ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಭದ್ರತಾ ಪಡೆಗಳ ಕಾರ್ಯಾಚರಣೆ; ಉಧಂಪುರದಲ್ಲಿ ಇಬ್ಬರು ಜೈಶ್ ಭಯೋತ್ಪಾದಕರ ಎನ್‌ಕೌಂಟರ್‌

ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯ ಬಸಂತ್‌ಗಢದ ಗುಹೆಯಲ್ಲಿ ಅಡಗಿದ್ದ ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರನ್ನು ಭದ್ರತಾ ಪಡೆಗಳು ಹತ್ಯೆಗೈದಿವೆ. ಕಾರ್ಯಾಚರಣೆಯಲ್ಲಿ ಹತರಾದ ಉಗ್ರರಿಂದ ಒಂದು M4 ಕಾರ್ಬೈನ್ ಮತ್ತು ಒಂದು AK-47 ರೈಫಲ್ ವಶಕ್ಕೆ ಪಡೆದುಕೊಳ್ಳಲಾಗಿದೆ.

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯ ಬಸಂತ್‌ಗಢದ ಗುಹೆಯಲ್ಲಿ ಅಡಗಿದ್ದ ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರನ್ನು ಭದ್ರತಾ (Terrorist Encounter) ಪಡೆಗಳು ಹತ್ಯೆಗೈದಿವೆ. ಕಾರ್ಯಾಚರಣೆಯಲ್ಲಿ ಹತರಾದ ಉಗ್ರರಿಂದ ಒಂದು M4 ಕಾರ್ಬೈನ್ ಮತ್ತು ಒಂದು AK-47 ರೈಫಲ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಸೇನೆ, ಪೊಲೀಸ್ ಮತ್ತು CRPF ನ ಜಂಟಿ ತಂಡಗಳು ಮಂಗಳವಾರದಿಂದ ಭಯೋತ್ಪಾದಕರ ಮೇಲೆ ನಿಗಾ ಇಟ್ಟಿದ್ದವು.

ಸೇನೆ, ಪೊಲೀಸ್ ಮತ್ತು ಸಿಆರ್‌ಪಿಎಫ್ ಜಂಟಿ ತಂಡಗಳೊಂದಿಗೆ ನಡೆದ ತೀವ್ರ ಗುಂಡಿನ ಚಕಮಕಿಯ ನಂತರ, ಮಂಗಳವಾರ ಮಧ್ಯಾಹ್ನದಿಂದ ಭಯೋತ್ಪಾದಕರು ರಾಮನಗರದ ಜಾಫರ್ ಅರಣ್ಯ ಪ್ರದೇಶದಲ್ಲಿ ಅಡಗಿಕೊಂಡಿದ್ದರು. ಆರಂಭಿಕ ಎನ್‌ಕೌಂಟರ್‌ನಲ್ಲಿ ಒಬ್ಬ ಭಯೋತ್ಪಾದಕ ಗಾಯಗೊಂಡಿದ್ದು, ಇಬ್ಬರೂ ಗುಹೆಯೊಳಗೆ ಆಶ್ರಯ ಪಡೆದಿದ್ದರು.ಮಂಗಳವಾರ ಸಂಜೆ ಉಗ್ರಗಾಮಿಗಳು ಕತ್ತಲೆಯ ಮರೆಯಲ್ಲಿ ಪರಾರಿಯಾಗಲು ಯತ್ನಿಸಿದಾಗ ಮತ್ತೆ ಗುಂಡಿನ ಚಕಮಕಿ ಮತ್ತು ಸ್ಫೋಟಗಳು ಸಂಭವಿಸಿದವು. ಕಾರ್ಯಾಚರಣೆ ಮುಂದುವರಿಸಿದ ಭದ್ರತಾ ಪಡೆಗಳು ಉಗ್ರರರನ್ನು ಎನ್‌ಕೌಂಟರ್‌ ಮಾಡಿವೆ.

ಕಳೆದ ಕೆಲವು ದಿನಗಳಿಂದ ಈ ಪ್ರದೇಶದಲ್ಲಿ ಹಲವು ಎನ್‌ಕೌಂಟರ್‌ಗಳು ನಡೆದಿವೆ. ಜನವರಿ 8ರಂದು ಜಮ್ಮು-ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಎನ್‌ಕೌಂಟರ್ ನಡೆಯಿತು.

2025ರ ನವೆಂಬರ್‌ನಲ್ಲಿ ಕಿಶ್ತ್ವಾರ್‌ನ ಛಾತ್ರುವಿನಲ್ಲಿ ಭಯೋತ್ಪಾದಕರ ಇರುವಿಕೆ ಬಗ್ಗೆ ನಿರ್ದಿಷ್ಟ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಜಮ್ಮು-ಕಾಶ್ಮೀರ ಪೊಲೀಸರು ಭಾರತೀಯ ಸೇನೆಯ ಸಹಾಯದಿಂದ ಜಂಟಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ ಭಯೋತ್ಪಾದಕರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆಯಿತು. ಮುಂಜಾನೆ ಸಮಯದಲ್ಲಿ ಸಂಘಟಿತ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಈ ವೇಳೆ ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆದಿದ್ದು, ನಂತರ ಪರಸ್ಪರ ಗುಂಡಿನ ಚಕಮಕಿ ನಡೆಯಿತು.

ಕಾಶ್ಮೀರದ ಹಲವೆಡೆ ಎನ್‌ಐಎ ದಾಳಿ

ಭಯೋತ್ಪಾದನಾ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಕರಣವೊಂದರ ತನಿಖೆಯನ್ನು ತೀವ್ರಗೊಳಿಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (NIA), ಸೋಮವಾರ ಜಮ್ಮು ಮತ್ತು ಕಾಶ್ಮೀರದ ವಿವಿಧ ಜಿಲ್ಲೆಗಳ ಹಲವು ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದೆ. ಶ್ರೀನಗರ, ಬಂಡಿಪೋರಾ ಮತ್ತು ಬಾರಾಮುಲ್ಲಾ ಜಿಲ್ಲೆಗಳಲ್ಲಿ ಈ ಶೋಧ ಕಾರ್ಯ ನಡೆದಿದ್ದು, ಉಗ್ರರ ಜಾಲಕ್ಕೆ ಬೆಂಬಲ ನೀಡುತ್ತಿರುವ ಶಂಕೆ ಇರುವ ವ್ಯಕ್ತಿಗಳ ನಿವಾಸ ಹಾಗೂ ಕಚೇರಿಗಳ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಅಧಿಕಾರಿಗಳ ತಂಡವು ಬಾರಾಮುಲ್ಲಾ ಜಿಲ್ಲೆಯ ರಫಿಯಾಬಾದ್, ಸೋಪೋರ್ ಮತ್ತು ಬೊಮೈ ಪ್ರದೇಶಗಳಲ್ಲಿ ತೀವ್ರ ತಪಾಸಣೆ ನಡೆಸಿತು. ಇದರ ಜೊತೆಗೆ ಬಂಡಿಪೋರಾ ಜಿಲ್ಲೆ ಹಾಗೂ ಶ್ರೀನಗರದ ಪರಿಂಪೋರಾ ಭಾಗದಲ್ಲೂ ಅಧಿಕಾರಿಗಳು ದಾಖಲೆಗಳನ್ನು ಜಾಲಾಡಿದ್ದಾರೆ.