ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ತಮಿಳುನಾಡು ರಾಜಕೀಯದಲ್ಲಿ ಸಂಚಲನ ಮೂಡಿಸಿದ ಟಿವಿಕೆಯ ವಿಜಯ್ ಮುಂದಿದೆ ಹಲವು ಆಯ್ಕೆಗಳು: ಯಾರ ಕೈಹಿಡಿಯಲಿದ್ದಾರೆ 'ಜನನಾಯಕ'?

ತಮಿಳುನಾಡಿನಲ್ಲಿ ನಟ-ರಾಜಕಾರಣಿ ವಿಜಯ್ ಅವರ ಟಿವಿಕೆ ಪಕ್ಷ ಅಚ್ಚರಿ ಮೂಡಿಸುವ ಸಾಧನೆ ಮಾಡಿದ್ದು, ಬಹುಮತದ ಅಂಚಿಗೆ ಬಂದು ನಿಂತಿದೆ. ಸರ್ಕಾರ ರಚಿಸಲು ಎಐಎಡಿಎಂಕೆ, ಸಣ್ಣ ಪಕ್ಷಗಳು ಅಥವಾ ಕಾಂಗ್ರೆಸ್ ಬೆಂಬಲ ಪಡೆಯುವ ಆಯ್ಕೆಗಳು ಅವರ ಮುಂದಿವೆ. ಬಿಜೆಪಿ ವಿರುದ್ಧದ ನಿಲುವು ಅವರ ಮೈತ್ರಿ ನಿರ್ಧಾರದಲ್ಲಿ ಪ್ರಮುಖ ಪಾತ್ರವಹಿಸುವ ಸಾಧ್ಯತೆ ಇದೆ.

ನಟ ವಿಜಯ್ (ಸಂಗ್ರಹ ಚಿತ್ರ)

ಚೆನ್ನೈ, ಮೇ 4: ಹೆಸರಿಗೆ ತಕ್ಕಂತೆ ನಟ-ರಾಜಕಾರಣಿ ವಿಜಯ್ (Vijay) ತಮಿಳುನಾಡು (Tamil Nadu) ಚುನಾವಣೆಯಲ್ಲಿ ಅಸಾಧ್ಯವಾದುದನ್ನು ಸಾಧ್ಯವಾಗಿಸಿದ್ದಾರೆ. ಕೇವಲ ಎರಡು ವರ್ಷಗಳ ಹಿಂದೆ ಸ್ಥಾಪನೆಯಾದ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು 100ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ 234 ಸದಸ್ಯರ ಬಲದ ವಿಧಾನಸಭೆಯಲ್ಲಿ ಬಹುಮತಕ್ಕೆ ಬೇಕಾದ 118ರ ಗಡಿ ದಾಟುವುದು ಪಕ್ಷಕ್ಕೆ ಸವಾಲಾಗಿ ಪರಿಣಮಿಸಬಹುದು. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ರಚಿಸಲು ವಿಜಯ್ ಅವರಿಗೆ ಮಿತ್ರಪಕ್ಷಗಳ ಬೆಂಬಲ ಅನಿವಾರ್ಯವಾಗಲಿದ್ದು, ಅವರ ಮುಂದೆ ಹಲವು ರಾಜಕೀಯ ಆಯ್ಕೆಗಳಿವೆ.

ವಿಜಯ್ ಮುಂದಿರುವ ಪ್ರಮುಖ ಆಯ್ಕೆಗಳು:

1: ಎಐಎಡಿಎಂಕೆ ಜೊತೆ ಮೈತ್ರಿ: ಹಿಂದೆ ಪ್ರೀ-ಪೋಲ್ ಮೈತ್ರಿಗೆ ಪ್ರಯತ್ನಿಸಿ ವಿಫಲವಾಗಿದ್ದ ಎಐಎಡಿಎಂಕೆ ಈಗ ವಿಜಯ್ ಅವರ ಬೆಂಬಲಕ್ಕೆ ಸಿದ್ಧವಿರುವಂತೆ ಕಾಣುತ್ತಿದೆ. ಈ ಹಿಂದೆ ಮುಖ್ಯಮಂತ್ರಿ ಸ್ಥಾನ ಮತ್ತು ಸೀಟು ಹಂಚಿಕೆಯ ವಿಚಾರದಲ್ಲಿ ಮಾತುಕತೆ ಮುರಿದುಬಿದ್ದಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದ್ದು, ಎಐಎಡಿಎಂಕೆ ವಕ್ತಾರೆ ಅಪ್ಸರಾ ರೆಡ್ಡಿ ಮೈತ್ರಿಗೆ ಸಕಾರಾತ್ಮಕ ಸುಳಿವು ನೀಡಿದ್ದಾರೆ.

2: ಎಐಎಡಿಎಂಕೆ - ಬಿಜೆಪಿ ಮೈತ್ರಿಕೂಟದ ಸವಾಲು: ವಿಜಯ್ ಬಿಜೆಪಿಯನ್ನು ತಮ್ಮ 'ಸೈದ್ಧಾಂತಿಕ ಶತ್ರು' ಎಂದು ಕರೆದಿದ್ದಾರೆ. ಒಂದು ವೇಳೆ ಎಐಎಡಿಎಂಕೆ ಜತೆ ಕೈಜೋಡಿಸಬೇಕಾದರೆ, ಅವರು ಬಿಜೆಪಿಯನ್ನು ಮೈತ್ರಿಕೂಟದಿಂದ ಹೊರಹಾಕುವಂತೆ ಷರತ್ತು ವಿಧಿಸಬಹುದು. ಕರೂರ್ ದುರಂತದ ವೇಳೆ ಬಿಜೆಪಿ ನಡೆಸಿದ ವಾಗ್ದಾಳಿ ಮತ್ತು ಅವರ 'ಜನನಾಯಕ' ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಎದುರಾದ ಅಡೆತಡೆಗಳು ವಿಜಯ್ ಅವರನ್ನು ಬಿಜೆಪಿ ವಿರುದ್ಧ ತಿರುಗಿಬೀಳುವಂತೆ ಮಾಡಿದೆ.

ನಟ ವಿಜಯ್‌-ಸಂಗೀತಾ ಡಿವೋರ್ಸ್‌ ಪ್ರಕರಣ; ವಿಚಾರಣೆ ಮುಂದೂಡಿದ ಕೋರ್ಟ್‌

3: ಸಣ್ಣ ಪಕ್ಷಗಳ ಬೆಂಬಲ: ದೊಡ್ಡ ದ್ರಾವಿಡ ಪಕ್ಷಗಳಾದ ಡಿಎಂಕೆ ಅಥವಾ ಎಐಎಡಿಎಂಕೆ ಜತೆ ಸೇರದೆ, ಪಿಎಂಕೆಯಂತಹ ಸಣ್ಣ ಪಕ್ಷಗಳು ಅಥವಾ ಪ್ರೇಮಲತಾ ವಿಜಯಕಾಂತ್ ಅವರ ಡಿಎಂಡಿಕೆ, ವಿಸಿಕೆ ಮತ್ತು ಎಎಂಎಂಕೆಯಂತಹ ಪಕ್ಷಗಳೊಂದಿಗೆ ಸೇರಿ ಸರ್ಕಾರ ರಚಿಸುವ ಆಯ್ಕೆಯೂ ಅವರ ಮುಂದಿದೆ. ಇದು ವಿಜಯ್ ಅವರಿಗೆ ಸ್ವತಂತ್ರವಾಗಿ ಆಡಳಿತ ನಡೆಸಲು ಅವಕಾಶ ನೀಡುತ್ತದೆ.

4: ಕಾಂಗ್ರೆಸ್‌ನ ಹೊರಗಿನ ಬೆಂಬಲ: ಕಾಂಗ್ರೆಸ್ ಈಗಾಗಲೇ ವಿಜಯ್ ಅವರಿಗೆ ಬೆಂಬಲ ನೀಡುವ ಇಂಗಿತ ವ್ಯಕ್ತಪಡಿಸಿದೆ. ವಿಜಯ್ ಅವರ ತಂದೆ ಕೂಡ ʼಅಧಿಕಾರ ಹಂಚಿಕೆʼಗೆ ಸಿದ್ಧವಿರುವುದಾಗಿ ತಿಳಿಸಿದ್ದಾರೆ. ಡಿಎಂಕೆ ಮೈತ್ರಿಯಲ್ಲಿರುವ ಕಾಂಗ್ರೆಸ್, ಈಗ ಟಿವಿಕೆಗೆ ಹೊರಗಿನಿಂದ ಬೆಂಬಲ ನೀಡಿ ಸರ್ಕಾರ ರಚನೆಗೆ ಸಹಕರಿಸುವ ಸಾಧ್ಯತೆಯಿದೆ.

ತಮಿಳುನಾಡಿನ ಇತಿಹಾಸದಲ್ಲಿ ಎಂಜಿಆರ್ ನಂತರ ಚಿತ್ರರಂಗದ ತಾರೆಯೊಬ್ಬರು ರಾಜಕೀಯದಲ್ಲಿ ಇಂತಹ ಬೃಹತ್ ಅಲೆ ಸೃಷ್ಟಿಸಿರುವುದು ಇದೇ ಮೊದಲು. ದಲಿತರು, ಕ್ರಿಶ್ಚಿಯನ್, ಅಲ್ಪಸಂಖ್ಯಾತರು ಮತ್ತು ಯುವ ಮತದಾರರು ವಿಜಯ್ ಕೈಹಿಡಿದಿರುವುದು ಅವರ ಈ ಅಭೂತಪೂರ್ವ ಯಶಸ್ಸಿಗೆ ಕಾರಣ ಎನ್ನಲಾಗುತ್ತಿದೆ. ವಿಜಯ್ ಅವರು ಹಳೆಯ ದ್ರಾವಿಡ ರಾಜಕಾರಣದ ಜತೆ ರಾಜಿ ಮಾಡಿಕೊಳ್ಳುತ್ತಾರೋ ಅಥವಾ ಹೊಸ ಹಾದಿ ತುಳಿಯುತ್ತಾರೋ ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ.