ಗುವಾಹಟಿ, ಡಿ.20: ಅಸ್ಸಾಂನ (Assam) ಹೊಜಾಯಿ ಜಿಲ್ಲೆಯಲ್ಲಿ ಶನಿವಾರ ಬೆಳಗಿನ ಜಾವ ಸೈರಾಂಗ್– ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್ ರೈಲು ಆನೆಗಳ ಗುಂಪಿಗೆ ಡಿಕ್ಕಿ ಹೊಡೆದ (train accident) ಪರಿಣಾಮ ಕನಿಷ್ಠ ಎಂಟು ಆನೆಗಳು (Elephant death) ಸಾವನ್ನಪ್ಪಿದ್ದು, ಒಂದು ಮರಿ ಗಾಯಗೊಂಡಿದೆ. ಈ ದುರಂತದ ಪರಿಣಾಮ ರೈಲು ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಆದರೆ ಪ್ರಯಾಣಿಕರಿಗೆ ಯಾವುದೇ ಸಾವು ಅಥವಾ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೈರಾಂಗ್– ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್ ಆನೆಗಳ ಗುಂಪಿಗೆ ಡಿಕ್ಕಿ ಹೊಡೆದ ಬಳಿಕ ಲೊಕೊಮೊಟಿವ್ ಹಾಗೂ ಐದು ಬೋಗಿಗಳು ಹಳಿ ತಪ್ಪಿವೆ. ಆದರೆ ಪ್ರಯಾಣಿಕರಿಗೆ ಯಾವುದೇ ಸಾವು ಅಥವಾ ಗಾಯಗಳಾಗಿಲ್ಲ. ಅರಣ್ಯ ಇಲಾಖೆಯ ಅಧಿಕಾರಿಗಳ ಪ್ರಕಾರ, ಅಪಘಾತದಲ್ಲಿ ಎಂಟು ಆನೆಗಳು ಸಾವನ್ನಪ್ಪಿದ್ದು, ಗಾಯಗೊಂಡಿದ್ದ ಒಂದು ಮರಿಯನ್ನು ರಕ್ಷಿಸಲಾಗಿದೆ.
ಪಿಟಿಐ ವರದಿ ಪ್ರಕಾರ, ನವದೆಹಲಿ ಕಡೆಗೆ ತೆರಳುತ್ತಿದ್ದ ರೈಲು ಬೆಳಗಿನ ಜಾವ ಸುಮಾರು 2.17ರ ವೇಳೆಗೆ ಅಪಘಾತಕ್ಕೀಡಾಗಿದೆ. ಈ ರೈಲು ಮಿಜೋರಾಂನ ಸೈರಾಂಗ್ (ಐಜ್ವಾಲ್ ಸಮೀಪ)ದಿಂದ ದೆಹಲಿಯ ಆನಂದ್ ವಿಹಾರ್ ಟರ್ಮಿನಲ್‌ವರೆಗೆ ಸಂಚರಿಸುತ್ತದೆ. ಅಪಘಾತ ಸ್ಥಳವು ಗುವಾಹಟಿಯಿಂದ ಸುಮಾರು 126 ಕಿಮೀ ದೂರದಲ್ಲಿದೆ. ಘಟನೆ ಬಳಿಕ ಅಪಘಾತ ಪರಿಹಾರ ರೈಲುಗಳು ಮತ್ತು ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು.
ರೈಲು ಪ್ರಯಾಣಿಕರಿಗೆ ಶಾಕ್; ಇನ್ಮುಂದೆ ಲಗೇಜ್‌ಗೂ ಶುಲ್ಕ ಪಾವತಿಸಬೇಕು
ರೈಲು ಸಂಚಾರದಲ್ಲಿ ವ್ಯತ್ಯಯ
ಹಳಿ ತಪ್ಪಿದ ಬೋಗಿಗಳು ಮತ್ತು ಹಳಿಗಳ ಮೇಲೆ ಆನೆಗಳ ದೇಹದ ಭಾಗಗಳು ಚದುರಿದ ಕಾರಣ, ಅಪರ್ ಅಸ್ಸಾಂ ಸೇರಿದಂತೆ ಈಶಾನ್ಯ ಭಾರತದ ಹಲವು ಭಾಗಗಳಿಗೆ ರೈಲು ಸಂಚಾರಕ್ಕೆ ಅಡಚಣೆ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ.
ಅಪಘಾತಕ್ಕೊಳಗಾದ ಬೋಗಿಗಳಲ್ಲಿದ್ದ ಪ್ರಯಾಣಿಕರನ್ನು ತಾತ್ಕಾಲಿಕವಾಗಿ ರೈಲಿನ ಇತರ ಬೋಗಿಗಳಲ್ಲಿರುವ ಖಾಲಿ ಬರ್ತ್‌ಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ರೈಲು ಗುವಾಹಟಿಗೆ ತಲುಪಿದ ಬಳಿಕ ಹೆಚ್ಚುವರಿ ಬೋಗಿಗಳನ್ನು ಜೋಡಿಸಿ ಎಲ್ಲಾ ಪ್ರಯಾಣಿಕರಿಗೆ ವ್ಯವಸ್ಥೆ ಮಾಡಲಾಗುವುದು. ನಂತರ ರೈಲು ತನ್ನ ಮುಂದಿನ ಪ್ರಯಾಣವನ್ನು ಮುಂದುವರಿಸಲಿದೆ.
ಭೀಕರ ಪ್ರವಾಹದ ನಡುವೆಯೂ ಹುಲಿಯನ್ನು ರಕ್ಷಣೆ ಮಾಡಿದ ಆನೆ
ಈ ಅಪಘಾತ ಸಂಭವಿಸಿದ ಸ್ಥಳವು ಅಧಿಕೃತ ಆನೆ ಸಂಚಾರ ಮಾರ್ಗವಾಗಿಲ್ಲ. ಹಳಿಯಲ್ಲಿ ಆನೆಗಳ ಗುಂಪನ್ನು ಕಂಡ ತಕ್ಷಣ ಲೊಕೊ ಪೈಲಟ್ ತುರ್ತು ಬ್ರೇಕ್ ಹಾಕಿದರು. ಆದರೂ ಆನೆಗಳು ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿ ರೈಲು ಹಳಿ ತಪ್ಪಿದೆ.