ಡೆಹ್ರಾಡೂನ್: ಮಂಗಳವಾರ ರಾತ್ರಿ ಉತ್ತರಾಖಂಡದಾದ್ಯಂತ (Uttarakhand Flood) ಸಂಭವಿಸಿದ ಭಾರಿ ಮೇಘಸ್ಫೋಟ (cloudburst) ಮತ್ತು ಪ್ರಚಂಡ ಮಳೆಯಿಂದಾಗಿ ಕನಿಷ್ಠ 15 ಜನರು ಸಾವನ್ನಪ್ಪಿದ್ದು, ಹಲವಾರು ಜನರು ನಾಪತ್ತೆಯಾಗಿದ್ದಾರೆ. ಹಲವು ಕಡೆ ಭೂಕುಸಿತ, ಕಟ್ಟಡ ಕುಸಿತ ಸಂಭವಿಸಿವೆ. ಧುಮ್ಮಿಕ್ಕಿ ಹರಿಯುತ್ತಿರುವ ನದಿಗಳು ಕಟ್ಟಡಗಳು, ರಸ್ತೆಗಳು ಮತ್ತು ಸೇತುವೆಗಳನ್ನು ಕೊಚ್ಚಿ ಹಾಕಿವೆ. ರಾಜ್ಯದಾದ್ಯಂತ ವಿವಿಧ ಸ್ಥಳಗಳಲ್ಲಿ 600ಕ್ಕೂ ಹೆಚ್ಚು ಜನರು ಸಿಲುಕಿಕೊಂಡಿದ್ದಾರೆ.
ಸಾವಿನ ಸಂಖ್ಯೆ ಗಣನೀಯವಾಗಿ ಹೆಚ್ಚಾಗಬಹುದು ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಪ್ರಾಥಮಿಕ ಅಂದಾಜಿನ ಪ್ರಕಾರ ಸುಮಾರು 25 ಸಾವುಗಳು ಸಂಭವಿಸಿದ್ದು 13 ಸಾವುಗಳು ದೃಢಪಟ್ಟಿವೆ. ಆದರೆ 16 ವ್ಯಕ್ತಿಗಳು ಇನ್ನೂ ಪತ್ತೆಯಾಗಿಲ್ಲ ಎಂದು ಜಿಲ್ಲಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಹಸ್ರಧಾರ ಮತ್ತು ಮಾಲ್ದೇವ್ತಾ ಪ್ರದೇಶಗಳು ದುರಂತಕ್ಕೀಡಾದ ಪ್ರದೇಶಗಳಾಗಿವೆ. ರಿಸ್ಪಾನಾ ಮತ್ತು ಬಿಂದಾಲ್‌ನಂತಹ ನದಿಗಳು ಅಪಾಯದ ಮಟ್ಟಕ್ಕಿಂತ ಹೆಚ್ಚು ಹರಿಯುತ್ತಿವೆ. ಮನೆಗಳನ್ನು ಅವಶೇಷಗಳಿಂದ ತುಂಬಿ ಹೋಗಿವೆ. ನೂರಾರು ಅಂಗಡಿಗಳು ಮತ್ತು ಹೋಟೆಲ್‌ಗಳು ಉಕ್ಕಿ ಹರಿಯುತ್ತಿರುವ ನೀರಿನಿಂದ ಕೊಚ್ಚಿಹೋಗಿವೆ.
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮಾಲ್ದೇವ್ತಾ ಮತ್ತು ಕೇಸರ್ವಾಲಾದಂತಹ ಪೀಡಿತ ಪ್ರದೇಶಗಳ ಭೂ ಪರಿಶೀಲನೆ ನಡೆಸಿದರು. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಅವರು, ಸಂತ್ರಸ್ತ ಕುಟುಂಬಗಳಿಗೆ ಸರ್ಕಾರದ ಸಂಪೂರ್ಣ ಬೆಂಬಲದ ಭರವಸೆ ನೀಡಿದರು.
ಪ್ರವಾಹದಿಂದಾಗಿ ಅಂಗಡಿಗಳು ಭಾರಿ ನಷ್ಟವನ್ನು ಅನುಭವಿಸಿದ್ದು, ಹಾನಿಯ ಸಂಪೂರ್ಣ ಪ್ರಮಾಣವನ್ನು ಇನ್ನೂ ನಿರ್ಣಯಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸ್ಥಳೀಯ ಸ್ವಯಂಸೇವಕರು ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (SDRF) ಬೆಂಬಲದೊಂದಿಗೆ ಜಿಲ್ಲಾಡಳಿತ ತಂಡಗಳು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ನಡೆಸುತ್ತಿವೆ.
ಈ ನಡುವೆ ರಾಜಧಾನಿ ಶಿಮ್ಲಾದಲ್ಲಿರುವ ಹಿಮ್‌ಲ್ಯಾಂಡ್ ಹೋಟೆಲ್ ಸಮೀಪ ಸಂಭವಿಸಿದ ಭೂಕುಸಿತದಿಂದಾಗಿ ಹಲವು ವಾಹನಗಳು ಹೂತು ಹೋಗಿವೆ. ಹಲವು ರಸ್ತೆಗಳು ಬಂದ್ ಆಗಿ ಶಾಲೆ–ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಯಿತು. ತಡರಾತ್ರಿ 1 ಗಂಟೆ ಸುಮಾರಿಗೆ ಭಾರಿ ಪ್ರಮಾಣದ ಮಳೆಯಾಯಿತು.
ಇದನ್ನೂ ಓದಿ: Heavy Rain: ಉತ್ತರಾಖಂಡದಲ್ಲಿ ನಿರಂತರ ಮಳೆಗೆ ಕೊಚ್ಚಿ ಹೋದ ಭಾರತ-ಚೀನಾ ನಡುವಿನ ಸಂಪರ್ಕ ಸೇತುವೆ