ನೋಯ್ಡಾ, ಜೂ.5: ಶುಕ್ರವಾರ (ಜೂ.5) ಬೆಳಗ್ಗೆ ಉತ್ತರ ಪ್ರದೇಶದ (Uttar Pradesh) ನೋಯ್ಡಾದ ವಿವಿಧ ಭಾಗಗಳಲ್ಲಿ ಎರಡು ಪ್ರತ್ಯೇಕ ಅಗ್ನಿ ಅವಘಡಗಳು (fire accident) ಸಂಭವಿಸಿದೆ. ಸೆಕ್ಟರ್ 75 ರಲ್ಲಿರುವ ವಸತಿ ಸೊಸೈಟಿ (ಅಪಾರ್ಟ್‌ಮೆಂಟ್) ಐವಿ ಕೌಂಟಿಯಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಎತ್ತರದ ಕಟ್ಟಡದ 12ನೇ ಮಹಡಿಯಲ್ಲಿರುವ ಫ್ಲಾಟ್‌ನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಅವಘಡದ ಬಗ್ಗೆ ಮಾಹಿತಿ ಪಡೆದ ನಂತರ ಅಗ್ನಿಶಾಮಕ ದಳದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು.
ಬೆಂಕಿಗೆ ಕಾರಣ ತಕ್ಷಣಕ್ಕೆ ತಿಳಿದುಬಂದಿಲ್ಲ. ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದು, ಘಟನೆಯಲ್ಲಿ ಯಾವುದೇ ಸಾವುನೋವುಗಳು ಅಥವಾ ಗಾಯಗಳು ಸಂಭವಿಸಿಲ್ಲ. ಈ ನಡುವೆ ಸೆಕ್ಟರ್ 75 ಘಟನೆಯಿಂದ ಸುಮಾರು 15 ನಿಮಿಷಗಳ ದೂರದಲ್ಲಿರುವ ಸೆಕ್ಟರ್ 52 ರ ಶತಾಬ್ದಿ ವಿಹಾರ್‌ನ ಇ-3 ನಲ್ಲಿರುವ ಪೇಯಿಂಗ್ ಗೆಸ್ಟ್ (ಪಿಜಿ) ವಸತಿ ಸೌಕರ್ಯದಲ್ಲೂ ಬೆಂಕಿ ಹೊತ್ತಿಕೊಂಡಿದೆ.
ವಿಡಿಯೋ ನೋಡಿ
ಕಟ್ಟಡದ ನೆಲ ಮಹಡಿಯಲ್ಲಿ ರೆಸ್ಟೋರೆಂಟ್ ಇದ್ದು, ಮೇಲಿನ ಮಹಡಿಗಳನ್ನು ಪಿಜಿ ಸೌಲಭ್ಯವಾಗಿ ಬಳಸಲಾಗುತ್ತಿದೆ. ಅಗ್ನಿ ಅವಘಡದ ಸುದ್ದಿ ಬಂದ ಕೂಡಲೇ ಎರಡು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಎರಡೂ ಅವಘಡಗಳ ಬಗ್ಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.
ದೆಹಲಿ ಬಳಿಕ ಬಿಹಾರ ಆಸ್ಪತ್ರೆಯ ಐಸಿಯುನಲ್ಲಿ ಬೆಂಕಿ ದುರಂತ: ನಾಲ್ವರು ಸಾವು
ನೋಯ್ಡಾ ಅಪಾರ್ಟ್‌ಮೆಂಟ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದ ಬಗ್ಗೆ ಮಾಹಿತಿ ಪಡೆದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ತಕ್ಷಣ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳ ಮೇಲ್ವಿಚಾರಣೆ ನಡೆಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪರಿಹಾರ ಕಾರ್ಯಗಳಲ್ಲಿ ಯಾವುದೇ ಲೋಪವಾಗಬಾರದು ಎಂದು ಹೇಳಿದರು. ಗಾಯಗೊಂಡವರಿಗೆ ತ್ವರಿತ ಮತ್ತು ಸಾಕಷ್ಟು ವೈದ್ಯಕೀಯ ಆರೈಕೆ ಒದಗಿಸುವಂತೆ ಮುಖ್ಯಮಂತ್ರಿ ಆದೇಶಿಸಿದರು. ಹಿರಿಯ ಅಧಿಕಾರಿಗಳು ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಬೇಕೆಂದು ಒತ್ತಿ ಹೇಳಿದರು.
ಅಗ್ನಿ ಸುರಕ್ಷತಾ ನಿಯಮಗಳ ಪಾಲನೆಯನ್ನು ಹೆಚ್ಚಿಸಲು ಹಾಗೂ ತುರ್ತು ಪರಿಸ್ಥಿತಿಗಳಿಗೆ ಸನ್ನದ್ಧತೆಯನ್ನು ಬಲಪಡಿಸಲು, ಗೌತಮ್ ಬುದ್ಧ ನಗರ ಪೊಲೀಸ್ ಮತ್ತು ಅಗ್ನಿಶಾಮಕ ಇಲಾಖೆ ಹೋಟೆಲ್‌ಗಳು ಹಾಗೂ ಇತರ ಸಂಸ್ಥೆಗಳಲ್ಲಿ ಏಳು ದಿನಗಳ ವಿಶೇಷ ಪರಿಶೀಲನೆ ಮತ್ತು ಜಾಗೃತಿ ಅಭಿಯಾನ ನಡೆಸುತ್ತಿರುವ ನಡುವೆಯೇ ಈ ಘಟನೆಗಳು ಸಂಭವಿಸಿವೆ.
ಮೊನ್ನೆಯಷ್ಟೇ, ದೆಹಲಿಯ ಮಾಲ್ವಿಯಾ ನಗರದ ಹೋಟೆಲ್‌ನಲ್ಲಿ ಭಾರಿ ಅಗ್ನಿ ದುರಂತ ಸಂಭವಿಸಿದ್ದು, ದುರ್ಘಟನೆಯಲ್ಲಿ ವಿದೇಶಿ ಪ್ರಜೆಗಳು ಸೇರಿದಂತೆ 21 ಜನರು ಮೃತಪಟ್ಟರು. ಮಾಲ್ವಿಯಾ ನಗರದ ಹೌಜ್ ರಾಣಿ ಪ್ರದೇಶದ ಫ್ಲೋರಿಶ್ ಸ್ಟೇ ಬೆಡ್ ಮತ್ತು ಬ್ರೇಕ್‌ಫಾಸ್ಟ್ (ಬಿ & ಬಿ) ನಲ್ಲಿ ದುರಂತ ಸಂಭವಿಸಿತು.