ಮುಂಬೈ, ಸೆ. 28: ಮನೆ, ಜಮೀನು ಅಥವಾ ವಾಹನಗಳನ್ನು ಮಾರಾಟ ಮಾಡುವುದು ಸಾಮಾನ್ಯ. ಆದರೆ, ಎಂದಾದರೂ ಗ್ರಾಮವನ್ನೇ ಮಾರಾಟ ಮಾಡುವುದನ್ನು ಕೇಳಿದ್ದೀರಾ? ಹೌದು, ಇಲ್ಲೊಂದೆಡೆ ಗ್ರಾಮ ಮಾರಾಟಕ್ಕಿದೆ ಎಂಬ ಬೋರ್ಡ್ ಹಾಕಲಾಗಿದೆ. ಮಹಾರಾಷ್ಟ್ರದ (Maharashtra) ಸೋಲಾಪುರ ಜಿಲ್ಲೆಯ ತುಲ್ಶಿ ಗ್ರಾಮದಲ್ಲಿ ನೀರಿನ ಸಮಸ್ಯೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಅವರು ಗ್ರಾಮದ ಪ್ರವೇಶ ದ್ವಾರದ ಬಳಿ ಈ ಗ್ರಾಮ ಮಾರಾಟಕ್ಕಿದೆ (Village for Sale) ಎಂಬ ಬ್ಯಾನರ್ ಹಾಕಿದ್ದಾರೆ. ಗ್ರಾಮವನ್ನು ಕೊಂಡುಕೊಳ್ಳುಲು ಮಾಡಲು ಹಣದ ಬದಲು ನೀರು ಅಗತ್ಯ ಎಂದು ನಮೂದಿಸಿದ್ದಾರೆ. ಇದು ಗ್ರಾಮದಲ್ಲಿ ಹಲವು ವರ್ಷಗಳಿಂದ ಮುಂದುವರಿದಿರುವ ನೀರಿನ ಬಿಕ್ಕಟ್ಟಿನ ವಿರುದ್ಧದ ಸಾಂಕೇತಿಕ ಪ್ರತಿಭಟನೆ ಎನಿಸಿಕೊಂಡಿದ್ದು, ಹಲವರ ಗಮನ ಸೆಳೆದಿದೆ.
ಗ್ರಾಮದಲ್ಲಿ ಕೃಷಿ ಜಮೀನುಗಳು ಮತ್ತು ಬಾವಿಗಳು ಒಣಗಿ ಹೋಗಿವೆ. ಹೀಗಾಗಿ ಸುಮಾರು 7,000 ಜನರು ಸಂಪೂರ್ಣವಾಗಿ ನೀರಿನ ಟ್ಯಾಂಕರ್‌ಗಳನ್ನೇ ಅವಲಂಬಿಸಿದ್ದಾರೆ. ಸರ್ಕಾರ ಹಲವು ವರ್ಷಗಳಿಂದ ಯೋಜನೆಗಳು ಮತ್ತು ಭರವಸೆಗಳನ್ನು ನೀಡುತ್ತಿದ್ದರೂ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ ಎಂಬುದು ಗ್ರಾಮಸ್ಥರ ದೂರು. ಮುಖ್ಯವಾಗಿ, ಸಿನಾ-ಮಾಧಾ ಲಿಫ್ಟ್ ಇರಿಗೇಷನ್ ಯೋಜನೆಯ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಈ ಯೋಜನೆಯ ಕಾಲುವೆಗಳು ಗ್ರಾಮದ ಸಮೀಪದಲ್ಲೇ ಹಾದುಹೋಗುತ್ತವೆ. ಆದರೂ ಕಾಮಗಾರಿ ಪೂರ್ಣಗೊಳ್ಳದ ಕಾರಣ ತುಲ್ಶಿ ಗ್ರಾಮ ಹಲವು ವರ್ಷಗಳಿಂದ ನೀರಿಲ್ಲದೆ ಪರದಾಡುತ್ತಿದೆ.
ನೀರಿಗಾಗಿ ಕಾದು ಕುಳಿತ ಮಹಾರಾಷ್ಟ್ರದ ತುಲ್ಶಿ ಗ್ರಾಮಸ್ಥರು:
“ಗ್ರಾಮವು ಪ್ರತಿವರ್ಷ ನೀರಿನ ಕೊರತೆಯನ್ನು ಎದುರಿಸುತ್ತಿದೆ. ಸಿನಾ-ಮಾಧಾ ಯೋಜನೆಯ ಕಾಲುವೆಗಳು ಗ್ರಾಮದ ಸಮೀಪದಲ್ಲೇ ಹಾದುಹೋಗುತ್ತಿದ್ದರೂ, ನಮಗೆ ಅದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ‘ಗ್ರಾಮ ಮಾರಾಟಕ್ಕಿದೆ, ಬೆಲೆ: ನೀರು’ ಎಂದು ಬ್ಯಾನರ್ ಹಾಕುವ ಮೂಲಕ ನಮ್ಮ ಸಮಸ್ಯೆಯತ್ತ ಸರ್ಕಾರದ ಗಮನ ಸೆಳೆಯಲು ನಾವು ಪ್ರಯತ್ನಿಸುತ್ತಿದ್ದೇವೆ” ಎಂದು ತುಲ್ಶಿ ಗ್ರಾಮ ಪಂಚಾಯತ್ ಅಧ್ಯಕ್ಷ ಶರದ್ ಮೋರೆ ಹೇಳಿದ್ದಾರೆ.
ಚ್ಛತೆ ಕಾಪಾಡಲು ಸಾರ್ವಜನಿಕರು ಸಹಕರಿಸಬೇಕು: ಸಿಇಒ ಡಾ.ವೈ.ನವೀನ್ ಭಟ್
ನೀರಿಗಾಗಿ ಆಗ್ರಹಿಸಿ ಗ್ರಾಮಸ್ಥರು ಸೆಪ್ಟೆಂಬರ್ 14ರಂದು ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಬಳಿಕ ಮಾಧಾ ತಹಸೀಲ್ದಾರ್ ಕಚೇರಿ ಎದುರು ಪಾತ್ರೆಗಳನ್ನು ಬಾರಿಸುವ ಮೂಲಕ ಪ್ರತಿಭಟನೆ ನಡೆಸಿದ್ದರು. ಸಮಸ್ಯೆ ಬಗೆಹರಿಯದಿದ್ದರೆ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಸಿನಾ-ಮಾಧಾ ಯೋಜನೆಯ 7ನೇ ಮತ್ತು 8ನೇ ಔಟ್‌ಲೆಟ್‌ಗಳ ಸಮೀಪ ಸುಮಾರು 800 ಮೀಟರ್ ಉದ್ದದ ಅಗೆಯುವ ಕಾಮಗಾರಿ 26 ವರ್ಷಗಳಿಂದ ಅಪೂರ್ಣವಾಗಿಯೇ ಉಳಿದಿದೆ ಎಂದು ಶರದ್ ಮೋರೆ ಈ ಹಿಂದೆ ಹೇಳಿದ್ದರು. ಈ ಕಾಮಗಾರಿ ಪೂರ್ಣಗೊಂಡರೆ ತುಲ್ಶಿ ಗ್ರಾಮದ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಬಹುದು ಎಂದು ಅವರು ತಿಳಿಸಿದ್ದರು.
ಈ ವರ್ಷ ಮುಂಗಾರು ಮಳೆ ಕಡಿಮೆಯಾಗಿರುವುದರಿಂದ ನೀರಿನ ಕೊರತೆ ಮತ್ತಷ್ಟು ಹೆಚ್ಚಾಗಿದೆ. ಜಲ ಜೀವನ್ ಮಿಷನ್ ಅಡಿಯಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಆದರೆ ಸ್ಥಳೀಯ ನೀರಿನ ಮೂಲವೇ ಒಣಗಿ ಹೋಗಿರುವುದರಿಂದ ಈ ಯೋಜನೆಯಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ತುಲ್ಶಿಯಲ್ಲಿ ಈ ಬಿಕ್ಕಟ್ಟು ಜೀವನೋಪಾಯದ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಅಲ್ಲಿ ಹೆಚ್ಚಿನವರು ಕೃಷಿ ಮತ್ತು ಪಶುಸಂಗೋಪನೆಯ ಮೇಲೆ ಅವಲಂಬಿತರಾಗಿದ್ದಾರೆ. ಗ್ರಾಮದಲ್ಲಿ ಸುಮಾರು 350 ಪುರುಷರು ಅವಿವಾಹಿತರಾಗಿ ಉಳಿದಿದ್ದಾರೆ. ಯಾರೂ ಅವರಿಗೆ ವಧುಗಳನ್ನು ನೀಡಲು ಸಿದ್ಧರಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ.