ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸುವೇಂದು ಅಧಿಕಾರಿಯ ಆಪ್ತ ಸಹಾಯಕನ ಕೊಲೆಯಾಗಿದ್ದೇಗೆ? ಪೊಲೀಸರು ಹೇಳಿದ್ದೇನು?

Crime News: ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ್ ರಾತ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಇದೊಂದು ಪೂರ್ವನಿಯೋಜಿತ ಕೊಲೆ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ದಾಳಿಯ ಸಮಯದಲ್ಲಿ ಸುಮಾರು 10 ಸುತ್ತು ಗುಂಡು ಹಾರಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಚಂದ್ರನಾಥ ರಾತ್ ಕೊಲೆ ಪೂರ್ವನಿಯೋಜಿತ ಎಂದ ಪೊಲೀಸರು

'ಸುವೇಂದು ಅಧಿಕಾರಿಯ ಆಪ್ತ ಸಹಾಯಕನ ಕೊಲೆ ಪೂರ್ವನಿಯೋಜಿತ' -

Priyanka P
Priyanka P May 7, 2026 3:25 PM

ಕೋಲ್ಕತ್ತಾ, ಮೇ 7: ಬಿಜೆಪಿ ನಾಯಕ ಸುವೇಂದು ಅಧಿಕಾರಿ (Suvendu Adhikari) ಅವರ ಆಪ್ತ ಸಹಾಯಕ ಚಂದ್ರನಾಥ್ ರಾತ್ (Chandranath Rath) ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಇದೊಂದು ಪೂರ್ವನಿಯೋಜಿತ ಕೊಲೆ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ದಾಳಿಯ ಸಮಯದಲ್ಲಿ ಸುಮಾರು 10 ಸುತ್ತು ಗುಂಡು ಹಾರಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಸಂಬಂಧ ಮೂವರು ಸ್ಥಳೀಯರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಪ್ರಮುಖ ದಾಳಿಕೋರರು ತಲೆಮರೆಸಿಕೊಂಡಿದ್ದಾರೆ.

ಹಲವು ವರ್ಷಗಳಿಂದ ಅಧಿಕಾರಿಯೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದ ರಾತ್, ಬುಧವಾರ (ಮೇ 6) ರಾತ್ರಿ ಉತ್ತರ 24 ಪರಗಣ ಜಿಲ್ಲೆಯ ಮಧ್ಯಮಗ್ರಾಮದಲ್ಲಿ ದಾಳಿಗೆ ಒಳಗಾದರು. ಅವರ ಮೇಲೆ ಹಲವು ಗುಂಡೇಟುಗಳು ಬಿದ್ದಿದ್ದು, ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.

ಪೊಲೀಸ್ ಮೂಲಗಳ ಪ್ರಕಾರ, ದುಷ್ಕರ್ಮಿಗಳು ಮೊದಲೇ ಕಾರ್ಯನಿರತರಾಗಿದ್ದರು. ಕೊಲೆ ಮಾಡುವ ಬಗ್ಗೆ ವ್ಯಾಪಕ ಯೋಜನೆಯನ್ನು ರೂಪಿಸಿದ್ದರು. ದಾಳಿಕೋರರು ಮುಂಚಿತವಾಗಿ ಆ ಪ್ರದೇಶದಲ್ಲಿ ಪರಿಶೀಲನೆ ನಡೆಸಿ, ಹತ್ಯೆ ನಡೆಸುವ ಮೊದಲು ತಪ್ಪಿಸಿಕೊಳ್ಳುವ ಮಾರ್ಗವನ್ನು ಸಹ ರೂಪಿಸಿದ್ದರು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.

ಮಾಜಿ ಯೋಧನಿಂದ ಸುವೇಂದು ಅಧಿಕಾರಿಯ ಆಪ್ತ ಸಹಾಯಕನವರೆಗೆ: ಹತ್ಯೆಗೀಡಾದ ಚಂದ್ರನಾಥ ರಾತ್ ಯಾರು?

ಪೊಲೀಸರ ಆರಂಭಿಕ ತನಿಖೆಗಳ ಪ್ರಕಾರ, ರಾತ್ ಸ್ಕಾರ್ಪಿಯೋವನ್ನು ಎರಡು ವಾಹನಗಳು ಹಿಂಬಾಲಿಸುತ್ತಿದ್ದವು. ಅವುಗಳಲ್ಲಿ WB74AX2270 ನೋಂದಣಿ ಸಂಖ್ಯೆಯನ್ನು ಹೊಂದಿರುವ ಸಿಲ್ವರ್ ಬಣ್ಣದ ಸ್ಯಾಂಟ್ರೋ ಕಾರು ಮತ್ತು ಒಂದು ಬೈಕ್ ಸೇರಿವೆ.

ಮೂಲಗಳು ಹೇಳುವಂತೆ, ಸ್ಯಾಂಟ್ರೋ ಕಾರು ರಾತ್ ಅವರ ಕಾರನ್ನು ಹಿಂದಿಕ್ಕಿ ವೇಗವನ್ನು ಕಡಿಮೆ ಮಾಡಿತು. ಕೆಲವೇ ಕ್ಷಣಗಳಲ್ಲಿ, ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಹತ್ತಿರದಿಂದ ಗುಂಡು ಹಾರಿಸಿದರು. ರಾತ್ ಅವರ ಮೇಲೆ ಕನಿಷ್ಠ 10 ಸುತ್ತು ಗುಂಡುಗಳು ಬಿದ್ದಿವೆ. ಗುಂಡುಗಳು ಅವರ ಎದೆ, ಹೊಟ್ಟೆ ಮತ್ತು ತಲೆಗೆ ಹೊಕ್ಕಿವೆ. ದಾಳಿಯಲ್ಲಿ ಬಳಸಲಾದ ಬೈಕ್‌ಗೆ ನೋಂದಣಿ ಫಲಕ ಇರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ತಿಳಿಸಿದ್ದು, ಇದು ಪೂರ್ವಯೋಜಿತ ಗುಂಡು ಹಾರಾಟದ ಬಗ್ಗೆ ಇರುವ ಅನುಮಾನಗಳನ್ನು ಬಲಪಡಿಸಿದೆ.

ಇನ್ನು ರಾತ್ ಅವರ ವಾಹನದ ಚಾಲಕನಿಗೂ ಗುಂಡಿನ ದಾಳಿಯಲ್ಲಿ ಗಾಯಗಳಾಗಿದ್ದು, ಕೋಲ್ಕತ್ತಾದ ಎಸ್‌ಎಸ್‌ಕೆಎಂ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

ಪಶ್ಚಿಮ ಬಂಗಾಳದಲ್ಲಿ ನಿಲ್ಲುತ್ತಿಲ್ಲ ಹಿಂಸಾಚಾರ; MLA ಮನೆ ಬಳಿ ಬಾಂಬ್‌ ಸ್ಪೋಟ, 5 ಬಿಜೆಪಿ ಕಾರ್ಯಕರ್ತರಿಗೆ ಗಾಯ

ತನಿಖಾಧಿಕಾರಿಗಳು ಸ್ಥಳದಿಂದ ಬುಲೆಟ್ ಶೆಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ದಾಳಿಕೋರರು ಸಣ್ಣ ಬಂದೂಕನ್ನು ಬಳಸಿರಬಹುದು ಎಂದು ಶಂಕಿಸಿದ್ದಾರೆ. ಬಹುಶಃ ಆಸ್ಟ್ರಿಯನ್ ನಿರ್ಮಿತ ಗ್ಲಾಕ್ ಪಿಸ್ತೂಲ್ ಆಗಿರಬಹುದು ಎಂಬುದಾಗಿ ತನಿಖಾಧಿಕಾರಿಗಳು ಶಂಕಿಸಿದ್ದಾರೆ. ವಿಧಿವಿಜ್ಞಾನ ವಿಶ್ಲೇಷಣೆಯು ದಾಳಿಯಲ್ಲಿ ಬಳಸಲಾದ ನಿಖರವಾದ ಆಯುಧವನ್ನು ನಿರ್ಧರಿಸುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ವಿಧಿವಿಜ್ಞಾನ ತಂಡಗಳು ಸಹ ಸಾಕ್ಷ್ಯಗಳನ್ನು ಸಂಗ್ರಹಿಸಲು, ವಿಶೇಷವಾಗಿ ಬುಲೆಟ್ ಶೆಲ್‌ಗಳನ್ನು ಅಪರಾಧ ಸ್ಥಳದಲ್ಲಿ ಸಂಗ್ರಹಿಸುತ್ತಿವೆ.

ಶಂಕಿತರ ಚಲನವಲನಗಳನ್ನು ಪತ್ತೆಹಚ್ಚಲು ಪೊಲೀಸ್ ತಂಡಗಳು ಜೆಸ್ಸೋರ್ ರಸ್ತೆ ಮತ್ತು ಹತ್ತಿರದ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿವೆ. ತನಿಖೆಯ ಭಾಗವಾಗಿ ಅಧಿಕಾರಿಗಳು ಸ್ಥಳೀಯ ಸಾಕ್ಷಿಗಳನ್ನು ಸಹ ಪ್ರಶ್ನಿಸುತ್ತಿದ್ದಾರೆ.

ಈ ಕೊಲೆ ಪಶ್ಚಿಮ ಬಂಗಾಳದಾದ್ಯಂತ ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಬಿಜೆಪಿಯ ವಿಧಾನಸಭಾ ಚುನಾವಣೆಯ ಗೆಲುವಿನ ನಂತರ ಅಲ್ಲಿ ಹಿಂಸಾಚಾರ ಭುಗಿಲೆದ್ದಿದೆ.