ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಜಮ್ಮು ಕಾಶ್ಮೀರದಲ್ಲಿ ನಿಗೂಢವಾಗಿ ಕಾಣೆಯಾಗಿದ್ದ ಅಧಿಕಾರಿಗಳ ಗುಂಡೇಟು ಬಿದ್ದ ಮೃತದೇಹ ಪತ್ತೆ; ಸೇವಾ ಶಸ್ತ್ರಾಸ್ತ್ರ ನಾಪತ್ತೆ

ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಎತ್ತರದ ಪ್ರದೇಶದಲ್ಲಿ ಇಬ್ಬರು ವಿಶೇಷ ಕಾರ್ಯಾಚರಣೆ ಗುಂಪಿನ (SOG) ಪೊಲೀಸ್ ಸಿಬ್ಬಂದಿ ನಿಗೂಢವಾಗಿ ನಾಪತ್ತೆಯಾಗಿದ್ದು, ಭದ್ರತಾ ಪಡೆಗಳು ಬೃಹತ್ ಶೋಧ ಕಾರ್ಯಾಚರಣೆಯನ್ನು ಆರಂಭಿಸಿವೆ. ಬುಧವಾರ ಕಿಯಾರ್ ಶಿಬಿರದಿಂದ ಧರ್ನಾ-ಮರ್ವಾ ಬಳಿಯ ರಾಷ್ಟ್ರೀಯ ರೈಫಲ್ಸ್‌ನ ತಾತ್ಕಾಲಿಕ ಸೇನಾ ನೆಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗಲು ಇವರು ತೆರಳುತ್ತಿದ್ದರು.

ಸಂಗ್ರಹ ಚಿತ್ರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu Kashmir) ಕಿಶ್ತ್ವಾರ್ ಜಿಲ್ಲೆಯ ಎತ್ತರದ ಪ್ರದೇಶದಲ್ಲಿ ಇಬ್ಬರು ವಿಶೇಷ ಕಾರ್ಯಾಚರಣೆ ಗುಂಪಿನ (SOG) ಪೊಲೀಸ್ ಸಿಬ್ಬಂದಿ ನಿಗೂಢವಾಗಿ ನಾಪತ್ತೆಯಾಗಿದ್ದು, ಇದೀಗ ಅವರ ಶವ ಪತ್ತೆಯಾಗಿದೆ. ಅವರ ಸೇವಾ ಶಸ್ತ್ರಾಸ್ತ್ರಗಳು ಕಾಣೆಯಾಗಿದ್ದು, ಘಟನೆಯಲ್ಲಿ ಉಗ್ರಗಾಮಿಗಳ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ದಚ್ಚನ್ ಪ್ರದೇಶದ ಕಿಯಾರ್ ಗ್ರಾಮದ ನಿವಾಸಿಗಳಾದ ಬಬಿ ಚಂದ್ (57) ಮತ್ತು ರಶ್ಪಾಲ್ ಕುಮಾರ್ (45) ನಾಪತ್ತೆಯಾದ ಸಿಬ್ಬಂದಿ ಎಂದು ಅಧಿಕಾರಿಗಳು ಗುರುತಿಸಿದ್ದಾರೆ.

ಬುಧವಾರ ಕಿಯಾರ್ ಶಿಬಿರದಿಂದ ಧರ್ನಾ-ಮರ್ವಾ ಬಳಿಯ ರಾಷ್ಟ್ರೀಯ ರೈಫಲ್ಸ್‌ನ ತಾತ್ಕಾಲಿಕ ಸೇನಾ ನೆಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗಲು ಇವರು ತೆರಳುತ್ತಿದ್ದರು. ಆದರೆ ನಿಗದಿತ ಸ್ಥಳಕ್ಕೆ ತಲುಪದೆ ಮಾರ್ಗಮಧ್ಯೆಯೇ ಕಣ್ಮರೆಯಾಗಿದ್ದಾರೆ. ಆರಂಭದಲ್ಲಿ ಇವರ ಮೊಬೈಲ್ ಫೋನ್‌ಗಳು ಸಂಪರ್ಕಕ್ಕೆ ಸಿಕ್ಕಿದ್ದರೂ, ನಂತರ ಸ್ವಿಚ್ ಆಫ್ ಆಗಿರುವುದು ಆತಂಕಕ್ಕೆ ಕಾರಣವಾಗಿತ್ತು. ಸಿಬ್ಬಂದಿ ನಾಪತ್ತೆಯಾದ ಬೆನ್ನಲ್ಲೇ ಸ್ಥಳೀಯ ಪೊಲೀಸರು ಮತ್ತು ಸೇನೆಯ ರಾಷ್ಟ್ರೀಯ ರೈಫಲ್ಸ್ ಪಡೆಗಳು ಜಂಟಿಯಾಗಿ ದುರ್ಗಮ ಅರಣ್ಯ ಪ್ರದೇಶದಲ್ಲಿ ತೀವ್ರ ಶೋಧ ನಡೆಸುತ್ತಿದ್ದವು. ಇದೀಗ ಅವರ ಮೃತದೇಹಗಳು ಪತ್ತೆಯಾಗಿವೆ.

ಈ ಪ್ರದೇಶದಲ್ಲಿ ಗುಂಡಿನ ಸದ್ದು ಕೇಳಿಬಂದಿರುವುದಾಗಿ ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಘಟನೆಯಲ್ಲಿ ಭಯೋತ್ಪಾದಕರ ಕೈವಾಡವಿರುವ ಸಾಧ್ಯತೆಯನ್ನು ಪೊಲೀಸರು ಶಂಕಿಸಿದ್ದಾರೆ. ಬುಧವಾರ ಮಧ್ಯಾಹ್ನ ಕುಲ್ಗಾಮ್ ಜಿಲ್ಲೆಯ ಮೀರ್ ಬಜಾರ್ ಬಳಿಯ ಸಿಆರ್‌ಪಿಎಫ್ (CRPF) ಶಿಬಿರದ ಮೇಲೆ ಇಬ್ಬರು ಶಸ್ತ್ರಸಜ್ಜಿತ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಮೂವರು ಯೋಧರು ಗಾಯಗೊಂಡಿದ್ದು, ಉಗ್ರರು ಅರಣ್ಯ ಪ್ರದೇಶದ ಮೂಲಕ ಪರಾರಿಯಾಗಿದ್ದಾರೆ. ಈ ಘಟನೆಯ ಬೆನ್ನಲ್ಲೇ ಕಿಶ್ತ್ವಾರ್ ಜಿಲ್ಲೆಯಾದ್ಯಂತ ಪೊಲೀಸರು ಹೈ ಅಲರ್ಟ್ ಘೋಷಿಸಿದ್ದು, ಭದ್ರತೆಯನ್ನು ಬಿಗಿಗೊಳಿಸಲಾಗಿದೆ.

ಮಧ್ಯಾಹ್ನ 2:15ರ ವೇಳೆಗೆ ಬೈಕ್‌ನಲ್ಲಿ ಬಂದ ಉಗ್ರರು ಚೆಕ್‌ಪೋಸ್ಟ್ ಮೇಲೆ ಏಕಾಏಕಿ ಮೆಷಿನ್ ಗನ್‌ಗಳಿಂದ ಗುಂಡಿನ ಮಳೆಗರೆದಿದ್ದಾರೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ಆರಂಭದ ಕೇವಲ 15 ಸೆಕೆಂಡ್‌ಗಳಲ್ಲಿ ಸುಮಾರು 30 ಸುತ್ತು ಗುಂಡು ಹಾರಿಸಿದ ಶಬ್ದ ಸ್ಪಷ್ಟವಾಗಿ ಕೇಳಿಬಂದಿದೆ. ನಂತರದ ಒಂದು ನಿಮಿಷದೊಳಗೆ ಮತ್ತೆ 12 ಸುತ್ತು ಗುಂಡು ಹಾರಿಸಲಾಗಿದ್ದು, ದಾಳಿಯಲ್ಲಿ ರಾಕೇಶ್ ದಾಸ್, ಸಂತೋಷ್ ಚಂದ್ರು ಮತ್ತು ಸೋಮವೀರ್ ಸಿಂಗ್ ಎಂಬ ಮೂವರು ಸಿಆರ್‌ಪಿಎಫ್ ಯೋಧರು ಗಾಯಗೊಂಡಿದ್ದಾರೆ.

ಸೋಷಿಯಲ್‌ ಮೀಡಿಯಾ ಮೂಲಕ ಪರಿಚಯ: ಜಮ್ಮು-ಕಾಶ್ಮೀರದ ಪ್ರಿಯತಮೆಯನ್ನು ಭೇಟಿಯಾಗಲು ಗಡಿ ದಾಟಿ ಬಂದ ಪಾಕ್ ಆಕ್ರಮಿತ ಕಾಶ್ಮೀರದ ಯುವಕ

ಯೋಧರು ಕೂಡಲೇ ಪ್ರತಿ ದಾಳಿ ನಡೆಸಿ ಧೈರ್ಯದಿಂದ ಉಗ್ರರಿಗೆ ಸವಾಲು ಹಾಕಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಘಟನಾ ಸ್ಥಳಗಳಿಗೆ ಹೆಚ್ಚುವರಿ ಸೇನಾ ಪಡೆಗಳನ್ನು ರವಾನಿಸಲಾಗಿದ್ದು, ಇಡೀ ಕಿಸ್ಟ್ವಾರ್ ಹಾಗೂ ಕುಲ್ಗಾಮ್ ಅರಣ್ಯ ಪ್ರದೇಶವನ್ನು ಸೀಲ್ ಡೌನ್ ಮಾಡಿ ಉಗ್ರರಿಗಾಗಿ ಬೃಹತ್ ಜಂಟಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ.

Vishakha Bhat Heggar

View all posts by this author