ನವದೆಹಲಿ, ಜು. 29: ರಾಷ್ಟ್ರಗೀತೆ 'ವಂದೇ ಮಾತರಂ'ಗೆ (Vande Mataram) ಅವಮಾನ ಮಾಡುವುದನ್ನು ಅಪರಾಧವೆಂದು ಘೋಷಿಸುವ ಮಹತ್ವದ ಮಸೂದೆಯನ್ನು ರಾಜ್ಯಸಭೆ ಬುಧವಾರ ಧ್ವನಿ ಮತದ ಮೂಲಕ ಅಂಗೀಕರಿಸಿತು. 'ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ (ತಿದ್ದುಪಡಿ) ಮಸೂದೆ, 2026' (Prevention of Insults to National Honour (Amendment) Bill, 2026)ಯನ್ನು ಗದ್ದಲದ ನಡುವೆಯೇ ಮೇಲ್ಮನೆ ಅಂಗೀಕರಿಸಿತು.
ಮಧ್ಯಾಹ್ನದ ಊಟದ ವಿರಾಮದ ಬಳಿಕ ಸಭೆ ಆರಂಭವಾಗುತ್ತಿದ್ದಂತೆ, ದಿನದ ಮೊದಲಾರ್ಧದಲ್ಲಿ ನಡೆದ ಎರಡು ಬಾರಿ ಮುಂದೂಡಿಕೆಯ ನಂತರ ಉಪಸಭಾಪತಿ ಹರಿವಂಶ್ ಪ್ರತಿಭಟನಾನಿರತ ಸದಸ್ಯರಿಗೆ ಸದನದ ಗೌರವ ಕಾಪಾಡುವಂತೆ ಮನವಿ ಮಾಡಿದರು. ಈ ವೇಳೆ ಮಸೂದೆಯ ಕುರಿತು ಚರ್ಚೆ ಆರಂಭವಾದರೂ, ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ವಿರುದ್ಧ ಪ್ರತಿಭಟನೆ ನಡೆಸಿದವರ ಮೇಲೆ ದೆಹಲಿ ಪೊಲೀಸರ ಕ್ರಮದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಉತ್ತರ ನೀಡಬೇಕು ಎಂದು ಒತ್ತಾಯಿಸಿ ವಿರೋಧ ಪಕ್ಷಗಳು ಘೋಷಣೆಗಳನ್ನು ಕೂಗುತ್ತಲೇ ಇದ್ದವು.
ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ (ತಿದ್ದುಪಡಿ) ಮಸೂದೆ, 2026 ಪಾಸ್:
ಪ್ರತಿಭಟನೆ ನಡುವೆಯೇ ಉಪಸಭಾಪತಿ ಸದನದ ಕಲಾಪವನ್ನು ಮುಂದುವರಿಸಿ, ಸದಸ್ಯರನ್ನು ಚರ್ಚೆಯಲ್ಲಿ ಭಾಗವಹಿಸುವಂತೆ ಕೋರಿದರು. ಬಳಿಕ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ರಾಮದಾಸ್ ಅಠಾವಳೆ ಮಸೂದೆಯ ಕುರಿತು ಮಾತನಾಡುತ್ತಿದ್ದ ವೇಳೆ ವಿರೋಧ ಪಕ್ಷಗಳು ಸದನದಿಂದ ಬಹಿಷ್ಕಾರ ನಡೆಸಿದವು.
ಪರೀಕ್ಷಾ ಅಕ್ರಮ ತಡೆ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ
ಮಸೂದೆ ಕುರಿತು ಉತ್ತರಿಸಿದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ, 'ʼವಂದೇ ಮಾತರಂ' ರಾಷ್ಟ್ರದ ಗೌರವದ ಸಂಕೇತವಾಗಿದ್ದು, ರಾಜಕೀಯಕ್ಕಾಗಿ ಕಾಂಗ್ರೆಸ್ ಅದಕ್ಕೆ ಅವಮಾನ ಮಾಡಲು ಯತ್ನಿಸುತ್ತಿದೆʼʼ ಎಂದು ಆರೋಪಿಸಿದರು. ʼʼಸ್ವಾತಂತ್ರ್ಯ ಹೋರಾಟದ ವೇಳೆ ಅನೇಕ ಕ್ರಾಂತಿಕಾರರು ತಮ್ಮ ಕೊನೆಯ ಉಸಿರಿನವರೆಗೂ 'ವಂದೇ ಮಾತರಂ' ಎಂದು ಘೋಷಣೆ ಕೂಗುತ್ತಲೇ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆʼʼ ಎಂದು ಅವರು ಸ್ಮರಿಸಿದರು.
"'ವಂದೇ ಮಾತರಂ'ಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುವುದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ದೇಶದ ಯುವಜನತೆ ಇದನ್ನು ಗಮನಿಸುತ್ತಿದ್ದು, ಜನರು ಅವರಿಗೆ ತಕ್ಕ ಉತ್ತರ ನೀಡಲಿದ್ದಾರೆ. 'ಏಕ್ ಭಾರತ್, ಶ್ರೇಷ್ಠ ಭಾರತ್' ನಿರ್ಮಾಣಕ್ಕೆ 'ವಂದೇ ಮಾತರಂ' ಅಗತ್ಯ" ಎಂದು ನಿತ್ಯಾನಂದ ರೈ ಹೇಳಿದರು.
ಈ ತಿದ್ದುಪಡಿ ಮಸೂದೆಯ ಮೂಲಕ ರಾಷ್ಟ್ರಧ್ವಜ, ಸಂವಿಧಾನ, ರಾಷ್ಟ್ರಗೀತೆ ಹಾಗೂ 'ವಂದೇ ಮಾತರಂ' ಸೇರಿ ದೇಶದ ರಾಷ್ಟ್ರೀಯ ಗೌರವದ ಸಂಕೇತಗಳಿಗೆ ಅವಮಾನ ಮಾಡುವುದು ಅಥವಾ ಅವುಗಳನ್ನು ಅಪವಿತ್ರಗೊಳಿಸುವುದನ್ನು ಅಪರಾಧವೆಂದು ಪರಿಗಣಿಸಲಾಗುತ್ತದೆ. ತಪ್ಪಿತಸ್ಥರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶವನ್ನು ಮಸೂದೆಯಲ್ಲಿ ಕಲ್ಪಿಸಲಾಗಿದೆ.
ಜುಲೈ 24ರಂದು ರಾಜ್ಯಸಭೆಯಲ್ಲಿ ಮಂಡನೆಯಾಗಿದ್ದ ಈ ಮಸೂದೆ, 'ವಂದೇ ಮಾತರಂ'ಗೆ ರಾಷ್ಟ್ರಗೀತೆ 'ಜನ ಗಣ ಮನ'ಗೆ ಇರುವಂತೆಯೇ ಕಾನೂನಾತ್ಮಕ ರಕ್ಷಣೆಯನ್ನು ನೀಡುವ ಉದ್ದೇಶ ಹೊಂದಿದೆ. 'ವಂದೇ ಮಾತರಂ' ರಚನೆಯ 150ನೇ ವರ್ಷದ ಆಚರಣೆ ನಡೆಯುತ್ತಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಈ ಮಹತ್ವದ ಕ್ರಮ ಕೈಗೊಂಡಿದೆ.