ಭುವನೇಶ್ವರ: ಒಡಿಶಾದಲ್ಲಿ ಗುರುವಾರ ಭದ್ರತಾ ಪಡೆಗಳು ತೆಲುಗು ಮಾವೋವಾದಿಗಳ ಉನ್ನತ ಕಮಾಂಡರ್‌ನನ್ನು ಹತ್ಯೆಗೈದಿವೆ. ಸಿಪಿಐ (ಮಾವೋವಾದಿ) ನ ಉನ್ನತ ಶ್ರೇಣಿಯ ಕೇಂದ್ರ ಸಮಿತಿ ಸದಸ್ಯ ಮತ್ತು (Naxal Encounter) ಅದರ ಒಡಿಶಾ ಕಾರ್ಯಾಚರಣೆಗಳ ಮುಖ್ಯಸ್ಥ ಗಣೇಶ್ ಉಯಿಕೆನನ್ನು (69) ಕಂಧಮಲ್ ಮತ್ತು ಗಂಜಾಂ ಜಿಲ್ಲೆಗಳ ಗಡಿಯಲ್ಲಿರುವ ರಾಂಪಾ ಅರಣ್ಯ ಪ್ರದೇಶದಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ತಂಡಗಳು ಹತ್ಯೆ ಮಾಡಿವೆ. ಈ ಎನ್‌ಕೌಂಟರ್‌ನಲ್ಲಿ ಇಬ್ಬರು ಮಹಿಳಾ ಕಾರ್ಯಕರ್ತರು ಸೇರಿದಂತೆ ಇತರ ಮೂವರು ಮಾವೋವಾದಿಗಳು ಸಾವನ್ನಪ್ಪಿದ್ದಾರೆ.
ಬೆಳಿಗ್ಗೆ 9 ಗಂಟೆ ಸುಮಾರಿಗೆ, ರಂಭ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಸಶಸ್ತ್ರ ಮಾವೋವಾದಿಗಳ ತಂಡವನ್ನು ಸುತ್ತುವರಿದವು. ನಕ್ಸಲರು ಗುಂಡಿನ ದಾಳಿ ಆರಂಭಿಸಿದಾಗ ಭದ್ರತಾ ಪಡೆಗಳು ಗುಂಡಿನ ದಾಳಿ ಪ್ರಾರಂಭಿಸಿದ್ದವು. ಭಾರೀ ಗುಂಡಿನ ಚಕಮಕಿ ನಡೆಯಿತು. ಮಧ್ಯಾಹ್ನದ ಹೊತ್ತಿಗೆ, ಭದ್ರತಾ ಪಡೆಗಳು ಗಣೇಶ್ ಉಯಿಕೆ ಸೇರಿದಂತೆ ನಾಲ್ವರು ಮಾವೋವಾದಿಗಳನ್ನು ಎನ್‌ಕೌಂಟರ್ ಮಾಡಲಾಗಿದೆ. ಭದ್ರತಾ ಸಿಬ್ಬಂದಿ ಸ್ಥಳದಿಂದ ಎರಡು INSAS ರೈಫಲ್‌ಗಳು ಮತ್ತು .303 ರೈಫಲ್ ಸೇರಿದಂತೆ ಹೆಚ್ಚಿನ ಸಾಮರ್ಥ್ಯದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡರು.
ಗುಪ್ತಚರ ಇಲಾಖೆಯ ನಿರ್ದಿಷ್ಟ ಮಾಹಿತಿಯ ಮೇರೆಗೆ ಈ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿತ್ತು. ಕಂಧಮಾಲ್ ಜಿಲ್ಲೆಯ ಚಕಪಾಡ್ ಪೊಲೀಸ್ ಠಾಣಾ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಹಾಗೂ ಗಂಜಾಂ ಜಿಲ್ಲೆಯ ಗಡಿಭಾಗದಲ್ಲಿರುವ ರಂಭಾ ಅರಣ್ಯ ವಲಯದಲ್ಲಿ ಶೋಧ ನಡೆಸಲು ವಿಶೇಷ ಕಾರ್ಯಾಚರಣೆ ಪಡೆ , ಸಿಆರ್‌ಪಿಎಫ್ ಮತ್ತು ಗಡಿ ಭದ್ರತಾ ಪಡೆ ಸೇರಿದಂತೆ 20ಕ್ಕೂ ಹೆಚ್ಚು ತಂಡಗಳನ್ನು ನಿಯೋಜಿಸಲಾಗಿತ್ತು.
ಗಣೇಶ್ ಉಯಿಕೆ ಅವರ ಬಳಿ 1.1 ಕೋಟಿ ರೂ.ಗಳ ಬೃಹತ್ ಬಹುಮಾನವಿತ್ತು. ಈತ 40 ವರ್ಷಗಳಿಗೂ ಹೆಚ್ಚು ಕಾಲ ದಂಡಕಾರಣ್ಯ ವಿಶೇಷ ವಲಯ ಸಮಿತಿಯಲ್ಲಿ (DKSZC) ಪ್ರಮುಖ ಪಾತ್ರ ವಹಿಸಿದ್ದ. ರೆಡ್ ಕಾರಿಡಾರ್ ಎಂದು ಕರೆಯಲ್ಪಡುವ ಪ್ರದೇಶದಾದ್ಯಂತ ಕೇಂದ್ರ ನಾಯಕತ್ವ ಮತ್ತು ಸ್ಥಳೀಯ ಘಟಕಗಳ ನಡುವಿನ ಪ್ರಾಥಮಿಕ ಕೊಂಡಿಯಾಗಿದ್ದ.
ನಕ್ಸಲ್ ವಿರೋಧಿ ಕಾರ್ಯಾಚರಣೆ ವೇಳೆ ಐಇಡಿ ಸ್ಫೋಟ; ಇಬ್ಬರು ಯೋಧರಿಗೆ ಗಾಯ
2025 ರಲ್ಲಿ ನಾರಾಯಣಪುರ ಜಿಲ್ಲೆಯಲ್ಲಿಯೇ 298 ಮಾವೋವಾದಿ ಕಾರ್ಯಕರ್ತರು ಶರಣಾಗಿದ್ದಾರೆ. ಇದು ಮಾವೋವಾದಿ ಪ್ರಭಾವ ಕಡಿಮೆಯಾಗುತ್ತಿರುವುದನ್ನು ಹಾಗೂ ಶಾಂತಿ ಮತ್ತು ಅಭಿವೃದ್ಧಿ ಪ್ರಯತ್ನಗಳಲ್ಲಿ ಹೆಚ್ಚುತ್ತಿರುವ ನಂಬಿಕೆಯನ್ನು ಎತ್ತಿ ತೋರಿಸುತ್ತದೆ. ದೇಶದಲ್ಲಿ ಮಾವೋವಾದಿಗಳ ಹಾವಳಿಯನ್ನು ಕೊನೆಗೊಳಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾರ್ಚ್ 2026ರ ಗಡುವು ವಿಧಿಸಿದ್ದಾರೆ.