ಹೈದರಾಬಾದ್, ಜ. 22: ಕನ್ನಡ ಸೇರಿದಂತೆ ವಿವಿಧ ಭಾಷೆಗಳ ಚಿತ್ರರಂಗದಲ್ಲಿ ತಮ್ಮ ಸ್ವರ ಮಾಧುರ್ಯದಿಂದಲೇ ಗುರುತಿಸಿಕೊಂಡಿರುವ, 4 ಬಾರಿ ರಾಷ್ಟ್ರ ಚಲನಚಿತ್ರ ಪ್ರಶಸ್ತಿ ವಿಜೇತ ಗಾಯಕಿ ಎಸ್. ಜಾನಕಿ (S Janaki) ಅವರಿಗೆ ಪುತ್ರ ವಿಯೋಗವಾಗಿದೆ. ಅವರ ಏಕೈಕ ಪುತ್ರ ಮುರಳಿ ಕೃಷ್ಣ (Murali Krishna) ಹೃದಯಾಘಾತದಿಂದ ಗುರುವಾರ (ಜನವರಿ 22) ಹೈದರಾಬಾದ್‌ನಲ್ಲಿ ನಿಧನ ಹೊಂದಿದರು. ಭರತನಾಟ್ಯ ಡ್ಯಾನ್ಸರ್ ಆಗಿದ್ದ ಅವರಿಗೆ 65 ವರ್ಷ ವಯಸ್ಸಾಗಿತ್ತು. 87ನೇ ವರ್ಷದಲ್ಲಿ ತಮ್ಮ ಪುತ್ರನನ್ನು ಕಳೆದುಕೊಂಡು ಜಾನಕಿ ಅಕ್ಷರಶಃ ಒಬ್ಬಂಟಿ ಎನಿಸಿಕೊಂಡಿದ್ದಾರೆ. ಚಿತ್ರರಂಗವೇ ಮುರಳಿ ಕೃಷ್ಣ ಅವರ ನಿಧನಕ್ಕೆ ಕಂಬನಿ ಮಿಡಿದಿದೆ.
ಎಸ್. ಜಾನಕಿ ಬಹುಭಾಷೆಯ ಗಾಯಕಿಯಾಗಿ ಜನಪ್ರಿಯರಾಗಿದ್ದರೂ ಅವರ ಪುತ್ರ ಮುರಳಿ ಕೃಷ್ಣ ಗಾಯನ ಕ್ಷೇತ್ರಕ್ಕೆ ಪ್ರವೇಶಿಸಿರಲಿಲ್ಲ. ಜತೆಗೆ ಸಿನಿರಂಗದಲ್ಲಿ ಅಷ್ಟೇನೂ ಸಕ್ರಿಯವಾಗಿರಲಿಲ್ಲ. ಡ್ಯಾನ್ಸರ್ ಆಗಿದ್ದ ಅವರು ಕೆಲವು ಸಿನಿಮಾಗಳಿಗೆ ಭರತನಾಟ್ಯ ಕೊರಿಯೋಗ್ರಾಫಿ ಮಾಡಿದ್ದರು. ಅದಾಗ್ಯೂ ಲೈಮ್‌ಲೈಟ್‌ನಿಂದ ತುಸು ದೂರವೇ ಉಳಿದಿದ್ದರು.
ಮುರಳಿ ಕೃಷ್ಣ ಭರತನಾಟ್ಯ, ಕೂಚುಪುಡಿ ಡ್ಯಾನ್ಸರ್ ಉಮಾ ಅವರನ್ನು ವಿವಾಹವಾಗಿದ್ದರು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅದಾಗ್ಯೂ ದಂಪತಿಯ ಮಧ್ಯೆ ಬಿರುಕು ಬಿಟ್ಟು ಕೆಲವೇ ವರ್ಷಗಳಲ್ಲಿ ಇಬ್ಬರು ದೂರವಾಗಿದ್ದರು.
ಮುರಳಿ ಕೃಷ್ಣ ಅವರ ನಿಧನ ಸುದ್ದಿ:
ಪತ್ನಿಯಿಂದ ದೂರವಾದ ಬಳಿಕ ಮುರಳಿ ಕೃಷ್ಣ ತಮ್ಮ ತಾಯಿಯೊಂದಿಗೆ ವಾಸವಾಗಿದ್ದರು. ತಾಯಿ-ಮಗ ಕೆಲವು ವರ್ಷ ಮೈಸೂರಿನಲ್ಲಿ ವಾಸವಾಗಿದ್ದರು. ಅದಾದ ಬಳಿಕ ಹೈದರಾಬಾದ್‌ಗೆ ಶಿಫ್ಟ್ ಆಗಿದ್ದರು. ಮುರಳಿ ಕೃಷ್ಣ ನಿಧನ ಹೊಂದುವ ವೇಳೆ ತಾಯಿ ಜತೆ ಹೈದರಾಬಾದ್‌ನಲ್ಲಿ ವಾಸವಾಗಿದ್ದರು.
ಹಿರಿಯ ಕಾಂಗ್ರೆಸ್ ನಾಯಕ ಸುರೇಶ್ ಕಲ್ಮಾಡಿ ನಿಧನ
ವಿವಿಧ ಭಾಷೆಗಳಲ್ಲಿ ಎಸ್. ಜಾನಕಿ ಮಿಂಚು
1938ರಲ್ಲಿ ಆಂಧ್ರ ಪ್ರದೇಶದ ಗುಂಟೂರ್‌ನಲ್ಲಿ ಜನಿಸಿದ ಎಸ್. ಜಾನಕಿ 20ಕ್ಕಿಂತ ಅಧಿಕ ಭಾರತೀಯ ಭಾಷೆಗಳ 48,000 ಹಾಡುಗಳಿಗೆ ಧ್ವನಿಯಾಗಿದ್ದಾರೆ. ಅದರಲ್ಲಿಯೂ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಹಾಡಿರುವ ಹಾಡು ಇಂದಿಗೂ ಜನಪ್ರಿಯ. ಅದರಲ್ಲಿಯೂ ಅವರು ಅತೀ ಹೆಚ್ಚು ಹಾಡಿದ್ದು ಕನ್ನಡದಲ್ಲೇ ಎನ್ನುವುದು ವಿಶೇಷ. ಮಾತೃಭಾಷೆ ತೆಲುಗಾದರೂ ಜಾನಕಿ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಮಾತನಾಡುವ ಜತೆಗೆ ಬರೆಯುತ್ತಾರೆ.
4 ಬಾರಿ ರಾಷ್ಟ್ರ ಪ್ರಶಸ್ತಿ
ಸುಮಧುರ ಕಂಠದಿಂದಲೇ ಮೋಡಿ ಮಾಡುವ ಎಸ್. ಜಾನಕಿ ತಮ್ಮ ಹಲವು ವರ್ಷಗಳ ವೃತ್ತಿ ಜೀವನದಲ್ಲಿ 4 ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. 1977ರಲ್ಲಿ ತಮಿಳಿನ ʼ16 ವಯತಿನಿಲೆʼ, 1981ರಲ್ಲಿ ಮಲಯಾಳಂನ ʼಒಪ್ಪೋಳ್ʼ, 1984ರಲ್ಲಿ ತೆಲುಗಿನ ʼಸಿತಾರʼ ಮತ್ತು 1992ರಲ್ಲಿ ತಮಿಳಿನ ʼದೇವರ್ ಮಗನ್ʼ ಚಿತ್ರದ ಹಾಡಿಗಾಗಿ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಸಂದಿದೆ. ಜತೆಗೆ 31 ರಾಜ್ಯ ಪ್ರಶಸ್ತಿಗಳನ್ನೂ ಮುಡಿಗೇರಿಸಿದ್ದಾರೆ.
2016ರಲ್ಲಿ ರಿಲೀಸ್ ಆದ ಮಲಯಾಳಂನ ʼ10 ಕಲ್ಪನಕಳ್ʼ ಎಸ್. ಜಾನಕಿ ಧ್ವನಿ ನೀಡಿರುವ ಕೊನೆಯ ಸಿನಿಮಾ. ಹೊಸಬರಿಗೆ ಅವಕಾಶ ನೀಡುವ ಉದ್ದೇಶದಿಂದ ಅವರು 2017ರಲ್ಲಿ ಮೈಸೂರಿನಲ್ಲಿ ನಿವೃತ್ತಿ ಘೋಷಿಸಿದರು. ಆ ಮೂಲಕ ಅವರ ಸುದೀರ್ಘ 60 ವರ್ಷಗಳ ವೃತ್ತಿ ಜೀವನಕ್ಕೆ ತೆರೆ ಬಿದ್ದಿದೆ.