ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕೇಂದ್ರ ಸಚಿವ ಜೆ.ಪಿ. ನಡ್ಡಾ ಆಸ್ಪತ್ರೆಗೆ ದಾಖಲು

ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಗುರುವಾರ ಸಂಜೆ ಅಸ್ವಸ್ಥತೆ ಉಂಟಾಗಿದ್ದರಿಂದ ಅವರನ್ನು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (AIIMS) ದಾಖಲಿಸಲಾಗಿದೆ. ಇಲ್ಲಿ ಅವರನ್ನು ಕೊರೊನರಿ ಆಂಜಿಯೋಗ್ರಫಿಗೆ ಒಳಪಡಿಸಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಹೇಳಿಕೆಯಲ್ಲಿ ತಿಳಿಸಿದೆ.

ಸಂಗ್ರಹ ಚಿತ್ರ

ನವದೆಹಲಿ: ಕೇಂದ್ರ ಸಚಿವ ಜೆ.ಪಿ. ನಡ್ಡಾ (Union Health Minister JP Nadda) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದೆಹಲಿಯ (Delhi) ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (AIIMS) ಹೃದ್ರೋಗ ವಿಭಾಗದಲ್ಲಿ ಅವರನ್ನು ದಾಖಲಿಸಲಾಗಿದೆ. ಗುರುವಾರ ಸಂಜೆ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೊರೊನರಿ ಆಂಜಿಯೋಗ್ರಫಿ (coronary angiography) ಚಿಕಿತ್ಸೆಗೆ ಒಳಪಡಿಸಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ವೈದ್ಯರು ಅವರ ಆರೋಗ್ಯದ ಬಗ್ಗೆ ನಿಗಾ ಇರಿಸಿದ್ದಾರೆ ಎಂದು ಆಸ್ಪತ್ರೆ ಹೇಳಿಕೆಯಲ್ಲಿ ತಿಳಿಸಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ. ನಡ್ಡಾ ಅವರನ್ನು ಆಗಸ್ಟ್ 13ರಂದು ಸಂಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಕೊರೊನರಿ ಆಂಜಿಯೋಗ್ರಫಿ ಸೇರಿದಂತೆ ಹಲವಾರು ಪರೀಕ್ಷೆಗಳನ್ನು ನಡೆಸಲಾಗಿದೆ. ಕೊರೊನರಿ ಆಂಜಿಯೋಗ್ರಫಿ ಹೃದಯಕ್ಕೆ ರಕ್ತವನ್ನು ಪೂರೈಸುವ ನಾಳಗಳಾದ ಅಪಧಮನಿಗಳಲ್ಲಿ ಇರುವ ತಡೆಗಳು ಅಥವಾ ಕಿರಿದಾಗುವಿಕೆಯನ್ನು ಪತ್ತೆಹಚ್ಚಲು ನಡೆಸುವ ಒಂದು ವೈದ್ಯಕೀಯ ಪರೀಕ್ಷೆಯಾಗಿದೆ.

ಕೈಮೂರ್ ಬೆಟ್ಟಗಳು ಎಲ್ಲಿವೆ? ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ತಿರಂಗಾ ಸಫಾರಿಯ ಅದ್ಭುತ ಫೋಟೋಗಳನ್ನು ಹಂಚಿಕೊಂಡ ಕೇಂದ್ರ ಸಂಸ್ಕೃತಿ ಸಚಿವಾಲಯ

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಏಮ್ಸ್ ಆಸ್ಪತ್ರೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಜೆ.ಪಿ. ನಡ್ಡಾ ಅವರನ್ನು ಆಗಸ್ಟ್ 13ರಂದು ಸಂಜೆ ಕೊರೊನರಿ ಆಂಜಿಯೋಗ್ರಫಿ ಸೇರಿದಂತೆ ಹಲವು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಅವರ ಆರೋಗ್ಯ ಪ್ರಸ್ತುತ ಸ್ಥಿರವಾಗಿದ್ದು, ಹೃದ್ರೋಗ ವಿಭಾಗದಲ್ಲಿ ವೈದ್ಯರ ನಿಗಾದಲ್ಲಿ ಅವರನ್ನು ಇರಿಸಲಾಗಿದೆ ಎಂದು ತಿಳಿಸಿದೆ.

ರಾಜ್ಯಸಭೆಯಲ್ಲಿ ಏನಾಯಿತು?

ಸಂಸತ್ತಿನ ಮುಂಗಾರು ಅಧಿವೇಶನ ಕೊನೆಗೊಂಡ ಕೆಲವೇ ಗಂಟೆಗಳ ಅನಂತರ ನಡ್ಡಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಧಿವೇಶನದ ಕೊನೆಯ ದಿನದಂದು ವಿರೋಧ ಪಕ್ಷದ ಸದಸ್ಯರು ಮತ್ತು ರಾಜ್ಯಸಭೆಯಲ್ಲಿ ಸದನದ ನಾಯಕರಾಗಿರುವ ನಡ್ಡಾ ನಡುವೆ ತೀವ್ರ ವಾಗ್ವಾದ ನಡೆದಿತ್ತು.

ಹಲ್ದ್ ವಾನಿಯ ರಾಮ್ ಲೀಲಾ ಮೈದಾನದಲ್ಲಿ ನಡೆದ ಸಭೆಯಲ್ಲಿ ತಾವು ಮಾತನಾಡಿದ ಬಳಿಕ ವೇದಿಕೆ ಶುದ್ಧೀಕರಣ ವಿಧಿವಿಧಾನಗಳನ್ನು ನಡೆಸಲಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆರೋಪಿಸಿದ್ದು, ಇದನ್ನು ಜೆ.ಪಿ. ನಡ್ಡಾ ಅವರು ಖಂಡಿಸಿ ಬಿಜೆಪಿ ಅಂತಹ ಕ್ರಮಗಳನ್ನು ಬೆಂಬಲಿಸುವುದಿಲ್ಲ. ಇದು ಕಾಂಗ್ರೆಸ್‌ಗೆ ಮಾತ್ರವಲ್ಲ ಮಗೆಲ್ಲರಿಗೂ ನೋವಿನ ಸಂಗತಿಯಾಗಿದೆ ಎಂದು ಹೇಳಿದರು.

ಈ ಘಟನೆಗೆ ಸಂಬಂಧಿಸಿ ಖರ್ಗೆ ಅವರು ಅಸ್ಪೃಶ್ಯತೆ (ಅಪರಾಧ) ಕಾಯ್ದೆಯಡಿ ಪ್ರಕರಣ ದಾಖಲಿಸುವುದು ಮತ್ತು ಸಂಬಂಧಪಟ್ಟವರ ಬಂಧನಕ್ಕೆ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ನಡ್ಡಾ, ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಖರ್ಗೆ ಅವರ ಮಾತಿನ ಪದ ಬಳಕೆಯನ್ನು ಅವರು ಆಕ್ಷೇಪಿಸಿದ್ದರು.

ಇದಾಗಿ ಕೆಲವೇ ಗಂಟೆಗಳ ಬಳಿಕ ಜೆ.ಪಿ. ನಡ್ಡಾ ಅವರ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿದೆ. ತಕ್ಷಣವೇ ಅವರನ್ನು ಏಮ್ಸ್‌ನಲ್ಲಿ ದಾಖಲಿಸಲಾಯಿತು. ಹೃದ್ರೋಗ ವಿಭಾಗದಲ್ಲಿ ಅವರನ್ನು ವೈದ್ಯರ ನಿಗಾದಲ್ಲಿ ಇರಿಸಲಾಗಿದೆ.

ರಾಜಕೀಯಕ್ಕೆ ನಡ್ಡಾ ನಡೆದು ಬಂದ ದಾರಿ

ಮೂಲತಃ ಹಿಮಾಚಲ ಪ್ರದೇಶದವರಾದ ಜೆ.ಪಿ. ನಡ್ಡಾ ಅವರು 1960ರ ಡಿಸೆಂಬರ್ 2ರಂದು ಬಿಹಾರದ ಪಾಟ್ನಾದಲ್ಲಿ ಜನಿಸಿದರು. ಪಾಟ್ನಾ ವಿಶ್ವವಿದ್ಯಾಲಯದಲ್ಲಿ ಬಿಎ ಪೂರ್ಣಗೊಳಿಸಿ ಬಳಿಕ ಹಿಮಾಚಲ ಪ್ರದೇಶ ವಿಶ್ವವಿದ್ಯಾಲಯದಲ್ಲಿ ಎಲ್‌ಎಲ್‌ಬಿ ಅಧ್ಯಯನ ಮಾಡಿದ್ದರು.

ಸಣ್ಣ ವಯಸ್ಸಿನಲ್ಲಿ ಅವರು ಜೈ ಪ್ರಕಾಶ್ ನಾರಾಯಣ್ ನಡೆಸುತ್ತಿದ್ದ ವಿವಿಧ ಚಳುವಳಿಗಳಲ್ಲಿ ಸಕ್ರಿಯರಾಗಿದ್ದು, ಬಳಿಕ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸೇರಿಕೊಂಡರು.1989ರಲ್ಲಿ ಸಂಸ್ಥೆಯ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಆಯ್ಕೆಯಾದರು.

1991ರಲ್ಲಿ ಅವರನ್ನು ಭಾರತೀಯ ಜನತಾ ಯುವ ಮೋರ್ಚಾದ ಅಧ್ಯಕ್ಷರನ್ನಾಗಿ ಮಾಡಲಾಯಿತು. 199೩ರಲ್ಲಿ ಅವರು ಮೊದಲ ಬಾರಿಗೆ ಹಿಮಾಚಲ ಪ್ರದೇಶ ವಿಧಾನಸಭೆಗೆ ಶಾಸಕರಾಗಿ ಆಯ್ಕೆಯಾಗಿ ವಿರೋಧ ಪಕ್ಷದ ನಾಯಕರಾದರು. 1998ರಲ್ಲಿ ಮರು ಆಯ್ಕೆಯಾದ ಅವರನ್ನು ಬಿಜೆಪಿ ರಾಜ್ಯ ಸರ್ಕಾರದಲ್ಲಿ ಆರೋಗ್ಯ ಸಚಿವರಾನ್ನಾಗಿ ಮಾಡಿತು.

ಕೇರಳಂ ಪಿಎಸ್‌ಸಿಯಲ್ಲಿಯೂ ಭಾರಿ ಅಕ್ರಮ: ಕಠಿಣ ಕ್ರಮದ ಎಚ್ಚರಿಕೆ ನೀಡಿದ ಮುಖ್ಯಮಂತ್ರಿ ಸತೀಶನ್

2010ರಲ್ಲಿ ಅವರನ್ನು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಲಾಗಿದ್ದು, 2012ರಲ್ಲಿ ಮೊದಲ ಬಾರಿಗೆ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದರು. 2014 ರಿಂದ 2019ರವರೆಗೆ ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಲ್ಲಿ ಕಾರ್ಯನಿರ್ವಹಿಸಿದ ಅವರು 2019ರಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷರಾಗಿ, 2020 ರಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದರು.

ವಿದ್ಯಾ ಇರ್ವತ್ತೂರು

View all posts by this author