ಕಂದನನ್ನು ರಕ್ಷಿಸಿ ಪ್ರಾಣ ಬಿಟ್ಟ ತಾಯಿ: ಮನ ಕಲಕುವಂತಿದೆ ಕೋಲ್ಕತ್ತಾ ಕಾಲ್ತುಳಿದ ಒಂದೊಂದು ಘಟನೆ
ಮೂರು ವರ್ಷದ ತನ್ನ ಮಗುವನ್ನು ರಕ್ಷಿಸಲು ತಾಯಿಯೊಬ್ಬಳು ತನ್ನ ಪ್ರಾಣವನ್ನೇ ಕಳೆದುಕೊಂಡ ಘಟನೆ ಪಶ್ಚಿಮ ಬಂಗಾಳದ ಉತ್ತರ ಕೋಲ್ಕತಾದ ಪ್ರಸಿದ್ಧ ದುರ್ಗಾ ಪೆಂಡಾಲ್ ಶನಿವಾರ ನಡೆದಿದೆ. ಇದನ್ನು ನೋಡಿದ ಅಪರಿಚಿತ ಟ್ಯಾಕ್ಸಿ ಚಾಲಕ ಮಗುವನ್ನು ಎತ್ತಿಕೊಂಡು ಆಸ್ಪತ್ರೆಗೆ ಹೋಗಿ ಮಗುವಿನ ತಂದೆ ಬರುವವರೆಗೆ ಅಲ್ಲೇ ಕಣ್ಣೀರು ಹಾಕಿಕೊಂಡು ಕುಳಿತಿದ್ದದ್ದು ಎಲ್ಲರ ಮನಕಲಕುವಂತಿತ್ತು.
ಸಂಗ್ರಹ ಚಿತ್ರ -
ಕೋಲ್ಕತ್ತಾ: ಉತ್ತರ ಕೋಲ್ಕತಾದ (north kolkata) ಚೋರ್ ಬಗಾನ್ ದುರ್ಗಾ ಪೂಜಾ ಪೆಂಡಾಲ್ನಲ್ಲಿ (Chorbagan Durga Puja stampede) ಶನಿವಾರ ಸಂಜೆ ಭಾರಿ ಮಳೆಯಿಂದ ಉಂಟಾದ ಅವ್ಯವಸ್ಥೆಯಿಂದಾಗಿ ಉಂಟಾದ ಕಾಲ್ತುಳಿತದ (stampede) ವೇಳೆ ಮಹಿಳೆಯೊಬ್ಬರು ತನ್ನ ಮೂರು ವರ್ಷದ ಮಗುವನ್ನು ರಕ್ಷಿಸಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇದನ್ನು ನೋಡಿದ ಅಪರಿಚಿತ ಟ್ಯಾಕ್ಸಿ ಚಾಲಕ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮಗುವನ್ನು ಎತ್ತಿಕೊಂಡು ಹೋಗಿ ತುರ್ತು ಚಿಕಿತ್ಸೆ ಕೊಡಿಸಿದರು. ಈ ಹೃದಯ ವಿದ್ರಾವಕ ಘಟನೆ ಅಲ್ಲಿದ್ದವರ ಕಣ್ಣಾಲಿಗಳು ತುಂಬುವಂತೆ ಮಾಡಿತ್ತು.
ಉತ್ತರ ಕೋಲ್ಕತ್ತಾದ ಗಿರೀಶ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯ ಶಾರದಾ ಪಾರ್ಕ್ನ ಚೋರ್ ಬಗಾನ್ ದುರ್ಗಾ ಪೆಂಡಾಲ್ನಲ್ಲಿ ಶನಿವಾರ ಸಂಜೆ ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದರು. ಈ ವೇಳೆ ಮಳೆ ಸುರಿದು ಇದ್ದಕ್ಕಿದ್ದಂತೆ ಪೆಂಡಾಲ್ ಕುಸಿದು ಬಿದ್ದಿದೆ. ಈ ವೇಳೆ ಪೆಂಡಾಲ್ ನ ಒಳಗಿದ್ದವರು ಕಿರಿದಾದ ಬಾಗಿಲಿನ ಮೂಲಕ ಹೊರಗೋಡಲು ನುಗ್ಗಿದ್ದರಿಂದ ಕಾಲ್ತುಳಿತ ಉಂಟಾಗಿದೆ.
ಕೋಲ್ಕತ್ತಾ ಕಾಲ್ತುಳಿತ ಪ್ರಕರಣ; ಸಾವಿನ ಸಂಖ್ಯೆ 19ಕ್ಕೆ ಏರಿಕೆ, 7 ಮಂದಿ ಬಂಧನ
ಒಟ್ಟು 19 ಮಂದಿಯನ್ನು ಬಲಿ ತೆಗೆದುಕೊಂಡಿರುವ ಈ ಕಾಲ್ತುಳಿತ ಪ್ರಕರಣದ ನರಕಸದೃಶವಾದ ದೃಶ್ಯದ ನಡುವೆಯೂ ಮಾನವೀಯತೆಯನ್ನು ಸಾರುವ ಒಂದೊಂದು ಕಥೆಗಳು ಮನ ಕಲಕುವಂತಿದೆ. ಕಾಲ್ತುಳಿತದ ವೇಳೆ ಜನರು ಒಬ್ಬರ ಮೇಲೆ ಒಬ್ಬರು ಬೀಳುತ್ತಿದ್ದರೆ ತಾಯಿಯೊಬ್ಬಳು ತನ್ನ ಪ್ರಾಣವನ್ನು ಪ್ರಾಣಕ್ಕಿಟ್ಟು ಮಗುವನ್ನು ರಕ್ಷಿಸಿದಳು. ಮೂರು ವರ್ಷದ ಈ ಮಗುವನ್ನು ರಕ್ಷಿಸಲು ಟ್ಯಾಕ್ಸಿ ಚಾಲಕನೊಬ್ಬ ಆಸ್ಪತ್ರೆಯನ್ನು ಹುಡುಕಿಕೊಂಡು ಕಿಲೋ ಮೀಟರ್ಗಟ್ಟಲೆ ಓಡಿ ಹೋಗಿ ನಿಜವಾದ ಹೀರೋ ಎನಿಸಿಕೊಂಡಿದ್ದಾನೆ.
ಏನಾಯಿತು?
ಹೊರಗೆ ಧಾರಾಕಾರವಾಗಿ ಮಳೆ ಸುರಿದಾಗ ಪೆಂಡಾಲ್ ಕುಸಿಯಲಾರಂಭಿಸಿದ್ದು, ಪೆಂಡಾಲ್ ನಲ್ಲಿದ್ದ ಸಾವಿರಾರು ಜನರು ಕಿರಿದಾದ ದ್ವಾರದ ಮೂಲಕ ಹೊರಗೆ ಓಡ ತೊಡಗಿದರು. ಇದರಿಂದ ಕಾಲ್ತುಳಿತ ಉಂಟಾಗಿದೆ. ಸುಚಿತ್ರಾ ದಾಸ್ (28) ಎಂಬವರು ತಮ್ಮ ಮೂರು ವರ್ಷದ ಮಗ ಆಯುಷ್ನೊಂದಿಗೆ ಇದರಲ್ಲಿ ಸಿಕ್ಕಿಕೊಂಡರು. ಸುಚಿತ್ರಾ ಅವರು ಕೆಳಗೆ ಬಿದ್ದಿದ್ದು, ತನ್ನ ಮಗುವನ್ನು ರಕ್ಷಿಸುವ ಸಲುವಾಗಿ ಅವರು ಮಗುವಿನ ಮೇಲೆ ಯಾರೂ ಕಾಲಿಡದಂತೆ ಎದೆಗಪ್ಪಿಕೊಂಡು ಅಡ್ಡಲಾಗಿ ಮಲಗಿದರು. ಜನಸಂದಣಿ ಕಡಿಮೆಯಾದಾಗ ಸುಚಿತ್ರಾ ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆದರೆ ಅವರ ಮಗ ಪವಾಡಸದೃಶವಾಗಿ ಅಪಾಯದಿಂದ ಪಾರಾಗಿದ್ದಾನೆ.
ಮಗು ಅಳುತ್ತಿರುವ ಸದ್ದು ಕೇಳಿ ಟ್ಯಾಕ್ಸಿ ಚಾಲಕ ಬಿಪ್ಲಬ್ ಮುಖರ್ಜಿ ಅಲ್ಲಿಗೆ ಬಂದಾಗ ಉಸಿರಾಟದ ತೊಂದರೆಯಿಂದ ಮಗು ಬಳಲುತ್ತಿರುವುದನ್ನು ನೋಡಿ ತಕ್ಷಣ ತಾಯಿಯನ್ನು ಅಲ್ಲೇ ಬಿಟ್ಟು ಮಗುವನ್ನು ಎತ್ತಿಕೊಂಡು ಆಸ್ಪತ್ರೆಯತ್ತ ಧಾವಿಸ ತೊಡಗಿದರು.
ಮಳೆಯಿಂದಾಗಿ ರಸ್ತೆಯುದ್ದಕ್ಕೂ ಅವಶೇಷಗಳು ಬಿದ್ದಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ಹೀಗಾಗಿ ಅವರು ಟ್ಯಾಕ್ಸಿಯನ್ನು ಬಿಟ್ಟು ಮುಕ್ತಾರಾಮ್ ಬಾಬು ರಸ್ತೆಯ ಕಿರಿದಾದ ದಾರಿಯಲ್ಲಿ ಸುಮಾರು ಒಂದೂವರೆ ಕಿಲೋ ಮೀಟರ್ ದೂರ ಬಂದು ಮಗುವನ್ನು ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸೇರಿಸಿದರು. ಪ್ರಜ್ಞೆ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದ ಮಗುವಿಗೆ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಲಾಯಿತು. ಮಗುವಿನ ತಂದೆ ಬರುವವರೆಗೂ ಬಿಪ್ಲಬ್ ಅವರು ಆಸ್ಪತ್ರೆಯಲ್ಲಿ ಕಣ್ಣೀರು ಹಾಕುತ್ತಾ ಕುಳಿತಿದ್ದರು.
ತಾನು ನೋಡಿದ ಹೃದಯ ವಿದ್ರಾವಕ ಸಂಗತಿಯನ್ನು ಬಿಪ್ಲಬ್ ಮುಖರ್ಜಿ ಅವರು ಹೇಳುವುದು ಹೀಗೆ.. ಮೂರು ವರ್ಷದ ಪುಟ್ಟ ಮಗು ರಕ್ತಸಿಕ್ತವಾದ ತನ್ನ ಕೈಗಳಿಂದ ಅಮ್ಮನನ್ನು ಎಬ್ಬಿಸಲು ಪ್ರಯತ್ನಿಸುತ್ತಿತ್ತು. ಅದು ನನ್ನ ಹೃದಯವನ್ನು ಕಲಕ್ಕಿತ್ತು. ನನಗೂ ಇಬ್ಬರು ಮಕ್ಕಳಿದ್ದಾರೆ. ಹೇಗಾದರೂ ಮಾಡಿ ಆ ಮುಗ್ಧ ಜೀವ ಉಳಿಸಬೇಕೆಂಬ ಆಲೋಚನೆಯಿಂದ ಮಗುವನ್ನು ಎತ್ತಿಕೊಂಡು ಬಂದೆ. ಅದರ ತಾಯಿ ಬದುಕಿನ ಕೊನೆಯ ಕ್ಷಣದವರೆಗೂ ಮಗು ಪ್ರಾಣ ರಕ್ಷಣೆಗಾಗಿ ಹೋರಾಡಿದ್ದಳು. ಅವಳ ತ್ಯಾಗ ವ್ಯರ್ಥವಾಗಬಾರದು ಎನ್ನುವುದೇ ನನ್ನ ಮನದಲ್ಲಿ ಬಂದಿತ್ತು ಎಂದು ಹೇಳಿ ಗದ್ಗದಿತರಾದರು.