸಲು, ಸ್ಟಾಲಿನ್ ಹಾಗೂ ಪವಾರ್ ಅವರ ಮನವೊಲಿಸಿ ಮಸೂದೆಯ ವಿರುದ್ಧ ಮತ ಚಲಾಯಿಸುವಂತೆ ಮಾಡುವುದು ಈ ಭೇಟಿಯ ಪ್ರಮುಖ ಉದ್ದೇಶವಾಗಿದೆ ಎಂದು ಮೂಲಗಳು ತಿಳಿಸಿವೆ.