ಗಾಂಧಿನಗರ: ಘೋರ ದುರಂತದ ನಡುವೆಯೂ ಪವಾಡವೊಂದು ನಡೆದುಹೋಗಿದೆ. ಗುಜರಾತ್‌ನ ಅಹಮದಾಬಾದ್ ಏರ್‌ಪೋರ್ಟ್‌ನಿಂದ 242 ಮಂದಿಯನ್ನು ಹೊತ್ತು ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನವಾಗಿದೆ (Ahmedabad Plane Crash). ಈ ವಿಮಾನದಲ್ಲಿ 230 ಮಂದಿ ಪ್ರಯಾಣಿಕರು ಮತ್ತು 12 ಮಂದಿ ಸಿಬ್ಬಂದಿ ಇದ್ದರು. ಈ ಪೈಕಿ 241 ಮಂದಿ ಮೃತಪಟ್ಟಿದ್ದು, ಓರ್ವ ಪ್ರಯಾಣಿಕ ಪವಾಡದ ರೀತಿಯಲ್ಲಿ ಬದುಕುಳಿದಿದ್ದಾರೆ. ಸಣ್ಣ ಪುಟ್ಟ ಗಾಯದೊಂದಿಗೆ ಬದುಕುಳಿದ ಪ್ರಯಾಣಿಕನ್ನು 38 ವರ್ಷದ ರಮೇಶ್ ವಿಶ್ವಕುಮಾರ್ ಎಂದು ಗುರುತಿಸಲಾಗಿದೆ.
ಸದ್ಯ ರಮೇಶ್‌ನನ್ನು ಅಹಮದಾಬಾದ್‌ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆತ ಘಟನೆಯನ್ನು ವಿವರಿಸುತ್ತ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ವಿಡಿಯೊ ವೈರಲ್ ಆಗಿದೆ.
ಈ ಸುದ್ದಿಯನ್ನೂ ಓದಿ: Ahmedabad Plane Crash: ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮಂಗಳೂರಿನ ಸಹ ಪೈಲಟ್ ಕ್ಲೈವ್ ಕುಂದರ್ ಸಾವು
ಪಾರಾಗಿದ್ದು ಹೇಗೆ?
ಸಾವನ್ನೇ ಗೆದ್ದ ಮೃತ್ಯುಂಜಯ ರಮೇಶ್ ಬಗ್ಗೆ ಇದೀಗ ಇಡೀ ದೇಶವೇ ಮಾತನಾಡಿಕೊಳ್ಳುತ್ತಿದೆ. ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನ ಎಐ 171ರ ಸೀಟ್ ನಂ. 11ಎಯಲ್ಲಿದ್ದ ರಮೇಶ್ ತುರ್ತು ನಿರ್ಗಮನ ದ್ವಾರದಿಂದ ಜಿಗಿದು ಪಾರಾಗಿದ್ದಾರೆ. ಈ ಬಗ್ಗೆ ಅಹಮದಾಬಾದ್‌ನ ಕಮಿಷನರ್ ಜಿ.ಎಸ್.ಮಲಿಕ್ ಮಾಹಿತಿ ನೀಡಿ, ʼʼವಿಮಾನ ದುರಂತದಲ್ಲಿ ಓರ್ವ ಬದುಕುಳಿದಿದ್ದಾರೆ. ಅವರನ್ನು 11ಎ ಸೀಟ್‌ನ ಪ್ರಯಾಣಿಕ ರಮೇಶ್ ವಿಶ್ವಕುಮಾರ್ ಎಂದು ಗುರುತಿಸಲಾಗಿದೆ. ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ವಸತಿ ಪ್ರದೇಶದಲ್ಲಿ ವಿಮಾನ ಪತನವಾಗಿದ್ದರಿಂದ ಸಾವಿನ ಸಂಖ್ಯೆ ಹೆಚ್ಚಾಗಿದೆʼʼ ಎಂದು ತಿಳಿಸಿದ್ದಾರೆ.
ರಮೇಶ್ ಹೇಳಿದ್ದೇನು?
“ವಿಮಾನ ಟೇಕ್‌ಆಫ್ ಆದ 30 ಸೆಕೆಂಡುಗಳ ನಂತರ ದೊಡ್ಡ ಶಬ್ದವಾಯಿತು ಮತ್ತು ನಂತರ ವಿಮಾನ ಅಪಘಾತಕ್ಕೀಡಾಯಿತು. ಇದೆಲ್ಲವೂ ಕ್ಷಣಮಾತ್ರದಲ್ಲಿ ಸಂಭವಿಸಿತು. ಏನಾಯಿತೆಂದು ಅರ್ಥ ಮಾಡಿಕೊಳ್ಳುವಷ್ಟರಲ್ಲಿ ನನ್ನ ಸುತ್ತಲೂ ಶವಗಳಿದ್ದವು. ನಾನು ಧೈರ್ಯ ಮಾಡಿ ಹೊರಗೆ ಹಾರಿದೆ” ಎಂದು ರಮೇಶ್ ಹೇಳಿದ್ದಾರೆ.
1 ಕೋಟಿ ರೂ. ಪರಿಹಾರ ಘೋಷಣೆ
ಈ ಮಧ್ಯೆ ಟಾಟಾ ಗ್ರೂಪ್ ಮೃತರ ಕುಟುಂಬಕ್ಕೆ ತಲಾ 1 ಕೋಟಿ ರೂ. ಪರಿಹಾರ ಘೋಷಿಸಿದೆ. ದುರಂತ ನಡೆದ ಸ್ಥಳಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ದಿಲ್ಲಿಯಿಂದ ಅಹಮದಾಬಾದ್ಗೆ ಹೊರಟಿದ್ದ ಅಮಿತ್ ಶಾ ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಗುಜರಾತ್ ಸಿಎಂ ಭೂಪೇಂದ್ರ ಪಟೇಲ್, ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಕಿಂಜರಾಪು, ನಾಗರಿಕ ವಿಮಾನಯಾನ ಸಚಿವ ಮುರಳೀಧರ್ ಮೊಹೋಲ್ ಮತ್ತು ಗುಜರಾತ್ ಗೃಹ ಸಚಿವ ಹರ್ಷ ಸಂಘವಿ ಕೂಡ ಇದ್ದರು.
ಈ ವಿಮಾನದಲ್ಲಿ 169 ಭಾರತೀಯರು, 53 ಬ್ರಿಟಿಷ್ ಪ್ರಜೆಗಳು, 7 ಪೋರ್ಚುಗೀಸರು ಮತ್ತು ಒಬ್ಬ ಕೆನಡಾದ ಪ್ರಯಾಣಿಕ ಇದ್ದರು. ಅಹಮದಾಬಾದ್‌ನ ಮೇಘನಿನಗರದ ಮೆಡಿಕಲ್ ಕಾಲೇಜಿನ ಹಾಸ್ಟೆಲ್‌ಗೆ ಅಪ್ಪಳಿಸಿದೆ. ಈ ವೇಳೆ ಹಸ್ಟೆಲ್‌ನಲ್ಲಿ 15 ವಿದ್ಯಾರ್ಥಿಗಳೂ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸದ್ಯ ಅಪಘಾತದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆ ಪ್ರದೇಶದಲ್ಲಿ ದಟ್ಟ ಹೊಗೆ ಮೇಲೇಳುತ್ತರುವುದು ಕಂಡು ಬಂದಿದೆ. ಮೃತರಲ್ಲಿ ಪತ್ನಿಯನ್ನು ಭೇಟಿಯಾಗಲು ಲಂಡನ್‌ಗೆ ಹೊರಟಿದ್ದ ಗುಜರಾತ್‌ನ ಬಿಜೆಪಿ ನಾಯಕ, ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಸೇರಿದ್ದಾರೆ.