ಹೈದರಾಬಾದ್: ಇನಾರ್ಬಿಟ್ ಮಾಲ್ ಬಳಿ ರಸ್ತೆ ದಾಟುತ್ತಿದ್ದ 26 ವರ್ಷದ ಯುವತಿಗೆ ಆಸ್ಟನ್ ಮಾರ್ಟಿನ್ ಕಾರು ಡಿಕ್ಕಿ ಹೊಡೆದು ಮೃತಪಟ್ಟಿರುವ (Road Accident) ಘಟನೆ ತೆಲಂಗಾಣದಲ್ಲಿ ನಡೆದಿದ್ದು, ಪ್ರಕರಣ ಸಂಬಂದ ಆಂಧ್ರ ಪ್ರದೇಶ ಸಂಸದನ ಪುತ್ರನ ವಿರುದ್ಧ ಹಿಟ್ ಅಂಡ್ ರನ್ ಕೇಸ್ ದಾಖಲಾಗಿದೆ. ಆಂಧ್ರಪ್ರದೇಶದ ರಾಜ್ಯಸಭಾ ಸಂಸದ ಮತ್ತು ಜನ ಸೇನಾ ಪಕ್ಷದ ನಾಯಕ ಲಿಂಗಮನೇನಿ ರಮೇಶ್ ಅವರ ಪುತ್ರ 21 ವರ್ಷದ ಲಿಂಗಮನೇನಿ ಸಂಜೂಷ್ ಈ ಪ್ರಕರಣದ ಆರೋಪಿ ಎಂದು ಪೊಲೀಸರು ಗುರುತಿಸಿದ್ದಾರೆ.
ಆಗಸ್ಟ್ 16ರಂದು ಹೈದರಾಬಾದ್‌ನ ಮಾಧಾಪುರದಲ್ಲಿರುವ ಇನಾರ್ಬಿಟ್ ಮಾಲ್ ಹೊರಭಾಗದಲ್ಲಿ ಈ ಭೀಕರ ಅಪಘಾತ ಸಂಭವಿಸಿತ್ತು. ಮೃತ ಯುವತಿಯನ್ನು ಭಾರತಿ ಮುಖಿ ಎಂದು ಗುರುತಿಸಲಾಗಿದೆ. ಅವರು ಇನಾರ್ಬಿಟ್ ಮಾಲ್‌ನಲ್ಲಿರುವ ಲೈಫ್‌ಸ್ಟೈಲ್ ಮಳಿಗೆಯಲ್ಲಿ ಸೇಲ್ಸ್ ಅಸೋಸಿಯೇಟ್ ಆಗಿ ಕೆಲಸ ಮಾಡುತ್ತಿದ್ದರು. ಅಪಘಾತಕ್ಕೆ ಸಂಬಂಧಿಸಿದಂತೆ ಸಂಜುಷ್‌ಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ವಿಡಿಯೋ ನೋಡಿ
ಕೆಲವು ದಿನಗಳ ನಂತರ ಅಪಘಾತವಾದ ವಿಡಿಯೋ ಬೆಳಕಿಗೆ ಬಂದಿದೆ. ಮೃತ ಯುವತಿಯ ಸಹೋದ್ಯೋಗಿಯೊಬ್ಬಳು ರಕ್ತಸಿಕ್ತ ಭಾರತಿಯ ಪಕ್ಕದಲ್ಲಿ ಕೂತು ಅಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಭಾರತಿಯನ್ನು ಅದೇ ಕಾರಿನಲ್ಲಿ ಕೂರಿಸಿ ಆಸ್ಪತ್ರೆಗೆ ಸಾಗಿಸುವ ಮೊದಲು ಚಾಲಕ ಗಾಯಗೊಂಡ ಮಹಿಳೆಯ ಬಳಿಗೆ ಹೋಗುವುದನ್ನು ವೀಡಿಯೊ ತೋರಿಸುತ್ತದೆ. ಅವರನ್ನು ಜುಬಿಲಿ ಹಿಲ್ಸ್‌ನ ಅಪೋಲೋ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವರು ಅಲ್ಲಿಗೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ.
ಮೂಲಗಳ ಪ್ರಕಾರ ಆಗಸ್ಟ್ 16ರಂದು ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ ಭಾರತಿ ತಮ್ಮ ಸಹೋದ್ಯೋಗಿ ಪೂಜಾ ಅಶೋಕ್ ಅವರೊಂದಿಗೆ ITC ಕೊಹೆನೂರ್ ಪ್ರದೇಶಕ್ಕೆ ಊಟ ತರಲು ತೆರಳಿದ್ದರು. ಊಟ ಪಡೆದುಕೊಂಡು ಇನಾರ್ಬಿಟ್ ಮಾಲ್‌ಗೆ ವಾಪಸ್ ಬರುತ್ತಿದ್ದ ವೇಳೆ ಭಾರತಿ ರಸ್ತೆ ದಾಟಲು ಮುಂದಾಗಿದ್ದರು. ಈ ವೇಳೆ ಕಾರು ಡಿಕ್ಕಿಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ತನಿಖೆ ನಡೆಸಿದ ಪೊಲೀಸರು ಆಸ್ಟನ್ ಮಾರ್ಟಿನ್ ಕಾರಿನ ಚಾಲಕನನ್ನು ಲಿಂಗಮನೇನಿ ಸಂಜುಷ್ ಎಂದು ಗುರುತಿಸಿ, ಭಾರತೀಯ ನ್ಯಾಯ ಸಂಹಿತೆ (BNS)ಯ ಸೆಕ್ಷನ್ 106(1) ಅಡಿಯಲ್ಲಿ ಅಜಾಗರೂಕ ಅಥವಾ ನಿರ್ಲಕ್ಷ್ಯದ ಕೃತ್ಯದಿಂದ ಸಾವು ಸಂಭವಿಸಿದ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ.
ಸದ್ಯ ಆರೋಪಿಗೆ ನೋಟೀಸ್ ಜಾರಿ ಮಾಡಲಾಗಿದ್ದು, ಇನ್ನೂ ಬಂಧನವಾಗಿಲ್ಲ. ಅಪಘಾತಕ್ಕೆ ಕಾರಣವಾದ ಆಸ್ಟನ್ ಮಾರ್ಟಿನ್ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಂಜುಷ್‌ಗೆ ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ದಾರೆಯೇ ಎಂಬುದನ್ನು ಪರಿಶೀಲಿಸಲು ಡ್ರಂಕ್ ಡ್ರೈವಿಂಗ್ ಪರೀಕ್ಷೆ ನಡೆಸಲಾಗಿದೆ. ಮಾದಕ ವಸ್ತು ಸೇವನೆ ಕುರಿತ ಪರೀಕ್ಷೆಯನ್ನೂ ನಡೆಸಲಾಗಿದೆ. ಇದಲ್ಲದೆ, ಸಂಜುಷ್ ಅವರ ರಕ್ತದ ಮಾದರಿಗಳನ್ನು ಸಂಗ್ರಹಿಸಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಗಿದೆ.