ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Uttarkashi Tragedy: ದೇವ ಭೂಮಿ ಉತ್ತರಾಖಂಡದಲ್ಲಿ ಅವಳಿ ಮೇಘಸ್ಫೋಟ; ನೋಡನೋಡುತ್ತಿದ್ದಂತೆ ಕೊಚ್ಚಿಹೋಯ್ತು ಇಡೀ ಗ್ರಾಮ

Twin Cloudbursts: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ಅವಳಿ ಮೇಘಸ್ಫೋಟ ಸಂಭವಿಸಿದ್ದು, ಪ್ರಕೃತಿಯ ರೌದ್ರ ನರ್ತನಕ್ಕೆ ದೇವ ಭೂಮಿ ಅಕ್ಷರಶಃ ತತ್ತರಿಸಿ ಹೋಗಿದೆ. ಆರಂಭದಲ್ಲಿ ಧರಾಲಿ ಗ್ರಾಮದಲ್ಲಿ ಬಳಿಕ ಸುಖಿ ಟಾಪ್‌ ಗ್ರಾಮದಲ್ಲಿಯೂ ಮೇಘಸ್ಫೋಟ ಉಂಟಾಗಿದ್ದು, ಪ್ರವಾಹ ಗುಡ್ಡದಿಂದ ರಭಸದಿಂದ ಹರಿದು ಬಂದಿದೆ. ಈ ದುರಂತದಲ್ಲಿ ಧರಾಲಿ ಗ್ರಾಮದ ಸುಮಾರು 4 ಮಂದಿ ಮೃತಪಟ್ಟಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ದೇವ ಭೂಮಿ ಉತ್ತರಾಖಂಡದಲ್ಲಿ ಅವಳಿ ಮೇಘಸ್ಫೋಟ

Ramesh B Ramesh B Aug 5, 2025 7:34 PM

ಡೆಹ್ರಾಡೂನ್‌: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ಅವಳಿ ಮೇಘಸ್ಫೋಟ (Twin cloudbursts) ಸಂಭವಿಸಿದ್ದು, ಪ್ರಕೃತಿಯ ರೌದ್ರ ನರ್ತನಕ್ಕೆ ದೇವ ಭೂಮಿ ಅಕ್ಷರಶಃ ತತ್ತರಿಸಿ ಹೋಗಿದೆ. ಆರಂಭದಲ್ಲಿ ಉತ್ತರಕಾಶಿ ಜಿಲ್ಲೆಯ ಧರಾಲಿ ಗ್ರಾಮದಲ್ಲಿ ಮೇಘಸ್ಫೋಟ ಸಂಭವಿಸಿ ಪ್ರವಾಹ ಪರಿಸ್ಥಿತಿ ತಲೆದೋರಿತು (Uttarkashi Tragedy). ಇದರ ಬೆನ್ನಲ್ಲೇ ಸುಖಿ ಟಾಪ್‌ ಗ್ರಾಮದಲ್ಲಿಯೂ ಮೇಘಸ್ಫೋಟ ಉಂಟಾಗಿದ್ದು, ಪ್ರವಾಹ ಗುಡ್ಡದಿಂದ ರಭಸದಿಂದ ಹರಿದು ಬಂದಿದೆ. ಈ ದುರಂತದಲ್ಲಿ ಧರಾಲಿ ಗ್ರಾಮದ ಸುಮಾರು 4 ಮಂದಿ ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸದ್ಯ ಪ್ರವಾಹದ ಭೀಕರತೆಯನ್ನು ಸಾರುವ ದೃಶ್ಯಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಇಡೀ ಧರಾಲಿ ಗ್ರಾಮವೇ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದೆ ಎಂದು ವರದಿಯೊಂದು ತಿಳಿಸಿದೆ. ಸದ್ಯ ಸ್ಥಳಕ್ಕೆ ಅಧಿಕಾರಿಗಳು, ಭದ್ರತಾ ತಂಡದ ಸದಸ್ಯರು ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸುಖಿ ಟಾಪ್‌ನಲ್ಲಿ ಸಂಭವಿಸಿದ ಮೇಘಸ್ಫೋಟದಿಂದ ಯಾವುದೇ ಜೀವ ಹಾನಿಯಾಗಿರುವ ಬಗ್ಗೆ ವರದಿ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



ಮೊದಲ ಮೇಘಸ್ಫೋಟ ನಡೆದ ಉತ್ತರಕಾಶಿ ಜಿಲ್ಲೆಯ ಧರಾಲಿ ಸಮೀಪವೇ ಸುಖಿ ಟಾಪ್‌ ಇದೆ. ಗಂಗೋತ್ರಿಗೆ ತೆರಳುವ ಮಾರ್ಗ ಮಧ್ಯೆ ಧಾರಾಲಿ ಗ್ರಾಮವಿದೆ. ಕಮೀಷನರ್‌ ವಿನಯ್‌ ಶಂಕರ್‌ ಈ ಬಗ್ಗೆ ಮಾಹಿತಿ ನೀಡಿ, "ಉತ್ತರಕಾಶಿಯ ಸುಖಿ ಟಾಪ್‌ನಲ್ಲಿಯೂ ಮೇಘಸ್ಫೋಟದ ಉಂಟಾಗಿದೆ. ಆದಾಗ್ಯೂ ಅಲ್ಲಿ ಯಾವುದೇ ಜೀವಕ್ಕೆ ಅಥವಾ ಆಸ್ತಿಪಾಸ್ತಿಗೆ ಹಾನಿಯಾದ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಮಳೆ ಜೋರಾಗಿ ಸುರಿಯುತ್ತಿದ್ದು, ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆʼʼ ಎಂದು ತಿಳಿಸಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ʼʼಉತ್ತರಕಾಶಿಯಲ್ಲಿ ನಡೆದ ದುರಂತದ ಬಗ್ಗೆ ತಿಳಿದು ದುಃಖವಾಗಿದೆ. ಎಲ್ಲರ ಸುರಕ್ಷತೆಗಾಗಿ ಪ್ರಾರ್ಥಿಸುತ್ತೇನೆ. ಮುಖ್ಯಮಂತ್ರಿ ಪುಷ್ಕರ್‌ ಧಾಮಿ ಅವರೊಂದಿಗೆ ಈಗಾಗಲೇ ಸಮಾಲೋಚನೆ ನಡೆಸಿದ್ದೇನೆ. ರಕ್ಷಣಾ ತಂಡಗಳು ಕಾರ್ಯ ನಿರತವಾಗಿವೆʼʼ ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ವಿಪಕ್ಷ ನಾಯಕ, ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಸೇರಿದಂತೆ ಹಲವರು ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ.



ಹರ್ಸಿಲ್ ಬಳಿಯ ಖೀರ್ ಗಡ್ ಪ್ರದೇಶದ ಧರಾಲಿ ಗ್ರಾಮದಲ್ಲಿ ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿತ ಸಂಭವಿಸಿದ್ದು, ರಸ್ತೆಗಳು ಮುಚ್ಚು ಹೋಗಿವೆ. ಜನವಸತಿ ಪ್ರದೇಶದ ಮೂಲಕ ಧಿಡೀರ್‌ ಪ್ರವಾಹ ಹರಿದಿದೆ ಎಂದು ಭಾರತೀಯ ಸೇನೆ ತಿಳಿಸಿದೆ. ಪ್ರವಾಹದ ರಭಸಕ್ಕೆ ಹಲವು ಮನೆಗಳು ಹಾನಿಗೊಳಗಾಗಿವೆ, ಕೆಲವು ಕೊಚ್ಚಿ ಹೋಗಿವೆ.



ವಿಷಲ್‌ ಮೂಲಕ ಎಚ್ಚರಿಕೆ

ದಿಢೀರ್‌ ಪ್ರವಾಹ ಗ್ರಾಮದತ್ತ ನುಗ್ಗುವ ವಿಡಿಯೊಗಳು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. ಈ ವಿಡಿಯೊಗಳಲ್ಲಿ ಸ್ಥಳೀಯರು ಜೋರಾದ ಧ್ವನಿಯಲ್ಲಿ ವಿಷಲ್‌ ಹೊಡೆಯುವುದನ್ನು ಕೇಳಬಹುದು. ಇತರರರನ್ನು ಎಚ್ಚರಿಸಲು ಸಾಮಾನ್ಯವಾಗಿ ಇಲ್ಲಿ ವಿಷಲ್‌ ಬಳಸಲಾಗುತ್ತದೆ. ಜೋರಾದ ಧ್ವನಿಯಲ್ಲಿ ವಿಷಲ್‌ ಹೊಡೆಯವುದು ಅಪಾಯದ ಮುನ್ನೆಚ್ಚರಿಕೆಯ ಸೂಚನೆ. ಇದರಿಂದ ಜನರ ಗಮನವನ್ನು ಸುಲಭವಾಗಿ ಸೆಳೆಯಬಹುದು. ವಿಷಲ್‌ ಉತ್ತರಾಖಂಡದ ಸಾಂಪ್ರದಾಯಿಕ ಎಚ್ಚರಿಕೆಯ ಕರೆಗಂಟೆ ಎನಿಸಿಕೊಂಡಿದೆ. ಮೊಬೈಲ್‌, ಫೋನ್‌ ಮುಂತಾದ ತಂತ್ರಜ್ಞಾನ ಪರಿಚಯವಾಗುವ ಮೊದಲಿನಿಂದಲೂ ಈ ತಂತ್ರವನ್ನು ಅನುಸರಿಸಲಾಗುತ್ತದೆ.



ಭೂಕುಸಿತ, ವ್ಯಾಪಕ ಮಳೆ, ಕಾಡ್ಗಿಚ್ಚು ಮುಂತಾದ ಅಪಾಯಕಾರಿ ಸನ್ನಿವೇಶಗಳಲ್ಲಿ ಗ್ರಾಮಸ್ಥರನ್ನು ಎಚ್ಚರಿಸಲು ವಿಷಲ್‌ ಬಳಸಲಾಗುತ್ತದೆ. ಉತ್ತರಾಖಂಡದಂತಹ ಪರ್ವತ ಪ್ರದೇಶಗಳಲ್ಲಿ ಕಿರುಚಾಟಕ್ಕಿಂತ ವಿಷಲ್‌ ಸ್ಪಷ್ಟವಾಗಿ ಬಹುದೂರದವರೆಗೂ ಕೇಳಿಸುತ್ತದೆ ಎನ್ನುವುದು ಇದಕ್ಕೆ ಕಾರಣ.