ಚಂಡೀಗಢ, ಅ. 2: ಪಂಜಾಬ್‌ನ (Punjab) ತರಣ್ ತರಣ್ ವಲಯದ ಭಾರತ-ಪಾಕಿಸ್ತಾನ (India-Pakistan) ಅಂತಾರಾಷ್ಟ್ರೀಯ ಗಡಿಯಲ್ಲಿ ಭಾರತದೊಳಗೆ ನುಸುಳಲು ಯತ್ನಿಸುತ್ತಿದ್ದ ಇಬ್ಬರು ಪಾಕಿಸ್ತಾನಿ ಪ್ರಜೆಗಳನ್ನು ಗಡಿ ಭದ್ರತಾ ಪಡೆ (BSF) ಸಿಬ್ಬಂದಿ ಹತ್ಯೆ ಮಾಡಿದ್ದಾರೆ. ಈ ಘಟನೆ ಶುಕ್ರವಾರ (ಅಕ್ಟೋಬರ್ 2) ರಾಜೋಕೆ ಗ್ರಾಮದ ಬಳಿ ನಡೆದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಇಬ್ಬರು ಪಾಕಿಸ್ತಾನಿ ಪ್ರಜೆಗಳು ಗಡಿಯಾಚೆಯಿಂದ ಭಾರತದ ಭೂ ಪ್ರದೇಶಕ್ಕೆ ಪ್ರವೇಶಿಸಲು ಯತ್ನಿಸಿದ್ದಾರೆ ಎನ್ನಲಾಗಿದೆ.
ಒಳನುಸುಳಲು ಪ್ರಯತ್ನಿಸಿದವರನ್ನು ಗಮನಿಸಿದ ಭದ್ರತಾ ಸಿಬ್ಬಂದಿ ನಿಲ್ಲುವಂತೆ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಆದರೆ, ಎಚ್ಚರಿಕೆಗಳನ್ನು ಲೆಕ್ಕಿಸದೆ ಇಬ್ಬರು ವ್ಯಕ್ತಿಗಳು ಭಾರತದ ಕಡೆಗೆ ಬರುವುದನ್ನು ಮುಂದುವರಿಸಿದರು. ಇದರ ನಂತರ, ಬಿಎಸ್ಎಫ್ ಸಿಬ್ಬಂದಿ ಗುಂಡು ಹಾರಿಸಿದರು. ಗುಂಡಿನ ದಾಳಿಯಲ್ಲಿ ಒಳನುಸುಳಿದ್ದ ಇಬ್ಬರು ಆರೋಪಿಗಳು ಮೃತಪಟ್ಟರು.
ಮೃತರು ಪಾಕಿಸ್ತಾನಿ ಪ್ರಜೆಗಳು ಎಂದು ವರದಿಯಾಗಿದೆ. ಆದರೆ ಘಟನೆಯ ಬಗ್ಗೆ ವಿವರಗಳನ್ನು ಒದಗಿಸುವ ಅಧಿಕೃತ ಹೇಳಿಕೆಯನ್ನು ಬಿಎಸ್‌ಎಫ್ ಇನ್ನೂ ಬಿಡುಗಡೆ ಮಾಡಿಲ್ಲ. ಬಿಎಸ್‌ಎಫ್‌ನಿಂದ ಬಂದ ಮಾಹಿತಿಯ ಪ್ರಕಾರ, ಘಟನೆಯ ಸಮಯದಲ್ಲಿ ಮತ್ತೊಬ್ಬ ಶಂಕಿತ ನುಸುಳುಕೋರ ಕೂಡ ಭಾರತದ ಪ್ರದೇಶಕ್ಕೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ. ಆತ ಭಾರತವನ್ನು ದಾಟಿ ಬಂದಿದ್ದಾನೆ ಎಂದು ವರದಿಯಾಗಿದೆ. ಆದರೆ ಬಿಎಸ್‌ಎಫ್ ಸಿಬ್ಬಂದಿ ಗುಂಡು ಹಾರಿಸಿದ ನಂತರ ಪಾಕಿಸ್ತಾನದ ಕಡೆಗೆ ಓಡಿ ಹೋಗಿದ್ದಾನೆ.
ಭಾರತೀಯ ನೌಕಾಪಡೆಯ ನೌಕೆಗೆ ಪಾಕಿಸ್ತಾನದ ಹಡಗು ಡಿಕ್ಕಿ: ರಾಯಭಾರಿಗೆ ಭಾರತದಿಂದ ಸಮನ್ಸ್
ಘಟನೆಯ ನಂತರ ಭದ್ರತಾ ಸಂಸ್ಥೆಗಳು ಗಡಿ ಪ್ರದೇಶಗಳನ್ನು ಕಟ್ಟೆಚ್ಚರದಲ್ಲಿರಿಸಿದೆ. ಇತ್ತೀಚಿನ ಘಟನೆಯು ಪಂಜಾಬ್ ವಲಯದ ಭಾರತ-ಪಾಕಿಸ್ತಾನ ಗಡಿಯುದ್ದಕ್ಕೂ ಭದ್ರತಾ ಸಂಸ್ಥೆಗಳು, ಒಳನುಸುಳುವಿಕೆ ಪ್ರಯತ್ನಗಳ ಬಗ್ಗೆ ಎಚ್ಚರದಿಂದಿವೆ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಬಿಎಸ್‌ಎಫ್ ನೀಡಿರುವ ಲಭ್ಯ ಮಾಹಿತಿಯ ಪ್ರಕಾರ, ಒಳನುಸುಳುವವರು ಪಾಕಿಸ್ತಾನದಿಂದ ಭಾರತದ ಗಡಿಯೊಳಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದರು. ಮೊದಲು ಅವರಿಗೆ ಎಚ್ಚರಿಕೆ ನೀಡಲಾಗಿತ್ತು. ಆದರೆ ಎಚ್ಚರಿಕೆಯನ್ನು ಲೆಕ್ಕಿಸದ ಹಿನ್ನೆಲೆಯಲ್ಲಿ ಅವರ ಮೇಲೆ ಗುಂಡು ಹಾರಿಸಲಾಗಿದೆ ಎಂದು ತಿಳಿದುಬಂದಿದೆ.
ಅಂತಾರಾಷ್ಟ್ರೀಯ ಗಡಿ ದಾಟಿ ಹಿಂದಕ್ಕೆ ತೆರಳಿದ ಪಾಕಿಸ್ತಾನಿ ಒಳನುಸುಳುಕೋರ
ಜುಲೈಯಲ್ಲಿ ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಭಾರತದ ಭೂಪ್ರದೇಶಕ್ಕೆ ಪ್ರವೇಶಿಸಲು ಯತ್ನಿಸಿದ ಪಾಕಿಸ್ತಾನಿ ಒಳನುಸುಳುಕೋರನೊಬ್ಬ, ಗಡಿ ಭದ್ರತಾ ಪಡೆ (BSF) ಸಿಬ್ಬಂದಿ ಎಚ್ಚರಿಕೆ ಗುಂಡು ಹಾರಿಸಿದ ಬಳಿಕ ಅಂತಾರಾಷ್ಟ್ರೀಯ ಗಡಿಯಾಚೆಯಿಂದ ಹಿಂದಕ್ಕೆ ತೆರಳಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೀರಾನಗರ ವಲಯದ ಬೋಬಿಯಾ ಪ್ರದೇಶದಲ್ಲಿ ಬಿಎಸ್ಎಫ್ ಯೋಧರು ಒಳನುಸುಳುಕೋರನ ಚಲನವಲನವನ್ನು ಗಮನಿಸಿ, ಆತನಿಗೆ ಎಚ್ಚರಿಕೆ ನೀಡಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಆತ ಎಚ್ಚರಿಕೆಯನ್ನು ಲೆಕ್ಕಿಸದೆ ಗಡಿ ಬೇಲಿಯತ್ತ ಬರಲು ಯತ್ನಿಸಿದ್ದಾನೆ. ಈ ವೇಳೆ ಎಚ್ಚರಿಕೆಯಲ್ಲಿದ್ದ ಬಿಎಸ್ಎಫ್ ಸಿಬ್ಬಂದಿ ಒಂದೆರಡು ಸುತ್ತು ಗುಂಡು ಹಾರಿಸಿದ ಬಳಿಕ ಆತ ಅಂತಾರಾಷ್ಟ್ರೀಯ ಗಡಿಯಾಚೆಗೆ ಹಿಂದಕ್ಕೆ ತೆರಳಿದ್ದಾನೆ ಎಂದು ಅವರು ತಿಳಿಸಿದ್ದಾರೆ.