ನವದೆಹಲಿ: ಕಳೆದ ಫೆಬ್ರವರಿ ತಿಂಗಳಾಂತ್ಯದಲ್ಲಿ ಪ್ರಾರಂಭವಾಗಿರುವ ಅಮೆರಿಕ (America) ಮತ್ತು ಇರಾನ್ ಸಂಘರ್ಷ (Iran war) ಸುಮಾರು ನೂರು ದಿನಗಳ ಬಳಿಕ ಕೊನೆಯಾಗುವ ಲಕ್ಷಣಗಳು ಕಂಡು ಬರುತ್ತಿವೆ. ಈಗಾಗಲೇ ಯುದ್ಧ ಮುಕ್ತಾಯ ಒಪ್ಪಂದಕ್ಕೆ (US-Iran deal) ಸಹಿ ಹಾಕಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಅವರು ಒಪ್ಪಿಕೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು, ಅಮೆರಿಕ ಮತ್ತು ಇರಾನ್ ನಡುವಿನ ಒಪ್ಪಂದದಿಂದ ಪಶ್ಚಿಮ ಏಷ್ಯಾ ಭಾಗದಲ್ಲಿ ಶಾಂತಿ ಸ್ಥಾಪನೆಯಾಗುವುದು ಎಂದು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮದ ಎಕ್ಸ್ ಖಾತೆಯಲ್ಲಿ ಈ ಕುರಿತು ಬರೆದಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಅಮೆರಿಕ ಮತ್ತು ಇರಾನ್ ನಡುವಿನ ಒಪ್ಪಂದವು ಪಶ್ಚಿಮ ಏಷ್ಯಾದಲ್ಲಿ ಶಾಂತಿಯನ್ನು ಪುನಃಸ್ಥಾಪಿಸುತ್ತದೆ. ಇದರಿಂದ ಜಾಗತಿಕ ವ್ಯಾಪಾರ ಮಾರ್ಗಗಳ ರಕ್ಷಣೆಯಾಗುತ್ತದೆ. ಇದು ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಹೇಳಿದ್ದಾರೆ.
“ಇಂದಿರಾ ಗಾಂಧಿ ಇರುತ್ತಿದ್ದರೆ ಬಿಜೆಪಿಯನ್ನು ನಿಷೇಧಿಸುತ್ತಿದ್ದರು”: ಭಾರೀ ವಿವಾದ ಸೃಷ್ಟಿಸಿದ ಮಾಜಿ ಸಿಎಂ ಹೇಳಿಕೆ
ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷದ ಪರಿಣಾಮ ಪ್ರಪಂಚದಾದ್ಯಂತ ಎಲ್ಲಾ ರಾಷ್ಟ್ರಗಳು ಗಂಭೀರ ಆರ್ಥಿಕ ತೊಂದರೆಯನ್ನು ಎದುರಿಸುತ್ತಿವೆ. ಹಲವಾರು ದೇಶಗಳ ನಾಗರಿಕರು ಸಾವನ್ನಪ್ಪಿದ್ದಾರೆ. ಇದೀಗ ಶಾಂತಿ ಸ್ಥಾಪನೆಗೆ ಎರಡು ರಾಷ್ಟ್ರಗಳು ಮುಂದಾಗಿರುವುದನ್ನು ನಾನು ಸ್ವಾಗತಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಅಮೆರಿಕ ಮತ್ತು ಇರಾನ್ ನಡುವಿನ ಒಪ್ಪಂದದಿಂದ ಪಶ್ಚಿಮ ಏಷ್ಯಾ ಭಾಗದಲ್ಲಿ ಶಾಂತಿಯನ್ನು ತರಲು ಮತ್ತು ಹೊರ್ಮುಜ್ ಜಲಸಂಧಿಯ ದಾರಿಯಲ್ಲಿ ವಾಣಿಜ್ಯ ಹಡಗುಗಳ ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದು ವಾಣಿಜ್ಯ ವಹಿವಾಟಿನಲ್ಲಿ ಸ್ವಾತಂತ್ರ್ಯವನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.
ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವಿನ ಮಾತುಕತೆಗಳು ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಕಾರಣವಾಗುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಅವರು, ಸುಸ್ಥಿರ ಅಂತಿಮ ಒಪ್ಪಂದದ ಕುರಿತ ಚರ್ಚೆಗಳನ್ನು ನಾವು ಎದುರು ನೋಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ಒಪ್ಪಂದದಲ್ಲಿ ಏನಿದೆ?
ಅಮೆರಿಕ ಮತ್ತು ಇರಾನ್ ನಡುವೆ ಯುದ್ಧ ಕೊನೆಗೊಳಿಸುವ ಒಪ್ಪಂದದಲ್ಲಿ ಮುಖ್ಯವಾಗಿ ಹೊರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುವ ಮತ್ತು ಟೆಹ್ರಾನ್ ಪರಮಾಣು ಶಸ್ತ್ರಾಸ್ತ್ರ ಸಂಗ್ರಹವನ್ನು ನಿಷೇಧಿಸುವ ಅಂಶಗಳನ್ನು ಒಳಗೊಂಡಿದೆ. ಇದರೊಂದಿಗೆ ಇರಾನ್‌ಗೆ ತಾತ್ಕಾಲಿಕವಾಗಿ ನಿರ್ಬಂಧಗಳಿಂದ ಪರಿಹಾರ, ವಶಕ್ಕೆ ಪಡೆದಿರುವ ಇರಾನಿನ ಸ್ವತ್ತುಗಳ ಬಿಡುಗಡೆ, ಎರಡೂ ದೇಶಗಳ ನಡುವಿನ ಸಮಸ್ಯೆಗಳನ್ನು ಪರಿಹರಿಸಲು 60 ದಿನಗಳ ಮಾತುಕತೆ ವಿಷಯಗಳನ್ನು ಕೂಡ ಒಳಗೊಂಡಿದೆ ಎನ್ನಲಾಗಿದೆ.