ನವದೆಹಲಿ, ಅ.14: ಜಂತರ್ ಮಂತರ್ಗೆ ಅತಿಕ್ರಮಣ ಪ್ರವೇಶ ಮಾಡಿದ ಆರೋಪದ ಮೇಲೆ ಮುಂಜಾಗ್ರತಾ ಕ್ರಮವಾಗಿ ಬಂಧನಕ್ಕೊಳಗಾಗಿದ್ದ ಕಾಕ್ರೋಚ್ ಜನತಾ ಪಾರ್ಟಿ (Cockroach Janata Party) ನಾಯಕರಾದ ಸೌರವ್ ದಾಸ್ ಮತ್ತು ಆಶುತೋಷ್ ರಂಕಾ (Ashutosh Ranka) ಅವರನ್ನು ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಇಬ್ಬರು ನಾಯಕರ ಜೊತೆಗೆ ಅಜಿಂಕ್ಯ ಶಿಂಧೆ (Ajinkya Shinde) ಅವರ ಮೇಲೂ ಪ್ರಕರಣ ದಾಖಲಿಸಲಾಗಿದೆ. ಜಾಮೀನು ಷರತ್ತುಗಳ ಉಲ್ಲಂಘನೆ ಹಾಗೂ ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಗಳು ಸೇರಿದಂತೆ ವಿವಿಧ ಆರೋಪಗಳನ್ನು ಅವರ ವಿರುದ್ಧ ಹೊರಿಸಲಾಗಿದೆ.
ಸಿಜೆಪಿ ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ ಹುಟ್ಟುಹಬ್ಬದಂದೇ ನ್ಯಾಯಾಲಯ ಈ ಆದೇಶ ನೀಡಿದ್ದು, ಹುಟ್ಟುಹಬ್ಬದ ದಿನವೇ ಅವರು ತಿಹಾರ್ ಜೈಲು ಪಾಲಾಗಿದ್ದಾರೆ.
ಬುಧವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ದೆಹಲಿಯ ಮಂದಿರ ಮಾರ್ಗದಲ್ಲಿರುವ ಮ್ಯಾಜಿಸ್ಟ್ರೇಟ್ ಮುಂದೆ ಮೂವರು ನಾಯಕರನ್ನು ಹಾಜರುಪಡಿಸಲಾಯಿತು. ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ಅಶುತೋಷ್ ರಾಂಕಾ ಮತ್ತು ಸೌರವ್ ದಾಸ್ ಅವರನ್ನು ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ. ಈ ಕ್ರಮವನ್ನು ಟೀಕಿಸಿದ ದೀಪ್ಕೆ, ಸರ್ಕಾರವು ಭಿನ್ನಾಭಿಪ್ರಾಯವನ್ನು ಹತ್ತಿಕ್ಕುತ್ತಿದೆ ಎಂದು ಆರೋಪಿಸಿದರು.
ಇಲ್ಲಿದೆ ದೀಪ್ಕೆ ಪೋಸ್ಟ್:
ಸೌರಭ್ ದಾಸ್ ಮತ್ತು ಅಶುತೋಷ್ ರಾಂಕಾ ಮತ್ತೊಮ್ಮೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (ಬಿಎನ್ಎಸ್ಎಸ್) ಸೆಕ್ಷನ್ 163 ಅನ್ನು ಉಲ್ಲಂಘಿಸಿರುವುದು ಕಂಡುಬಂದಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ ಎನ್ನಲಾಗಿದೆ. ಪುನರಾವರ್ತಿತ ಅಪರಾಧಿಗಳಾಗಿ, ಅವರು ತಾವು ಜಾರಿಗೊಳಿಸಿದ ಬಾಂಡ್ನ ಷರತ್ತುಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ. ಉಲ್ಲಂಘನೆಗಳನ್ನು ಗಮನಿಸಿದ ನ್ಯಾಯಾಲಯವು ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಜಂತರ್ ಮಂತರ್ ಗೇಟ್ ಹಾರಿ ಪ್ರತಿಭಟನೆಗೆ ಯತ್ನಿಸಿದ ಸಿಜೆಪಿಯ ಸೌರವ್ ದಾಸ್, ಅಶುತೋಷ್ ರಂಕಾ: ಮತ್ತೆ ಪೊಲೀಸ್ ವಶಕ್ಕೆ
ಮಂಗಳವಾರ ಬೆಳಗ್ಗೆ ಪೊಲೀಸ್ ಬ್ಯಾರಿಕೇಡ್ಗಳನ್ನು ದಾಟಿ ಜಂತರ್ ಮಂತರ್ಗೆ ಪ್ರವೇಶಿಸಿ ಮುಖ್ಯ ಚುನಾವಣಾ ಆಯುಕ್ತ ಜ್ಢಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದ ನಂತರ ಶಿಂಧೆ, ದಾಸ್ ಮತ್ತು ರಂಕಾರನ್ನು ಬಂಧಿಸಲಾಯಿತು. ಈ ಮಧ್ಯೆ, ಅಜಿಂಕ್ಯ ಅವರನ್ನು ವೈಯಕ್ತಿಕ ಬಾಂಡ್ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಸಿಜೆಪಿ ಕಾನೂನು ತಂಡದ ಮುಖ್ಯಸ್ಥೆ ರತ್ನ ಸಿಂಗ್ ಎಕ್ಸ್ನಲ್ಲಿ ಮಾಡಿದ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಇತ್ತೀಚೆಗೆ, 50,000 ರೂ. ಗಳ ಬಾಂಡ್ ನೀಡಿ, ಒಂದು ವರ್ಷದವರೆಗೆ ಯಾವುದೇ ಶಾಂತಿ ಕದಡುವ ಪ್ರಕರಣಗಳಲ್ಲಿ ಭಾಗಿಯಾಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ ನಂತರ ಅವರನ್ನು ಬಿಡುಗಡೆ ಮಾಡಲಾಗಿತ್ತು. ಈ ಬಾರಿ, ಅವರು ಅತಿಕ್ರಮಣ ಮತ್ತು ಬಾಂಡ್ ಷರತ್ತುಗಳ ಉಲ್ಲಂಘನೆಯ ಆರೋಪಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಪುನರಾವರ್ತಿತ ಅಪರಾಧಿಗಳೆಂದು ಪರಿಗಣಿಸಲಾಗುತ್ತಿದೆ.
ತಡರಾತ್ರಿಯವರೆಗೂ ಮೂವರಿಗೆ ತಮ್ಮ ವಕೀಲರನ್ನು ಭೇಟಿ ಮಾಡಲು ಅವಕಾಶ ನೀಡಲಿಲ್ಲ. ಬೆಳಗಿನ ಜಾವ 3 ಗಂಟೆಗೆ ಖಾಸಗಿ ವ್ಯಾನ್ನಲ್ಲಿ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ಕರೆತರಲಾಯಿತು ಎಂದು ಸಿಂಗ್ ಹೇಳಿದರು.