ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಉಜ್ಜಯಿನಿ ದುರಂತ: ಫಲಿಸಲಿಲ್ಲ ಪ್ರಾರ್ಥನೆ, ಬೋರ್‌ವೆಲ್‌ಗೆ ಬಿದ್ದ ಬಾಲಕ ಸಾವು

ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಕೊಳವೆ ಬಾವಿಗೆ ಬಿದ್ದ 2.5 ವರ್ಷದ ಬಾಲಕ ಭಗೀರಥ್, 23 ಗಂಟೆಗಳ ಕಠಿಣ ರಕ್ಷಣಾ ಕಾರ್ಯಾಚರಣೆಯ ಬಳಿಕ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ದುರ್ಘಟನೆ ನಡೆದಿದೆ. SDRF ಮತ್ತು NDRF ತಂಡಗಳು ತೀವ್ರ ಪ್ರಯತ್ನ ನಡೆಸಿದರೂ ಮಗುವನ್ನು ಉಳಿಸಲು ಸಾಧ್ಯವಾಗಲಿಲ್ಲ. ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಸಂತಾಪ ಸೂಚಿಸಿ, ಕುಟುಂಬಕ್ಕೆ 4 ಲಕ್ಷ ಪರಿಹಾರ ಘೋಷಿಸಿದ್ದಾರೆ.

ಕಾರ್ಯಾಚರಣೆ ಚಿತ್ರಣ

ಭೋಪಾಲ್: ಮಧ್ಯಪ್ರದೇಶದ ಉಜ್ಜಯಿನಿ (Ujjain) ಜಿಲ್ಲೆಯಲ್ಲಿ ಕೊಳವೆ ಬಾವಿಗೆ(Borewell) ಬಿದ್ದ ಎರಡೂವರೆ ವರ್ಷದ ಬಾಲಕ ಮೃತಪಟ್ಟ (Toddler Death) ದುರ್ಘಟನೆ ನಡೆದಿದೆ. ಸುದಿರ್ಘ ಕಾರ್ಯಾಚರಣೆಯ ನಂತರವೂ ದುರಾದೃಷ್ಟವಶಾತ್ ಮಗು ಇಹಲೋಕ ತ್ಯಜಿಸಿದ್ದು, ಹೆತ್ತವರ ಆಕ್ರಂದನ ಮುಗಿಲುಮುಟ್ಟಿದೆ. ಈ ಘಟನೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಸಂತಾಪ ಸೂಚಿಸಿ, ಮೃತ ಬಾಲಕನ ಕುಟುಂಬಕ್ಕೆ 4 ಲಕ್ಷ ಪರಿಹಾರ ನೆರವನ್ನು ಘೋಷಿಸಿದ್ದಾರೆ.

65 ಅಡಿ ಆಳದಲ್ಲಿ ಸಿಲುಕಿದ ಬಾಲಕ

ಗುರುವಾರ ಸಂಜೆ ಸುಮಾರು 7ರಿಂದ 7:30ರ ನಡುವೆ ಬದ್ನಗರ ತಾಲೂಕಿನ ಝಲಾರಿಯಾ ಗ್ರಾಮದಲ್ಲಿ ಭಗೀರಥ ಎಂಬ ಬಾಲಕ ಕೊಳವೆ ಬಾವಿಗೆ ಜಾರಿ ಬಿದ್ದಿದ್ದ. ಉಜ್ಜಯಿನಿ ನಗರದಿಂದ ಸುಮಾರು 75 ಕಿ.ಮೀ ದೂರದಲ್ಲಿ ಈ ಗ್ರಾಮವಿದ್ದು, ಘಟನೆ ಮಾಹಿತಿ ಬಂದ ಬೆನ್ನಲ್ಲೇ ರಕ್ಷಣಾ ಕಾರ್ಯಾಚರಣೆ ಶುರು ಮಾಡಲಾಗಿತ್ತು. ಮಾಹಿತಿ ದೊರಕುತ್ತಿದ್ದಂತೆ ಜಿಲ್ಲಾಡಳಿತ, ರಾಜ್ಯ ವಿಪತ್ತು ಪ್ರತಿಕ್ರಿಯಾ ಪಡೆ (SDRF) ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ (NDRF) ತಂಡಗಳು ಸ್ಥಳಕ್ಕೆ ದೌಡಾಯಿಸಿ ಕಾರ್ಯಾಚರಣೆ ಆರಂಭಿಸಿತ್ತು. ಬಾಲಕನು ಸುಮಾರು 60ರಿಂದ 65 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದನು ಎಂದು ಅಧಿಕಾರಿಗಳು ತಿಳಿಸಿದ್ದರು.

ಕಾರ್ಯಾಚರಣೆಗೆ ಅಡ್ಡಿಯಾದ ಬಂಡೆಗಳು

ರಕ್ಷಣಾ ಕಾರ್ಯಾಚರಣೆ ವೇಳೆ ಕಲ್ಲುಗಳಿಂದ ಕೂಡಿದ ಭೂಭಾಗ ಮತ್ತು ದೊಡ್ಡ ಬಂಡೆಗಳು ತೀವ್ರ ಅಡ್ಡಿಯಾಗಿದ್ದು, ತೋಡುವ ಕಾರ್ಯ ನಿಧಾನಗತಿಯಲ್ಲಿ ಸಾಗಿತು. 40 ಅಡಿ ತನಕ ತೋಡಿದ ನಂತರ ಕಲ್ಲಿನ ಪದರಗಳು ಎದುರಾದ ಕಾರಣ, ಭೋಪಾಲ್ ಮತ್ತು ಇಂದೋರ್ ನಗರಗಳಿಂದ ವಿಶೇಷ ಡ್ರಿಲ್ಲಿಂಗ್ ಯಂತ್ರಗಳನ್ನು ತರಿಸಲಾಯಿತು. ಪೋಕ್ಲೈನ್ ಮತ್ತು JCB ಸೇರಿದಂತೆ ಹಲವಾರು ಯಂತ್ರಗಳನ್ನು ಬಳಸಲಾಗಿತ್ತು. ಬಾಲಕನ ಸ್ಥಿತಿಯನ್ನು ತಿಳಿಯಲು ಬೋರ್‌ವೆಲ್ ಒಳಗೆ ಕ್ಯಾಮೆರಾ ಹಾಕಲಾಗಿತ್ತು ಮತ್ತು ನಿರಂತರವಾಗಿ ಆಮ್ಲಜನಕವನ್ನು ಪೂರೈಸಲಾಗುತ್ತಿತ್ತು. ಜೊತೆಗೆ "ರೆಸ್ಕ್ಯೂ ರಿಂಗ್" ಬಳಸಿ ಮೇಲಕ್ಕೆಳೆದು ತರಲು ಪ್ರಯತ್ನಿಸಲಾಯಿತು. ಆದರೂ ಸುಮಾರು 23 ಗಂಟೆಗಳ ನಿರಂತರ ಪ್ರಯತ್ನದ ಬಳಿಕ ಬಾಲಕನನ್ನು ಹೊರತೆಗೆದಾಗ ಅವನು ಪ್ರಜ್ಞಾ ಹೀನ ಸ್ಥಿತಿಯಲ್ಲಿದ್ದು, ಯಾವುದೇ ಪ್ರತಿಕ್ರಿಯೆ ಇರಲಿಲ್ಲ.

ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್ ಸಾಹಿಲ್ ಚೌಹಾಣ್ ಥೈಲ್ಯಾಂಡ್‌ನಿಂದ ಭಾರತಕ್ಕೆ ಗಡೀಪಾರು

ನೀರಿನಲ್ಲಿ ಮುಳುಗಿ ಮೃತ

ಹೆಚ್ಚಿನ ಚಿಕಿತ್ಸೆಗಾಗಿ ತಕ್ಷಣ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯಕೀಯ ಪರೀಕ್ಷೆಯಲ್ಲಿ ಬಾಲಕ ಮೃತಪಟ್ಟಿರುವುದು ದೃಢಪಟ್ಟಿತು ಎಂದು ಜಿಲ್ಲಾ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯಾಧಿಕಾರಿ ಡಾ. ಸುಯಾಶ್ ಶ್ರೀವಾಸ್ತವ ತಿಳಿಸಿದ್ದಾರೆ. ಮುಖ್ಯ ವೈದ್ಯಾಧಿಕಾರಿ ಡಾ. ಅಶೋಕ್ ಪಟೇಲ್ ಅವರ ಪ್ರಕಾರ, ಮರಣೋತ್ತರ ಪರೀಕ್ಷೆಯಲ್ಲಿ ಬಾಲಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವುದು ದೃಢಪಟ್ಟಿದ್ದು, ದೇಹದ ಮೇಲೆ ಸವೆತದ ಗುರುತುಗಳೂ ಕಂಡುಬಂದಿವೆ.

ಸಂತಾಪ ಸೂಚಿಸಿದ ಮುಖ್ಯಮಂತ್ರಿ

ಈ ಕುರಿತು ಮುಖ್ಯಮಂತ್ರಿ ಮೋಹನ್ ಯಾದವ್ ಅವರು ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿ, “ಈ ದುರ್ಘಟನೆ ಅತ್ಯಂತ ನೋವುಂಟುಮಾಡುವಂತದ್ದು. ತಕ್ಷಣವೇ ಎಲ್ಲಾ ರಕ್ಷಣಾ ತಂಡಗಳು ಕಾರ್ಯಾಚರಣೆಗೆ ಮುಂದಾದರೂ ಮಗುವನ್ನು ಉಳಿಸಲು ಸಾಧ್ಯವಾಗಲಿಲ್ಲ” ಎಂದು ಹೇಳಿದ್ದಾರೆ. ಅವರು ಮೃತ ಬಾಲಕನ ಆತ್ಮಕ್ಕೆ ಶಾಂತಿ ಕೋರಿ, ಕುಟುಂಬಕ್ಕೆ ಈ ದುಃಖವನ್ನು ಸಹಿಸುವ ಶಕ್ತಿ ದೊರಕಲಿ ಎಂದು ಪ್ರಾರ್ಥಿಸಿದ್ದಾರೆ.

ಭಗೀರಥ ರಾಜಸ್ಥಾನದ ಪಾಲಿ ಜಿಲ್ಲೆಯ ಗುಡನ್ಲಾ ಗ್ರಾಮದ ನಿವಾಸಿಯಾದ ಪ್ರವೀಣ್ ದೇವಾಸಿ ಅವರ ಮಗನಾಗಿದ್ದು, ಕುಟುಂಬವು ಜಾನುವಾರು ಮೇಯಿಸುವ ವೃತ್ತಿ ನಡೆಸುತ್ತಿದೆ. ಘಟನೆ ಸಮಯದಲ್ಲಿ ಕುಟುಂಬವು ಕುರಿಗಳನ್ನು ಮೇಯಿಸುತ್ತಿದ್ದಾಗ, ಬಾವಿಯನ್ನು ಮುಚ್ಚಿದ್ದ ಕಲ್ಲು ಜಾರಿಬಿದ್ದಿತ್ತು. ಹಿಂದೆ ಬರುತ್ತಿದ್ದ ಬಾಲಕ ಕುತೂಹಲದಿಂದ ಅದನ್ನು ತೆಗೆದು ನೋಡಲು ಹೋಗಿ ಕೊಳವೆ ಬಾವಿಗೆ ಬಿದ್ದಿದ್ದಾನೆ ಎಂದು ತಿಳಿದುಬಂದಿದೆ.

ಘಟನೆ ವೇಳೆ ಬಾಲಕನ ತಂದೆ ಪಾಲಿ ಜಿಲ್ಲೆಯಲ್ಲಿ ಇದ್ದರು. ಕುಟುಂಬವು ಮೂರು ದಿನಗಳ ಹಿಂದಷ್ಟೇ ಈ ಪ್ರದೇಶಕ್ಕೆ ಬಂದಿತ್ತು. ಮಗುವಿನ ಚಿಕ್ಕಪ್ಪ ಮೋತಿಲಾಲ್ ದೇವಾಸಿ ಅವರು, “ನಾವು ನಮ್ಮ ಮಗುವನ್ನು ಕಳೆದುಕೊಂಡಿದ್ದೇವೆ. ಸರ್ಕಾರದಿಂದ ಹೆಚ್ಚಿನ ನೆರವು ನೀಡಬೇಕು” ಎಂದು ಮನವಿ ಮಾಡಿದ್ದಾರೆ. ಈ ಘಟನೆ ಮತ್ತೊಮ್ಮೆ ತೆರೆದ ಬೋರ್‌ವೆಲ್‌ಗಳ ಅಪಾಯ ಮತ್ತು ಸುರಕ್ಷತಾ ಕ್ರಮಗಳ ಅಗತ್ಯವನ್ನು ಎತ್ತಿಹಿಡಿದಿದೆ.