ನವದೆಹಲಿ, ನ. 15: ಭಾರತೀಯ ರೈಲ್ವೆಯ ಅತ್ಯಾಧುನಿಕ ಮತ್ತು ಸುರಕ್ಷಿತ ರೈಲು ಎಂದು ಪರಿಗಣಿಸಲಾಗಿರುವ ವಂದೇ ಭಾರತ್ ಎಕ್ಸ್ಪ್ರೆಸ್ನಲ್ಲಿ (Vande Bharat Train) ಗಂಭೀರ ಸುರಕ್ಷತಾ ಲೋಪವೊಂದು ಕಂಡುಬಂದಿದೆ. ಬ್ರೇಕ್ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಎಚ್ಚರಿಕೆಯ ಸಂದೇಶಗಳು ಬಂದಿದ್ದರೂ, ಅವುಗಳನ್ನು ನಿರ್ಲಕ್ಷಿಸಿ ರೈಲು ಎರಡು ರಾಜ್ಯಗಳ ನಡುವೆ ಬರೋಬ್ಬರಿ 463 ಕಿಲೋ ಮೀಟರ್ಗಳಷ್ಟು ದೂರ ಸಂಚರಿಸಿದೆ ಎಂದು ವರದಿಯಾಗಿದೆ. ಈ ಘಟನೆಯು ರೈಲು ಪ್ರಯಾಣಿಕರ ಸುರಕ್ಷತೆಯ ಕುರಿತು ತೀವ್ರ ಆತಂಕವನ್ನು ಹುಟ್ಟುಹಾಕಿದೆ. ನವೆಂಬರ್ 11ರಂದು ಅಸ್ಸಾಂನಲ್ಲಿ ಕೋಲ್ಕತಾ-ಸೈರಾಗ ಎಕ್ಸ್ಪ್ರೆಸ್ ರೈಲು ಹಳಿ ತಪ್ಪುವುದಕ್ಕೆ ಕೆಲವೇ ದಿನಗಳ ಮೊದಲು, ಅಂದರೆ ಅಕ್ಟೋಬರ್ 24ರಂದು ಈ ಘಟನೆ ನಡೆದಿತ್ತು. ಈ ಎರಡೂ ಘಟನೆಗಳಲ್ಲಿ ಬಹುತೇಕ ಒಂದೇ ರೀತಿಯ ನಿರ್ಲಕ್ಷ್ಯ ಕಂಡುಬಂದಿದೆ.
ಸಾಮಾನ್ಯವಾಗಿ ವಂದೇ ಭಾರತ್ನಂತಹ ಆಧುನಿಕ ರೈಲುಗಳಲ್ಲಿ ತಾಂತ್ರಿಕ ದೋಷ ಕಂಡುಬಂದ ತಕ್ಷಣ ಅಲಾರಂ ಮತ್ತು ಎಚ್ಚರಿಕೆ ವ್ಯವಸ್ಥೆಗಳು ಚಾಲಕರು ಹಾಗೂ ತಾಂತ್ರಿಕ ಸಿಬ್ಬಂದಿಗೆ ಸೂಚನೆ ನೀಡುತ್ತವೆ. ಆದರೆ, ಈ ಪ್ರಕರಣದಲ್ಲಿ ಬ್ರೇಕ್ ವೈಫಲ್ಯದ ಮುನ್ಸೂಚನೆ ಲಭ್ಯವಿದ್ದರೂ ರೈಲಿನ ಸಂಚಾರವನ್ನು ತಕ್ಷಣವೇ ಸ್ಥಗಿತಗೊಳಿಸದೆ, 463 ಕಿ.ಮೀ. ದೂರದವರೆಗೆ ಚಲಾಯಿಸಿರುವುದು ಭಾರಿ ನಿರ್ಲಕ್ಷ್ಯಕ್ಕೆ ಸಾಕ್ಷಿ ಎಂದು ಅಧಿಕಾರಿಗಳು ಹೇಳಿದ್ದಾರೆ. ಅದೃಷ್ಟವಶಾತ್ ಈ ಅವಧಿಯಲ್ಲಿ ಯಾವುದೇ ದೊಡ್ಡ ಅನಾಹುತ ಸಂಭವಿಸಿಲ್ಲ.
463 ಕಿಲೋ ಮೀಟರ್ ಚಲಿಸಿದ ವಂದೇ ಭಾರತ್:
ಬೆಂಗಳೂರು-ಗೋವಾ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಚಾಲನೆ: ಬುಕ್ ಮಾಡೋ ವಿಧಾನ
ಬ್ರೇಕ್ ಸಮಸ್ಯೆ ಇದ್ದರೂ 463 ಕಿ.ಮೀ. ಕ್ರಮಿಸಿದ ರೈಲು
ವರದಿಗಳ ಪ್ರಕಾರ, ಪ್ರಯಾಣದ ಆರಂಭದಲ್ಲೇ ಬ್ರೇಕ್ ವ್ಯವಸ್ಥೆಯಲ್ಲಿ ದೋಷ ಕಾಣಿಸಿಕೊಂಡಿದ್ದು, ಡ್ಯಾಶ್ಬೋರ್ಡ್ನಲ್ಲಿ ತಾಂತ್ರಿಕ ಎಚ್ಚರಿಕೆಗಳು ದಾಖಲಾಗಿದ್ದವು. ಆದಾಗ್ಯೂ, ಸ್ಥಳೀಯ ತಾಂತ್ರಿಕ ಸಿಬ್ಬಂದಿ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸದೆ ರೈಲು ಮುಂದುವರಿಯಲು ಅವಕಾಶ ನೀಡಿದ್ದಾರೆ. ಎರಡು ರಾಜ್ಯಗಳ ಗಡಿ ದಾಟಿ 463 ಕಿಲೋ ಮೀಟರ್ ಕ್ರಮಿಸಿದ ನಂತರ ಈ ಗಂಭೀರ ಲೋಪವು ಉನ್ನತ ಅಧಿಕಾರಿಗಳ ಗಮನಕ್ಕೆ ಬಂದಿದೆ.
ಲೋಕೋ ಪೈಲಟ್ ನೀಡಿದ ಹೇಳಿಕೆಯ ಪ್ರಕಾರ, ಜಾರಿಯಲ್ಲಿರುವ ನಿಯಮಾವಳಿಗಳ ಅನ್ವಯ ಹಟಿಯಾ ನಿಲ್ದಾಣದಿಂದ ಹೊರಟ ಬಳಿಕ ಹಟಿಯಾ-ರಾಂಚಿ ವಿಭಾಗದಲ್ಲಿ ಬ್ರೇಕ್ ಫೇಲ್ ಮತ್ತು ಬ್ರೇಕ್ ಪವರ್ ಪರೀಕ್ಷೆ ನಡೆಸಲಾಗಿತ್ತು ಎಂದು ನವೆಂಬರ್ 7ರಂದು ಹೊರಡಿಸಲಾದ ಆದೇಶದಲ್ಲಿ ತಿಳಿಸಲಾಗಿದೆ. ಆದರೆ ಪರೀಕ್ಷೆ ಸಂದರ್ಭದಲ್ಲಿ ರೈಲಿನ ಬ್ರೇಕ್ ಸಾಮರ್ಥ್ಯ ತೀರಾ ಕಳಪೆಯಾಗಿದ್ದು, ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದನ್ನು ಲೋಕೋ ಪೈಲಟ್ ಗಮನಿಸಿದ್ದರು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಬ್ರೇಕ್ ಸಾಮರ್ಥ್ಯ ಕಳಪೆಯಾಗಿರುವ ಬಗ್ಗೆ ಮಾಹಿತಿ ನೀಡಿದ್ದರೂ ಅದೇ ಸ್ಥಿತಿಯಲ್ಲಿ ರೈಲು ಸಂಚಾರಕ್ಕೆ ಅನುಮತಿ ನೀಡಲಾಗಿತ್ತು ಎಂದು ತಿಳಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ, ಸಂಬಂಧಪಟ್ಟ ನಿಲ್ದಾಣಗಳ ಕೋಚ್ ಮತ್ತು ವ್ಯಾಗನ್ ಸಿಬ್ಬಂದಿ, ವಿಭಾಗೀಯ ಹಾಗೂ ಟ್ರಾಕ್ಷನ್ ನಿಯಂತ್ರಣಾಧಿಕಾರಿಗಳು ಮತ್ತು ಹಟಿಯಾದಿಂದ ಡಿಡಿಯುವರೆಗೆ ರೈಲನ್ನು ನಿರ್ವಹಿಸಿದ ಸಿಬ್ಬಂದಿ ನಿರ್ಲಕ್ಷ್ಯ ಎಸಗಿರುವುದು ಕಂಡುಬಂದಿದೆ.
ಈ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ರೈಲ್ವೆ ಮಂಡಳಿಯು ತಕ್ಷಣವೇ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ. ಎಚ್ಚರಿಕೆಯ ಸಂದೇಶಗಳನ್ನು ನಿರ್ಲಕ್ಷಿಸಿದ ಸಿಬ್ಬಂದಿ ಮತ್ತು ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಲು ಮುಂದಾಗಿದ್ದು, ಭವಿಷ್ಯದಲ್ಲಿ ಇಂತಹ ತಾಂತ್ರಿಕ ಲೋಪಗಳು ಮರುಕಳಿಸದಂತೆ ಸುರಕ್ಷತಾ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಲಾಗುವುದು ಎಂದು ರೈಲ್ವೆ ಮೂಲಗಳು ತಿಳಿಸಿವೆ.