ಡೆಹ್ರಾಡೂನ್, ಜು. 21: ಉತ್ತರಾಖಂಡದಲ್ಲಿ ಸೋಮವಾರ ಸುರಿದ ಭಾರಿ ಮಳೆಗೆ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಬಾಗೇಶ್ವರ ಜಿಲ್ಲೆಯ ಕಪ್ಕೋಟ್ ಪ್ರದೇಶದಲ್ಲಿ ತಾಯಿಯೊಂದಿಗೆ ದೇವಸ್ಥಾನದ ಶಿವಲಿಂಗಕ್ಕೆ ಅಭಿಷೇಕ ಮಾಡಲು ನೀರು ತರಲು ತೆರಳಿದ್ದ ರಾಕೇಶ್ ಎಂಬ ಎಂಟು ವರ್ಷದ ಬಾಲಕ ಉಕ್ಕಿ ಹರಿಯುತ್ತಿದ್ದ ಸರಯೂ ನದಿಯ ರಭಸಕ್ಕೆ ಕೊಚ್ಚಿ ಹೋಗಿದ್ದಾನೆ (Uttarakhand Rains). ಆತನ ಪತ್ತೆಗಾಗಿ ಎನ್‌ಡಿಆರ್‌ಎಫ್ (NDRF), ಎಸ್‌ಡಿಆರ್‌ಎಫ್ (SDRF) ಹಾಗೂ ಜಲ ಪೊಲೀಸ್ ಪಡೆಗಳು ಜಂಟಿ ಶೋಧ ಕಾರ್ಯ ನಡೆಸುತ್ತಿವೆ.
ಇನ್ನೊಂದೆಡೆ, ಪಿಥೋರಗಢ ಜಿಲ್ಲೆಯ ಧಾರ್ಚುಲಾ ಪ್ರದೇಶದ ಫೂ ಗ್ರಾಮದ ಬಳಿಯ ಅರಣ್ಯದಲ್ಲಿ ಕುರಿ ಮೇಯಿಸುತ್ತಿದ್ದ ದಿವಾನ ಸಿಂಗ್ (52) ಎಂಬವರು ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಇನ್ನು ಚಮೋಲಿ ಜಿಲ್ಲೆಯ ನಾರಾಯಣಬಗರ್ ಮಾರುಕಟ್ಟೆಯಲ್ಲಿ ಮಳೆ ನೀರು ಹಾಗೂ ಮಣ್ಣು-ಬಂಡೆಗಳು ಸುಮಾರು 6-7 ಅಂಗಡಿಗಳಿಗೆ ನುಗ್ಗಿ ಅಪಾರ ಪ್ರಮಾಣದ ಹಾನಿ ಉಂಟುಮಾಡಿದ್ದು, ಪ್ರಸ್ತುತ ತೆರವು ಕಾರ್ಯಾಚರಣೆ ಭರದಿಂದ ಸಾಗಿದೆ.
ಉತ್ತರಾಖಂಡದಲ್ಲಿ ಸುರಿದ ಭಾರಿ ಮಳೆ:
ಮಳೆಯಿಂದಾಗಿ ಸಂಭವಿಸಿದ ಗುಡ್ಡ ಕುಸಿತದ ಕಾರಣ ಪಿಥೋರಗಢದ ತವಾಗಾಟ್-ಗುಂಜಿ, ಧಾರ್ಚುಲಾ-ತವಾಗಾಟ್ ಹಾಗೂ ಡೆಹ್ರಾಡೂನ್‌ನ ಹರ್ಬರ್ಟ್‌ಪುರ-ಬಾರ್ಕೋಟ್, ಡೆಹ್ರಾಡೂನ್-ಟ್ಯೂನಿ-ಚಕ್ರತಾ-ಮಸ್ಸೋರಿ ಸೇರಿ 4 ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಒಟ್ಟು 149 ರಸ್ತೆಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಚಾರ್ ಧಾಮ್ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಮಾರ್ಗಗಳು ಸಂಪೂರ್ಣ ಸುರಕ್ಷಿತವಾದ ಬಳಿಕವೇ ಯಾತ್ರೆಗೆ ಪುನಃ ಚಾಲನೆ ನೀಡಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಗರ್ಹ್ವಾಲ್ ಕಮಿಷನರ್ ಆನಂದ್ ಸ್ವರೂಪ್, ʼʼಈಗಾಗಲೇ ಮಾರ್ಗದಲ್ಲಿರುವ ಯಾತ್ರಿಕರನ್ನು ಸುರಕ್ಷಿತ ತಂಗುದಾಣಗಳಲ್ಲಿ ಇರಿಸಲು ಮತ್ತು ಪರಿಸ್ಥಿತಿ ಸಂಪೂರ್ಣವಾಗಿ ಸುಧಾರಿಸುವವರೆಗೆ ಅವರನ್ನು ಯಾವುದೇ ಕಾರಣಕ್ಕೂ ಮುಂದೆ ಹೋಗಲು ಬಿಡದಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆʼʼ ಎಂದಿದ್ದಾರೆ.
ಬೆಂಗಳೂರಿನಲ್ಲಿ ಮುಂದುವರಿದ ಮಳೆ ಅಬ್ಬರ; ಜು.25ರವರೆಗೆ ರಾಜ್ಯದಲ್ಲಿ ಭಾರಿ ಮಳೆ ಮುನ್ಸೂಚನೆ!
ಹವಾಮಾನ ಇಲಾಖೆಯು ಡೆಹ್ರಾಡೂನ್, ತೆಹ್ರಿ ಮತ್ತು ಹರಿದ್ವಾರ ಜಿಲ್ಲೆಗಳಿಗೆ 'ರೆಡ್ ಅಲರ್ಟ್' ಹಾಗೂ ಉಳಿದ ಜಿಲ್ಲೆಗಳಿಗೆ 'ಆರೆಂಜ್ ಅಲರ್ಟ್' ಘೋಷಿಸಿದೆ. ಎಲ್ಲ ಜಿಲ್ಲಾಡಳಿತಗಳು 24 ಗಂಟೆಯೂ ಅತ್ಯಂತ ಜಾಗರೂಕರಾಗಿರಲು ಸೂಚಿಸಲಾಗಿದೆ. ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ರಾಜ್ಯದಾದ್ಯಂತ 1ರಿಂದ 12 ನೇ ತರಗತಿವರೆಗಿನ ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ರಾಜ್ಯದ ಶಮಾ (220 ಮಿ.ಮೀ.), ಪೋಖರಿ (109 ಮಿ.ಮೀ.), ದಿದಿಹತ್ (109 ಮಿ.ಮೀ.), ಕಿಚ್ಛಾ (108 ಮಿ.ಮೀ.), ಮಾಲ್ದೇವತಾ (103.5 ಮಿ.ಮೀ.), ಕಪ್ಕೋಟ್ (97 ಮಿ.ಮೀ.) ಹಾಗೂ ರುದ್ರಪುರದಲ್ಲಿ (99 ಮಿ.ಮೀ.) ಮಳೆ ದಾಖಲಾಗಿದೆ. ನರೇಂದ್ರ ನಗರದಲ್ಲಿ 82.5 ಮಿ.ಮೀ. ಮತ್ತು ಉತ್ತರಾಖಂಡದ ವಿವಿಧ ಭಾಗಗಳಲ್ಲಿ ವ್ಯಾಪಕ ಮಳೆಯಾಗಿದೆ. ಬಿಕ್ಕಟ್ಟಿನ ಈ ಸಮಯದಲ್ಲಿ ಸಾರ್ವಜನಿಕರು ಹಾಗೂ ಯಾತ್ರಿಕರು ಯಾವುದೇ ಅನಗತ್ಯ ವದಂತಿಗಳಿಗೆ ಕಿವಿಗೊಡದೆ, ಆಡಳಿತ ಮಂಡಳಿಯು ಹೊರಡಿಸುವ ಅಧಿಕೃತ ಸೂಚನೆಗಳು ಮತ್ತು ಮಾರ್ಗದರ್ಶಿಗಳನ್ನು ಮಾತ್ರ ಅನುಸರಿಸುವಂತೆ ಮನವಿ ಮಾಡಲಾಗಿದೆ.