ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Faridabad Arms Case: 350 ಕೆಜಿ ಸ್ಫೋಟಕ ಪತ್ತೆ ಪ್ರಕರಣಕ್ಕೆ ಮಹತ್ವದ ತಿರುವು; ಶಂಕಿತ ಉಗ್ರನ ಜತೆ ಕೈ ಜೋಡಿಸಿದ ವೈದ್ಯೆಯ ಬಂಧನ

ಹರಿಯಾಣದ ಫರಿದಾಬಾದ್‌ನಲ್ಲಿ ಬರೋಬ್ಬರಿ 300 ಕೆಜಿ ಆರ್‌ಡಿಎಕ್ಸ್, ಎಕೆ -47 ರೈಫಲ್ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಮತ್ತೊಂದು ಮಹತ್ವದ ಬೆಳವಣಿಗೆ ಸಂಭವಿಸಿದೆ. ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲು ಬಳಸಲಾದ ಕಾರನ್ನು ಪತ್ತೆ ಹಚ್ಚಲಾಗಿದ್ದು, ಇದು ಫರಿದಾಬಾದ್ ಆಸ್ಪತ್ರೆಯ ವೈದ್ಯೆಗೆ ಸೇರಿದ್ದು ಎಂದು ತನಿಖಾಧಿಕಾರಿಗಳು ತಿಳಿಸಿದಾರೆ. ಸದ್ಯ ಆಕೆಯನ್ನು ಬಂಧಿಸಲಾಗಿದೆ.

ಹರಿಯಾಣದ ಫರಿದಾಬಾದ್‌ನಲ್ಲಿ ಸ್ಫೋಟಕ ವಸ್ತುಗಳೊಂದಿಗೆ ಸಿಕ್ಕಿಬಿದ್ದ ಡಾ. ಮುಜಮ್ಮಿಲ್ ಶಕೀಲ್ (ಸಂಗ್ರಹ ಚಿತ್ರ).

ನವದೆಹಲಿ, ನ. 10: ಜಮ್ಮು ಮತ್ತು ಕಾಶ್ಮೀರ (Jammu and Kashmir) ಪೊಲೀಸರ ತಂಡವು ಹರಿಯಾಣದ ಫರಿದಾಬಾದ್‌ನಲ್ಲಿ ಬರೋಬ್ಬರಿ 300 ಕೆಜಿ ಆರ್‌ಡಿಎಕ್ಸ್, ಎಕೆ -47 ರೈಫಲ್ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಮತ್ತೊಂದು ಮಹತ್ವದ ಬೆಳವಣಿಗೆ ಸಂಭವಿಸಿದೆ (Faridabad Arms Case). ಈ ಬೃಹತ್‌ ಪ್ರಮಾಣದ ಶಸ್ತ್ರಾಸ್ತ್ರ, ಅಸಾಲ್ಟ್ ರೈಫಲ್, ಪಿಸ್ತೂಲ್ ಮತ್ತು ಮದ್ದುಗುಂಡುಗಳನ್ನು ಸಂಗ್ರಹಿಸಲು ಬಳಸಲಾದ ಕಾರನ್ನು ಪತ್ತೆ ಹಚ್ಚಲಾಗಿದ್ದು, ಇದು ಫರಿದಾಬಾದ್ ಆಸ್ಪತ್ರೆಯ ವೈದ್ಯೆಗೆ ಸೇರಿದ್ದು ಎಂದು ತನಿಖಾಧಿಕಾರಿಗಳು ತಿಳಿಸಿದಾರೆ. ಸದ್ಯ ಆಕೆಯನ್ನು ಬಂಧಿಸಲಾಗಿದೆ. ಬಂಧಿತ ವೈದ್ಯೆ ಅದೇ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶಂಕಿತ ಭಯೋತ್ಪಾದಕ ಡಾ. ಮುಜಮ್ಮಿಲ್ ಶಕೀಲ್ ಜತೆ ಆತ್ಮೀಯ ಸಂಬಂಧ ಹೊಂದಿದ್ದಳು ಎನ್ನಲಾಗಿದೆ.

ಫರಿದಾಬಾದ್‌ನ ಕೋಡ್ ಎಚ್‌ಆರ್‌ 51ರಿಂದ ಪ್ರಾರಂಭವಾಗುವ ಮಾರುತಿ ಸುಜುಕಿ ಸ್ವಿಫ್ಟ್ ಕಾರನ್ನು ಸದ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಕೀಲ್‌ನನ್ನು ವಿಚಾರಣೆಗೆ ಒಳಪಡಿಸಿದ ವೇಳೆ ಈ ವಿವರ ಹೊರ ಬಿದ್ದಿದೆ ಎನ್ನಲಾಗಿದೆ. ಬಾಡಿಗೆ ಮನೆಯೊಂದರ ಬಳಿ ಈ ಕಾರು ಪತ್ತೆಯಾಗಿದೆ. ಶಕೀಲ್‌ ನೀಡಿದ ಮಾಹಿತಿಯ ಆಧಾರದಲ್ಲಿ ಪೊಲೀಸರು ಅಮೋನಿಯಂ ನೈಟ್ರೇಟ್ ಎಂದು ಶಂಕಿಸಲಾದ 350 ಕೆಜಿ ಸ್ಫೋಟಕ ವಸ್ತು, 20 ಟೈಮರ್‌ಗಳನ್ನು ವಶಕ್ಕೆ ಪಡೆದು ಉಗ್ರ ಸಂಚನ್ನು ವಿಫಲಗೊಳಿಸಿದ ಬೆನ್ನಲ್ಲೇ ಮತ್ತೊಂದು ಮಹತ್ವದ ವಿಚಾರ ಹೊರ ಬಿದ್ದಿದೆ.



ಈ ಸುದ್ದಿಯನ್ನೂ ಓದಿ: Ricin poison terror plot: ಈ ಕೆಮಿಕಲ್‌ ಸೇವಿಸಿದ್ರೆ ಕ್ಷಣಾರ್ಧದಲ್ಲೇ ಸಾವು... ಬಯೋ ವಾರ್‌ಗೆ ಉಗ್ರರ ಸಂಚು-ಏನಿದು ರಿಸಿನ್‌ ಪಾಯ್ಸನ್‌?

ತನಿಖಾಧಿಕಾರಿಗಳ ಪ್ರಕಾರ, ಶಕೀಲ್ ಕಳೆದ 3 ವರ್ಷಗಳಿಂದ ಫರಿದಾಬಾದ್‌ನ ಅಲ್-ಫಲಾಹ್ ಸ್ಕೂಲ್ ಆಫ್ ಮೆಡಿಕಲ್ ಸೈನ್ಸಸ್ & ರಿಸರ್ಚ್ ಸೆಂಟರ್‌ನಲ್ಲಿ ಹಿರಿಯ ವೈದ್ಯನಾಗಿ ಕಾರ್ಯ ನಿರ್ವಹಿಸುತ್ತಿದ್ದ. ಕ್ಯಾಂಪಸ್‌ನಲ್ಲಿ ವಾಸಿಸುತ್ತಿದ್ದ ಆತ ಧೋಜ್‌ನಲ್ಲಿ ಒಂದು ರೂಮ್‌ ಬಾಡಿಗೆಗೆ ಪಡೆದಿದ್ದ.

10 ದಿನಗಳ ಹಿಂದೆ ಪೊಲೀಸರು ಶಕೀಲ್‌ನನ್ನು ಬಂಧಿಸಿದ್ದರು. ವಿಚಾರಣೆಯ ಸಮಯದಲ್ಲಿ ಆತ ತನ್ನ ಸಹೋದ್ಯೋಗಿಗೆ ಸೇರಿದ ಬಾಡಿಗೆ ರೂಮ್‌ ಮತ್ತು ಸ್ವಿಫ್ಟ್ ಕಾರಿನ ಬಗ್ಗೆ ಮಾಹಿತಿ ನೀಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ಆಕೆಯ ಬಗ್ಗೆ ಹೆಚ್ಚಿನ ವಿವರ ಇನ್ನಷ್ಟೇ ಹೊರ ಬರಬೇಕಿದೆ.

ಶಕೀಲ್‌ನ ರೂಮ್‌ ಮೇಲೆ ದಾಳಿ ನಡೆಸಿದಾಗ ಸ್ಫೋಟಕ ವಸ್ತುಗಳಿಂದ ತುಂಬಿದ 8 ದೊಡ್ಡ ಸೂಟ್‌ಕೇಸ್‌ಗಳು ಮತ್ತು 4 ಸಣ್ಣ ಸೂಟ್‌ಕೇಸ್‌ಗಳು ಪತ್ತೆಯಾಗಿವೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಹರಿಯಾಣ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಕಾರಿನಲ್ಲಿ ಎಕೆ -74 ಅಸಾಲ್ಟ್ ರೈಫಲ್, ಮ್ಯಾಗಜೀನ್‌ಗಳು, 83 ಲೈವ್ ಗುಂಡುಗಳು, ಒಂದು ಪಿಸ್ತೂಲ್, 8 ಲೈವ್ ಗುಂಡುಗಳು, 2 ಖಾಲಿ ಕಾರ್ಟ್ರಿಡ್ಜ್‌ಗಳು ಮತ್ತು 2 ಹೆಚ್ಚುವರಿ ಮ್ಯಾಗಜೀನ್‌ಗಳು ಕಂಡು ಬಂದಿವೆ. ಸದ್ಯ ಪೊಲೀಸರು ವೈದ್ಯೆಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

350 ಕೆಜಿ ಸ್ಫೋಟಕ ವಸ್ತು ಸುಮಾರು ಎರಡು ವಾರಗಳ ಹಿಂದೆ ಶಕೀಲ್‌ಗೆ ತಲುಪಿತ್ತು ಎನ್ನಲಾಗಿದೆ. ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆ ಜತೆ ಆತನಿಗೆ ಸಂಪರ್ಕವಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಇಷ್ಟೊಂದು ದೊಡ್ಡ ಪ್ರಮಾಣದ ಸ್ಫೋಟಕಗಳು ರಾಷ್ಟ್ರ ರಾಜಧಾನಿಯ ಸಮೀಪಕ್ಕೆ ಹೇಗೆ ಬಂದವು ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: Viral News: ಮೋಸ್ಟ್‌ ವಾಂಟೆಡ್‌ ಬಬ್ಬರ್ ಖಾಲ್ಸಾ ಉಗ್ರ ಭಾರತಕ್ಕೆ ಹಸ್ತಾಂತರ!

ಶಕೀಲ್‌ ಸಿಕ್ಕಿ ಬಿದ್ದಿದ್ದು ಹೇಗೆ?

ಅಕ್ಟೋಬರ್ 27ರಂದು ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಅನ್ನು ಬೆಂಬಲಿಸುವ ಪೋಸ್ಟರ್‌ಗಳು ಕಾಣಿಸಿಕೊಂಡವು. ಸ್ಥಳೀಯ ಪೊಲೀಸರು ತನಿಖೆ ಕೈಗೆತ್ತಿಕೊಂಡಾಗ ಸಿಸಿಟಿವಿ ದೃಶ್ಯಾವಳಿಗಳಲ್ಲಿ ರಾಥರ್ ಎಂಬಾತ ಪೋಸ್ಟರ್‌ ಅಂಟಿಸುತ್ತಿರುವುದು ಕಂಡು ಬಂತು. ಬಳಿಕ ಆತನನ್ನು ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಬಂಧಿಸಲಾಯಿತು. ರಾಥರ್ 2024ರ ಅಕ್ಟೋಬರ್‌ವರೆಗೆ ಜಮ್ಮು ಕಾಶ್ಮೀರದ ಅನಂತ್‌ನಾಗ್‌ ಜಿಲ್ಲೆಯ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ ಎನ್ನುವ ವಿಚಾರ ಪೊಲೀಸರಿಗೆ ಗೊತ್ತಾಯಿತು. ಪೊಲೀಸರು ಆತನ ಲಾಕರ್ ಅನ್ನು ಶೋಧಿಸಿದಾಗ ಒಂದು ಅಸಾಲ್ಟ್ ರೈಫಲ್ ಪತ್ತೆಯಾಯ್ತು. ವಿಚಾರಣೆಯ ಸಮಯದಲ್ಲಿ ಆತ ಶಕೀಲ್‌ ಬಗ್ಗೆ ಬಾಯ್ಬಿಟ್ಟಿದ್ದ. ಅದರಂತೆ ಶಕೀಲ್‌ನನ್ನು ಬಂಧಿಸಿ ಫರಿದಾಬಾದ್‌ನಲ್ಲಿ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ.