ಚೆನ್ನೈ: ಹಿರಿಯ ನಾಯಕ ಸಿವಿ ಷಣ್ಮುಗಂ (Shanmugam) ನೇತೃತ್ವದಲ್ಲಿ ಕನಿಷ್ಠ 30 ಎಐಎಡಿಎಂಕೆ (AIADMK) ಶಾಸಕರು ತಮಿಳುನಾಡು ಮುಖ್ಯಮಂತ್ರಿ ವಿಜಯ್ (Thalapathy Vijay) ಅವರ ತಮಿಳಗ ವೆಟ್ರಿ ಕಳಗಂ (TVK) ಗೆ ಬೆಂಬಲ ನೀಡಿದ್ದಾರೆ. ಬೆಂಬಲ ಘೋಷಿಸುವಾಗ, ಎಐಎಡಿಎಂಕೆಯೊಳಗಿನ ಬಿರುಕು ಇದೆ ಎಂಬ ವರದಿಗಳನ್ನು ಷಣ್ಮುಗಂ ತಳ್ಳಿಹಾಕಿದರು ಮತ್ತು ಪಕ್ಷವನ್ನು ವಿಭಜಿಸುವ ಯಾವುದೇ ಉದ್ದೇಶವಿಲ್ಲ ಎಂದು ಅವರು ಹೇಳಿದ್ದಾರೆ. ಷಣ್ಮುಗಂ ನೇತೃತ್ವದ ಶಾಸಕರ ಗುಂಪು ಪಕ್ಷದ ಮುಖ್ಯಸ್ಥ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸುತ್ತಿದೆ ಎಂಬ ವರದಿಗಳ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಎನ್‌ಡಿಎಯ ಒಂದು ಘಟಕ ಪಕ್ಷವಾದ ಎಐಎಡಿಎಂಕೆ ಬಿಜೆಪಿ ಸೇರಿದಂತೆ ಯಾವುದೇ ಮೈತ್ರಿಕೂಟದ ಭಾಗವಾಗಿಲ್ಲ ಎಂದು ಷಣ್ಮುಗಂ ಹೇಳಿದ್ದಾರೆ. ಇತ್ತೀಚೆಗೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಒಟ್ಟು 47 ಸ್ಥಾನಗಳನ್ನು ಗೆದ್ದುಕೊಂಡಿದೆ. ತಮಿಳುನಾಡು ವಿಧಾನಸಭೆಯಲ್ಲಿ ನಿರ್ಣಾಯಕ ಬಹುಮತ ಪರೀಕ್ಷೆ ನಡೆಯುವ ಒಂದು ದಿನ ಮೊದಲು ಷಣ್ಮುಗಂ ನೇತೃತ್ವದ ಎಐಎಡಿಎಂಕೆ ಗುಂಪು ಟಿವಿಕೆಗೆ ಬೆಂಬಲ ನೀಡಿದೆ.
ಚುನಾವಣೆಯಲ್ಲಿ ಮುಖ್ಯಮಂತ್ರಿ ವಿಜಯ್ ಅವರು ಬಹುಮತದ ಬೆಂಬಲವನ್ನು ಹೊಂದಿದ್ದಾರೆಂದು ಸಾಬೀತುಪಡಿಸಬೇಕಾಗುತ್ತದೆ. ವಿಧಾನ ಸಭೆ ಚುನಾವಣೆಯಲ್ಲಿ ಅಧಿಕ ಸ್ಥಾನಗಳನ್ನು ಗೆದ್ದಿದ್ದ ಟಿವಿಕೆ ಬಹುಮತ ಸಾಬೀತು ಪಡಿಸುವಲ್ಲಿ ವಿಫಲರಾಗಿದ್ದರು. ಬಳಿಕ ವಿಜಯ್, ಕಾಂಗ್ರೆಸ್, ಎಡಪಂಥೀಯರು, ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಸಹಾಯದಿಂದ ಸರ್ಕಾರವನ್ನು ರಚಿಸಿದ್ದಾರೆ.
ಅವಮಾನ ಎದುರಿಸಿದ ಜಾಗದಲ್ಲೇ ಸನ್ಮಾನ ಪಡೆದ ಸಿಎಂ ವಿಜಯ್; 13 ವರ್ಷಗಳ ಹಿಂದೆ ದಳಪತಿಗೆ ಮುಜುಗರಪಡಿಸಿದ್ದ ಜಯಲಲಿತಾ!
ಇದೀಗ ಸಿವಿ ಷಣ್ಮುಗಂ ಬೆಂಬಲ ಸೂಚಿಸಿದ್ದಾರೆ. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಜಯ್ ಮುಖ್ಯಮಂತ್ರಿಯಾಗಬೇಕೆಂಬುದು ನಿರ್ದಿಷ್ಟವಾಗಿ ಜನಾದೇಶ. ನಾವು ಜನರ ಜನಾದೇಶವನ್ನು ಗೌರವಿಸುತ್ತೇವೆ. ಹೀಗಾಗಿ ನಮ್ಮ ಶಾಸಕರು ವಿಜಯ್‌ಗೆ ಬೆಂಬಲ ಸೂಚಿಸುತ್ತಾರೆ ಎಂದು ಹೇಳಿದರು. ಎಐಎಡಿಎಂಕೆಯಲ್ಲಿನ ಬಿರುಕಿನ ವರದಿಯನ್ನು ತಳ್ಳಿ ಹಾಕಿದ ಇವರು, ಡಿಎಂಕೆ ಬೆಂಬಲದೊಂದಿಗೆ ಮುಖ್ಯಮಂತ್ರಿಯಾಗುವುದಾಗಿ ಎಡಪ್ಪಾಡಿ ಕೆ ಪಳನಿಸ್ವಾಮಿ ಪ್ರಸ್ತಾಪಿಸಿದ್ದರು. ಆದರೆ, ಬಹುಪಾಲು ಶಾಸಕರು ಈ ಪ್ರಸ್ತಾಪವನ್ನು ಸ್ವೀಕರಿಸಲಿಲ್ಲ. ಪರಿಣಾಮವಾಗಿ, ಎಐಎಡಿಎಂಕೆ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿಲ್ಲ. ನಾವು ಒಗ್ಗಟ್ಟಿನಿಂದ ಇರುತ್ತೇವೆ. ಇಪಿಎಸ್ ಇನ್ನೂ ನಮ್ಮ ನಾಯಕ. ನಾವು ಯಾವುದೇ ಮೈತ್ರಿಕೂಟದೊಂದಿಗೆ (ಬಿಜೆಪಿ) ಇಲ್ಲ. ಇಪಿಎಸ್ ನಮ್ಮ ಪ್ರಧಾನ ಕಾರ್ಯದರ್ಶಿ" ಎಂದು ಹೇಳಿದ್ದಾರೆ.