ವಾಷಿಂಗ್ಟನ್, ಏ. 27: ಅಮೆರಿಕದ(US) ವಾಷಿಂಗ್ಟನ್ ಹಿಲ್ಟನ್ ಹೋಟೆಲ್‌ನಲ್ಲಿ (Washington Hilton Hotel) ನಡೆದ ವೈಟ್ ಹೌಸ್ ಕರೆಸ್ಪಾಂಡೆಂಟ್ಸ್ ಡಿನ್ನರ್ ಕಾರ್ಯಕ್ರಮದ ವೇಳೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಮೇಲೆ ನಡೆದ ಗುಂಡಿನ ದಾಳಿಯ ಬಗ್ಗೆ ಮಹಾರಾಷ್ಟ್ರದ ಕಾಂಗ್ರೆಸ್ ಶಾಸಕ ವಿಜಯ್ ವಡೆಟ್ಟಿವಾರ್ (Vijay Wadettiwar) ನೀಡಿರುವ ಹೇಳಿಕೆ ಈಗ ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಟ್ರಂಪ್ ಮೇಲಿನ ದಾಳಿಯನ್ನು ಸಮರ್ಥಿಸುವ ರೀತಿಯಲ್ಲಿ ಅವರು ಮಾತನಾಡಿದ್ದಾರೆ ಎಂದು ಬಿಜೆಪಿ ಕಿಡಿಕಾರಿದೆ.
ಭಾನುವಾರ ಮಾತನಾಡಿದ ವಡೆಟ್ಟಿವಾರ್, "ಟ್ರಂಪ್ ಅಧಿಕಾರದಲ್ಲಿದ್ದಾಗ ಇಡೀ ಪ್ರಪಂಚವನ್ನು ನಿಯಂತ್ರಿಸಲು ಮತ್ತು ಇತರ ದೇಶಗಳನ್ನು ಅಸ್ಥಿರಗೊಳಿಸಲು ಪ್ರಯತ್ನಿಸಿದ್ದರು. ಜಗತ್ತೇ ನಮ್ಮ ಗುಲಾಮ ಎಂದು ಅವರು ಭಾವಿಸಿದ್ದರು. ಅಮೆರಿಕವನ್ನೂ ಅವರು ವಿನಾಶದ ಅಂಚಿಗೆ ತಂದಿದ್ದಾರೆ. ಇರಾನ್ ಜತೆ ಯಾವುದೇ ಸಂಬಂಧವಿಲ್ಲದಿದ್ದರೂ ಅದರ ಮೇಲೆ ದಾಳಿ ಮಾಡಿದರು. ಈ ಎಲ್ಲ ಕಾರಣಗಳಿಂದ ಅವರ ಮೇಲೆ ದಾಳಿ ನಡೆಯುವುದು ಅನಿವಾರ್ಯವಾಗಿತ್ತು. ಜನರು ರಸ್ತೆಗಿಳಿದು ಅವರನ್ನು ವಿರೋಧಿಸುತ್ತಿದ್ದಾರೆ," ಎಂದು ಹೇಳಿದ್ದಾರೆ.
ವಡೆಟ್ಟಿವಾರ್ ವಿವಾದಾತ್ಮಕ ಹೇಳಿಕೆ
ಮುಂದುವರಿದು ಅವರು ಭಾರತದ ಪರಿಸ್ಥಿತಿಯನ್ನು ಅಮೆರಿಕಕ್ಕೆ ಹೋಲಿಸುತ್ತ, "ಅಮೆರಿಕದ ಜನರು ಟ್ರಂಪ್ ಮೇಲೆ ಕೋಪಗೊಂಡಿದ್ದರು. ಆದ್ದರಿಂದ ಅವರ ಮೇಲೆ ಗುಂಡಿನ ದಾಳಿ ನಡೆದಿದೆ. ಭಾರತದಲ್ಲಿ ಸದ್ಯಕ್ಕೆ ಯಾವುದೇ ದೊಡ್ಡ ಪ್ರತಿಭಟನೆಗಳು ನಡೆಯುತ್ತಿಲ್ಲ, ಹಾಗಾಗಿ ಇಲ್ಲಿ ಎಲ್ಲವೂ ಸರಿಯಾಗಿದೆ ಎಂದು ಸರ್ಕಾರ ಭಾವಿಸಿದೆ. ಆದರೆ ಭಾರತದ ಜನರ ಮನಸ್ಥಿತಿ ಕೂಡ ಅಮೆರಿಕದ ಜನರಂತೆಯೇ ಇದೆ (ಅಸಮಾಧಾನಗೊಂಡಿದೆ)" ಎಂದು ಹೇಳುವ ಮೂಲಕ ಹೊಸ ಕಿಡಿ ಹಚ್ಚಿದ್ದಾರೆ.
ಡೊನಾಲ್ಡ್ ಟ್ರಂಪ್ ಶಿಶುಕಾಮಿ, ಅತ್ಯಾಚಾರಿ, ದೇಶದ್ರೋಹಿ... ಶ್ವೇತಭವನದಲ್ಲಿ ದಾಳಿ ನಡೆಸಿದ ಬಂಧಿತನ ಆರೋಪ
ಬಿಜೆಪಿ ಆಕ್ರೋಶ
ವಡೆಟ್ಟಿವಾರ್ ಅವರ ಈ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಕಾಂಗ್ರೆಸ್ ರಾಜಕೀಯ ಹಿಂಸಾಚಾರವನ್ನು ಪ್ರೋತ್ಸಾಹಿಸುತ್ತಿದೆ ಮತ್ತು ಸಮರ್ಥಿಸಿಕೊಳ್ಳುತ್ತಿದೆ ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಆರೋಪಿಸಿದ್ದಾರೆ.
ಇನ್ನೊಂದೆಡೆ, ಗುಂಡಿನ ದಾಳಿ ನಡೆದ ತಕ್ಷಣ ಸೀಕ್ರೆಟ್ ಸರ್ವಿಸ್ ಅಧಿಕಾರಿಗಳು ಅಧ್ಯಕ್ಷ ಟ್ರಂಪ್, ಪ್ರಥಮ ಮಹಿಳೆ ಮತ್ತು ಉಪಾಧ್ಯಕ್ಷರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ. ಕ್ಯಾಲಿಫೋರ್ನಿಯಾದ ಟೊರೆನ್ಸ್ ಮೂಲದ 31 ವರ್ಷದ ಕೋಲ್ ಟೊಮಾಸ್ ಅಲೆನ್ ಎಂಬಾತ ಈ ಕೃತ್ಯವೆಸಗಿ ಸಿಕ್ಕಿಬಿದ್ದಿದ್ದಾನೆ. ಆತನ ಬಳಿ ಎರಡು ಹ್ಯಾಂಡ್‌ಗನ್ ಮತ್ತು ಒಂದು ಶಾಟ್‌ಗನ್ ಪತ್ತೆಯಾಗಿದ್ದು, ಆತ ದಾಳಿ ನಡೆಸಲು ಮೊದಲೇ ಸಂಚು ರೂಪಿಸಿ ಅದನ್ನು ಬರೆದಿಟ್ಟುಕೊಂಡಿದ್ದ ಎಂಬ ಆಘಾತಕಾರಿ ವಿಷಯ ತನಿಖೆಯಲ್ಲಿ ತಿಳಿದುಬಂದಿದೆ. ಸುಮಾರು 2,500 ಅತಿಥಿಗಳು ಸೇರಿದ್ದ ಸಭಾಂಗಣ ತಲುಪುವ ಮೊದಲೇ ಭದ್ರತಾ ತಪಾಸಣೆಯ ವೇಳೆ ಆತನನ್ನು ವಶಕ್ಕೆ ಪಡೆದಿದ್ದರು. ಅಮೆರಿಕದ ಅಧ್ಯಕ್ಷರ ಮೇಲಿನ ಈ ಹತ್ಯೆ ಯತ್ನ ಜಗತ್ತಿನಾದ್ಯಂತ ಸಂಚಲನ ಮೂಡಿಸಿದೆ.