ಭೋಪಾಲ್, ಜೂ. 15: ಮಧ್ಯ ಪ್ರದೇಶದಲ್ಲಿ (Madhya Pradesh) ಭಾನುವಾರ (ಜೂನ್ 14) ಸಂಭವಿಸಿದ ರೈಲು ದುರಂತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಸುಳ್ಳು ವದಂತಿಯೇ ಇದಕ್ಕೆ ಕಾರಣ. ಮೊರೆನಾ ರೈಲು ದುರಂತದಲ್ಲಿ (Train Tragedy) ಪತ್ನಿ ಮತ್ತು 4 ವರ್ಷದ ಮಗನನ್ನು ಕಳೆದುಕೊಂಡ ವ್ಯಕ್ತಿಯೊಬ್ಬರ ಕಣ್ಣೀರ ಕಥೆ ಇದು. ರೈಲಿಗೆ ಬೆಂಕಿ ಬಿದ್ದಿದೆ ಎಂಬ ಭೀತಿ ಹಠಾತ್ತನೆ ಹರಡಿ ಪ್ರಯಾಣಿಕರು ಅದರಿಂದ ಜಿಗಿದಿದ್ದಾರೆ. ಏನಾಗುತ್ತಿದೆ ಎಂದು ಗ್ರಹಿಸುವ ಮೊದಲೇ ಮತ್ತೊಂದು ರೈಲು ತನ್ನ ಕುಟುಂಬದ ಮೇಲೆ ಹರಿದಿದೆ ಎಂದು ಅವರು ನೋವು ವ್ಯಕ್ತಪಡಿಸಿದ್ದಾರೆ.
ಬಟ್ಟೆ, ಬ್ಯಾಗ್, ಪಾದರಕ್ಷೆಗಳು ಮತ್ತಿತರ ವಸ್ತುಗಳು ರೈಲು ಹಳಿ ಉದ್ದಕ್ಕೂ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಘಟನೆಯ ಭೀಕರತೆಯನ್ನು ಸಾರಿ ಹೇಳಿದೆ. ತಮ್ಮ ಕಣ್ಣೇದುರೆ ಪತ್ನಿ ಮತ್ತು ಮಗ ಮೃತಪಟ್ಟಿದ್ದರಿಂದ ನದೀಮ್ ಖಾನ್ ಶಾಕ್‌ಎಗೆ ಒಳಗಾಗಿದ್ದು, ಆ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ.
ʼʼಕೆಲವು ಕ್ಷಣಗಳ ಹಿಂದೆ, ಪತ್ನಿ ಮತ್ತು ಮಗ ನನ್ನೊಂದಿಗಿದ್ದರು. ನನ್ನ ಕುಟುಂಬವು ನನ್ನ ಕಣ್ಣೆದುರೇ ನಾಶವಾಯಿತುʼʼ ಎಂದು ದುಃಖಿತರಾಗಿ ನದೀಮ್ ಖಾನ್ ಹೇಳಿದ್ದಾರೆ. ದುರಂತದ ನಂತರದ ಅವ್ಯವಸ್ಥೆಯ ದೃಶ್ಯಗಳನ್ನು ಖಾನ್ ನೆನಪಿಸಿಕೊಂಡಿದ್ದಾರೆ. ಪ್ರಯಾಣಿಕರು ಕಿರುಚುತ್ತಾ ತಮ್ಮ ಸಂಬಂಧಿಕರನ್ನು ಹುಡುಕುತ್ತಿದ್ದರು ಎಂದಿದ್ದಾರೆ.
ಋಷಿಕೇಶದಲ್ಲಿ ಉಜ್ಜೈನಿ ಎಕ್ಸ್‌ಪ್ರೆಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ; ತಪ್ಪಿದ ಭಾರೀ ರೈಲು ದುರಂತ
ಮಧ್ಯಪ್ರ ದೇಶದ ಮೊರೆನಾ ಜಿಲ್ಲೆಯಲ್ಲಿ ಈ ದುರಂತ ಸಂಭವಿಸಿದೆ. ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ಸುಳ್ಳು ಸುದ್ದಿ ಹರಡಿದ್ದರಿಂದ ಪ್ರಯಾಣಿಕರೊಬ್ಬರು ಚೈನ್ ಎಳೆದ ಕಾರಣ ಭಯಭೀತರಾಗಿ ಖಜುರಾಹೊ-ಉದಯಪುರ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ನಿಂದ ಹಲವು ಪ್ರಯಾಣಿಕರು ಹೊರಗೆ ಜಿಗಿದಿದ್ದರು. ಇದೇ ವೇಳೆ ಮತ್ತೊಂದು ರೈಲು ಸಾಗಿ ಈ ಪೈಕಿ ನದೀಮ್ ಖಾನ್ ಅವರ ಪತ್ನಿ, ಮಗ ಮತ್ತು ಇತರ ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ. ಪಾತಾಲ್‌ಕೋಟ್ ಎಕ್ಸ್‌ಪ್ರೆಸ್ ರೈಲು ಅವರ ಮೇಲೆ ಹರಿದು ಹೋಗಿತ್ತು.
ಮೃತರನ್ನು ಆಗ್ರಾದ ಸುಲ್ತಾನ್ ಗಂಜ್ ಮೂಲದ ಅಫ್ರೀನ್ (35), ಅವರ ಮಗ ಆಶಾದ್ (4), ಆಗ್ರಾದ ಶಕುಂತಲಾ ದೇವಿ (60) ಮತ್ತು ರಾಜಸ್ಥಾನದ ಬಿಕಾನೇರ್ ಮೂಲದ ವರ್ಮಾ ದೇವಿ (58) ಎಂದು ಗುರುತಿಸಲಾಗಿದೆ. “ರೈಲಿನಲ್ಲಿ ಬೆಂಕಿ ಉಂಟಾಗಿದೆ ಎಂದು ಯಾರೋ ಕೂಗಿದರು. ಇದರಿಂದ ಭೀತಿಗೊಂಡ ಜನರು ಕೆಳಗೆ ಹಾರಲು ಪ್ರಾರಂಭಿಸಿದರು. ಏನಾಗುತ್ತಿದೆ ಎಂದು ನನಗೆ ಅರ್ಥವಾಗುವ ಮೊದಲೇ, ನನ್ನ ಕಣ್ಣೆದುರೇ ಮತ್ತೊಂದು ರೈಲು ನನ್ನ ಪತ್ನಿ ಮತ್ತು ಮಗನ ಮೇಲೆ ಹರಿಯಿತು” ಎಂದು ಖಾನ್ ತಿಳಿಸಿದ್ದಾರೆ.
ಖಾನ್ ತಮ್ಮ ಕುಟುಂಬದೊಂದಿಗೆ ಹರ್ಪಾಲ್‌ಪುರದಿಂದ ಆಗ್ರಾಕ್ಕೆ ಹಿಂತಿರುಗುತ್ತಿದ್ದರು. ಖಜುರಾಹೊ-ಉದಯಪುರ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ನ ಜನರಲ್ ಕೋಚ್‌ನಲ್ಲಿ ಪತ್ನಿ ಅಫ್ರೀನ್, 4 ವರ್ಷದ ಮಗ ಆಶಾದ್ ಮತ್ತು ಹಿರಿಯ ಮಗನೊಂದಿಗೆ ಪ್ರಯಾಣಿಸುತ್ತಿದ್ದರು ಎಂದು ಹೇಳಿದ್ದಾರೆ. ಸಂಜೆ 4.15ರ ಸುಮಾರಿಗೆ, ರೈಲು ಮೊರೆನಾವನ್ನು ದಾಟಿ ಪಿಪ್ರಿಕಾಪುರ ಗ್ರಾಮದ ಬಳಿ ಹೆತಾಂಪುರ್ ಮತ್ತು ಧೋಲ್ಪುರ್ ನಡುವೆ ಹಾದುಹೋಗುತ್ತಿದ್ದ ಸ್ವಲ್ಪ ಸಮಯದ ನಂತರ, ಯಾರೋ ಇದ್ದಕ್ಕಿದ್ದಂತೆ ರೈಲಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಕೂಗಿದರು. ಬೋಗಿಯಲ್ಲಿ ಪ್ರಯಾಣಿಕರು ತುಂಬಿದ್ದರಿಂದ ತಕ್ಷಣವೇ ಭಯಭೀತರಾದರು ಎಂದು ಅವರು ಹೇಳಿದರು.
ಬೆಂಕಿಯ ವದಂತಿ
“ಯಾರೋ ಚೈನ್ ಎಳೆದಿದ್ದರಿಂದ ರೈಲು ನಿಂತಿತು. ಜನರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಕೆಳಗೆ ಇಳಿಯಲು ಪ್ರಾರಂಭಿಸಿದರು. ನನ್ನ ಪತ್ನಿ ಕಿರಿಯ ಮಗನನ್ನು ತೋಳುಗಳಲ್ಲಿ ಹೊತ್ತುಕೊಂಡು ಇಳಿದಳು. ನಾನು ನನ್ನ ಹಿರಿಯ ಮಗನನ್ನು ಹುಡುಕಲು ಪ್ರಾರಂಭಿಸಿದೆ. ಅವನು ಜನಸಂದಣಿಯಲ್ಲಿ ನಮ್ಮಿಂದ ಬೇರ್ಪಟ್ಟಿದ್ದ” ಎಂದು ಅವರು ವಿವರಿಸಿದ್ದಾರೆ.
ಬೆಳ್ಳಂ ಬೆಳಗ್ಗೆ ಘೋರ ದುರಂತ! ಹಳಿ ದಾಟುತ್ತಿದ್ದ ಯಾತ್ರಿಕರಿಗೆ ರೈಲು ಡಿಕ್ಕಿ
“ಹಲವು ಪ್ರಯಾಣಿಕರು ಈಗಾಗಲೇ ಹಳಿಗಳ ಮೇಲೆ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ತಲುಪಿದ್ದರು. ಇದ್ದಕ್ಕಿದ್ದಂತೆ ಫಿರೋಜ್‌ಪುರದಿಂದ ಸಿಯೋನಿಗೆ ಪ್ರಯಾಣಿಸುತ್ತಿದ್ದ ಪಾತಾಳಕೋಟ್ ಎಕ್ಸ್‌ಪ್ರೆಸ್ ಪಕ್ಕದ ಹಳಿಗಳ ಮೇಲೆ ವೇಗವಾಗಿ ಬಂತು. ಎಲ್ಲವೂ ಕೆಲವೇ ಸೆಕೆಂಡುಗಳಲ್ಲಿ ಸಂಭವಿಸಿತು. ಈ ವೇಳೆ ಪತ್ನಿ ಮತ್ತು ಮಗನಿಗೆ ರೈಲು ಡಿಕ್ಕಿ ಹೊಡೆದಿದೆ. ನನ್ನ ಕುಟುಂಬವು ನನ್ನ ಕಣ್ಣೆದುರೇ ನಾಶವಾಯಿತು” ಎಂದು ಖಾನ್ ಅಳುತ್ತ ಹೇಳಿದ್ದಾರೆ.
ಹಿರಿಯ ಮಗ ಬಳಿಯೇ ಇದ್ದರೇ ತಾವು ಕೂಡ ರೈಲಿನಿಂದ ಇಳಿಯುತ್ತಿದ್ದರು ಎಂದು ಖಾನ್ ತಿಳಿಸಿದ್ದಾರೆ. ಯಾವುದೇ ಬೆಂಕಿ ಅವಘಡ ಸಂಭವಿಸಿರಲಿಲ್ಲ. ಅದು ಕೇವಲ ವದಂತಿಯಾಗಿತ್ತು ಎನ್ನುವುದು ಬಳಿಕ ತಿಳಿಯಿತು. ಗಂಟೆಗೆ ಸುಮಾರು 90 ಕಿ.ಮೀ. ವೇಗದಲ್ಲಿ ಚಲಿಸುತ್ತಿದ್ದ ಪಾತಾಳಕೋಟ್ ಎಕ್ಸ್‌ಪ್ರೆಸ್ ರೈಲಿನ ಲೋಕೋ ಪೈಲಟ್‌ಗೆ ತಿರುವು ಇದ್ದ ಕಾರಣ ಹಳಿಗಳ ಮೇಲಿದ್ದ ಪ್ರಯಾಣಿಕರನ್ನು ಸಕಾಲದಲ್ಲಿ ಗುರುತಿಸಲು ಸಾಧ್ಯವಾಗಲಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತುರ್ತು ಸರಪಳಿಯನ್ನು ಎಳೆದ ಪ್ರಯಾಣಿಕರನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ಘಟನೆ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ.