ಡೆಹ್ರಾಡೂನ್: ಉತ್ತರಾಖಂಡ (Uttarakhand) ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ರೇಖಾ ಆರ್ಯ (Rekha Arya) ಹಾಗೂ ಅವರ ಪತಿ ಗಿರಿಧಾರಿ ಲಾಲ್ ಸಾಹು (Girdhari Lal Sahu) ನಡುವಿನ ಕೌಟುಂಬಿಕ ಕಲಹ ತಾರಕಕ್ಕೇರಿದೆ. ಪತಿ ವಿರುದ್ಧ ಸಚಿವೆ ದೈಹಿಕ ಹಲ್ಲೆ, ಕಿರುಕುಳ ಹಾಗೂ ಜೀವ ಬೆದರಿಕೆ ಆರೋಪದಡಿ ಎಫ್ಐಆರ್ (FIR) ದಾಖಲಿಸಿದ ಮರುದಿನವೇ, ಸಚಿವೆ ರೇಖಾ ಆರ್ಯ ಬಳಿ 210 ಕೋಟಿ ರೂಪಾಯಿಗಳಿಗೂ ಅಧಿಕ ಅಕ್ರಮ ಆಸ್ತಿ ಇದೆ ಎಂದು ಪತಿ ಗಿರಿಧಾರಿ ಲಾಲ್ ಸಾಹು ಗಂಭೀರ ಆರೋಪ ಮಾಡಿದ್ದಾರೆ.
ಈ ಸಂಬಂಧ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಸಾಹು, ಸಚಿವರ ಭ್ರಷ್ಟಾಚಾರದ ಕುರಿತು ಸೂಕ್ತ ತನಿಖಾ ಸಂಸ್ಥೆಯಿಂದ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ಆಗ್ರಹಿಸಿದ್ದಾರೆ. ಆದರೆ, ತಮ್ಮ ಆರೋಪಕ್ಕೆ ಪೂರಕವಾಗಿ ಯಾವುದೇ ದಾಖಲೆಗಳನ್ನು ಅವರು ಒದಗಿಸಿಲ್ಲ. ಸಚಿವೆ ಹಂಚಿಕೊಂಡಿರುವ ಆಡಿಯೋವನ್ನು "ಎಐ ನಿರ್ಮಿತ ಹಾಗೂ ನಕಲಿ" ಎಂದು ತಳ್ಳಿಹಾಕಿರುವ ಅವರು, ಪ್ರಕರಣವನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ. ಸಚಿವಾ ಸ್ಥಾನದ ಅಹಂಕಾರದಿಂದ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದ ಸಾಹು, ಕಳೆದ 17 ವರ್ಷಗಳಿಂದ ಅವರ ರಾಜಕೀಯ ಬೆಳವಣಿಗೆಗೆ ಹಗಲಿರುಳು ಶ್ರಮಿಸಿದ್ದೇನೆ, ಆದರೆ ಇಂದು ತಮಗೆ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುರುವಾರ ಸಂಜೆ ಡೆಹ್ರಾಡೂನ್ನ ಕಂಟೋನ್ಮೆಂಟ್ ಪೊಲೀಸ್ ಠಾಣೆಯಲ್ಲಿ ರೇಖಾ ಆರ್ಯ ಅವರು ಪತಿಯ ವಿರುದ್ಧ ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಸೇರಿದಂತೆ ಗಂಭೀರ ಸೆಕ್ಷನ್ಗಳಡಿ ದೂರು ದಾಖಲಿಸಿದ್ದರು. ವಿಡಿಯೋ ಮೂಲಕ ತಮ್ಮ ಮೇಲಾದ ದೌರ್ಜನ್ಯ, ಜಾತಿ ನಿಂದನೆ ಮತ್ತು ಜೀವ ಬೆದರಿಕೆಯನ್ನು ವಿವರಿಸಿದ್ದರು.
20,000 ರೂ. ಕೊಟ್ಟರೆ ವೃದ್ಧರಿಗೂ ಹುಡುಗಿಯರು ಸಿಕ್ತಾರೆ.. ವಿವಾದ ಹುಟ್ಟುಹಾಕಿದ ಉತ್ತರಾಖಂಡ ಸಚಿವೆ ರೇಖಾ ಆರ್ಯರ ಪತಿ
ಈ ವಿವಾದದ ನಡುವೆ ಉತ್ತರಾಖಂಡ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಗೋದಿಯಾಲ್ ಸಚಿವೆಗೆ ಬೆಂಬಲ ವ್ಯಕ್ತಪಡಿಸಿದ್ದು, ಮಹಿಳಾ ಸಬಲೀಕರಣ ಸಚಿವೆಗೇ ರಾಜ್ಯದಲ್ಲಿ ರಕ್ಷಣೆ ಇಲ್ಲದಂತಾಗಿರುವುದು ಆಘಾತಕಾರಿ ಎಂದು ಹೇಳಿದ್ದಾರೆ. ಅಂಕಿತಾ ಭಂಡಾರಿ ಪ್ರಕರಣದಿಂದ ಹಿಡಿದು ರೇಖಾ ಆರ್ಯ ಪ್ರಕರಣದವರೆಗೆ ಬಿಜೆಪಿ ಆಡಳಿತದಲ್ಲಿ ಮಹಿಳೆಯರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಒಬ್ಬ ಕ್ಯಾಬಿನೆಟ್ ದರ್ಜೆಯ ಸಚಿವೆ ತನ್ನದೇ ಮನೆಯಲ್ಲಿ ದೌರ್ಜನ್ಯ ಮತ್ತು ಪ್ರಾಣಭಯ ಎದುರಿಸುತ್ತಿರುವುದು ಆಡಳಿತಾರೂಢ ಬಿಜೆಪಿ ಸರ್ಕಾರಕ್ಕೆ ಭಾರಿ ಮುಜುಗರ ತಂದಿಟ್ಟಿದೆ. ಇತ್ತ ಪತಿಯು ಸರ್ಕಾರದ ಆಡಳಿತ ಯಂತ್ರವನ್ನೇ ಪ್ರಶ್ನಿಸಿ 210 ಕೋಟಿ ರೂಪಾಯಿಗಳ ಅಕ್ರಮ ಹಣದ ಆರೋಪ ಹೊರಿಸಿರುವುದು ವಿರೋಧ ಪಕ್ಷಗಳಿಗೆ ಪ್ರಬಲ ಅಸ್ತ್ರವಾಗಿ ಪರಿಣಮಿಸಿದೆ. ಈ ಕೌಟುಂಬಿಕ ಜಟಾಪಟಿಯು ಇದೀಗ ರಾಜ್ಯ ರಾಜಕಾರಣದಲ್ಲಿ ಭ್ರಷ್ಟಾಚಾರ ಮತ್ತು ಮಹಿಳಾ ಸುರಕ್ಷತೆಯ ಬಿಸಿಬಿಸಿ ಚರ್ಚೆಗೆ ನಾಂದಿ ಹಾಡಿದ್ದು, ಪೊಲೀಸರು ಎರಡೂ ಆಯಾಮಗಳಲ್ಲಿ ವಿಚಾರಣೆ ಚುರುಕುಗೊಳಿಸಿದ್ದಾರೆ.