ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ತೃಣಮೂಲ vs ತೃಣಮೂಲ ಚಿಹ್ನೆ ವಿವಾದ: ಚುನಾವಣಾ ಆಯೋಗಕ್ಕೆ 3 ತಿಂಗಳ ಕಾಲಾವಕಾಶ ನೀಡಿದ ಸುಪ್ರೀಂ ಕೋರ್ಟ್

Trinamool vs Trinamool Symbol Case: ಚುನಾವಣಾ ಚಿಹ್ನೆಗಳ ಆದೇಶದ ಪ್ಯಾರಾಗ್ರಾಫ್ 15ರ ಅಡಿಯಲ್ಲಿ ಟಿಎಂಸಿ ಚಿಹ್ನೆಯ ಬಗ್ಗೆ ಚುನಾವಣಾ ಆಯೋಗ ನಿರ್ಧಾರ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ ತಿಳಿಸಿದೆ. ವಾದ-ಪ್ರತಿವಾದಗಳು ಪೂರ್ಣಗೊಂಡ ನಂತರ ಪ್ರಕರಣವನ್ನು ನಿರ್ಧರಿಸಲು ಕನಿಷ್ಠ ಆರು ತಿಂಗಳ ಕಾಲಾವಕಾಶ ಬೇಕು ಎಂದು ಚುನಾವಣಾ ಆಯೋಗ ಹೇಳಿತ್ತು.

ಮಮತಾ ಬ್ಯಾನರ್ಜಿ ಮತ್ತು ಅಭಿಷೇಕ್‌ ಬ್ಯಾನರ್ಜಿ (ಸಂಗ್ರಹ ಚಿತ್ರ)

ನವದೆಹಲಿ, ಸೆ. 28: ತೃಣಮೂಲ ಕಾಂಗ್ರೆಸ್‌ನ (Trinamool Congress) ಎರಡು ಬಣಗಳ ನಡುವಿನ ಪಕ್ಷದ ಹೆಸರು ಹಾಗೂ ಹೂವು ಮತ್ತು ಹುಲ್ಲು ಸೇರಿ ಚುನಾವಣಾ ಚಿಹ್ನೆ ಕುರಿತ ವಿವಾದವನ್ನು ಮೂರು ತಿಂಗಳೊಳಗೆ ಬಗೆಹರಿಸುವಂತೆ ಚುನಾವಣಾ ಆಯೋಗಕ್ಕೆ (Election Commission) ಸುಪ್ರೀಂ ಕೋರ್ಟ್ ಕಾಲಾವಕಾಶ ನೀಡಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿ. ಮೋಹನ ಅವರನ್ನೊಳಗೊಂಡ ನ್ಯಾಯಪೀಠವು ಎರಡೂ ಬಣಗಳು ನಾಲ್ಕು ವಾರಗಳಲ್ಲಿ ಇಸಿಐ ಮುಂದೆ ತಮ್ಮ ಅರ್ಜಿಗಳನ್ನು ಪೂರ್ಣಗೊಳಿಸುವಂತೆ ನಿರ್ದೇಶಿಸಿತು. ಎರಡೂ ಬಣಗಳ ವಾದಗಳು ಪೂರ್ಣಗೊಂಡ ನಂತರ, ಚುನಾವಣಾ ಆಯೋಗಕ್ಕೆ ಈ ವಿವಾದದ ಬಗ್ಗೆ ನಿರ್ಧಾರ ಕೈಗೊಳ್ಳಲು ಮೂರು ತಿಂಗಳ ಅವಧಿ ಆರಂಭವಾಗಲಿದೆ.

ಚುನಾವಣಾ ಚಿಹ್ನೆಗಳ ಆದೇಶದ ಪ್ಯಾರಾಗ್ರಾಫ್ 15ರ ಅಡಿಯಲ್ಲಿ ಈ ವಿಷಯದ ಬಗ್ಗೆ ಚುನಾವಣಾ ಆಯೋಗ ನಿರ್ಧಾರ ಕೈಗೊಳ್ಳಬೇಕು ಎಂದು ನ್ಯಾಯಾಲಯ ತಿಳಿಸಿದೆ. ವಾದ-ಪ್ರತಿವಾದಗಳು ಪೂರ್ಣಗೊಂಡ ನಂತರ ಪ್ರಕರಣವನ್ನು ನಿರ್ಧರಿಸಲು ಕನಿಷ್ಠ ಆರು ತಿಂಗಳ ಕಾಲಾವಕಾಶ ಬೇಕು ಎಂದು ಚುನಾವಣಾ ಆಯೋಗ ಹೇಳಿತ್ತು. ಇದಕ್ಕೆ ಕಾರಣವಾಗಿ ಪ್ರಕರಣದಲ್ಲಿ ಹೆಚ್ಚಿನ ಪ್ರಮಾಣದ ಸಾಕ್ಷ್ಯಗಳು ಮತ್ತು ಅಫಿಡವಿಟ್‌ಗಳು ಇರುವುದನ್ನು ಆಯೋಗ ಉಲ್ಲೇಖಿಸಿತ್ತು. ಆದರೆ ನ್ಯಾಯಮೂರ್ತಿ ಜಯಮಾಲ್ಯ ಬಾಗ್ಚಿ, ಮೂರು ತಿಂಗಳು ಸಾಕು ಎಂದು ಹೇಳಿದರು.

ಪಶ್ಚಿಮ ಬಂಗಾಳ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ. ಚುನಾವಣಾ ಆಯೋಗವು ಟಿಎಂಸಿ ಪಕ್ಷದ ಹೆಸರು ಮತ್ತು ಚುನಾವಣಾ ಚಿಹ್ನೆಯನ್ನು ಸ್ಥಗಿತಗೊಳಿಸಿರುವುದನ್ನು ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದರು.

ಚುನಾವಣಾ ಆಯೋಗ ವಿವಾದ ಮಮತಾ ಬ್ಯಾನರ್ಜಿಗೆ ರಾಜಕೀಯ ಮರುಹುಟ್ಟು ನೀಡುತ್ತಾ?

ಚುನಾವಣಾ ಆಯೋಗವು ಈ ಹಿಂದೆ ಮಧ್ಯಂತರ ಆದೇಶ ಹೊರಡಿಸಿ, ಎರಡೂ ಬಣಗಳು ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ ಎಂಬ ಪಕ್ಷದ ಹೆಸರು ಮತ್ತು ಅದರ ಮೀಸಲು ಚುನಾವಣಾ ಚಿಹ್ನೆಯನ್ನು ಬಳಸುವುದನ್ನು ನಿಷೇಧಿಸಿತ್ತು. ಬಳಿಕ ಎರಡೂ ಬಣಗಳಿಗೆ ಪ್ರತ್ಯೇಕ ಪಕ್ಷದ ಹೆಸರು ಮತ್ತು ಚುನಾವಣಾ ಚಿಹ್ನೆಗಳನ್ನು ಹಂಚಿಕೆ ಮಾಡಿತ್ತು.

ಎರಡೂ ಬಣಗಳ ನಾಯಕರ ವಾದಗಳನ್ನು ಆಲಿಸಿದ ನಂತರ, ಚುನಾವಣಾ ಚಿಹ್ನೆಗಳ (ಮೀಸಲಾತಿ ಮತ್ತು ಹಂಚಿಕೆ) ಆದೇಶ, 1968ರ ಅಡಿಯಲ್ಲಿ ಈ ವಿಷಯಕ್ಕೆ ವಸ್ತುನಿಷ್ಠ ನಿರ್ಣಯದ ಅಗತ್ಯವಿದೆ ಎಂದು ಚುನಾವಣಾ ಆಯೋಗ ಹೇಳಿತ್ತು.

ಪೂರ್ವ ಮೇದಿನಿಪುರ ಜಿಲ್ಲೆಯ ನಂದಿಗ್ರಾಮ ಮತ್ತು ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ರೆಜಿನಗರ ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 6ರಂದು ಉಪಚುನಾವಣೆ ನಡೆಯಲಿದ್ದು, ಅಕ್ಟೋಬರ್ 9ರಂದು ಮತ ಎಣಿಕೆ ನಡೆಯಲಿದೆ. ಸುಪ್ರೀಂ ಕೋರ್ಟ್‌ನ ಆದೇಶದೊಂದಿಗೆ, ಪಕ್ಷಗಳು ತಮ್ಮ ಅರ್ಜಿಗಳನ್ನು ಪೂರ್ಣಗೊಳಿಸಲು ನಾಲ್ಕು ವಾರಗಳ ಕಾಲಾವಕಾಶವನ್ನು ಹೊಂದಿವೆ. ನಂತರ ಚುನಾವಣಾ ಆಯೋಗವು ಮೂರು ತಿಂಗಳ ಕಾಲಾವಧಿಯಲ್ಲಿ ವಿವಾದ ಇತ್ಯರ್ಥಪಡಿಸಬೇಕಿದೆ.