ರಾಂಚಿ, ಜು.9: ಖಾಸಗಿ ವಸತಿ ಶಾಲೆಯ ಬಾಲಕಿಯರ ಹಾಸ್ಟೆಲ್‌ನಲ್ಲಿ ವಿಷಪೂರಿತ ಕಟ್ಟು ಹಾವು (Krait Snake), ಮಲಗಿದ್ದ ವಿದ್ಯಾರ್ಥಿನಿಯರಿಗೆ ಕಚ್ಚಿದ (snake bite) ಪರಿಣಾಮ 13 ವರ್ಷದ ಬಾಲಕಿಯೊಬ್ಬಳು ಮೃತಪಟ್ಟು, ಇತರ ಮೂವರು ವಿದ್ಯಾರ್ಥಿನಿಯರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಾರ್ಖಂಡ್‌ನ (Jharkhand) ಲೋಹರ್ದಗಾ ಜಿಲ್ಲೆಯ ರೋಚೊ ಮಹುವಾಟೋಲಿಯ ಸನ್ವಾಸಿರ ಹೈಯರ್ ಸೆಕೆಂಡರಿ ವಸತಿ ಶಾಲೆಯಲ್ಲಿ ಮಂಗಳವಾರ (ಜು.7) ರಾತ್ರಿ ಈ ಘಟನೆ ನಡೆದಿದೆ.
ವಿದ್ಯಾರ್ಥಿಗಳು ಊಟದ ಮಾಡಿ ಮಲಗಿದ್ದಾಗ ರಾತ್ರಿ 11 ಗಂಟೆ ಸುಮಾರಿಗೆ ಕಟ್ಟು ಹಾವು ಅವರ ಕೋಣೆಯಲ್ಲಿ ಓಡಾಡಿದೆ. ವರ್ಷಾ ಒರಾನ್ ಎಂಬಾಕೆಗೆ ಹಾವು ಕಚ್ಚಿತು. ಈ ವೇಳೆ ಆಕೆಯ ಕಿರುಚಾಟ ಕೇಳಿ ಇತರ ಬಾಲಕಿಯರು ಎಚ್ಚರಗೊಂಡರು. ನಂತರ ಅನಿಶಾ ಒರಾನ್, ಮನೀಶಾ ಕುಮಾರಿ ಮತ್ತು ಫುಲ್ಮೇನಿಯಾ ಒರಾನ್‌ರನ್ನೂ ಹಾವು ಕಚ್ಚಿತು.
ಬಾಲಕಿಯರಿಗೆ ಹಾವು ಕಚ್ಚಿದ ವಿಚಾರ ತಿಳಿಯುತ್ತಿದ್ದಂತೆ ಹಾಸ್ಟೆಲ್ ಸಿಬ್ಬಂದಿ ರಾತ್ರಿಯೇ ನಾಲ್ವರು ವಿದ್ಯಾರ್ಥಿಗಳನ್ನು ಲೋಹರ್ದಾಗಾ ಸದರ್ ಆಸ್ಪತ್ರೆಗೆ ಕರೆದೊಯ್ದರು. ವರ್ಷಾ ಎಂಬಾಕೆ ಆಸ್ಪತ್ರೆಗೆ ಬರುವಷ್ಟರಲ್ಲಿ ಮೃತಪಟ್ಟಿದ್ದಾಳೆಂದು ವೈದ್ಯರು ಘೋಷಿಸಿದರು.
ಅಜಾಗರೂಕತೆಯಿಂದ ಹಾವು ಹಿಡಿಯಲು ಹೋಗಿ ಕಚ್ಚಿಸಿಕೊಂಡ ಯುವಕ: ವಿಡಿಯೊ ನೋಡಿ ನೆಟ್ಟಿಗರು ಕಿಡಿ
ಗಂಭೀರ ಸ್ಥಿತಿಯಲ್ಲಿರುವ ಫುಲ್ಮೇನಿಯಾ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಂಚಿಯ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆ (RIMS)ಗೆ ಕಳುಹಿಸಲಾಗಿದ್ದು, ಉಳಿದ ಇಬ್ಬರು ವಿದ್ಯಾರ್ಥಿಗಳು ಲೋಹರ್ದಾಗಾ ಸದರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಾವು ಕಡಿತದಿಂದ ಸಾವು: ಕರ್ನಾಟಕದಲ್ಲಿಯೇ ಅತ್ಯಧಿಕ
ಅಂದಹಾಗೆ, 2024 ಮತ್ತು 2025 ಎರಡರಲ್ಲೂ ಕರ್ನಾಟಕದಲ್ಲಿ ಹಾವು ಕಡಿತದಿಂದ ಅತಿ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ದೇಶದಲ್ಲಿಯೇ ಅತಿ ಹೆಚ್ಚಿನ ಮಂದಿ ಕರ್ನಾಟಕದಲ್ಲಿ ಮೃತಪಟ್ಟಿರುವುದಾಗಿ ಇತ್ತೀಚೆಗೆ ವರದಿಯಾಗಿದೆ. ಸಮಗ್ರ ರೋಗ ಕಣ್ಗಾವಲು ಕಾರ್ಯಕ್ರಮದ (IDSP) ಅಡಿಯಲ್ಲಿ 2023 ರಲ್ಲಿ 183ಗಳಿದ್ದ ಹಾವು ಕಡಿತ ಪ್ರಕರಣಗಳು 2024ರಲ್ಲಿ 370ಕ್ಕೆ, 2025ರಲ್ಲಿ 431ಕ್ಕೆ ಏರುವುದರೊಂದಿಗೆ ಎರಡು ವರ್ಷಗಳಲ್ಲಿ ದುಪ್ಪಟ್ಟು ಹೆಚ್ಚಾಗಿದೆ.
ಹಳ್ಳಿಗಳಲ್ಲಿ ಸಂಭವಿಸುವ ಅನೇಕ ಹಾವು ಕಡಿತದ ಸಾವುಗಳು ಸಂಪೂರ್ಣವಾಗಿ ವರದಿಯಾಗಿಲ್ಲ. ಏಕೆಂದರೆ ಸಂತ್ರಸ್ತರು ಆಸ್ಪತ್ರೆಗೆ ತಲುಪುವಷ್ಟರಲ್ಲಿಯೇ ಸಾವಿಗೀಡಾಗಿರುತ್ತಾರೆ. ಹಾವು ಕಡಿತವನ್ನು ಆಯಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಡಿ ಅಧಿಸೂಚಿತ ಕಾಯಿಲೆ ಎಂದು ಸಚಿವಾಲಯವು ಸೂಚನೆ ನೀಡಿದೆ ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಹೇಳಿದ್ದಾರೆ.
ಮಧ್ಯಾಹ್ನದ ಬಿಸಿಯೂಟದಲ್ಲಿ ಪತ್ತೆಯಾಯ್ತು ಸತ್ತ ಹಾವು; ಊಟ ಮಾಡಿದ ನೂರಾರು ಮಕ್ಕಳು ಅಸ್ವಸ್ಥ
ಸಮಗ್ರ ಆರೋಗ್ಯ ಮಾಹಿತಿ ಪೋರ್ಟಲ್ (IHIP) ಮೂಲಕ ಸಮಗ್ರ ರೋಗ ಕಣ್ಗಾವಲು ಕಾರ್ಯಕ್ರಮದಿಂದ (IDSP) ಪಡೆದ ಅಂಕಿಅಂಶಗಳ ಪ್ರಕಾರ, ಕರ್ನಾಟಕದಲ್ಲಿ 2023 ರಲ್ಲಿ ಹಾವು ಕಡಿತದಿಂದ 19 ಮಂದಿ ಸಾವನ್ನಪ್ಪಿದ್ದರೆ, 2024 ರಲ್ಲಿ 101 ಮತ್ತು 2025 ರಲ್ಲಿ 157 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಮೂರು ವರ್ಷಗಳಲ್ಲಿ ಮೃತಪಟ್ಟವರ ಸಂಖ್ಯೆ 277ಕ್ಕೆ ಏರಿಕೆಯಾಗಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗಿಂತ ಅತ್ಯಂತ ಹೆಚ್ಚಿನ ಮಂದಿ ಕರ್ನಾಟಕದಲ್ಲಿ ಮೃತಪಟ್ಟಿರುವುದಾಗಿ ವರದಿಯಲ್ಲಿ ಹೇಳಲಾಗಿದೆ.