ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಆಂಬುಲೆನ್ಸ್‌ ಕೊರತೆ: 15 ವರ್ಷದ ಬುಡಕಟ್ಟು ಬಾಲಕಿಯ ಮೃತದೇಹವನ್ನು ಭುಜದ ಮೇಲೆ ಹೊತ್ತು ಸಾಗಿಸಿದ ಕುಟುಂಬ

ಮಧ್ಯ ಪ್ರದೇಶದ ಅಶೋಕನಗರದಲ್ಲಿ 15 ವರ್ಷದ ಬುಡಕಟ್ಟು ಬಾಲಕಿಯ ಮೃತದೇಹ ಸಾಗಿಸಲು ಯಾವುದೇ ವ್ಯವಸ್ಥೆ ಇಲ್ಲದ ಕಾರಣ ಕುಟುಂಬಸ್ಥರು ಭುಜದ ಮೇಲೆ ಹೊತ್ತೊಯ್ಯಬೇಕಾದ ದಾರುಣ ಘಟನೆ ನಡೆದಿದೆ. ಆಸ್ಪತ್ರೆಯ ನಿರ್ಲಕ್ಷ್ಯ, ಮೂಲಭೂತ ಸೌಲಭ್ಯಗಳ ಕೊರತೆ ಮತ್ತು ಆಡಳಿತ ವೈಫಲ್ಯಕ್ಕೆ ಈ ಘಟನೆ ಕನ್ನಡಿ ಹಿಡಿದಿದೆ.

ಮಧ್ಯ ಪ್ರದೇಶದಲ್ಲಿ ಬಾಲಕಿಯ ಮೃತದೇಹ ಸಾಗಿಸಲು ಪರದಾಡಿದ ಕುಟುಂಬಸ್ಥರು

ಭೋಪಾಲ್, ಮೇ 4: ಮಧ್ಯ ಪ್ರದೇಶದ (Madhya Pradesh) ಅಶೋಕನಗರ ಜಿಲ್ಲೆಯಲ್ಲಿ ಮಾನವೀಯತೆ ಮರುಗುವಂತಹ ಘಟನೆಯೊಂದು ನಡೆದಿದೆ. 15 ವರ್ಷದ ಬುಡಕಟ್ಟು ಬಾಲಕಿಯೊಬ್ಬಳ ಸಾವಿನ ನಂತರ, ಆಕೆಯ ಮೃತದೇಹವನ್ನು ಗ್ರಾಮಕ್ಕೆ ಕೊಂಡೊಯ್ಯಲು ಆಸ್ಪತ್ರೆಯಿಂದ ಯಾವುದೇ ಶವವಾಹನ ಅಥವಾ ಸ್ಟ್ರೆಚರ್ ವ್ಯವಸ್ಥೆ ಮಾಡದ ಕಾರಣ, ಕುಟುಂಬಸ್ಥರು ಭುಜದ ಮೇಲೆ ಹೊತ್ತು ರಸ್ತೆಯಲ್ಲಿ ಅಲೆಯಬೇಕಾದ ದಾರುಣ ಸ್ಥಿತಿ ಎದುರಾಗಿದೆ.

ಬಹದ್ದೂರ್‌ಪುರ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ಮುಗಿದ ನಂತರ, ಸುಮಾರು 41 ಡಿಗ್ರಿ ಸೆಲ್ಸಿಯಸ್ ಸುಡುವ ಬಿಸಿಲಿನಲ್ಲಿ ಬಾಲಕಿಯ ಶವ ಎರಡು ಗಂಟೆಗಳ ಕಾಲ ರಸ್ತೆಬದಿಯಲ್ಲೇ ಬಿದ್ದಿತ್ತು. ಆಸ್ಪತ್ರೆಯ ವತಿಯಿಂದ ಶವವನ್ನು ಮುಚ್ಚಲು ಬಟ್ಟೆಯಾಗಲಿ ಅಥವಾ ಸಾಗಿಸಲು ವಾರ್ಡ್ ಬಾಯ್ ಸಹಾಯವಾಗಲಿ ಸಿಗಲಿಲ್ಲ. ಅಸಹಾಯಕರಾದ ಪೋಷಕರು ಖಾಸಗಿ ವಾಹನಗಳ ಚಾಲಕರ ಬಳಿ ಹಣ ನೀಡುವುದಾಗಿ ಬೇಡಿಕೊಂಡರೂ ಯಾರೂ ಮೃತದೇಹ ಸಾಗಿಸಲು ಒಪ್ಪಲಿಲ್ಲ. ಅಂತಿಮವಾಗಿ ಆದಿತ್ಯ ತ್ರಿವೇದಿ ಎಂಬ ಸಾಮಾಜಿಕ ಕಾರ್ಯಕರ್ತರು ತಮ್ಮ ಖಾಸಗಿ ಕಾರಿನಲ್ಲಿ ಶವವನ್ನು ಗ್ರಾಮಕ್ಕೆ ತಲುಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ವೈರಲ್‌ ವಿಡಿಯೊ ಇಲ್ಲಿದೆ:



ಘಟನೆಯ ಹಿನ್ನೆಲೆಯೂ ಅಷ್ಟೇ ನೋವಿನಿಂದ ಕೂಡಿದೆ. ಖೇರೋಡಾ ಚಕ್ ಗ್ರಾಮದ ಈ ಬಾಲಕಿ ಬುಧವಾರ ಸಂಜೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಅಂದೇ ರಾತ್ರಿ ಶವವನ್ನು ಆಸ್ಪತ್ರೆಗೆ ತರಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಯಾವುದೇ ಕಾವಲು ಇಲ್ಲದ ಕಾರಣ, ರಾತ್ರಿಯಿಡೀ ನಾಯಿ ಮತ್ತು ಇಲಿಗಳಿಂದ ಶವವನ್ನು ರಕ್ಷಿಸಲು ಕುಟುಂಬಸ್ಥರು ಜಾಗರಣೆ ಮಾಡಬೇಕಾಯಿತು.

ಯೋಗಿ ನಾಡಲ್ಲಿ ಮತ್ತೊಂದು ಮಹತ್ವದ ಕಾರ್ಯಾಚರಣೆ: ನಾಲ್ವರು ಮಕ್ಕಳು, ಮಹಿಳೆ ಹತ್ಯೆ ಮಾಡಿದ ಪಾಪಿ ಪೊಲೀಸ್ ಗುಂಡೇಟಿಗೆ ಬಲಿ

ಈ ವೈಫಲ್ಯದ ಬಗ್ಗೆ ಬಹದ್ದೂರ್‌ಪುರ ವೈದ್ಯಾಧಿಕಾರಿ ಡಾ. ವೈ.ಎಸ್. ತೋಮರ್ ಅವರನ್ನು ಪ್ರಶ್ನಿಸಿದಾಗ, ಅವರು ಜವಾಬ್ದಾರಿಯನ್ನು ಪೊಲೀಸರ ಮೇಲೆ ಎತ್ತಿಹಾಕಿದ್ದಾರೆ. "ಮರಣೋತ್ತರ ಪರೀಕ್ಷೆಯ ನಂತರ ಮೃತದೇಹದ ವಿಲೃವಾರಿಗೆ ವ್ಯವಸ್ಥೆ ಮಾಡುವುದು ಪೊಲೀಸರ ಕೆಲಸ. ಜಿಲ್ಲಾ ಆಸ್ಪತ್ರೆಯಲ್ಲಿ ಸೌಲಭ್ಯಗಳಿವೆಯಾದರೂ, ಅವು ಬರಲು ಗಂಟೆಗಟ್ಟಲೆ ತಡವಾಗುತ್ತದೆ" ಎಂದು ಹಾರಿಕೆಯ ಉತ್ತರ ನೀಡಿದ್ದಾರೆ.

ಬಾಲಕಿಯ ಸಾವು ಅನುಮಾನಾಸ್ಪದವಾಗಿದ್ದರೂ, ಪಂಚನಾಮೆ ವೇಳೆ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ಅಥವಾ ಹಿರಿಯ ಪೊಲೀಸ್ ಅಧಿಕಾರಿಗಳು ಇರಬೇಕೆಂಬ ನಿಯಮವನ್ನೂ ಇಲ್ಲಿ ಗಾಳಿಗೆ ತೂರಲಾಗಿದೆ ಎಂದು ಆರೋಪಿಸಲಾಗಿದೆ. ಬಾಲಕಿಯ ಸಾವು ಮತ್ತು ನಂತರ ನಡೆದ ಈ ಅಮಾನವೀಯ ಘಟನೆ ಮಧ್ಯ ಪ್ರದೇಶದ ಆರೋಗ್ಯ ವ್ಯವಸ್ಥೆಯ ಹದಗೆಟ್ಟ ಸ್ಥಿತಿಗೆ ಕನ್ನಡಿ ಹಿಡಿದಿದೆ. ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.