ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕೋಲ್ಕತಾ ದುರ್ಗಾ ಪೆಂಡಾಲ್‌ನಲ್ಲಿ ಕಾಲ್ತುಳಿತ ಸಂಭವಿಸಿದ್ದು ಹೇಗೆ? ದುರಂತದ ಕ್ಷಣ ವಿಡಿಯೊದಲ್ಲಿ ಸೆರೆ

Kolkata Durga Puja Stampede: ಪಶ್ಚಿಮ ಬಂಗಾಳದ ಉತ್ತರ ಕೋಲ್ಕತಾದಲ್ಲಿ ಶನಿವಾರ ಸಂಜೆ ದುರ್ಗಾ ಪೂಜೆ ವೇಳೆ ಪೆಂಡಾಲ್‌ ಕುಸಿದು ಬಳಿಕ ಉಂಟಾದ ಕಾಲ್ತುಳಿತದಲ್ಲಿ 19 ಮಂದಿ ಮೃತಪಟ್ಟಿದ್ದು, ಕನಿಷ್ಠ 23 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಭೀಕರ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಕೋಲ್ಕತಾ ಕಾಲ್ತುಳಿತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು

ಕೋಲ್ಕತಾ, ಅ. 18: ನವರಾತ್ರಿಯ ಸಂಭ್ರಮದಲ್ಲಿದ್ದ ಪಶ್ಚಿಮ ಬಂಗಾಳದ ಕೋಲ್ಕತಾ ಇದೀಗ ಶನಿವಾರ (ಅಕ್ಟೋಬರ್‌ 17) ಸಂಭವಿಸಿದ ಭೀಕರ ಕಾಲ್ತುಳಿತದ ಆಘಾತದಲ್ಲಿದೆ. ಉತ್ತರ ಕೋಲ್ಕತಾದಲ್ಲಿ ಶನಿವಾರ ಸಂಜೆ ದುರ್ಗಾ ಪೂಜೆ ವೇಳೆ ಪೆಂಡಾಲ್‌ ಕುಸಿದು ಬಳಿಕ ಉಂಟಾದ ಕಾಲ್ತುಳಿತದಲ್ಲಿ 19 ಮಂದಿ ಮೃತಪಟ್ಟಿದ್ದು, ಕನಿಷ್ಠ 23 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ (Kolkata Durga Puja Stampede). ದೇಶವನ್ನೇ ನಡುಗಿಸಿದ ಈ ಭೀಕರ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಕೋಲ್ಕತಾದ ಚೋರ್ಬಾಗನ್‌ ದುರ್ಗಾ ಪೆಂಡಾಲ್‌ನಲ್ಲಿ ಈ ಅವಘಡ ನಡೆದಿದೆ. ಮಳೆ ಆರಂಭವಾಗುತ್ತಿದ್ದಂತೆ ಜನರು ಏಕಾಏಕಿ ನುಗ್ಗಿದ್ದರಿಂದ ಪೆಂಡಾಲ್‌ ಕುಸಿದಿದೆ. ಈ ವೇಳೆ ಕೆಲವರು ಕುಸಿದು ಬಿದ್ದು ಕಾಲ್ತುಳಿತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸ್ಥಳದಲ್ಲಿ ಸಾಕಷ್ಟು ಬೆಳಕಿನ ವ್ಯವಸ್ಥೆಯೂ ಇರಲಿಲ್ಲ ಎಂದು ಮೂಲಗಳು ತಿಳಿಸಿವೆ. ಇದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು.

ಎನ್‌ಡಿಟಿವಿ ಹಂಚಿಕೊಂಡ ವೈರಲ್‌ ವಿಡಿಯೊ ಇಲ್ಲಿದೆ:



ವಿಡಿಯೊದಲ್ಲಿ ಏನಿದೆ?

ವೈರಲ್‌ ಆಗಿರುವ 49 ಸೆಕೆಂಡ್‌ನ ಈ ವಿಡಿಯೊ ಕಾಲ್ತುಳಿತ ದುರಂತದ ಭೀಕರತೆಯನ್ನು ತೆರೆದಿಟ್ಟಿದೆ. ಜನಸಂದಣಿಯಲ್ಲಿದ್ದ ವ್ಯಕ್ತಿಯೊಬ್ಬರು ಮೊಬೈಲ್‌ ಫೋನ್‌ನಲ್ಲಿ ಈ ದೃಶ್ಯ ಸೆರೆ ಹಿಡಿದಿದ್ದಾರೆ. ಬ್ಯಾರಿಕೇಡ್‌ ಅಳವಡಿಸಿರುವ, ಕಿರಿದಾದ ದ್ವಾರದ ಬಳಿ ಹಲವು ಮಂದಿ ಸಿಲುಕಿಕೊಂಡಿರುವುದು ಕಂಡು ಬಂದಿದೆ. ಈ ವೇಳೆ ಮಹಿಳೆ ಮತ್ತು ಮಗುವೊಂದು ಸಹಾಯಕ್ಕಾಗಿ ಅಳುತ್ತಿರುವುದು ವಿಡಿಯೊದಲ್ಲಿದೆ.

ಕಂದನನ್ನು ರಕ್ಷಿಸಿ ಪ್ರಾಣ ಬಿಟ್ಟ ತಾಯಿ: ಮನ ಕಲಕುವಂತಿದೆ ಕೋಲ್ಕತ್ತಾ ಕಾಲ್ತುಳಿದ ಒಂದೊಂದು ಘಟನೆ

ಅಗಲ ಕಿರಿದಾದ ಸ್ಥಳದಲ್ಲಿ ಜನರು ಹೊರಬರಲಾರದೆ ಹೆಣಗಾಡುತ್ತಿರುವುದು ದೃಶ್ಯದಲ್ಲಿ ಕಾಣಬಹುದು. ಕೆಲವರು ಬೀಳದಂತೆ ಗೋಡೆಯನ್ನು ತಡೆಹಿಡಿಯುತ್ತಿರುವುದು ಕಂಡುಬಂದಿದೆ. ಮತ್ತೊಂದು ವಿಡಿಯೊದಲ್ಲಿ ಪೆಂಡಾಲ್‌ನಿಂದ ಜನರು ಹೊರ ಬರುತ್ತಿರುವುದನ್ನು ನೋಡಬಹುದು. ಸಂಜೆ ಸುಮಾರು 7:40ಕ್ಕೆ ಈ ದುರಂತ ಸಂಭವಿಸಿದ್ದು, ಆ ವೇಳೆ ಅಲ್ಲಿ ಜೋರಾಗಿ ಮಳೆ ಸುರಿಯುತ್ತಿತ್ತು ಎಂದು ಸ್ಥಳೀಯರು ಹೇಳಿದ್ದಾರೆ. ಮೃತರಲ್ಲಿ 13 ಮಹಿಳೆಯರು ಮತ್ತು ಓರ್ವ ಮಗು ಸೇರಿದೆ.

ಅನೌನ್ಸ್‌ಮೆಂಟ್‌ ಜೀವಗಳನ್ನೇ ಬಲಿ ಪಡೆಯಿತಾ?

ಈ ಮಧ್ಯೆ ಮುನ್ನೆಚ್ಚರಿಕೆಯ ಕ್ರಮವಾಗಿ ಆಯೋಜಕರು ಮಾಡಿದ ಅನೌನ್ಸ್‌ಮೆಂಟ್‌ ಜೀವಗಳನ್ನು ಬಲಿ ಪಡೆಯಿತಾ ಎನ್ನುವ ಅನುಮಾನವೂ ಮೂಡಿದೆ. ಪೆಂಡಾಲ್‌ ಕುಸಿಯುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದರಿಂದ ಒಮ್ಮೆಲೇ ಭಕ್ತರು ಹೊರಗೋಡಲು ನುಗ್ಗಿದರು ಎನ್ನಲಾಗಿದೆ. ಇನ್ನು ಜನಸಂದಣಿಯನ್ನು ಸೂಕ್ತವಾಗಿ ನಿಯಂತ್ರಿಸಲು ಸಮರ್ಪಕ ವ್ಯವಸ್ಥೆ ಇರಲಿಲ್ಲ ಎಂದೂ ಪೊಲೀಸರು ತಿಳಿಸಿದ್ದಾರೆ. ಅಲ್ಲದೆ ನಿರ್ಗಮನ ದ್ವಾರ ಅಗಲ ಕಿರಿದಾಗಿದ್ದಲ್ಲದೆ ಸೂಕ್ತ ಬೆಳಕಿನ ವ್ಯವಸ್ಥೆಯ ಕೊರತೆಯೂ ದುರಂತ ಕಾರಣವಾಯ್ತು ಎಂದು ಮೂಲಗಳು ಹೇಳಿವೆ. ʼʼಪೆಂಡಾಲ್‌ ಕುಸಿಯುವ ಸಾಧ್ಯತೆ ಇದೆ ಎಂದು ಮಾಡಿದ ಅನೌನ್ಸ್‌ಮೆಂಟ್‌ ಭಕ್ತರಲ್ಲಿ ಭಯ ಮೂಡಿಸಿತು. ಹೀಗಾಗಿ ಒಮ್ಮೆಲೇ ಹೊರಗೋಡಲು ಮುಂದಾದರುʼʼ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕೋಲ್ಕತ್ತಾ ಕಾಲ್ತುಳಿತ ಪ್ರಕರಣ; ಸಾವಿನ ಸಂಖ್ಯೆ 19ಕ್ಕೆ ಏರಿಕೆ, 7 ಮಂದಿ ಬಂಧನ

7 ಮಂದಿ ವಶಕ್ಕೆ

ಘಟನೆಗೆ ಸಂಬಂಧಿಸಿದಂತೆ, ಚೋರ್ಬಾಗನ್‌ ಸರ್ವಜನಿಕ ದುರ್ಗೋತ್ಸವ ಸಮಿತಿಯ ಪದಾಧಿಕಾರಿಗಳು ಸೇರಿ ಏಳು ಮಂದಿಯನ್ನು ಬಂಧಿಸಲಾಗಿದೆ. ಬಂಧಿತರ ಪೈಕಿ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿನ ಆಯೋಜನಾ ಸಮಿತಿ, ನಿರ್ಮಾಣ ಕಾರ್ಯ, ಜನಸಂದಣಿ ನಿಯಂತ್ರಣ ಮತ್ತು ಭದ್ರತಾ ವ್ಯವಸ್ಥೆಗಳಿಗೆ ಸಂಬಂಧಿಸಿದ ವ್ಯಕ್ತಿಗಳು ಸೇರಿದ್ದಾರೆ.

ದೇಶದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author