ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಣಿಪುರದಲ್ಲಿ ಮತ್ತೆ ಮುಂದುವರಿದ ಹಿಂಸಾಚಾರ: 6 ತಿಂಗಳವರೆಗೆ ‘ಪ್ರಕ್ಷುಬ್ಧ ಪ್ರದೇಶ’ ಸ್ಥಿತಿ ವಿಸ್ತರಣೆ

‘Disturbed Area’ Status: ಮತ್ತೆ ಹಿಂಸಾಚಾರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕೇಂದ್ರ ಗೃಹ ಸಚಿವಾಲಯವು ಮಣಿಪುರದಾದ್ಯಂತ ʼಪ್ರಕ್ಷುಬ್ಧ ಪ್ರದೇಶʼ ಸ್ಥಾನಮಾನವನ್ನು ಮುಂದುವರಿಸಿದೆ. ಈ ʼಪ್ರಕ್ಷುಬ್ಧ ಪ್ರದೇಶʼ ಘೋಷಣೆಯು 2026ರ ಅಕ್ಟೋಬರ್ 1ರಿಂದ ಆರು ತಿಂಗಳ ಕಾಲ ಜಾರಿಯಲ್ಲಿರಲಿದೆ.

ಸಾಂದರ್ಭಿಕ ಚಿತ್ರ

ಇಂಫಾಲ, ಸೆ. 25: ರಾಜ್ಯದಲ್ಲಿ ಮತ್ತೆ ಹಿಂಸಾಚಾರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ (Manipur Violence), ಕೇಂದ್ರ ಗೃಹ ಸಚಿವಾಲಯವು ಮಣಿಪುರದಾದ್ಯಂತ ಪ್ರಕ್ಷುಬ್ಧ ಪ್ರದೇಶ (Disturbed Area) ಸ್ಥಾನಮಾನವನ್ನು ಮುಂದುವರಿಸಿದೆ. 1958ರ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆಯಡಿ ಮಣಿಪುರದ ಬಹುತೇಕ ಪ್ರದೇಶಗಳಲ್ಲಿ ಈ ಸ್ಥಾನಮಾನವನ್ನು ವಿಸ್ತರಿಸಲಾಗಿದೆ. ಆದರೆ 13 ನಿರ್ದಿಷ್ಟ ಪೊಲೀಸ್ ಠಾಣೆಗಳ ವ್ಯಾಪ್ತಿಗೆ ಒಳಪಡುವ ಪ್ರದೇಶಗಳನ್ನು ಇದರಿಂದ ಹೊರಗಿಡಲಾಗಿದೆ.

ಈ ಪ್ರಕ್ಷುಬ್ಧ ಪ್ರದೇಶ ಘೋಷಣೆಯು 2026ರ ಅಕ್ಟೋಬರ್ 1ರಿಂದ ಆರು ತಿಂಗಳ ಕಾಲ ಜಾರಿಯಲ್ಲಿರಲಿದೆ. ಆದರೆ ಅದಕ್ಕೂ ಮುನ್ನವೇ ಸರ್ಕಾರ ಈ ಸ್ಥಾನಮಾನವನ್ನು ಹಿಂಪಡೆದರೆ, ಆ ಅವಧಿ ಅದಕ್ಕಿಂತ ಮೊದಲೇ ಮುಕ್ತಾಯವಾಗಬಹುದು. ಕೇಂದ್ರ ಸರ್ಕಾರವು 2023ರಲ್ಲಿ ಮಣಿಪುರವನ್ನು ಸಶಸ್ತ್ರ ಪಡೆಗಳ ಕಾಯ್ದೆಯ ಅಡಿ ಪ್ರಕ್ಷುಬ್ಧ ಪ್ರದೇಶ ಎಂದು ಘೋಷಿಸಿತ್ತು. ಆ ಬಳಿಕ ಈ ಸ್ಥಾನಮಾನವನ್ನು ಹಲವು ಬಾರಿ ವಿಸ್ತರಿಸಲಾಗಿದೆ.

ಮಣಿಪುರದಾದ್ಯಂತ ʼಪ್ರಕ್ಷುಬ್ಧ ಪ್ರದೇಶʼ ಸ್ಥಾನಮಾನ:



1958ರ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆಯ ಸೆಕ್ಷನ್ 3ರ ಪ್ರಕಾರ, ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ಒಂದು ಭಾಗ ಅಥವಾ ಇಡೀ ಪ್ರದೇಶವನ್ನು ʼಪ್ರಕ್ಷುಬ್ಧ ಪ್ರದೇಶʼ ಎಂದು ಘೋಷಿಸುವ ಅಧಿಕಾರ ರಾಜ್ಯಪಾಲರು, ಆಡಳಿತಾಧಿಕಾರಿ ಅಥವಾ ಕೇಂದ್ರ ಸರ್ಕಾರಕ್ಕೆ ಇದೆ. ಆ ಪ್ರದೇಶದಲ್ಲಿ ಪ್ರಕ್ಷುಬ್ಧ ಅಥವಾ ಅಪಾಯಕಾರಿ ಪರಿಸ್ಥಿತಿ ಇದ್ದು, ನಾಗರಿಕ ಆಡಳಿತಕ್ಕೆ ಸಹಾಯ ಮಾಡಲು ಸಶಸ್ತ್ರ ಪಡೆಗಳ ನೆರವು ಅಗತ್ಯವಿದೆ ಎಂದು ಪರಿಗಣಿಸಿದರೆ, ಈ ಘೋಷಣೆ ಮಾಡಬಹುದು. ಈ ಘೋಷಣೆಯನ್ನು ಅಧಿಕೃತ ಸರ್ಕಾರಿ ರಾಜಪತ್ರದಲ್ಲಿ ಅಧಿಸೂಚನೆ ಪ್ರಕಟಿಸುವ ಮೂಲಕ ಜಾರಿಗೆ ತರಲಾಗುತ್ತದೆ.

ಬಿಜೆಪಿ ಶಾಸಕರ ನಿವಾಸದ ಆವರಣದಲ್ಲಿ ಸ್ಫೋಟ!

ಮತ್ತೆ ಭುಗಿಲೆದ್ದ ಹಿಂಸಾಚಾರ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಹೆಚ್ಚಾಗಿದೆ. ಕಮ್ಜಾಂಗ್ ಜಿಲ್ಲೆಯಲ್ಲಿ ನಾಲ್ವರನ್ನು ಶಂಕಿತ ಉಗ್ರರು ಗುಂಡಿಕ್ಕಿ ಕೊಂದಿದ್ದಾರೆ ಎನ್ನಲಾಗಿದ್ದು, ಅವರ ಮೃತದೇಹಗಳು ಮ್ಯಾನ್ಮಾರ್ ಗಡಿಯ ಸಮೀಪ ಪತ್ತೆಯಾಗಿವೆ. ನೆರೆಯ ಮ್ಯಾನ್ಮಾರ್‌ನ ಉಗ್ರಗಾಮಿಗಳು ಗುರುವಾರ (ಸೆಪ್ಟೆಂಬರ್‌ 24) ಭಾರತಕ್ಕೆ ನುಸುಳಿ ಐದು ಗ್ರಾಮಸ್ಥರ ಗುಂಪನ್ನು ಹೊಂಚು ಹಾಕಿ ದಾಳಿ ನಡೆಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅವರಲ್ಲಿ ಒಬ್ಬರು ತಪ್ಪಿಸಿಕೊಂಡು ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಮಣಿಪುರ ಮುಖ್ಯಮಂತ್ರಿ ವೈ. ಖೇಮ್‌ಚಂದ್ ಸಿಂಗ್ ಹತ್ಯೆಯನ್ನು ಖಂಡಿಸಿದ್ದಾರೆ. ಇಂತಹ ಹಿಂಸಾಚಾರಕ್ಕೆ ನಮ್ಮ ಸಮಾಜದಲ್ಲಿ ಸ್ಥಾನವಿಲ್ಲ, ಅವುಗಳನ್ನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ. ಮೃತರ ಕುಟುಂಬಗಳಿಗೆ ಅವರು ತಮ್ಮ ಆಳವಾದ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.

2023ರಲ್ಲಿ ಮೈತೈ ಮತ್ತು ಕುಕಿ-ಝೋ ಸಮುದಾಯಗಳ ನಡುವೆ ಪ್ರಾರಂಭವಾದ ಜನಾಂಗೀಯ ಸಂಘರ್ಷವನ್ನು ಮಣಿಪುರ ಈಗಲೂ ಎದುರಿಸುತ್ತಿದೆ. ಮೂವರು ಕುಕಿ ನಾಗರಿಕರ ಹತ್ಯೆಗೆ ಪ್ರತೀಕಾರವಾಗಿ ಸಶಸ್ತ್ರ ದಾಳಿಕೋರರು ಕಾಂಗ್‌ಪೊಕ್ಪಿ ಜಿಲ್ಲೆಯ ಮೂರು ಗ್ರಾಮಗಳ ಮೇಲೆ ದಾಳಿ ನಡೆಸುವುದರೊಂದಿಗೆ ಘರ್ಷಣೆ ಆರಂಭವಾಯಿತು.

ಸೆಪ್ಟೆಂಬರ್ 13ರಂದು ಮಣಿಪುರದ ತಮೆಂಗ್ಲಾಂಗ್ ಜಿಲ್ಲೆಯಲ್ಲಿ ಸಶಸ್ತ್ರ ದಾಳಿಕೋರರು ನಡೆಸಿದ ಎರಡು ಪ್ರತ್ಯೇಕ ದಾಳಿಗಳಲ್ಲಿ ದಂಪತಿ ಸೇರಿ ನಾಲ್ವರು ಮೃತಪಟ್ಟು, ಆರು ವರ್ಷದ ಬಾಲಕ ಗಾಯಗೊಂಡಿದ್ದ. ಒಂದು ವಾರದ ನಂತರ, ತಮೆಂಗ್ಲಾಂಗ್ ಜಿಲ್ಲೆಯಲ್ಲಿ 17 ವರ್ಷದ ಬಾಲಕನನ್ನು ಗುಂಡಿಕ್ಕಿ ಕೊಲ್ಲಲಾಯಿತು. ಫೆಬ್ರವರಿಯಲ್ಲಿ ನಾಗ ಮತ್ತು ಕುಕಿ ಸಮುದಾಯಗಳ ನಡುವೆ ಘರ್ಷಣೆಗಳು ಭುಗಿಲೆದ್ದ ನಂತರ, 40ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.