ಚೆನ್ನೈ, ಜ. 21: ಭಾರಿ ಕುತೂಹಲ ಮೂಡಿಸಿರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ (Tamil Nadu Assembly Elections) ಕೆಲವೇ ದಿನಗಳು ಬಾಕಿ ಇದ್ದು, ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಟಿ.ಟಿ.ವಿ. ದಿನಕರನ್ (T.T.V. Dhinakaran) ನೇತೃತ್ವದ ಅಮ್ಮ ಮಕ್ಕಳ್ ಮುನ್ನೇಟ್ರ ಕಝಗಂ (AMMK) ಬುಧವಾರ (ಜನವರಿ 21) ಎನ್‌ಡಿಎ ಒಕ್ಕೂಟಕ್ಕೆ ಮರಳಿದೆ. ತಮಿಳುನಾಡಿನಲ್ಲಿ ಆಲ್ ಇಂಡಿಯಾ ಅಣ್ಣ ದ್ರಾವಿಡ ಮುನ್ನೇಟ್ರ ಕಝಗಂ (AIADMK) ಮುಂದಾಳತ್ವದಲ್ಲಿ ಎನ್‌ಡಿಎ ಚುನಾವಣೆ ಎದುರಿಸುತ್ತಿದೆ.
ಎಎಂಎಂಕೆ ಮುಖ್ಯಸ್ಥ ದಿನಕರನ್ ತಮಿಳುನಾಡಿನ ಬಿಜೆಪಿ ಉಸ್ತುವಾರಿ, ಕೇಂದ್ರ ಸಚಿವ ಪಿಯುಷ್ ಗೋಯಲ್, ಮುಖಂಡರಾದ ಎಲ್. ಮುರುಗನ್ ಮತ್ತು ನೈನಾರ್ ನಾಗೇಂದ್ರನ್ ಅವರನ್ನು ಭೇಟಿಯಾಗಿ ಎನ್‌ಡಿಯ ಒಕ್ಕೂಟಕ್ಕೆ ಸೇರುತ್ತಿರುವುದಾಗಿ ಅಧಿಕೃತವಾಗಿ ಘೋಷಿಸಿದರು.
ಪಿಯುಷ್ ಗೋಯಲ್ ಈ ಬಗ್ಗೆ ಮಾತನಾಡಿ ದಿನಕರನ್ ಎನ್‌ಡಿಎ ಒಕ್ಕೂಟಕ್ಕೆ ಮರಳುತ್ತಿರುವುದು ಖುಷಿಯ ವಿಚಾರ ಎಂದರು. ಅಲ್ಲದೆ ತಮ್ಮ ತಂದೆ ವೇದ್ ಪ್ರಕಾಶ್ ಗೋಯಲ್ ಮತ್ತು ದಿನಕರನ್ ರಾಜ್ಯ ಸಭಾ ಸದ್ಯರಾಗಿದ್ದ ದಿನಗಳನ್ನು ಮೆಲುಕು ಹಾಕಿದರು. ʼʼತಮಿಳುನಾಡಿನ ಸಂಸ್ಕೃತಿ, ತಮಿಳುನಾಡು ಮತ್ತು ತಮಿಳಿನ ಶ್ರೇಷ್ಠತೆ ಮೇಲೆ ದಾಳಿ ನಡೆಸುವ, ಭ್ರಷ್ಟ ಡಿಎಂಕೆ ಸರ್ಕಾರವನ್ನು ಕಿತ್ತೊಗೆಯಲು ಎನ್‌ಡಿಎ ನಾಯಕರು ಬದ್ಧರಾಗಿದ್ದೇವೆʼʼ ಎಂದರು.
ಎನ್‌ಡಿಎಗೆ ಮರಳಿದ ಎಎಂಎಂಕೆ:
ʼʼಡಿಎಂಕೆ ಆಡಳಿತದಿಂದ ನಮೆಗೆಲ್ಲ ನೋವಾಗಿದೆ. ನಾವೆಲ್ಲ ಒಂದೇ ಕುಟುಂಬದ ಸದಸ್ಯರಂತೆ ಕೆಲಸ ಮಾಡಲಿದ್ದೇವೆ. ದೇಶ ವಿರೋಧಿ ಡಿಎಂಕೆ ಮೈತ್ರಿಕೂಟದ ವಿರುದ್ಧ ಹೋರಾಡಲಿದ್ದೇವೆ. ಸ್ಟಾಲಿನ್, ಉದಯನಿಧಿ ಸ್ಟಾಲಿನ್ ಮತ್ತು ಶಬರೀಶನ್ ಹಾಗೂ ಡಿಎಂಕೆಯ ಭ್ರಷ್ಟಾಚಾರವನ್ನು ಜನರ ಮುಂದೆ ಬಯಲು ಮಾಡಲಿದ್ದೇವೆʼʼ ಎಂದು ಗೋಯಲ್ ತಿಳಿಸಿದರು.
ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಸಂಚರಿಸುತ್ತಿದ್ದ ಕಾರ್‌ನ ಟೈರ್ ಸ್ಫೋಟ: ಕೂದಲೆಳೆ ಅಂತರದಲ್ಲಿ ತಪ್ಪಿದ ಅನಾಹುತ
ʼʼಎನ್‌ಡಿಎ ಉತ್ತಮ ನಾಯಕತ್ವ, ಉತ್ತಮ ಸರ್ಕಾರದ ವಾಗ್ದಾನ ನೀಡುತ್ತಿದೆ. ತಮಿಳುನಾಡಿನ ಸಹೋದರಿಯರು ಮತ್ತು ಮಕ್ಕಳಿಗೆ ಸಾಮಾಜಿಕ ನ್ಯಾಯ ಒದಗಿಸಲಿದ್ದೇವೆ. ಯುವ ಜನತೆಗೆ ಉತ್ತಮ ಭವಿಷ್ಯ ನೀಡಲಿದ್ದೇವೆ. ತಮಿಳು ಭಾಷೆಯ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಲಿದ್ದೇವೆʼʼ ಎಂದು ಭರವಸೆ ನೀಡಿದರು.
ʼʼದಿನಕರನ್ ಎನ್‌ಡಿಎ ಒಕ್ಕೂಟಕ್ಕೆ ಮರಳಿದ್ದು ಎನ್‌ಡಿಎ ಒಕ್ಕೂಟವನ್ನು ಇನ್ನಷ್ಟು ಬಲಪಡಿಸಿದೆ. ಜಯಲಲಿತಾ ಮುಖ್ಯಮಂತ್ರಿಯಾಗಿದ್ದಾಗ ತಮಿಳುನಾಡನ್ನು ದೇಶದ ನಂಬರ್ ಒನ್ ರಾಜ್ಯವಾಗಿತ್ತು. ನಾವು ಅವರ ಚಿಂತನೆಯನ್ನು ಎತ್ತಿ ಹಿಡಿಯಲು ಮುಂದಾಗಿದ್ದೇವೆ. ಜಯಲಲಿತಾ ಮಾದರಿಯ ಉತ್ತಮ ಆಡಳಿತವನ್ನು ತಮಿಳುನಾಡು ಜನತೆಗೆ ನೀಡಲಿದ್ದೇವೆʼʼ ಎಂದು ಹೇಳಿದರು.
ಸಂತಸ ವ್ಯಕ್ತಪಡಿಸಿದ ದಿನಕರನ್
ದಿನಕರನ್ ಮಾತನಾಡಿ ಎನ್‌ಡಿಎ ಒಕ್ಕೂಟಕ್ಕೆ ಮರಳುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. 2026ರ ಚುನಾವಣೆಯಲ್ಲಿ ಎನ್‌ಡಿಎ ಒಕ್ಕೂಟವನ್ನು ಬಲಪಡಿಸಲು ಕೈಜೋಡಿಸುವುದಾಗಿ ತಿಳಿಸಿದರು. ʼʼತಮಿಳುನಾಡಿನ ಜನತೆಗೆ ಒಳಿತು ಮಾಡಬೇಕು ಎನ್ನುವ ಉದ್ದೇಶದಿಂದ ಎನ್‌ಡಿಎಗೆ ಮರಳಿದ್ದೇವೆ. ಈ ಬಾರಿಯ ಚುನಾವಣೆಯಲ್ಲಿ ಎಎಂಎಂಕೆ ಕಾರ್ಯಕರ್ತರು ಎನ್‌ಡಿಎಯ ಗೆಲುವುಗಾಗಿ ಶ್ರಮಿಸಲಿದ್ದಾರೆ. 2021ರಲ್ಲಿ ಕೈ ತಪ್ಪಿ ಹೋದ ಪಟ್ಟ ಮರಳಿ ಪಡೆಯಲು ಹೋರಾಡಲಿದ್ದಾರೆʼʼ ಎಂದರು.
2026 ಹೊಸ ವರ್ಷದೊಂದಿಗೆ ಆರಂಭವಾಗಲಿದೆ ಹಲವು ರಾಜ್ಯಗಳಲ್ಲಿ ಚುನಾವಣಾ ಪರ್ವ; ರಾಜಕೀಯ ದಿಕ್ಕೇ ಬದಲಾಗುತ್ತಾ?
ಕಳೆದ ವರ್ಷ ಎನ್‌ಡಿಎಯಿಂದ ಹೊರ ಬಂದಿದ್ದ ಎಎಂಎಂಕೆ
2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟದಿಂದಲೇ ಎಎಂಎಂಕೆ ಸ್ಪರ್ಧಿಸಿತ್ತು. ಆದರೆ ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ಮೈತ್ರಿಕೂಟದಿಂದ ಹೊರ ಬಂದಿತ್ತು. ಇದೀಗ ಮತ್ತೆ ಎನ್‌ಡಿಗೆ ಮರಳಿದೆ.