ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸುವೇಂದು ಅಧಿಕಾರಿ ಆಪ್ತ ಚಂದ್ರನಾಥ ರಥ್‌ ಹತ್ಯೆಗೆ ಮುನ್ನ ಆಗಿದ್ದೇನು? ಕಾರ್‌ ಚೇಸ್‌ ಮಾಡಿದ ಬೈಕ್‌ ಸಿಸಿ ಕ್ಯಾಮರಾದಲ್ಲಿ ಸೆರೆ

Chandranath Rath: ಪಶ್ಚಿಮ ಬಂಗಾಳದ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ ರಥ್‌ ಅವರ ಹತ್ಯೆ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ರಥ್‌ ಅವರ ಕಾರನ್ನು ಇಬ್ಬರು ಬೈಕ್‌ನಲ್ಲಿ ಹಿಂಬಾಲಿಸುತ್ತಿರುವ ಸಿಸಿಟಿವಿ ದೃಶ್ಯ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಚಂದ್ರನಾಥ ರಥ್‌ ಅವರ ಕಾರು ಮತ್ತು ಚಂದ್ರನಾಥ ರಥ್‌

ಕೋಲ್ಕತ್ತಾ, ಮೇ 7: ಪಶ್ಚಿಮ ಬಂಗಾಳದಲ್ಲಿನ ಸ್ಥಿತಿ ಮತ್ತೊಮ್ಮೆ ಉದ್ವಿಗ್ನವಾಗಿದ್ದು, ಕೊತ ಕೊತ ಕುದಿಯುತ್ತಿದೆ. ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಹೀನಾಯವಾಗಿ ಸೋತ ಬಳಿಕ ಹಿಂಸಾಚಾರ ಭುಗಿಲೆದ್ದಿದ್ದು, ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವಿನ ಹಿಂಸಾಚಾರ ತಾರಕಕ್ಕೇರಿದೆ. ಬುಧವಾರ (ಮೇ 6) ರಾತ್ರಿ ಕೋಲ್ಕತ್ತಾದ ಹೊರವಲಯದಲ್ಲಿರುವ ಮಧ್ಯಮ ಗ್ರಾಮದಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಸುವೇಂದು ಅಧಿಕಾರಿ (Suvendu Adhikari) ಅವರ ಆಪ್ತ ಸಹಾಯಕ ಚಂದ್ರನಾಥ ರಥ್‌ (Chandranath Rath) ಅವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಕೊಲೆಗಾರ ಯಾರೆಂದು ಇನ್ನೂ ಪತ್ತೆಯಾಗಿಲ್ಲ. ರಥ್‌ ಅವರ ಕಾರನ್ನು ಇಬ್ಬರು ಬೈಕ್‌ನಲ್ಲಿ ಹಿಂಬಾಲಿಸುತ್ತಿರುವ ಸಿಸಿಟಿವಿ ದೃಶ್ಯ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ ಬೈಕ್‌ನಲ್ಲಿ ಆಗಮಿಸಿದ ಇಬ್ಬರು ರಾತ್ರಿ 10.30ರ ಸುಮಾರಿಗೆ ಮಧ್ಯಮ ಗ್ರಾಮದ ದೋಲ್ತಾಲಾ ಬಳಿ ರಥ್‌ ಅವರ ವಾಹನವನ್ನು ಅಡ್ಡಗಟ್ಟಿ ಪಾಯಿಂಟ್-ಬ್ಲಾಂಕ್ ರೇಂಜ್‌ನಲ್ಲಿ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾದ ಇವರು ಕೊಲೆಗಾರರೆ ಎನ್ನುವುದನ್ನು ಪತ್ತೆ ಹಚ್ಚಲು ತನಿಖೆ ನಡೆಯುತ್ತಿದೆ.

ಸಿಸಿಟಿವಿ ಕ್ಯಾಮರಾ ದೃಶ್ಯ:



ಎಸ್​ಐಟಿ ರಚನೆ

ರಥ್‌ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಈ ಘಟನೆಯಲ್ಲಿ ಭಾಗಿಯಾಗಿರುವವರನ್ನು ಗುರುತಿಸಲು ಎಸ್​ಐಟಿ ರಚಿಸಲಾಗಿದೆ. ಈ ತಂಡಕ್ಕೆ ಇನ್ಸ್‌ಪೆಕ್ಟರ್ ಜನರಲ್ (ಐಜಿ) ಮಟ್ಟದ ಅಧಿಕಾರಿ ನೇತೃತ್ವ ವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಚಂದ್ರನಾಥ್ ರಥ್‌ ಅವರ ಮೃತದೇಹದ ಪರೀಕ್ಷೆ ಮಾಡಲಾಗಿದೆ. ಪ್ರಾಥಮಿಕ ಮರಣೋತ್ತರ ವರದಿಯಲ್ಲಿ ಅವರ ದೇಹದಲ್ಲಿ 3 ಗುಂಡೇಟಿನ ಗಾಯ ಪತ್ತೆಯಾಗಿದೆ. 7.6 ಬೋರ್ ಸೆಮಿ-ಆಟೋಮ್ಯಾಟಿಕ್ ಪಿಸ್ತೂಲ್‌ನಿಂದ ಗುಂಡು ಹಾರಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಗಾಯಗೊಂಡ ರಥ್‌ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಿದರೂ ಉಪಯೋಗವಾಗಿಲ್ಲ. ದಾರಿ ಮಧ್ಯೆಯೆ ಅವರು ಮೃತಪಟ್ಟಿದ್ದಾರೆ ಎಂದು ಮೂಲಗಳುಗಳು ತಿಳಿಸಿವೆ. ರಾಜಕೀಯ ದ್ವೇಷದಿಂದಲೇ ಈ ಘಟನೆ ನಡೆದಿದೆ ಎನ್ನಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪಶ್ಚಿಮ ಬಂಗಾಳದಲ್ಲಿ ಬೀಡು ಬಿಟ್ಟಿರುವ ಸಂದರ್ಭದಲ್ಲೇ ಈ ದಾಳಿ ನಡೆದಿರುವುದು ಆತಂಕ ಮೂಡಿಸಿದೆ.

ಸುವೇಂದು ಅಧಿಕಾರಿಯ ಆಪ್ತ ಸಹಾಯಕನ ಕೊಲೆಯಾಗಿದ್ದೇಗೆ?

ಯಾರು ಈ ಚಂದ್ರನಾಥ ರಥ್‌?

1984ರ ಆಗಸ್ಟ್ 11ರಂದು ಪುರ್ಬಾ ಮೇದಿನಿಪುರ ಜಿಲ್ಲೆಯ ಚಂಡಿಪುರದಲ್ಲಿ ಜನಿಸಿದ ಚಂದ್ರನಾಥ್ ರಥ್‌ 1990ರ ದಶಕದ ಅಂತ್ಯದಿಂದಲೂ ಸುವೇಂದು ಅಧಿಕಾರಿ ಅವರೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಆರಂಭದಲ್ಲಿ ರಥ್‌ ಮತ್ತು ಸುವೇಂದು ಅದಿಕಾರಿ ಇಬ್ಬರೂ ಟಿಎಂಸಿಯಲ್ಲಿದ್ದರು. ಅಧಿಕಾರಿ 2020ರ ಅಂತ್ಯದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ಚಂದ್ರನಾಥ ರಥ್‌ ಅವರ ತಾಯಿ ಹಸಿ ರಥ್ ಪಂಚಾಯತ್ ಸಮಿತಿಯ ಮುಖ್ಯ ಕಾರ್ಯನಿರ್ವಾಹಕರಾಗಿ ಸೇವೆ ಸಲ್ಲಿಸಿದ್ದರು ಮತ್ತು ಸುವೇಂದು ಅಧಿಕಾರಿ ಅವರೊಂದಿಗೆ ಬಿಜೆಪಿಗೆ ಸೇರಿದರು.

ರಾಮಕೃಷ್ಣ ಮಿಷನ್‌ನಲ್ಲಿ ಅಧ್ಯಯನ ಮಾಡಿದ ನಂತರ ಚಂದ್ರನಾಥ್ ಅಲ್ಪಾವಧಿ ಸೇವಾ ಆಯೋಗದ ಮೂಲಕ ಭಾರತೀಯ ವಾಯುಪಡೆಗೆ ಸೇರಿದ್ದರು. ಅವರು ಮೂಲತಃ ಸನ್ಯಾಸಿಯಾಗಲು ಬಯಸಿದ್ದರು, ನಂತರ ಅಂತಿಮವಾಗಿ ಭಾರತೀಯ ಸಶಸ್ತ್ರ ಪಡೆಗಳೊಂದಿಗೆ ವೃತ್ತಿ ಜೀವನವನ್ನು ಆರಿಸಿಕೊಂಡರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಅದಾದ ಬಳಿಕ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕನಾದರು.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author