ಭೋಪಾಲ್, ಆ. 18: ತ್ವಿಶಾ ಶರ್ಮಾ (Twisha Sharma) ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸಲ್ಲಿಸಿರುವ 600 ಪುಟಗಳ ಚಾರ್ಜ್‌ಶೀಟ್‌ನಲ್ಲಿ ಸಾವಿಗೂ ಮುನ್ನ ನಡೆದ ಘಟನೆಗಳ ನಿಮಿಷ-ನಿಮಿಷದ ವಿವರಗಳು ಬಹಿರಂಗವಾಗಿವೆ. ಪತಿ ಸಮರ್ಥ್ ಸಿಂಗ್ ಹಾಗೂ ಅವರ ತಾಯಿ ಗಿರಿಬಾಲಾ ಸಿಂಗ್ ವಿರುದ್ಧ ಮಾನಸಿಕ ಕಿರುಕುಳ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಆರೋಪಗಳನ್ನು ಸಿಬಿಐ ಹೊರಿಸಿದೆ. ಆಗಸ್ಟ್ 14ರಂದು ಸಲ್ಲಿಸಲಾದ ಚಾರ್ಜ್‌ಶೀಟ್ ಪ್ರಕಾರ, ಮೇ 12ರ ರಾತ್ರಿ 9.36ಕ್ಕೆ ತ್ವಿಶಾ ಶರ್ಮಾ ತಮ್ಮ ಅತ್ತಿಗೆಗೆ ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಿದ್ದರು. ಬಳಿಕ ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ರಾತ್ರಿ 9.40ರ ಸುಮಾರಿಗೆ ಅವರು ಮನೆಯ ಚಾವಣಿಯತ್ತ ತೆರಳಿದ್ದರು.
ಇದಕ್ಕೂ ಮುನ್ನ ರಾತ್ರಿ 9.41ಕ್ಕೆ ತಂದೆಗೆ ಕರೆ ಮಾಡಿದ್ದ ತ್ವಿಶಾ ಅಳುತ್ತಾ ಮಾತನಾಡಿದ್ದರು. ಪತಿ ಸಮರ್ಥ್ ಸಿಂಗ್ ತುಂಬಾ ಆಕ್ರಮಣಕಾರಿ ಮತ್ತು ಹಿಂಸಾತ್ಮಕವಾಗಿ ವರ್ತಿಸುತ್ತಿದ್ದಾರೆ, ತಮಗೆ ಭಯವಾಗುತ್ತಿದೆ ಹಾಗೂ ಪೋಷಕರು ಶೀಘ್ರವೇ ತಮ್ಮ ಬಳಿಗೆ ಬರಬೇಕು ಎಂದು ಹೇಳಿದ್ದರೆಂದು ಸಿಬಿಐ ತಿಳಿಸಿದೆ. ರಾತ್ರಿ 10.05ರ ಸುಮಾರಿಗೆ ತಾಯಿಗೂ ಕರೆ ಮಾಡಿದ್ದ ತ್ವಿಶಾ ಇದೇ ರೀತಿಯ ಆತಂಕವನ್ನು ವ್ಯಕ್ತಪಡಿಸಿದ್ದರು. ಬಳಿಕ ಕರೆ ಕಡಿತಗೊಂಡಿತ್ತು.
ಮದುವೆಯಾಗಿ ಕೇವಲ ಐದು ತಿಂಗಳು
ಸಿಬಿಐ ಪ್ರಕಾರ, ಮಾಜಿ ಮಿಸ್ ಪುಣೆ ಆಗಿದ್ದ ತ್ವಿಶಾ ನಟಿಯಾಗಿ ಕೆಲಸ ಮಾಡಿದ್ದ ಬಳಿಕ ಕಾರ್ಪೊರೇಟ್ ಕ್ಷೇತ್ರಕ್ಕೆ ತೆರಳಿದ್ದರು. 2025ರ ಫೆಬ್ರವರಿಯಲ್ಲಿ ಆನ್‌ಲೈನ್ ಡೇಟಿಂಗ್ ಆ್ಯಪ್ ಮೂಲಕ ಸಮರ್ಥ್ ಸಿಂಗ್‌ನನ್ನು ಪರಿಚಯಿಸಿಕೊಂಡ ಅವರು, 2025ರ ಡಿಸೆಂಬರ್ 9ರಂದು ವಿವಾಹವಾಗಿದ್ದರು.
ಮದುವೆಯ ನಂತರ ತ್ವಿಶಾ ಅವರಿಗೆ ಸಮರ್ಥ್ ನಿರಂತರ ಮಾನಸಿಕ ಕಿರುಕುಳ ನೀಡುತ್ತಿದ್ದ ಎಂದು ಸಿಬಿಐ ಆರೋಪಿಸಿದೆ. ಮದುವೆಗೆ ಮುನ್ನ ತ್ವಿಶಾ ತಿಳಿಸಿದ್ದ ಹಿಂದಿನ ಸಂಬಂಧಗಳನ್ನು ಮುಂದಿಟ್ಟುಕೊಂಡು ಅವಹೇಳನಕಾರಿ ಮಾತುಗಳಿಂದ ನಿಂದಿಸುತ್ತಿದ್ದ ಎಂದು ಚಾರ್ಜ್‌ಶೀಟ್‌ನಲ್ಲಿ ಹೇಳಲಾಗಿದೆ. ತ್ವಿಶಾ ಪತಿಯ ವರ್ತನೆಯ ಬಗ್ಗೆ ದೂರು ನೀಡಿದಾಗಲೆಲ್ಲ ಗಿರಿಬಾಲಾ ಸಿಂಗ್ ತಮ್ಮ ಮಗನ ಪರ ನಿಂತು ಆತನನ್ನು ಪ್ರೋತ್ಸಾಹಿಸುತ್ತಿದ್ದರು ಎಂಬ ಆರೋಪವೂ ಇದೆ.
ಗರ್ಭಧಾರಣೆ ಬಳಿಕ ಹೆಚ್ಚಿದ ಕೌಟುಂಬಿಕ ಸಂಘರ್ಷ
ಏಪ್ರಿಲ್ 16ರಂದು ತ್ವಿಶಾ ಗರ್ಭಿಣಿಯಾಗಿರುವುದನ್ನು ತಿಳಿದುಕೊಂಡಿದ್ದರು. ಗರ್ಭಧಾರಣೆ ಅನಿರೀಕ್ಷಿತವಾಗಿದ್ದರಿಂದ ಹಾಗೂ ಪತಿಯ ವರ್ತನೆಯ ಬಗ್ಗೆ ಆತಂಕವಿದ್ದ ಕಾರಣ ಗರ್ಭಧಾರಣೆಯನ್ನು ಮುಂದುವರಿಸುವ ಬಗ್ಗೆ ಅವರು ಗೊಂದಲದಲ್ಲಿದ್ದರು ಎಂದು ಸಿಬಿಐ ಹೇಳಿದೆ. ಏಪ್ರಿಲ್ 17ರಂದು ಈ ವಿಚಾರವಾಗಿ ದಂಪತಿ ನಡುವೆ ಜಗಳ ನಡೆದಿದ್ದು, ಬಳಿಕ ತ್ವಿಶಾ ಪತಿಯ ಮನೆಯನ್ನು ತೊರೆದಿದ್ದರು ಎಂದು ತನಿಖಾ ಸಂಸ್ಥೆ ಹೇಳಿದೆ.
ಇದರ ನಡುವೆ ಹಣಕಾಸಿನ ವಿಚಾರವೂ ವಿವಾದಕ್ಕೆ ಕಾರಣವಾಗಿತ್ತು. ತ್ವಿಶಾ ಅವರ ಡಿಮ್ಯಾಟ್ ಖಾತೆಯಲ್ಲಿ ಸುಮಾರು 20 ಲಕ್ಷ ರುಪಾಯಿ ಮೌಲ್ಯದ ಷೇರು ಹೂಡಿಕೆ ಇತ್ತು. ಈ ಹಣವನ್ನು ತ್ವಿಶಾ ಮತ್ತು ಸಮರ್ಥ್ ಜಂಟಿಯಾಗಿ ತೆರೆದಿದ್ದ ಬ್ಯಾಂಕ್ ಖಾತೆಗೆ ವರ್ಗಾಯಿಸುವಂತೆ ಒತ್ತಡ ಹೇರಲಾಗಿತ್ತು ಎಂದು ಸಿಬಿಐ ಆರೋಪಿಸಿದೆ. ತ್ವಿಶಾ ಈ ಹಣ ತನ್ನ ತಂದೆಗೆ ಸೇರಿದ್ದು ಎಂದು ಹೇಳಿ ವರ್ಗಾವಣೆಗೆ ನಿರಾಕರಿಸಿದ್ದರು ಎನ್ನಲಾಗಿದೆ.
ತ್ವಿಶಾ ಶರ್ಮಾ ಅಂತ್ಯ ಸಂಸ್ಕಾರ ನೆರವೇರಿಸಿದ ಹೆತ್ತವರು: ಭಾವುಕ ಕ್ಷಣಕ್ಕೆ ಸಾಕ್ಷಿಯಾಯ್ತು ದೇಶ
ಸಾವಿಗೂ ಮುನ್ನ ಮನೆ ತೊರೆಯಲು ಸಿದ್ಧತೆ
ಮೇ 12ರಂದು ಬೆಳಗ್ಗೆಯೇ ತ್ವಿಶಾ ಭೋಪಾಲ್ ತೊರೆದು ತವರಿಗೆ ಮರಳಲು ನಿರ್ಧರಿಸಿದ್ದರು. ರಾಜಸ್ಥಾನದ ನಸೀರಾಬಾದ್‌ಗೆ ತೆರಳಲು ರೈಲು ಟಿಕೆಟ್ ಬುಕ್ ಮಾಡಲು ತಾಯಿಯಿಂದ 3,000 ರುಪಾಯಿ ಕೇಳಿದ್ದರು. ತಂದೆ ಹಣ ವರ್ಗಾಯಿಸಿದ ಬಳಿಕ ಅವರು ಟಿಕೆಟ್ ಬುಕ್ ಮಾಡಿದ್ದರು ಎಂದು ಸಿಬಿಐ ಹೇಳಿದೆ. ಪತಿ ಕೌನ್ಸೆಲಿಂಗ್‌ಗೆ ಬರಲು ಸಿದ್ಧರಿರಲಿಲ್ಲ ಎಂಬ ಕಾರಣದಿಂದ ತಾನು ಈ ಸಂಬಂಧವನ್ನು ಉಳಿಸಲು ಸಾಧ್ಯವಿರುವಷ್ಟು ಪ್ರಯತ್ನಿಸಿದ್ದೇನೆ, ಆದರೆ ಮನೆಗೆ ಮರಳಲು ಬಯಸುತ್ತಿದ್ದೇನೆ ಎಂದು ತ್ವಿಶಾ ಹೇಳಿದ್ದರೆಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
ನಂತರ ಸಮರ್ಥ್ ಕೌನ್ಸೆಲಿಂಗ್‌ಗೆ ಬರಲು ಒಪ್ಪಿಕೊಂಡಿದ್ದು, ಬೆಳಗ್ಗೆ ಸುಮಾರು 11.30ಕ್ಕೆ ಇಬ್ಬರೂ ಮನೋವೈದ್ಯೆ ಡಾ. ಕಾಕೋಲಿ ರಾಯ್ ಅವರನ್ನು ಭೇಟಿಯಾಗಿದ್ದರು.
ಜೀವನ ನರಕವಾಗಿದೆ
ಏಪ್ರಿಲ್ 30ರಂದು ತ್ವಿಶಾ ತಾಯಿಗೆ ವಾಟ್ಸ್‌ಆ್ಯಪ್ ಮೂಲಕ ತಮ್ಮ ಪರಿಸ್ಥಿತಿಯ ಬಗ್ಗೆ ತಿಳಿಸಿದ್ದರು. ಸಿಬಿಐ ಪ್ರಕಾರ, “ನನ್ನ ಜೀವನ ನರಕವಾಗಿದೆ ಅಮ್ಮ” ಎಂದು ಅವರು ಸಂದೇಶ ಕಳುಹಿಸಿದ್ದರು. ಅದೇ ದಿನ ಮನೋವೈದ್ಯರನ್ನು ಭೇಟಿಯಾಗಿದ್ದ ಅವರು ಆತಂಕ ಮತ್ತು ಒತ್ತಡದಿಂದ ಬಳಲುತ್ತಿದ್ದರು ಎಂದು ಚಾರ್ಜ್‌ಶೀಟ್‌ನಲ್ಲಿ ಹೇಳಲಾಗಿದೆ.
ಮೇ 6ರಂದು ತ್ವಿಶಾ ತಮ್ಮ ಹಿಂದಿನ ಉದ್ಯೋಗಕ್ಕೆ ಮರಳುವ ಆಫರ್ ಸ್ವೀಕರಿಸಿದ್ದರು. ಅದೇ ದಿನ ಗರ್ಭಧಾರಣೆ ಅಂತ್ಯಗೊಳಿಸುವ ಚಿಕಿತ್ಸೆಯ ಮೊದಲ ಹಂತದ ಔಷಧ ತೆಗೆದುಕೊಂಡಿದ್ದರು ಎಂದು ಸಿಬಿಐ ತಿಳಿಸಿದೆ. ಮೇ 7ರ ಮುಂಜಾನೆ ತಾಯಿಗೆ ಹಲವು ಸಂದೇಶಗಳನ್ನು ಕಳುಹಿಸಿ, “ಅಮ್ಮ, ದಯವಿಟ್ಟು ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗಿ” ಎಂದು ಮನವಿ ಮಾಡಿದ್ದರು ಎನ್ನಲಾಗಿದೆ.
ಹಣ, ಕೌಟುಂಬಿಕ ಕಲಹದ ಆರೋಪ
ಮೇ 7 ಮತ್ತು 8ರಂದು ನಡೆದ ಘಟನೆಗಳಲ್ಲೂ ತ್ವಿಶಾ ಮಾನಸಿಕ ಹಾಗೂ ದೈಹಿಕವಾಗಿ ಸಂಕಷ್ಟದಲ್ಲಿದ್ದರು ಎಂದು ಸಿಬಿಐ ಆರೋಪಿಸಿದೆ. ಗರ್ಭಧಾರಣೆ ಅಂತ್ಯಗೊಳಿಸುವ ನಿರ್ಧಾರಕ್ಕೆ ಪತಿ ಹಾಗೂ ಅವರ ಕುಟುಂಬ ಅಸಮಾಧಾನಗೊಂಡಿದ್ದರು ಎಂದು ತ್ವಿಶಾ ವೈದ್ಯರಿಗೆ ತಿಳಿಸಿದ್ದರು ಎನ್ನಲಾಗಿದೆ.
ಗರ್ಭಧಾರಣೆ ಅಂತ್ಯಗೊಳಿಸಿದ ವಿಚಾರದಲ್ಲಿ ಅತ್ತೆ ತಮ್ಮನ್ನು ನಿಂದಿಸಿದ್ದರು ಎಂದು ತ್ವಿಶಾ ಅತ್ತಿಗೆಗೆ ಹೇಳಿದ್ದರೆಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಮೇ 9ರಂದು ಪತಿ ತಮ್ಮೊಂದಿಗೆ ಮಾನಸಿಕವಾಗಿ ಕಠಿಣವಾಗಿ ವರ್ತಿಸುತ್ತಿದ್ದಾರೆ ಎಂದು ತಾಯಿಗೆ ತಿಳಿಸಿದ್ದ ತ್ವಿಶಾ, “ಇಲ್ಲಿ ನನಗೆ ಉಸಿರುಗಟ್ಟುತ್ತಿದೆ” ಎಂಬ ಅರ್ಥದ ಸಂದೇಶ ಕಳುಹಿಸಿದ್ದರು ಎಂದು ಸಿಬಿಐ ಹೇಳಿದೆ.
ಅವರ ಮಾಜಿ ಉದ್ಯೋಗದಾತರೂ ತನಿಖಾಧಿಕಾರಿಗಳಿಗೆ ಹೇಳಿಕೆ ನೀಡಿದ್ದು, ಮನೆಯಲ್ಲಿ ತಮ್ಮ ಮೇಲೆ ನಿರಂತರ ನಿಗಾ ಇರಿಸಲಾಗುತ್ತಿದೆ ಮತ್ತು ಕರೆಗಳನ್ನು ಗಮನಿಸಲಾಗುತ್ತಿದೆ ಎಂದು ತ್ವಿಶಾ ದೂರು ನೀಡಿದ್ದರು ಎಂದು ತಿಳಿಸಿದ್ದಾರೆ.
ತ್ವಿಶಾ ಶರ್ಮಾ ಸಾವಿನ ತನಿಖೆ ಸಿಬಿಐಗೆ ಒಪ್ಪಿಸಲು ಸುಪ್ರೀಂ ಕೋರ್ಟ್ ಆದೇಶ
ಸಾವಿಗೂ ಮುನ್ನ ಆಗಿದ್ದೇನು?
ಮೇ 12ರ ಸಂಜೆ ತೀಶಾ ಬ್ಯೂಟಿ ಪಾರ್ಲರ್‌ಗೆ ತೆರಳಿ ಸಂಜೆ 6.11ರ ಸುಮಾರಿಗೆ ಮನೆಗೆ ಮರಳಿದ್ದರು. ರಾತ್ರಿ ಸುಮಾರು 9.20ಕ್ಕೆ ಅವರು ಅತ್ತಿಗೆ ರಾಶಿ ಅಬ್ರೋಲ್ ಜತೆ ಫೋನ್‌ನಲ್ಲಿ ಮಾತನಾಡುತ್ತಿದ್ದರು. ಈ ವೇಳೆ ನಿರಂತರವಾಗಿ ಅಳುತ್ತಿದ್ದರು ಎಂದು ಸಿಬಿಐ ಹೇಳಿದೆ. ರಾತ್ರಿ 9.36ಕ್ಕೆ ಅವರು ಮತ್ತೊಂದು ಸಂದೇಶ ಕಳುಹಿಸಿದ್ದು, ತಮ್ಮ ಜೀವನದ ಬಗ್ಗೆ ತೀವ್ರ ನಿರಾಶೆ ವ್ಯಕ್ತಪಡಿಸಿದ್ದರು.
ಸುಮಾರು 9.40ಕ್ಕೆ ಸಿಸಿಟಿವಿ ದೃಶ್ಯಾವಳಿಯಲ್ಲಿ ಅವರು ಒಬ್ಬರೇ ಮನೆಯ ಚಾವಣಿಯತ್ತ ತೆರಳುತ್ತಿರುವುದು ಕಂಡುಬಂದಿದೆ. 9.41ಕ್ಕೆ ತಂದೆಗೆ ಕರೆ ಮಾಡಿ ಅಳುತ್ತಾ ಮಾತನಾಡಿದ್ದರು. 10.05ರ ಸುಮಾರಿಗೆ ತಾಯಿಯೊಂದಿಗೆ ಮಾತನಾಡಿದ ಬಳಿಕ ತಾಯಿ ಹಲವು ಬಾರಿ ಕರೆ ಮಾಡಿದರೂ ಸಂಪರ್ಕ ಸಾಧ್ಯವಾಗಲಿಲ್ಲ. ನಂತರ ಗಿರಿಬಾಲಾ ಸಿಂಗ್ ಅವರಿಗೂ ಕರೆ ಮಾಡಿ ತ್ವಿಶಾ ಬಗ್ಗೆ ವಿಚಾರಿಸುವಂತೆ ತಿಳಿಸಿದ್ದರು.
ಸಿಬಿಐ ಪ್ರಕಾರ, ರಾತ್ರಿ 10.16ರ ಸುಮಾರಿಗೆ ಗಿರಿಬಾಲಾ ತ್ವಿಶಾಗೆ ಕರೆ ಮಾಡಿದ್ದಾರೆ. ಸುಮಾರು 10.21ಕ್ಕೆ ಸಮರ್ಥ್‌ಗೆ ಕರೆ ಮಾಡಿದ್ದರು. 10.23ರ ಸುಮಾರಿಗೆ ಸಿಸಿಟಿವಿಯಲ್ಲಿ ಗಿರಿಬಾಲಾ ಮತ್ತು ನಂತರ ಸಮರ್ಥ್ ಚಾವಣಿಯತ್ತ ತೆರಳುತ್ತಿರುವುದು ಕಂಡುಬಂದಿದೆ. ಬಳಿಕ ತ್ವಿಶಾ ಅವರನ್ನು ಕೆಳಗೆ ಕರೆತಂದು AIIMS ಭೋಪಾಲ್‌ಗೆ ಕರೆದೊಯ್ಯಲಾಯಿತು. ಅಲ್ಲಿ ಅವರನ್ನು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.
ಎರಡನೇ ಮರಣೋತ್ತರ ಪರೀಕ್ಷೆಯಲ್ಲೂ ಆತ್ಮಹತ್ಯೆ ಎಂದು ವರದಿ
ತ್ವಿಶಾ ಅವರ ಮರಣೋತ್ತರ ಪರೀಕ್ಷೆ ಕುರಿತಂತೆಯೂ ವಿವಾದ ಉಂಟಾಗಿತ್ತು. ಕುಟುಂಬದವರು ಮೊದಲ ವರದಿಯಲ್ಲಿ ಅನುಮಾನ ವ್ಯಕ್ತಪಡಿಸಿ ಮತ್ತೊಮ್ಮೆ ಪರೀಕ್ಷೆ ನಡೆಸುವಂತೆ ಮನವಿ ಮಾಡಿದ್ದರು. ಮಧ್ಯ ಪ್ರದೇಶ ಹೈಕೋರ್ಟ್ ಆದೇಶದ ಬಳಿಕ ಮೇ 24ರಂದು AIIMS ದೆಹಲಿಯ ವೈದ್ಯಕೀಯ ಮಂಡಳಿ ಎರಡನೇ ಮರಣೋತ್ತರ ಪರೀಕ್ಷೆ ನಡೆಸಿತು.
ಸಿಬಿಐ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿರುವ AIIMS ದೆಹಲಿ ವರದಿಯ ಪ್ರಕಾರ, ಸಾವಿಗೆ ಕಾರಣ ಉಸಿರುಗಟ್ಟುವಿಕೆ ಮತ್ತು ನೇಣು ಬಿಗಿದ ಪರಿಣಾಮ ಉಂಟಾದ ಅಸ್ವಸ್ಥತೆ ಎಂದು ತಿಳಿಸಲಾಗಿದೆ. ಸಾವಿನ ಸ್ವರೂಪವನ್ನು ಆತ್ಮಹತ್ಯೆ ಎಂದು ದಾಖಲಿಸಲಾಗಿದೆ. ಸಾವಿಗೂ ಮುನ್ನ ಹಲ್ಲೆ ನಡೆದಿರುವುದನ್ನು ಸೂಚಿಸುವ ಯಾವುದೇ ಪ್ರಮುಖ ಗಾಯಗಳು ಕಂಡುಬಂದಿಲ್ಲ ಎಂದು ವೈದ್ಯಕೀಯ ಮಂಡಳಿ ಹೇಳಿದೆ.
ಸಿಬಿಐ ಆರೋಪ: ನಿರಂತರ ಮಾನಸಿಕ ಕಿರುಕುಳ
ಸಿಬಿಐ ಪ್ರಕಾರ, ತ್ವಿಶಾ ಅವರನ್ನು ದೈಹಿಕವಾಗಿ ಹತ್ಯೆ ಮಾಡಲಾಗಿದೆ ಎಂಬುದು ಪ್ರಕರಣದ ಆರೋಪವಲ್ಲ. ಬದಲಾಗಿ, ದೀರ್ಘಕಾಲದ ಮಾನಸಿಕ ಕಿರುಕುಳ ಮತ್ತು ಕೌಟುಂಬಿಕ ಒತ್ತಡದಿಂದ ಅವರು ಆತ್ಮಹತ್ಯೆಗೆ ದೂಡಲ್ಪಟ್ಟರು ಎಂಬುದು ತನಿಖಾ ಸಂಸ್ಥೆಯ ಆರೋಪ. ತ್ವಿಶಾ ಅವರ ಡೈರಿ, ವಾಟ್ಸ್‌ಆ್ಯಪ್ ಸಂದೇಶಗಳು, ಕರೆಗಳು, ಸಿಸಿಟಿವಿ ದೃಶ್ಯಗಳು ಹಾಗೂ ಇತರ ದಾಖಲೆಗಳ ಆಧಾರದ ಮೇಲೆ ನಡೆಸಿದ ಫೋರೆನ್ಸಿಕ್ ಮಾನಸಿಕ ಮೌಲ್ಯಮಾಪನದಲ್ಲಿ ಅವರು ನಿರಾಶೆ ಮತ್ತು ನಿರಂತರ ಮಾನಸಿಕ ಒತ್ತಡವನ್ನು ಅನುಭವಿಸುತ್ತಿದ್ದರು ಎಂದು ಚಾರ್ಜ್‌ಶೀಟ್‌ನಲ್ಲಿ ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ ಸಮರ್ಥ್ ಸಿಂಗ್ ಮತ್ತು ಗಿರಿಬಾಲಾ ಸಿಂಗ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರೆ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ತ್ವಿಶಾ ಅವರ ಐಫೋನ್‌ನಿಂದ ಫೋರೆನ್ಸಿಕ್ ಡೇಟಾ ಹೊರತೆಗೆಯುವ ಕಾರ್ಯ ಬಾಕಿಯಿದ್ದು, ಅದರಿಂದ ಇನ್ನಷ್ಟು ಸಾಕ್ಷ್ಯಗಳು ಅಥವಾ ಹೊಸ ವ್ಯಕ್ತಿಗಳ ಪಾತ್ರದ ಬಗ್ಗೆ ಮಾಹಿತಿ ದೊರೆಯಬಹುದು ಎಂದು ಸಿಬಿಐ ತಿಳಿಸಿದೆ.
ಆರೋಪಿಗಳ ಮನೆಯ DVR ಅನ್ನು ಸಿಸಿಎಫ್‌ಎಸ್‌ಎಲ್, ನವದೆಹಲಿಗೆ ಕಳುಹಿಸಲಾಗಿದ್ದು, ಸಿಸಿಟಿವಿ ದೃಶ್ಯಗಳಲ್ಲಿ ಯಾವುದೇ ತಿದ್ದುಪಡಿ ನಡೆದಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಜತೆಗೆ, ಸಮರ್ಥ್ ಮತ್ತು ಗಿರಿಬಾಲಾ ಅವರ ಧ್ವನಿ ಮಾದರಿಗಳನ್ನು ಆಡಿಯೊ ದಾಖಲೆಗಳೊಂದಿಗೆ ಹೋಲಿಕೆ ಮಾಡಲು ಕಳುಹಿಸಲಾಗಿದೆ. ವರದಕ್ಷಿಣೆ ಬೇಡಿಕೆ ಮತ್ತು ವರದಕ್ಷಿಣೆ ಸಾವಿನ ಆರೋಪಗಳ ಕುರಿತು ತನಿಖೆ ಮುಂದುವರಿಸಲು ಸಿಬಿಐ ಅನುಮತಿ ಕೋರಿದೆ.