ಚೆನ್ನೈ: ತಮಿಳುನಾಡಿನ ಮುಖ್ಯಮಂತ್ರಿ ದಳಪತಿ ವಿಜಯ್ (CM Vijay) ದಕ್ಷಿಣ ಭಾರತ ಚಿತ್ರರಂಗದ ಜನಪ್ರಿಯ ನಟ ಅವರಿಗೆ ಈಗ 52 ವರ್ಷ ವಯಸ್ಸು ಐವತ್ತು ದಾಟಿದ್ದರೂ, ಅವರ ಉತ್ಸಾಹ ಮತ್ತು ಫಿಟ್‌ನೆಸ್ ಕಂಡರೆ 35 ವರ್ಷದ ಯುವಕನಂತೆ ಕಾಣುತ್ತಾರೆ. ಈ ವಯಸ್ಸಿನಲ್ಲೂ ವಿಜಯ್ ತಮ್ಮ ಆರೋಗ್ಯ ಮತ್ತು ಫಿಟ್‌ನೆಸ್ ಹೇಗೆ ಕಾಯ್ದುಕೊಂಡಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಸದಾ ಇರುತ್ತದೆ. ಇತ್ತೀಚೆಗೆ ಅವರ ವೈಯಕ್ತಿಕ ಫಿಟ್‌ನೆಸ್ ತರಬೇತುದಾರ ನರೇಶ್ ಕುಮಾರ್ ಅವರು ನೀಡಿದ ಸಂದರ್ಶನವೊಂದರಲ್ಲಿ ವಿಜಯ್ ಅವರ ದೈನಂದಿನ ಆಹಾರ ಕ್ರಮ ಮತ್ತು ಫಿಟ್‌ನೆಸ್ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ.
ಬೆಳಿಗ್ಗೆ 5:30 ಗಂಟೆಗೆ ದಿನ ಶುರು
ವಿಜಯ್ ಅವರಿಗೆ ಎಷ್ಟೇ ಒತ್ತಡದ ಶೆಡ್ಯೂಲ್‌ಗಳಿದ್ದರು ಪ್ರತಿದಿನ ಬೆಳಿಗ್ಗೆ 5:30 ಕ್ಕೆ ಎದ್ದುಬಿಡುತ್ತಾರೆ. ದಿನವನ್ನು ಬೇಗ ಆರಂಭಿಸುವುದೇ ಅವರ ಶಿಸ್ತಿನ ಮೊದಲ ಹೆಜ್ಜೆ. ಗಂಟೆಗಟ್ಟಲೆ ಜಿಮ್‌ನಲ್ಲಿ ವರ್ಕ್ ಔಟ್ ಮಾಡುವ ಬದಲು, ಶರೀರವನ್ನು ಸದಾ ಚಟುವಟಿಕೆಯಿಂದ ಇಟ್ಟುಕೊಳ್ಳುವುದೇ ಅವರ ರಹಸ್ಯ. ವಾಕಿಂಗ್, ರನ್ನಿಂಗ್, ಸೈಕ್ಲಿಂಗ್ ಮತ್ತು ವೇಟ್ ಟ್ರೇನಿಂಗ್, ಇವೆಲ್ಲವೂ ಅವರ ನಿತ್ಯದ ವ್ಯಾಯಾಮದಲ್ಲಿರುತ್ತವೆ. ದಿನಕ್ಕೆ 30 ರಿಂದ 40 ನಿಮಿಷಗಳ ವಾಕಿಂಗ್, ಕಾರ್ಡಿಯೋ ಮತ್ತು ಸರಳ ವ್ಯಾಯಾಮಗಳನ್ನು ಮಾಡುತ್ತಾರೆ. ಕೆಲಸದ ಒತ್ತಡದಿಂದ ಜಿಮ್‌ಗೆ ಹೋಗಲು ಸಾಧ್ಯವಾಗದ ದಿನಗಳಲ್ಲಿ, ನಡೆಯುವುದನ್ನೇ ಹೆಚ್ಚಿಸಿ ದೇಹವನ್ನು ಸಕ್ರಿಯವಾಗಿರಿಸಿಕೊಳ್ಳುತ್ತಾರೆ.
ಬೆಳಗಿನ ಉಪಹಾರಕ್ಕೆ ಕೇವಲ ಎರಡು ಇಡ್ಲಿ, ಮೊಟ್ಟೆ
ವಿಜಯ್ ತಮ್ಮ ದಿನವನ್ನು ಅತ್ಯಂತ ಸರಳ ಹಾಗೂ ಪೌಷ್ಟಿಕ ಆಹಾರದಿಂದ ಆರಂಭಿಸುತ್ತಾರೆ. ಬೆಳಗಿನ ಉಪಹಾರಕ್ಕೆ ಅವರು ಎರಡು ಬೇಯಿಸಿದ ಇಡ್ಲಿ ಹಾಗೂ ಮೊಟ್ಟೆಗಳನ್ನು ಸೇವಿಸುತ್ತಾರೆ. ಜೊತೆಗೆ ತಾಜಾ ಎಳನೀರು ಇಲ್ಲವೇ ಹಣ್ಣಿನ ಜ್ಯೂಸ್ ಕುಡಿಯುತ್ತಾರೆ. ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಕಡ್ಡಾಯವಾಗಿ ಮನೆ ಅಡುಗೆಯನ್ನೇ ಸೇವಿಸುವ ವಿಜಯ್, ಕಡಿಮೆ ಪ್ರಮಾಣದ ಅನ್ನ, ಹೆಚ್ಚಿನ ತರಕಾರಿಗಳು ಹಾಗೂ ನಾರಿನಂಶವಿರುವ ಹಣ್ಣುಗಳನ್ನು ಇನ್ನುತ್ತಾರೆ. ನಿಯಂತ್ರಿತ ಪ್ರಮಾಣದಲ್ಲಿ ಚಿಕನ್ ಹಾಗೂ ಮೀನನ್ನು ಸೇವಿಸುತ್ತಾರೆ.
ಸಂಜೆ ಲಘು ಆಹಾರ ರಾತ್ರಿ 7:30ಕ್ಕೆ ಡಿನ್ನರ್
ರಾತ್ರಿಯ ಊಟವನ್ನು ತೀರ ಹಗುರವಾಗಿ ಇಟ್ಟುಕೊಳ್ಳುವ ವಿಜಯ್, ಸಂಜೆ 7 ರಿಂದ 7:30 ರ ಒಳಗಾಗಿ ತಮ್ಮ ಊಟ ಪೂರ್ಣಗೊಳಿಸುತ್ತಾರೆ. ರಾತ್ರಿ ವೇಳೆ ಮುಖ್ಯವಾಗಿ ತರಕಾರಿ ಸೂಪ್ ಅಥವಾ ತಾಜಾ ಸಲಾಡ್‌ಗಳನ್ನು ಮಾತ್ರ ಸೇವಿಸುವುದು ಅವರ ಅಭ್ಯಾಸ. ಸಂಜೆ ಹಸಿವಾದರೆ ಜಂಕ್ ಫುಡ್ ಬದಲು ಹಣ್ಣಿನ ಜ್ಯೂಸ್ ಅಥವಾ ಸಲಾಡ್ ಆಯ್ದುಕೊಳ್ಳುತ್ತಾರೆ.
ಇಷ್ಟೆಲ್ಲಾ ನಿಯಂತ್ರಿತ ಡಯಟ್ ಪಾಲಿಸಿದರೂ ವಿಜಯ್ ಸಂಪೂರ್ಣವಾಗಿ ಇಷ್ಟವಾದ ಆಹಾರವನ್ನು ತ್ಯಜಿಸಿಲ್ಲ. 'ಮಟನ್ ಬಿರಿಯಾನಿ' ಎಂದರೆ ವಿಜಯ್ ಅವರಿಗೆ ಅತ್ಯಂತ ಅಚ್ಚುಮೆಚ್ಚು. ವಿಶೇಷ ಸಂದರ್ಭಗಳಲ್ಲಿ ಅವರು ಮಟನ್ ಬಿರಿಯಾನಿಯನ್ನು ತಿನ್ನುತ್ತಾರೆ. ಸಾಂಪ್ರದಾಯಿಕ ಸಕ್ಕರೆ ಪೊಂಗಲ್ ಕೂಡ ಅವರ ನೆಚ್ಚಿನ ಸಿಹಿ ತಿಂಡಿಯಾಗಿದೆ. ಮುಖ್ಯವಾಗಿ ವಿಜಯ್ ಮನೆ ಊಟವನ್ನೆ ಹೆಚ್ಚು ಸೇವಿಸುತ್ತಾರೆ.