ನವದೆಹಲಿ, ಆ.16: ಆಗಸ್ಟ್ 15 ರಂದು ಎಐಸಿಸಿ ಪ್ರಧಾನ ಕಚೇರಿಯಲ್ಲಿ ನಡೆದ ಪಕ್ಷದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಸೋನಿಯಾ ಗಾಂಧಿ (Sonia Gandhi) ಕ್ಷಮೆಯಾಚಿಸಬೇಕೆಂದು ಬಂಕಿಮ್ ಚಟ್ಟೋಪಾಧ್ಯಾಯ ಅವರ ವಂಶಸ್ಥರು ಕೋರಿದ್ದಾರೆ. ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ (Bankim Chandra Chattopadhyay) ಅವರ ವಂಶಸ್ಥರು ಹಾಗೂ ಬಿಜೆಪಿ ಶಾಸಕರಾದ ಸುಮಿತ್ರೋ ಚಟರ್ಜಿ (Sumitro Chatterjee) ಅವರು, ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಂದ ಬೇಷರತ್ ಕ್ಷಮೆಯಾಚನೆಗೆ ಒತ್ತಾಯಿಸಿದ್ದಾರೆ.
ಎಐಸಿಸಿ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಂದೇ ಮಾತರಂ ಗೀತೆಯ ಸಂಪೂರ್ಣ ಆವೃತ್ತಿಯನ್ನು ಹಾಡುವಾಗ ಅಲ್ಲಿ ನೆರೆದಿದ್ದವರಲ್ಲಿ ಅಸಮಾಧಾನ ಉಂಟಾಗಿತ್ತು. ಗೀತೆಯನ್ನು ಮಧ್ಯದಲ್ಲೇ ನಿಲ್ಲಿಸಲು ಪದೇ ಪದೇ ಪ್ರಯತ್ನಿಸಲಾಯಿತು ಎಂದು ಚಟರ್ಜಿ ಅವರು ಆರೋಪಿಸಿದ್ದಾರೆ. ಈ ಘಟನೆಯು ಕೇವಲ ದುರದೃಷ್ಟಕರವಲ್ಲ, ಬದಲಿಗೆ ಐತಿಹಾಸಿಕ ತಪ್ಪಿನ ನಾಚಿಕೆಗೇಡಿನ ಪುನರಾವರ್ತನೆಯಾಗಿದೆ ಎಂದು ಅವರು ಹೇಳಿದ್ದಾರೆ.
ಬಿಜೆಪಿ ಶಾಸಕರಾದ ಸುಮಿತ್ರೋ ಚಟರ್ಜಿ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದಾರೆ. ಅದರಲ್ಲಿ ತಾವು ಒಬ್ಬ ಸಾಮಾನ್ಯ ನಾಗರಿಕನಾಗಿ, ದೇಶಪ್ರೇಮಿಯಾಗಿ ಮತ್ತು ಬಂಕಿಮ್ ಚಂದ್ರ ಅವರ ನೇರ ವಂಶಸ್ಥರಾಗಿ ಈ ಪತ್ರವನ್ನು ಬರೆಯುತ್ತಿರುವುದಾಗಿ ತಿಳಿಸಿದ್ದಾರೆ. ಈ ಇಡೀ ಘಟನೆಯು ತಮಗೆ ತೀವ್ರ ನೋವು, ಶೂನ್ಯತೆ ಮತ್ತು ಕೋಪವನ್ನುಂಟುಮಾಡಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ವಂದೇ ಮಾತರಂ ಗೀತೆಗೆ ಸೋನಿಯಾ ಗಾಂಧಿ ಆಕ್ಷೇಪ? ಬಿಜೆಪಿ ಆರೋಪ, ಕಾಂಗ್ರೆಸ್ ಸ್ಪಷ್ಟನೆ
ಕಾಂಗ್ರೆಸ್ ಕಾರ್ಯಕ್ರಮದ ವಿಡಿಯೊದಲ್ಲಿ ವಂದೇ ಮಾತರಂ ಗೀತೆ ನುಡಿಸುತ್ತಿರುವಾಗ ರಾಹುಲ್ ಗಾಂಧಿಯು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಮಾತನಾಡುತ್ತಿರುವುದು ಕಂಡುಬರುತ್ತದೆ. ನಂತರ ಸೋನಿಯಾ ಗಾಂಧಿ ಮತ್ತು ಖರ್ಗೆ ಹಾಡನ್ನು ನಿಲ್ಲಿಸುವಂತೆ ಸನ್ನೆ ಮಾಡುತ್ತಿರುವ ವಿಡಿಯೊ ವೈರಲ್ ಆಗಿತ್ತು. ಆದರೆ, ವಂದೇ ಮಾತರಂ ಗೀತೆಯ ಪೂರ್ಣ ಆವೃತ್ತಿಯ ಹಾಡನ್ನು ನಿಲ್ಲಿಸುವ ಯಾವುದೇ ಪ್ರಯತ್ನ ನಡೆದಿಲ್ಲ ಎಂದು ಕಾಂಗ್ರೆಸ್ ನಿರಾಕರಿಸಿತು. ಖರ್ಗೆ ಅವರಲ್ಲಿ ಕುರ್ಚಿಯನ್ನಷ್ಟೇ ಕೇಳುತ್ತಿದ್ದರು ಎಂದು ಪಕ್ಷ ಸ್ಪಷ್ಟಪಡಿಸಿದೆ.
ವಂದೇ ಮಾತರಂ ಗೀತೆಯನ್ನು ರಾಷ್ಟ್ರಕ್ಕೆ ದೇಶಭಕ್ತಿಯ ಧರ್ಮವನ್ನು ದೀಕ್ಷೆಯಾಗಿ ನೀಡಿದ ಒಂದು ಮಂತ್ರ ಎಂದು ಆಧ್ಯಾತ್ಮಿಕ ತತ್ವಜ್ಞಾನಿ ಶ್ರೀ ಅರವಿಂದರು ಬಣ್ಣಿಸಿದ್ದನ್ನು ನೆನೆದ ಚಟರ್ಜಿ ಅವರು, ಸ್ವತಂತ್ರ ಭಾರತದ ನೆಲದಲ್ಲಿ ಈ ಸಂಪೂರ್ಣ ಗೀತೆಯನ್ನು ಹಾಡಲು ಯಾವುದೇ ರೀತಿಯ ಹಿಂಜರಿಕೆ ವ್ಯಕ್ತಪಡಿಸುವುದು ಖುದೀರಾಮ್ ಬೋಸ್ ಅವರಂತಹ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗಕ್ಕೆ ಮಾಡುವ ಅಪಮಾನವಾಗಿದೆ ಎಂದು ಹೇಳಿದರು.
ಅಲ್ಲದೆ, 1909 ರ ದೇಶದ್ರೋಹ ವಿಚಾರಣೆಯ ಸಮಯದಲ್ಲಿ ಬಾಲಗಂಗಾಧರ ತಿಲಕ್ ಅವರ ಬೆಂಬಲಿಗರು ಈ ಗೀತೆ ಹಾಡಿದ್ದನ್ನು ಮತ್ತು 1938 ರಲ್ಲಿ ಹೈದರಾಬಾದ್‌ನ ಉಸ್ಮಾನಿಯಾ ವಿಶ್ವವಿದ್ಯಾಲಯದ ರಾಷ್ಟ್ರೀಯತಾವಾದಿ ವಿದ್ಯಾರ್ಥಿಗಳು ನಿಜಾಮರು ವಿಧಿಸಿದ ನಿರ್ಬಂಧಗಳ ಹೊರತಾಗಿಯೂ ಇದನ್ನು ಒಂದು ರ್ಯಾಲಿ ಕೂಗಾಗಿ ಬಳಸಿಕೊಂಡಿದ್ದನ್ನು ಅವರು ನೆನಪಿಸಿಕೊಂಡರು.
ವಂದೇ ಮಾತರಂ ಗೀತೆಯ ವಿಷಯದಲ್ಲಿ ಕಾಂಗ್ರೆಸ್ ಪಕ್ಷ ಹೊಂದಿರುವ ಈ ದ್ವಿಮುಖ ನೀತಿ ಹೊಸದೇನಲ್ಲ ಎಂದು ಅವರು ಆರೋಪಿಸಿದ್ದಾರೆ. ಮೊಹಮ್ಮದ್ ಅಲಿ ಜಿನ್ನಾ ಅವರ ಆಕ್ಷೇಪಣೆಗಳ ನಂತರ, 1937 ರಲ್ಲಿ ವಂದೇ ಮಾತರಂ ಗೀತೆಯನ್ನು ಕತ್ತರಿಸಲು (ಮೊದಲ ಎರಡು ಚರಣಗಳಿಗೆ ಮಾತ್ರ ಸೀಮಿತಗೊಳಿಸಲು) ಕಾಂಗ್ರೆಸ್ ನಿರ್ಧಾರ ಕೈಗೊಂಡಿದ್ದನ್ನು ಅವರು ಈ ಸಂದರ್ಭದಲ್ಲಿ ನೆನಪಿಸಿದ್ದಾರೆ.