ವಾಷಿಂಗ್ಟನ್: ಅಮೆರಿಕವು ಇದೀಗ ಭಾರತ ವಿರುದ್ಧದ ಪ್ರತಿ ಸುಂಕವನ್ನು 50 ಪರ್ಸೆಂಟ್‌ನಿಂದ 18 ಪರ್ಸೆಂಟ್‌ಗೆ ಕಡಿತಗೊಳಿಸಿದೆ. ಏಷ್ಯಾದಲ್ಲೇ (US Trade Deal) ಅತ್ಯಂತ ಕಡಿಮೆ ಟಾರಿಫ್‌ಗಳಲ್ಲಿ ಭಾರತವೂ ಒಂದಾಗಿದೆ. ಭಾರತ ಮತ್ತು ಅಮೆರಿಕ ನಡುವೆ ಐತಿಹಾಸಿಕ ವ್ಯಾಪಾರ ಒಪ್ಪಂದ ಅಂತಿಮವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಫೆಬ್ರವರಿ 2ರಂದು ಸೋಮವಾರ ಘೋಷಿಸಿದ್ದಾರೆ. ಹಾಗಾದರೆ ಒಪ್ಪಂದದಲ್ಲಿ ಏನೇನಿದೆ? ಇದರಿಂದ ಭಾರತಕ್ಕೆ ಹೇಗೆ ಪ್ರಯೋಜನವಾಗಲಿದೆ? ತಿಳಿಯೋಣ ಬನ್ನಿ.
ಪ್ರಧಾನಿ ನರೇಂದ್ರ ಮೋದಿಯವರ ಜತೆಗೆ ಫೋನ್ ಮೂಲಕ ಮಾತುಕತೆ ನಡೆಸಿದ ಬಳಿಕ ಟ್ರಂಪ್ ಅವರು ಈ ವಿಷಯವನ್ನು ತಿಳಿಸಿದ್ದಾರೆ. ಟ್ರುತ್ ಸೋಶಿಯಲ್ ಮೀಡಿಯಾದ ಪೋಸ್ಟ್‌ನಲ್ಲಿ ವಿವರಿಸಿದ್ದಾರೆ. ಅದರ ಪ್ರಕಾರ ಭಾರತದಿಂದ ಅಮೆರಿಕಕ್ಕೆ ಆಮದಾಗುವ ವಸ್ತುಗಳ ಮೇಲೆ ರೆಸಿಪ್ರೊಕಲ್ ಅಥವಾ ಪ್ರತಿ ಸುಂಕವನ್ನು 25 ಪರ್ಸೆಂಟ್‌ನಿಂದ 18 ಪರ್ಸೆಂಟ್‌ಗೆ ಇಳಿಸಲಾಗಿದೆ.
ನೋಡಿ, ಪ್ರಧಾನಿ ನರೇಂದ್ರ ಮೋದಿಯವರು ಟ್ರಂಪ್ ಅವರ ಯಾವುದೇ ಷರತ್ತುಗಳಿಗೆ, ದ್ವಂದ್ವ ನಿಲುವುಗಳಿಗೆ ಕ್ಯಾರೇ ಮಾಡಿರಲಿಲ್ಲ. ವ್ಯಂಗ್ಯಗಳಿಗೆ ಕೂಡ ಪ್ರತಿಕ್ರಿಯೆ ಕೊಟ್ಟಿರಲಿಲ್ಲ.
ಭಾರತ-ಪಾಕ್ ಸಂಘರ್ಷ ನಿಲ್ಲಿಸಿದ್ದು ಟ್ರಂಪ್ ಎಂದು ಹೇಳಲಿಲ್ಲ.
ನೊಬೆಲ್ ಪ್ರಶಸ್ತಿಗೆ ಟ್ರಂಪ್ ಅವರನ್ನು ಶಿಫಾರಸು ಮಾಡಲಿಲ್ಲ.
ಭಾರತದ ರೇರ್ ಅರ್ಥ್ ಮಿನರಲ್ಸ್‌ಗಳನ್ನು ಟ್ರಂಪ್ ಮನವೊಲಿಕೆಗೆ ಕಳಿಸಲಿಲ್ಲ.
ಟ್ರಂಪ್ ಅವರ ಸ್ವಘೋಷಿತ ಗಾಜಾ ಮಂಡಳಿ ಸೇರಿಕೊಳ್ಳಲಿಲ್ಲ.
ರಷ್ಯಾದಿಂದ ತೈಲ ಖರೀದಿಯನ್ನು ಟ್ರಂಪ್ ಹೇಳಿದರೆಂದು ಆತುರದಲ್ಲಿ ನಿಲ್ಲಿಸಲಿಲ್ಲ.
ಟ್ರಂಪ್ ಅವರನ್ನು ಲೆಕ್ಕಿಸದೆ ಯುರೋಪ್ ಜತೆಗೆ ಮದರ್ ಆಫ್ ಆಲ್ ಡೀಲ್ ಮಾಡಿದರು.
ಇದೀಗ ಪಾಕಿಸ್ತಾನ, ಬಾಂಗ್ಲಾದೇಶ, ಚೀನಾಕ್ಕಿಂತಲೂ ಕಡಿಮೆ ಟಾರಿಫ್ ಇರುವ ವ್ಯಾಪಾರ ಒಪ್ಪಂದ ಮಾಡಿಕೊಂಡಿದ್ದಾರೆ.
ಮೋದಿಯವರ ತಾಳ್ಮೆ ಮತ್ತು ಛಲವು ಇಲ್ಲಿ ಫಲ ಕೊಟ್ಟಿದೆ.
ಭಾರತವು ಅಮೆರಿಕದ ವಸ್ತುಗಳಿಗೆ ಟಾರಿಫ್‌ಗಳು ಮತ್ತು ನಿರ್ಬಂಧಗಳನ್ನು ಸಡಿಲಗೊಳಿಸಲಿದೆ ಎಂದು ಟ್ರಂಪ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಟಾರಿಫ್ ಕಡಿತವನ್ನು ಸ್ವಾಗತಿಸಿದ್ದಾರೆ. " ನನ್ನ ಪ್ರೀತಿಯ ಸ್ನೇಹಿತ, ಅಮೆರಿಕ ಅಧ್ಯಕ್ಷ ಟ್ರಂಪ್ ಜತೆಗೆ ಮಾತುಕತೆ ಸೌಹಾರ್ದ ಮತ್ತು ಅಚ್ಚರಿದಾಯಕವಾಗಿತ್ತು. ಮೇಡ್ ಇನ್ ಇಂಡಿಯಾ ಉತ್ಪನ್ನಗಳು ಇದೀಗ ಅಮೆರಿಕಕ್ಕೆ ಆಮದಾಗುವಾಗ 18 ಪರ್ಸೆಂಟ್‌ಗೆ ಇಳಿಕೆಯಾದ ಟಾರಿಫ್ ಪಡೆಯಲಿವೆ. ಇದಕ್ಕಾಗಿ 140 ಕೋಟಿ ಭಾರತೀಯರ ಪರವಾಗಿ ಟ್ರಂಪ್ ಅವರಿಗೆ ಧನ್ಯವಾದಗಳುʼ ಎಂದು ಮೋದಿಯವರು ಎಕ್ಸ್‌ನಲ್ಲಿ ತಿಳಿಸಿದ್ದಾರೆ.
ಭಾರತವು ರಷ್ಯಾದಿಂದ ಕಚ್ಚಾ ತೈಲವನ್ನು ಖರೀದಿಸುತ್ತಿರುವುದಕ್ಕೆ ಪ್ರತಿಯಾಗಿ ಅಮೆರಿಕವು ಭಾರತದಿಂದ ಅಮೆರಿಕಕ್ಕೆ ಆಮದಾಗುವ ಸರಕುಗಳ ಮೇಲೆ ಕಳೆದ ವರ್ಷ ಹೆಚ್ಚುವರಿ 25 ಪರ್ಸೆಂಟ್ ಟಾರಿಫ್ ವಿಧಿಸಿತ್ತು. ಇದರಿಂದ ಒಟ್ಟು 50 ಪರ್ಸೆಂಟ್ ಟಾರಿಫ್ ಆಗಿತ್ತು. ಆದರೆ ಈಗ ಹೆಚ್ಚುವರಿ 25 ಪರ್ಸೆಂಟ್ ಟಾರಿಫ್ ಅನ್ನೂ ರದ್ದುಪಡಿಸಲಾಗಿದ್ದು, 18 ಪರ್ಸೆಂಟ್ ಪ್ರತಿ ಸುಂಕ ಮಾತ್ರ ಅನ್ವಯವಾಗಲಿದೆ.
ಭಾರತವು ರಷ್ಯಾದಿಂದ ಕಚ್ಚಾ ತೈಲ ಖರೀದಿಯನ್ನು ಸ್ಥಗಿತಗೊಳಿಸಲು ಒಪ್ಪಿದೆ. ಅಮೆರಿಕದಿಂದ ಮತ್ತು ವೆನಿಜುವೆಲಾದಿಂದ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲ ಖರೀದಿಸಲು ಮುಂದಾಗಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಆದರೆ ರಷ್ಯಾದಿಂದ ತೈಲ ಖರೀದಿಯನ್ನು ಸ್ಥಗಿತಗೊಳಿಸುತ್ತಿರುವುದರ ಬಗ್ಗೆ ಭಾರತ ಇನ್ನೂ ಅಧಿಕೃತವಾಗಿ ತಿಳಿಸಿಲ್ಲ.
ಭಾರತವು ರಷ್ಯಾದಿಂದ ಕಚ್ಚಾ ತೈಲ ಖರೀದಿಯನ್ನು ನಿಲ್ಲಿಸುವುದರಿಂದ ರಷ್ಯಾ-ಉಕ್ರೇನ್ ಯುದ್ಧವನ್ನು ಅಂತ್ಯಗೊಳಿಸಲು ಸಹಕಾರಿಯಾಗುತ್ತದೆ ಎಂದು ಟ್ರಂಪ್ ಹೇಳಿದ್ದಾರೆ. ಈ ಬೆಳವಣಿಗೆಯ ನಡುವೆಯೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಬ್ಯಾರಲ್ ಗೆ 62 ಡಾಲರ್‌ಗೆ ಇಳಿಕೆಯಾಗಿದೆ.
ವಿದೇಶಾಂಗ ಸಚಿವ ಜೈಶಂಕರ್ ಅವರು ಅಮೆರಿಕಕ್ಕೆ ಭೇಟಿ ನೀಡಲಿದ್ದು, ಕ್ರಿಟಿಕಲ್ ಮಿನರಲ್ಸ್ ವಿಚಾರದಲ್ಲಿ ವಾಷಿಂಗ್ಟನ್ ನಲ್ಲಿ ಅಧಿಕಾರಿಗಳ ಜತೆಗೆ ಚರ್ಚಿಸಲಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಉತ್ತಮ ಸ್ನೇಹಿತರಾಗಿದ್ದಾರೆ. ವ್ಯಾಪಾರ ಒಪ್ಪಂದ ಅಂತಿಮವಾಗಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಅಮೆರಿಕ-ಭಾರತ ಮೈತ್ರಿಯಿಂದ ಉಂಟಾಗಬಲ್ಲ ಸಾಧ್ಯತೆಗಳು ಅಗಾಧʼʼ ಎಂದು ಭಾರತಕ್ಕೆ ಅಮೆರಿಕದ ರಾಯಭಾರಿ ಆಗಿರುವ ಸರ್ಗಿಯೊ ಗೋರ್ ಹೇಳಿದ್ದಾರೆ.
ಅಮೆರಿಕ-ಭಾರತ ವ್ಯಾಪಾರ ಒಪ್ಪಂದದ 10 ಅಂಶಗಳನ್ನು ನೋಡೋಣ.
- ಟ್ರಂಪ್ ಪ್ರಕಾರ ಅಮೆರಿಕದಿಂದ ಭಾರತಕ್ಕೆ ರಫ್ತಾಗುವ ವಸ್ತುಗಳ ಮೇಲಿನ ಸುಂಕವನ್ನು ಭಾರತವು ಶೂನ್ಯದ ತನಕ ಕಡಿತಗೊಳಿಸಲಿದೆ. ಆದರೆ ಭಾರತ ಇದನ್ನು ದೃಢಪಡಿಸಿಲ್ಲ.
- ಅಮೆರಿಕವು ಪ್ರತಿ ಸುಂಕವನ್ನು 25 ಪರ್ಸೆಂಟ್‌ನಿಂದ 18 ಪರ್ಸೆಂಟ್‌ಗೆ ಇಳಿಸಲಿದೆ.
- ಟ್ರಂಪ್ ಪ್ರಕಾರ ಭಾರತವು ರಷ್ಯಾದಿಂದ ತೈಲ ಖರೀದಿ ಸ್ಥಗಿತಗೊಳಿಸಲಿದೆ.
- ಭಾರತವು ಅಮೆರಿಕದಿಂದ ತೈಲ ಖರೀದಿಸಲಿದೆ.
- ಭಾರತವು ವೆನಿಜುವೆಲಾದಿಂದಲೂ ತೈಲ ಖರೀದಿಸುವ ಸಾಧ್ಯತೆ ಇದೆ.
- ಭಾರತವು ಅಮೆರಿಕದಿಂದ 500 ಶತಕೋಟಿ ಡಾಲರ್ ಮೌಲ್ಯದ ಇಂಧನ, ಕೃಷಿ ಉತ್ಪನ್ನಗಳು, ಕಲ್ಲಿದ್ದಲು ಮತ್ತು ತಂತ್ರಜ್ಞಾನವನ್ನು ಖರೀದಿಸಲಿದೆ. ಆದರೆ ಇದನ್ನೂ ಭಾರತ ದೃಢಪಡಿಸಿಲ್ಲ. ಭಾರತವು 2025ರಲ್ಲಿ ಅಮೆರಿಕದಿಂದ ಮಾಡಿರುವ ಆಮದು ಮೌಲ್ಯ 45 ಶತಕೋಟಿ ಡಾಲರ್. ಹೀಗಿರುವಾಗ 500 ಶತಕೋಟಿ ಡಾಲರ್ ಆಮದು ಸಾಧ್ಯವೇ? ಅಥವಾ ಅದಕ್ಕೆ ಎಷ್ಟು ವರ್ಷ ಬೇಕು? ಎಂದು ಯೋಚಿಸಬೇಕಾಗಿದೆ.
- ಟ್ರಂಪ್ ಪ್ರಕಾರ ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸಲು ಈ ಒಪ್ಪಂದ ಸಹಕಾರಿಯಾಗಲಿದೆ.
- ಭಾರತವು ಟಾರಿಫ್ ಕಡಿತ ಆಗಿರುವುದನ್ನು ದೃಢಪಡಿಸಿದೆ.
- ಜಗತ್ತಿನ 4ನೇ ಅತಿ ದೊಡ್ಡ ಆರ್ಥಿಕತೆಯಾಗಿರುವ ಭಾರತ ಕೂಡ ತನ್ನ ರಫ್ತಿಗೆ ಮತ್ತು ಆಮದಿಗೆ ಕೇವಲ ಅಮೆರಿಕದ ಮಾರುಕಟ್ಟೆ ಒಂದನ್ನೇ ಅವಲಂಬಿಸಿಲ್ಲ. ತಾನೂ ಸ್ವಾವಲಂಬಿಯಾಗುತ್ತಿದೆ. ಜತೆಗೆ ಅಮೆರಿಕ ಹೊರತುಪಡಿಸಿದ ದೇಶಗಳ ಜತೆಗೂ ಮುಕ್ತ ವ್ಯಾಪಾರ ಒಪ್ಪಂದವನ್ನು ಮಾಡಿಕೊಳ್ಳುತ್ತಿದೆ. ಇತ್ತೀಚೆಗೆ ಯುರೋಪ್ ಜತೆಗಿಗ ಮೆಗಾ ವ್ಯಾಪಾರ ಒಪ್ಪಂದ ಇದಕ್ಕೆ ನಿದರ್ಶನ.
- ಅಂತಾರಾಷ್ಟ್ರೀಯ ಒಪ್ಪಂದಗಳಲ್ಲಿ ಭಾರತ ಈಗ ತನ್ನ ರಾಷ್ಟ್ರೀಯ ಹಿತಾಸಕ್ತಿಗಳ ಜತೆಗೆ ಯಾವ ಕಾರಣಕ್ಕೂ ರಾಜಿ ಮಾಡುತ್ತಿಲ್ಲ.
ಅಮೆರಿಕ- ಭಾರತ ವ್ಯಾಪಾರ ಒಪ್ಪಂದದ ಪರಿಣಾಮವೇನು?
ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ವಸ್ತುಗಳ ಮೇಲಿನ ಸುಂಕ 18 ಪರ್ಸೆಂಟ್ ಗೆ ಇಳಿದಿದೆ.
ಇಂಡೊನೇಷ್ಯಾ, ವಿಯೆಟ್ನಾಂ, ಬಾಂಗ್ಲಾದೇಶ, ಚೀನಾಕ್ಕೆ ಹೋಲಿಸಿದರೆ ಭಾರತಕ್ಕೆ ಅವೆಲ್ಲಕ್ಕಿಂತ ಕಡಿಮೆ ಟಾರಿಫ್ ಆಗಲಿದೆ.
ಇಂಡೊನೇಷ್ಯಾ: 19%
ವಿಯೆಟ್ನಾಂ: 20%
ಬಾಂಗ್ಲಾದೇಶ: 20%
ಚೀನಾ: 34%
ಅಮೆರಿಕ-ಭಾರತ ವ್ಯಾಪಾರ ಒಪ್ಪಂದದಿಂದ ಹಲವಾರು ಪ್ರಯೋಜನಗಳು ಸಿಗಲಿವೆ. ರಫ್ತುದಾರರಿಗೆ ಅಮೆರಿಕದ ಮಾರುಕಟ್ಟೆಯಲ್ಲಿ ಸ್ಪಸರ್ಧಾತ್ಮಕತೆ ವೃದ್ಧಿಸಲಿದೆ. ಇಂಡೊನೇಷ್ಯಾ, ವಿಯೆಟ್ನಾಂ, ಚೀನಾ, ಬಾಂಗ್ಲಾದೇಶದ ಉತ್ಪನ್ನಗಳಿಗಿಂತ ಭಾರತದ ಉತ್ಪನ್ನಗಳು ಅಲ್ಲಿನ ಗ್ರಾಹಕರಿಗೆ ಅಗ್ಗವಾಗಲಿದೆ.
ಭಾರತದಿಂದ ಅಮೆರಿಕಕ್ಕೆ ಟೆಕ್ಸ್ ಟೈಲ್ಸ್, ಸೋಲಾರ್, ಆಟೊ & ಆಟೊಮೊಬೈಲ್ ಬಿಡಿಭಾಗಗಳು, ಐಟಿ, ಜ್ಯುವೆಲ್ಲರಿ, ಸೀಫುಡ್ ರಫ್ತು ಹೆಚ್ಚಳವಾಗಬಹುದು.
ಭಾರತದ ಬ್ಯಾಲೆನ್ಸ್ ಆಫ್ ಪೇಮೆಂಟ್ಸ್ ನಡುವಣ ಅಂತರ ಸುಧಾರಿಸಲಿದೆ.
ವಿದೇಶಿ ವಿನಿಮಯ ಸಂಗ್ರಹ ವೃದ್ಧಿಸಲಿದೆ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಹೂಡಿಕೆಯನ್ನು ಆಕರ್ಷಿಸಲು ಸಹಾಯಕವಾಗಲಿದೆ.
ಮೇಡ್ ಇನ್ ಇಂಡಿಯಾ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಅನುಕೂಲವಾಗಲಿದೆ.
ಅಮೆರಿಕದ ಜತೆಗೆ ವ್ಯಾಪಾರ-ವಾಣಿಜ್ಯ ಸಂಬಂಧ ಹೆಚ್ಚಲಿದೆ.
ಭಾರತದ ಎಂಎಸ್ ಎಂಇ, ಸ್ಟಾರ್ಟಪ್‌ಗಳಿಗೆ , ರೈತರಿಗೆ ಅನುಕೂಲ ಆಗಲಿದೆ ಎಂದು ವಾಣಿಜ್ಯ ಸಚಿವ ಪಿಯೂಷ್ ಗೋಯೆಲ್ ತಿಳಿಸಿದ್ದಾರೆ.