ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 5 ಮಂದಿ ಸಾವು, ಮನೆಗಳಿಗೆ ಹಾನಿ

Violence Erupts In Manipur: ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರಕ್ಕೆ 5 ಮಂದಿ ಬಲಿಯಾಗಿದ್ದಾರೆ. ಶುಕ್ರವಾರ ರಾತ್ರಿ ಕಮ್ಜಾಂಗ್ ಜಿಲ್ಲೆಯಲ್ಲಿ ಮನೆಗಳಿಗೆ ಬೆಂಕಿ ಹೆಚ್ಚಿ, ಗುಂಡಿನ ದಾಳಿ ನಡೆಸಲಾಗಿದ್ದು, ಈ ದಾಳಿಯಲ್ಲಿ ಮಹಿಳೆ ಸೇರಿ ಐವರು ಮೃತಪಟ್ಟಿದ್ದಾಗಿ ಮೂಲಗಳು ತಿಳಿಸಿವೆ. ದಾಳಿ ವೇಳೆ ಹಲವು ಮನೆಗಳು ಆಹುತಿಯಾಗಿವೆ. ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 5 ಮಂದಿ ಸಾವು

ಸಾಂದರ್ಭಿಕ ಚಿತ್ರ -

Ramesh Ballamoole
Ramesh Ballamoole Oct 10, 2026 6:49 PM

ಇಂಫಾಲ, ಅ. 10: ಸಂಘರ್ಷಪೀಡಿತ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಕಮ್ಜಾಂಗ್ ಮತ್ತು ಉಖ್ರುಲ್ ಜಿಲ್ಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮಹಿಳೆ ಸೇರಿ ಐವರು ದಾರುಣವಾಗಿ ಮೃತಪಟ್ಟಿದ್ದಾರೆ (Violence Erupts In Manipur). ಘಟನೆಯಲ್ಲಿ ಹಲವು ಮನೆಗಳು ಬೆಂಕಿಗೆ ಆಹುತಿಯಾಗಿವೆ ಎಂದು ವರದಿಯಾಗಿದೆ. ಪೊಲೀಸರು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿ ಮಾಡಿದ್ದು, ಸಂಘರ್ಷಪಿಡಿತ ಸ್ಥಳದಲ್ಲಿ ನಿಷೇದಾಜ್ಞೆ ಜಾರಿ ಮಾಡಲಾಗಿದೆ.

ಶುಕ್ರವಾರ (ಅಕ್ಟೋಬರ್‌ 9) ರಾತ್ರಿ ಸುಮಾರು 9:40ರ ಸುಮಾರಿಗೆ ಕುಕಿ ಸಮುದಾಯದವರು ಹೆಚ್ಚಾಗಿರುವ ಕಮ್ಜಾಂಗ್ ಜಿಲ್ಲೆಯ ಚೆಸ್ಸಾದ್ ಗ್ರಾಮದಲ್ಲಿ 22 ವರ್ಷದ ಯುವಕ ಮತ್ತು 42 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಪ್ರತ್ಯೇಕ ಹಿಂಸಾಚಾರದಲ್ಲಿ ಶನಿವಾರ ಉಖ್ರುಲ್ ಜಿಲ್ಲೆಯಲ್ಲಿ ಮೂವರು ಬಲಿಯಾಗಿದ್ದಾರೆ.

ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ:



ಕಮ್ಜಾಂಗ್ ಜಿಲ್ಲೆಯ ಹತ್ಯೆ ನಡೆದ ಬಳಿಕ ಉದ್ವಿಗ್ನತೆ ಹೆಚ್ಚಾಗಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಪೊಲೀಸರು ಸ್ಥಳದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ದಾಳಿಯಲ್ಲಿ ಮೃತಪಟ್ಟ ಮಹಿಳೆಯನ್ನು ದೊಮ್ಖೋನೇ ಟೌತಾಂಗ್ ಎಂದು ಗುರುತಿಸಲಾಗಿದ್ದು, ಇವರಿಗೆ ಐದು ಜನ ಮಕ್ಕಳಿದ್ದಾರೆ ಎಂದು ತಿಳಿದುಬಂದಿದೆ. ದಾಳಿಕೋರರು ನಡೆಸಿದ ಗುಂಡಿನ ದಾಳಿಯಲ್ಲಿ ಮಹಿಳೆಯ ಕುತ್ತಿಗೆಯ ಭಾಗಕ್ಕೆ ತೀವ್ರವಾದ ಗುಂಡೇಟು ಬಿದ್ದಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆಯಿಂದಾಗಿ ಸ್ಥಳೀಯವಾಗಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಮಣಿಪುರದಲ್ಲಿ ಆರ್‌ಎಎಫ್ ಹೊರಠಾಣೆ ಮೇಲೆ ಗ್ರೆನೇಡ್ ದಾಳಿ: ಸಿಆರ್‌ಪಿಎಫ್ ಮುಖ್ಯಪೇದೆಗೆ ಗಾಯ

ಪೊಲೀಸ್‌ ಕಾರ್ಯಾಚರಣೆ ಮತ್ತು ನಿಷೇಧಾಜ್ಞೆ ಜಾರಿ

ಪೊಲೀಸ್ ವರದಿಗಳ ಪ್ರಕಾರ, ಶುಕ್ರವಾರ ರಾತ್ರಿಯಿಡೀ ನಡೆದ ಹಿಂಸಾಚಾರ ಶನಿವಾರ ಬೆಳಗಿನ ಜಾವದವರೆಗೆ ಮುಂದುವರಿದಿದೆ. ಗುಂಡಿನ ದಾಳಿಯ ವೇಳೆ ಹಲವು ಮನೆಗಳು ಬೆಂಕಿಗೆ ಆಹುತಿಯಾಗಿವೆ. ಹಾನಿಗೊಳಗಾದ ಮನೆಗಳ ನಿಖರ ಸಂಖ್ಯೆ ಇನ್ನು ಲಭ್ಯವಿಲ್ಲದ ಕಾರಣ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಮತ್ತಷ್ಟು ಹಿಂಸಾಚಾರ ತಡೆಯಲು ಚೆಸ್ಸಾದ್ ಜಿಲ್ಲಾಧಿಕಾರಿ, ಚೆಸ್ಸಾದ್ ಪೊಲೀಸ್ ಗೇಟ್ ಜಂಕ್ಷನ್‌ನ 400 ಮೀಟರ್ ವ್ಯಾಪ್ತಿಯಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಸೆಕ್ಷನ್ 162ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಈ ಪ್ರದೇಶದಲ್ಲಿ ಐದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಸ್ಥಳದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಹೆಚ್ಚುವರಿ ಪೊಲೀಸ್ ಹಾಗೂ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಹರಸಾಹಸ ಪಡಲಾಗುತ್ತಿದೆ.

ಕುಕಿ ಹಾಗೂ ನಾಗಾ ನಾಗರಿಕ ಸಮಾಜದ ಸಂಘಟನೆಗಳು ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿವೆ. ದೆಹಲಿ ಮತ್ತು ಎನ್‌ಸಿಆರ್‌ನ ಕುಕಿ ಝೋ ಮಹಿಳಾ ವೇದಿಕೆ ಸಹ ಈ ಹತ್ಯೆಯನ್ನು ಖಂಡಿಸಿದ್ದು, ಐದು ಜನ ಮಕ್ಕಳನ್ನು ಅಗಲಿರುವ ಮೃತ ಮಹಿಳೆಯ ಕುಟುಂಬಕ್ಕೆ ಹಾಗೂ ಮಕ್ಕಳಿಗೆ ಮಾನವೀಯ ನೆಲೆಯಲ್ಲಿ ಸರ್ಕಾರ ಸೂಕ್ತ ಆರ್ಥಿಕ ಪರಿಹಾರ ಹಾಗೂ ನೆರವು ನೀಡಬೇಕು ಎಂದು ಆಗ್ರಹಿಸಿದೆ.

ಮಣಿಪುರದಲ್ಲಿ ಮತ್ತೆ ಗುಂಡಿನ ದಾಳಿ: ದಂಪತಿ ಸಾವು, ಮಗುವಿಗೆ ತೀವ್ರ ಗಾಯ

2023ರಿಂದ ಮಣಿಪುರದಲ್ಲಿ ಹಿಂಸಾಚಾರ

ಮಣಿಪುರದಲ್ಲಿ ಕುಕಿ ಮತ್ತು ಮೈತೇಯಿ ಸಮುದಾಯಗಳ ನಡುವಿನ ಜನಾಂಗೀಯ ಸಂಘರ್ಷವು 2023ರ ಮೇ 3ರಂದು ಮೀಸಲಾತಿ ವಿವಾದದ ಹಿನ್ನೆಲೆಯಲ್ಲಿ ಆರಂಭವಾಗಿತ್ತು. ಎರಡು ಜನಾಂಗಗಳ ನಡುವಿನ ಈ ನಿರಂತರ ಸಂಘರ್ಷದಿಂದಾಗಿ ಕೋಟ್ಯಂತರ ರೂ. ಮೌಲ್ಯದ ಆಸ್ತಿಪಾಸ್ತಿಗಳು ಹಾನಿಗೊಳಗಾಗಿವೆ. ಈ ದೀರ್ಘಕಾಲದ ಹಿಂಸಾಚಾರದಿಂದ ಇದುವರೆಗೆ ಸುಮಾರು 250ಕ್ಕೂ ಹೆಚ್ಚು ಜನರು ಬಲಿಯಾಗಿದ್ದು, ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ.

ದೇಶದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.