ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʼʼರಾಷ್ಟ್ರಸೇವೆಗಾಗಿ ಜೀವನವನ್ನೇ ಮುಡಿಪಾಗಿ ಇಟ್ಟಿದ್ದಾರೆʼʼ: ರಾಮ ಮಂದಿರ ಟ್ರಸ್ಟ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಪರ ಸಹೋದರ ಬ್ಯಾಟಿಂಗ್

Ram Mandir Trust: ರಾಮ ಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿರುವ ವಿಶ್ವ ಹಿಂದೂ ಪರಿಷತ್ (VHP) ನಾಯಕ ಚಂಪತ್ ರಾಯ್ ಪರ ಅವರ ಸಹೋದರ ಬ್ಯಾಟ್ ಬೀಸಿದ್ದಾರೆ. ರಾಯ್ ತಮ್ಮ ಇಡೀ ಜೀವನವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್), ರಾಮ ಮಂದಿರ ಚಳುವಳಿ ಮತ್ತು ರಾಷ್ಟ್ರೀಯ ಸೇವೆಗಾಗಿ ಮುಡಿಪಾಗಿಟ್ಟಿದ್ದರು ಎಂದು ಹೇಳಿದ್ದಾರೆ.

ಚಂಪತ್ ರಾಯ್ (ಸಂಗ್ರಹ ಚಿತ್ರ)

ಲಖನೌ, ಜೂ. 29: ರಾಮ ಮಂದಿರ ಟ್ರಸ್ಟ್‌ನ (Ram Mandir Trust) ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿರುವ ವಿಶ್ವ ಹಿಂದೂ ಪರಿಷತ್ (VHP) ನಾಯಕ ಚಂಪತ್ ರಾಯ್ (Champat Rai) ಪರ ಅವರ ಸಹೋದರ ಸುನಿಲ್ ಬನ್ಸಾಲ್ ಬ್ಯಾಟ್ ಬೀಸಿದ್ದಾರೆ. ಚಂಪತ್ ರಾಯ್ ಮಂದಿರದ ಚಳುವಳಿ ಮತ್ತು ರಾಷ್ಟ್ರಸೇವೆಗಾಗಿ ತಮ್ಮ ವೈಯಕ್ತಿಕ ಜೀವನ ಮತ್ತು ವೃತ್ತಿ ಜೀವನವನ್ನೇ ತ್ಯಾಗ ಮಾಡಿದ್ದಾರೆ ಎಂದು ಹೇಳಿದ್ದಾರೆ. ದೇಣಿಗೆ ಹಣದಲ್ಲಿ ಭಾರಿ ಪ್ರಮಾಣದ ದುರುಪಯೋಗ ನಡೆದಿದೆ ಎನ್ನಲಾದ ಹಗರಣದಲ್ಲಿ ರಾಯ್ ಅವರ ಪಾತ್ರದ ಬಗ್ಗೆ ಪ್ರಶ್ನೆಗಳು ಎದ್ದ ಬೆನ್ನಲ್ಲೇ ಈ ಸ್ಪಷ್ಟನೆ ಬಂದಿದೆ. ಈ ವಿವಾದದ ಹಿನ್ನೆಲೆಯಲ್ಲಿ ಚಂಪತ್ ರಾಯ್ ಜೂನ್‌ 22ರಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಅಯೋಧ್ಯೆ ರಾಮ ಮಂದಿರದ ನಿರ್ವಹಣೆಗೆ ಸಂಬಂಧ ಹೊಂದಿದ್ದರೂ ಎಫ್‌ಐಆರ್‌ನಲ್ಲಿ ಆರೋಪಿಗಳಾಗಿ ಹೆಸರು ಉಲ್ಲೇಖಿಸಲ್ಪಡದ ಚಂಪತ್ ರಾಯ್, ಅನಿಲ್ ಮಿಶ್ರಾ ಮತ್ತು ಗೋಪಾಲ್ ರಾವ್ ಅಯೋಧ್ಯೆ ತೊರೆಯಬೇಕು ಎಂದು ಫೈಜಾಬಾದ್ ಬಾರ್ ಅಸೋಸಿಯೇಷನ್ ಒತ್ತಾಯಿಸಿದೆ. ಈ ಮೂವರು ಮೂರು ದಿನಗಳೊಳಗೆ ಅಯೋಧ್ಯೆ ತೊರೆಯದಿದ್ದರೆ, ಇಡೀ ನಗರವನ್ನು ಬಂದ್ ಮಾಡಲಾಗುವುದು ಹಾಗೂ ಯಾರಿಗೂ ನಗರ ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ವಕೀಲರು ಎಚ್ಚರಿಕೆ ನೀಡಿದ್ದಾರೆ.

100 ಪಟ್ಟು ಅಧಿಕ ಆದಾಯ, ಫೋನ್‌ ಡೇಟಾ ಡಿಲೀಟ್‌; ರಾಮ ಮಂದಿರ ದೇಣಿಗೆ ಕದ್ದವರ ಕೃತ್ಯ ಒಂದೊಂದೇ ಬೆಳಕಿಗೆ

ರಾಯ್ ತಮ್ಮ ಇಡೀ ಜೀವನವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್), ರಾಮ ಮಂದಿರ ಚಳುವಳಿ ಮತ್ತು ರಾಷ್ಟ್ರೀಯ ಸೇವೆಗಾಗಿ ಮುಡಿಪಾಗಿಟ್ಟಿದ್ದರು ಎಂದು ಬಿಜ್ನೋರ್ ಜಿಲ್ಲೆಯ ನಗೀನಾ ನಿವಾಸಿ ಮತ್ತು ರಾಯ್ ಅವರ ಸಹೋದರ ಸುನಿಲ್ ಬನ್ಸಾಲ್ ವಿವರಿಸಿದ್ದಾರೆ. ರಾಯ್‌ ಈ ಹಿಂದೆ 1970-71ರಲ್ಲಿ ರೋಹ್ಟಕ್‌ನಲ್ಲಿ ಶಿಕ್ಷಕರಾಗಿ ಕೆಲಸ ಮಾಡಿದ್ದರು. ನಂತರ 1972ರಲ್ಲಿ ಧಾಂಪುರದಲ್ಲಿರುವ ಆರ್‌ಎಸ್‌ಎಂ ಪದವಿ ಕಾಲೇಜಿನಲ್ಲಿ ಭೌತಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು ಎಂದು ಅವರು ತಿಳಿಸಿದ್ದಾರೆ.

ತುರ್ತು ಪರಿಸ್ಥಿತಿ ಅವಧಿಯಲ್ಲಿ ಚಂಪತ್ ರಾಯ್ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾಗ ಅವರನ್ನು ಬಂಧಿಸಲು ಪೊಲೀಸರು ಪ್ರಯತ್ನಿಸಿದ್ದರು. ಬಳಿಕ ಅವರು ಸ್ವಯಂಪ್ರೇರಿತವಾಗಿ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದರು. 1980–81ರಲ್ಲಿ ಚಂಪತ್ ರಾಯ್ ತಮ್ಮ ಶಿಕ್ಷಕ ವೃತ್ತಿಗೆ ರಾಜೀನಾಮೆ ನೀಡಿ, ಪೂರ್ಣಾವಧಿ ಆರ್‌ಎಸ್‌ಎಸ್ ಕಾರ್ಯಕರ್ತರಾಗಿ ಕೆಲಸ ಆರಂಭಿಸಿದ್ದರು ಎಂದು ಬನ್ಸಾಲ್ ಹೇಳಿದ್ದಾರೆ.

ಸಹೋದರನ ವಿರುದ್ಧದ ಆರೋಪಗಳು ರಾಜಕೀಯ ಪ್ರೇರಿತವಾಗಿವೆ ಎಂದು ಆರೋಪಿಸಿದ ಅವರು, ಚಂಪತ್ ರಾಯ್ ಆರ್‌ಎಸ್‌ಎಸ್, ರಾಮ ಮಂದಿರ ಚಳವಳಿ ಮತ್ತು ದೇಶಸೇವೆಗಾಗಿ ತ್ಯಾಗ ಮಾಡಿದ್ದಾರೆ ಎಂದು ಹೇಳಿದ್ದಾರೆ.