ತಿರುಪತಿ, ಜು.9: ಮುಂಬರುವ ಹಬ್ಬಗಳು ಮತ್ತು ಧಾರ್ಮಿಕ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಜುಲೈನಿಂದ ಸೆಪ್ಟೆಂಬರ್ 30, 2026ರವರೆಗೆ ನಿರ್ದಿಷ್ಟ ದಿನಾಂಕಗಳಲ್ಲಿ ಶ್ರೀವಾರಿ ದೇವಸ್ಥಾನದಲ್ಲಿ (Shri Srivari Temple) ವಿಐಪಿ ಬ್ರೇಕ್ ದರ್ಶನವನ್ನು ರದ್ದುಗೊಳಿಸಲಾಗಿದೆ ಎಂದು ತಿರುಮಲ ತಿರುಪತಿ ದೇವಸ್ಥಾನಗಳು (TTD) ಗುರುವಾರ (ಜು.9) ಪ್ರಕಟಿಸಿದೆ.
ತಿರುಮಲ ತಿರುಪತಿ ದೇವಸ್ಥಾನದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ (CPRO) ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ಈ ಶುಭ ಸಂದರ್ಭಗಳಲ್ಲಿ ಸಾಂಪ್ರದಾಯಿಕ ಧಾರ್ಮಿಕ ಆಚರಣೆಗಳು ಸುಗಮವಾಗಿ ನಡೆಯಲು ಹಾಗೂ ಸಾಮಾನ್ಯ ಭಕ್ತರ ಭಾರಿ ಸಂಖ್ಯೆಯ ಆಗಮನವನ್ನು ಸಮರ್ಪಕವಾಗಿ ನಿರ್ವಹಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ.
ಜುಲೈ 14ರಂದು ಕೊಯಿಲ್ ಆಳ್ವಾರ್ ತಿರುಮಂಜನಂ, ಜುಲೈ 17ರಂದು ಅನಿವಾರ ಅಸ್ತಾನಂ, ಜುಲೈ 19ರಂದು ಶ್ರೀ ಆಂಡವನ್ ಆಶ್ರಮದ ಸ್ವಾಮೀಜಿಗಳಿಗೆ ಪೆದ್ದ ಮರ್ಯಾದೆ, ಹಾಗೂ ಜುಲೈ 29ರಂದು ತಿರುಮಲ ಜೀಯರ್ ಸ್ವಾಮೀಜಿಗಳ ಚಾತುರ್ಮಾಸ್ಯ ಸಂಕಲ್ಪ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ವಿಐಪಿ ದರ್ಶನವನ್ನು ಸ್ಥಗಿತಗೊಳಿಸಲಾಗುತ್ತದೆ.
ಪೋಸ್ಟ್ ಇಲ್ಲಿದೆ:
TTD: ಟಿಟಿಡಿ ನೀತಿ ಸಂಹಿತೆಯನ್ನು ಉಲ್ಲಂಘನೆ- ನಾಲ್ವರ ಅಮಾನತು
ಆಗಸ್ಟ್ ತಿಂಗಳಿನಲ್ಲಿ, ಪವಿತ್ರೋತ್ಸವಗಳ ಅಂಕುರಾರ್ಪಣಕ್ಕಾಗಿ ಆಗಸ್ಟ್ 22 ರಂದು ಮತ್ತು ಪವಿತ್ರೋತ್ಸವಗಳ ಎರಡನೇ ದಿನದ ಪವಿತ್ರ ಸಮರ್ಪಣಕ್ಕಾಗಿ ಆಗಸ್ಟ್ 24 ರಂದು ದರ್ಶನವನ್ನು ರದ್ದುಗೊಳಿಸಲಾಗುತ್ತದೆ. ಸೆಪ್ಟೆಂಬರ್‌ವರೆಗೆ ನಿರ್ಬಂಧಗಳು ವಿಸ್ತರಿಸಲಿದ್ದು, ಸೆಪ್ಟೆಂಬರ್ 8 ರಂದು ಶ್ರೀವಾರಿ ಬ್ರಹ್ಮೋತ್ಸವಗಳಿಗೆ ಸಂಬಂಧಿಸಿದಂತೆ ಕೋಯಿಲ್ ಆಳ್ವಾರ್ ತಿರುಮಂಜನಕ್ಕೆ ಮತ್ತು ಸೆಪ್ಟೆಂಬರ್ 14 ರಂದು ಅಂಕುರಾರ್ಪಣಕ್ಕೆ ದರ್ಶನ ರದ್ದುಗೊಳಿಸಲಾಗುತ್ತದೆ. ಮುಖ್ಯವಾಗಿ, ಸೆಪ್ಟೆಂಬರ್ 15 ರಿಂದ ಸೆಪ್ಟೆಂಬರ್ 23, 2026 ರವರೆಗೆ ನಡೆಯಲಿರುವ ಶ್ರೀವಾರಿ ಬ್ರಹ್ಮೋತ್ಸವಗಳ ಸಮಯದಲ್ಲಿ ವಿಐಪಿ ದರ್ಶನಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತದೆ.
ಈ ಅವಧಿಗಳಲ್ಲಿ ಶಿಫಾರಸು ಪತ್ರಗಳಿಗೆ ಸಂಬಂಧಿಸಿದ ನಿಯಮಗಳನ್ನು ಟಿಟಿಡಿ ಆಡಳಿತವು ಸ್ಪಷ್ಟಪಡಿಸಿದೆ. ಮೇಲೆ ತಿಳಿಸಿದ ದಿನಾಂಕಗಳ ಹಿಂದಿನ ದಿನದಂದು, ಶಿಷ್ಟಾಚಾರದ ಗಣ್ಯರನ್ನು ಹೊರತುಪಡಿಸಿ, ವಿಐಪಿ ಶಿಫಾರಸು ಪತ್ರಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ದೇವಾಲಯದ ಸಂಸ್ಥೆ ತಿಳಿಸಿದೆ.
ದೇವಸ್ಥಾನದ ಅಧಿಕಾರಿಗಳು ಯಾತ್ರಿಕರು ಬೆಟ್ಟದ ದೇಗುಲಕ್ಕೆ ಪ್ರಯಾಣ ಬೆಳೆಸುವಾಗ ಈ ನಿರ್ದಿಷ್ಟ ದಿನಾಂಕಗಳನ್ನು ಗಮನದಲ್ಲಿಟ್ಟುಕೊಳ್ಳಬೇಕೆಂದು ಕೋರಿದ್ದಾರೆ. ಭಕ್ತರು ತಿರುಮಲಕ್ಕೆ ತೀರ್ಥಯಾತ್ರೆ ಯೋಜಿಸುವಾಗ ಈ ನಿರ್ಬಂಧಗಳನ್ನು ಗಮನದಲ್ಲಿಟ್ಟುಕೊಂಡು ಟಿಟಿಡಿಯೊಂದಿಗೆ ಸಹಕರಿಸಬೇಕೆಂದು ವಿನಂತಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.