ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

12 ವರ್ಷ ಕಿರಿಯ ಸಹೋದ್ಯೋಗಿಯನ್ನು ಮದುವೆಯಾಗಲು, ಆತನ ಪತ್ನಿಗೆ ಒಂದೂವರೆ ಕೋಟಿ ರುಪಾಯಿ ಪರಿಹಾರ ನೀಡಿದ ಮಹಿಳೆ

ಮಧ್ಯ ಪ್ರದೇಶದ ಭೋಪಾಲ್‌ನಲ್ಲಿ 54 ವರ್ಷದ ಮಹಿಳಾ ಅಧಿಕಾರಿ ತಮಗಿಂತ 12 ವರ್ಷ ಕಿರಿಯ ಸಹೋದ್ಯೋಗಿಯನ್ನು ಮದುವೆಯಾಗಲು, ಅವನ ಪತ್ನಿಗೆ ಸುಮಾರು ಒಂದೂವರೆ ಕೋಟಿ ರುಪಾಯಿ ಪರಿಹಾರ ನೀಡಿದ ವಿಚ್ಛೇದನ ಪ್ರಕರಣ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಾಂದರ್ಭಿಕ ಚಿತ್ರ

ಭೋಪಾಲ್, ಫೆ. 17: ಪ್ರೀತಿಗಾಗಿ ಕೆಲವರು ಜೀವನದಲ್ಲೇ ಅಚ್ಚರಿಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಆದ್ರೆ ಮಧ್ಯ ಪ್ರದೇಶದ ಭೋಪಾಲ್‌ನಲ್ಲಿ ಒಂದು ವಿಚಿತ್ರ ಘಟನೆ ನಡೆದಿದ್ದು, ಮಹಿಳೆಯೋರ್ವಳು ತಾನು ಇಷ್ಟಪಟ್ಟ ವ್ಯಕ್ತಿಯ ಪತ್ನಿಗೆ ಕೋಟ್ಯಾಂತರ ರುಪಾಯಿ ಪರಿಹಾರ ನೀಡಿ, ಎರಡನೇ ಮದುವೆಯಾಗಿದ್ದಾಳೆ. ಈ ವಿಷಯ ಬೆಳಕಿಗೆ ಬಂದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಹೌದು, 54 ವರ್ಷದ ಕೇಂದ್ರ ಸರ್ಕಾರಿ ಮಹಿಳಾ ಅಧಿಕಾರಿ, ತಮಗಿಂತ 12 ವರ್ಷ ಕಿರಿಯ ಸಹೋದ್ಯೋಗಿಯನ್ನು ಮದುವೆಯಾಗಲು, ಅವನ ಪತ್ನಿಗೆ ಸುಮಾರು ಒಂದೂವರೆ ಕೋಟಿ ರುಪಾಯಿ ಮೌಲ್ಯದ ಪರಿಹಾರ ನೀಡಿರುವುದು ತಿಳಿದುಬಂದಿದೆ.

ಮಾಹಿತಿಯ ಪ್ರಕಾರ, ಕೇಂದ್ರ ಸರ್ಕಾರಿ ಇಲಾಖೆಗೆ ಹೊಸದಾಗಿ ಸೇರಿದ್ದ 42 ವರ್ಷದ ಉದ್ಯೋಗಿಯೊಂದಿಗೆ ಅದೇ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಹಿರಿಯ ಮಹಿಳಾ ಅಧಿಕಾರಿಗೆ ಪರಿಚಯ ಬೆಳೆದಿತ್ತು. ನಂತರ ಈ ಪರಿಚಯ ಸ್ನೇಹವಾಗಿ, ಬಳಿಕ ಪ್ರೀತಿಯಾಗಿ ಮಾರ್ಪಟ್ಟಿತು ಎಂದು ಹೇಳಲಾಗಿದೆ. ಈ ಸಂಬಂಧ ಶುರುವಾದ ನಂತರ ಆ ವ್ಯಕ್ತಿ ತನ್ನ ಕುಟುಂಬದಿಂದ ದೂರವಾಗಲು ಆರಂಭಿಸಿದ್ದಾನೆ ಎಂಬ ಆರೋಪಗಳೂ ಕೇಳಿಬಂದಿವೆ.

ಕುಟುಂಬದಲ್ಲಿ ಉದ್ವಿಗ್ನತೆ

ಆ ವ್ಯಕ್ತಿಗೆ ಮದುವೆಯಾಗಿ ಮಕ್ಕಳಿದ್ದು, ಎರಡನೇ ಸಂಬಂಧಕ್ಕಾಗಿ ಪತ್ನಿ ಹಾಗೂ 16 ಮತ್ತು 12 ವರ್ಷದ ಇಬ್ಬರು ಹೆಣ್ಣುಮಕ್ಕಳಿಂದ ದೂರಾಗಿದ್ದಾನೆ. ಇನ್ನು ಗಂಡನ ವರ್ತನೆಯಲ್ಲಿ ಬದಲಾವಣೆ ಕಂಡುಬಂದ ಹಿನ್ನಲೆ ಮನೆಯಲ್ಲಿ ಆಗ್ಗಾಗ್ಗೆ ಜಗಳಗಳು - ಮನಸ್ತಾಪ ಆಗುತ್ತಿತ್ತು. ದಿನ ಕಳೆದಂತೆ ಇದು ವಿಕೋಪಕ್ಕೆ ತಿರುಗಿದ್ದು, ಪರಿಸ್ಥಿತಿ ಹದಗೆಟ್ಟಂತೆ, ಪತ್ನಿ ಕಾನೂನು ಸಹಾಯಕ್ಕಾಗಿ ಕೌಟುಂಬಿಕ ನ್ಯಾಯಾಲಯವನ್ನು ಸಂಪರ್ಕಿಸಿದರು.

ವಿಚ್ಛೇದನಕ್ಕೆ ಷರತ್ತುಗಳು

ಗಂಡನ ವರ್ತನೆಯಿಂದ ಬೇಸತ್ತಿದ್ದ ಪತ್ನಿ ಕೆಲ ಷರತ್ತುಗಳ ಅನ್ವಯ ವಿಚ್ಛೇದನ ನೀಡಲು ಒಪ್ಪಿಕೊಂಡಿದ್ದಾರೆ. ವರದಿಗಳ ಪ್ರಕಾರ, ಒಂದು ಡ್ಯೂಪ್ಲೆಕ್ಸ್ ಫ್ಲ್ಯಾಟ್ ಮತ್ತು ಲಕ್ಷಾಂತರ ರುಪಾಯಿ ನಗದು ಸೇರಿ ದೊಡ್ಡ ಮೊತ್ತದ ಪರಿಹಾರವನ್ನು ನೀಡಬೇಕೆಂದು ಬೇಡಿಕೆ ಇಟ್ಟರು. ಈ ಷರತ್ತುಗಳಿಗೆ ಮಹಿಳಾ ಅಧಿಕಾರಿ ಒಪ್ಪಿಕೊಂಡು, ತಮ್ಮ ವೈಯಕ್ತಿಕ ಸಂಪಾದನೆಯಿಂದಲೇ ಹಣ ನೀಡಿದ್ದಾಳೆ ಎಂದು ತಿಳಿದುಬಂದಿದೆ.

ಒಪ್ಪಂದದ ನಂತರ ವಿಚ್ಛೇದನ

ಪರಿಹಾರ ಮೊತ್ತ ಪತ್ನಿಗೆ ನೀಡಿದ ನಂತರ, ದಂಪತಿ ಪರಸ್ಪರ ಒಪ್ಪಿಗೆಯಿಂದ ಕಾನೂನುಬದ್ಧವಾಗಿ ವಿಚ್ಛೇದನ ಪಡೆದರು. ನಂತರ ಮಹಿಳಾ ಅಧಿಕಾರಿ ಮತ್ತು ಆ ವ್ಯಕ್ತಿ ಮದುವೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಶ್ರೀಮಂತ ಹುಡುಗರು ಬಿಸಿ ಸಮೋಸ ಇದ್ದಂತೆ! ಸಂಗಾತಿ ಆಯ್ಕೆ ಬಗ್ಗೆ ಸಲಹೆ ನೀಡಿದ ಯುವತಿ!

ನ್ಯಾಯಾಲಯದ ಅಭಿಪ್ರಾಯ

ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಕುಟುಂಬ ನ್ಯಾಯಾಲಯದ ಸಲಹೆಗಾರರು, ಬಲವಂತವಾಗಿ ಸಂಬಂಧ ಮುಂದುವರಿಸುವುದಕ್ಕಿಂತ ಗೌರವಯುತವಾಗಿ ಬೇರ್ಪಡುವುದು ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ. ವಿಶೇಷವಾಗಿ ಮಕ್ಕಳ ಮಾನಸಿಕ ಆರೋಗ್ಯ ಮತ್ತು ಅವರ ಭವಿಷ್ಯದ ಆರ್ಥಿಕ ಭದ್ರತೆ ಮುಖ್ಯವಾಗಿರುವುದರಿಂದ, ಪರಸ್ಪರ ಒಪ್ಪಿಗೆಯ ವಿಚ್ಛೇದನವು ಕೆಲ ಸಂದರ್ಭಗಳಲ್ಲಿ ಉತ್ತಮ ಪರಿಹಾರವಾಗಬಹುದು ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ

ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವರು ಇದನ್ನು 1990ರ ದಶಕದ ಜನಪ್ರಿಯ ಬಾಲಿವುಡ್ ಸಿನಿಮಾ 'ಜುದಾಯಿ' ಕಥೆಗೆ ಹೋಲಿಸುತ್ತಿದ್ದಾರೆ. ಕೆಲವರು ಇದನ್ನು ವೈಯಕ್ತಿಕ ಆಯ್ಕೆ ಎಂದು ಅಭಿಪ್ರಾಯಪಟ್ಟರೆ, ಇನ್ನೂ ಕೆಲವರು ಕುಟುಂಬ ವ್ಯವಸ್ಥೆಯ ಮೇಲೆ ಇದರ ಪರಿಣಾಮದ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.

ಇನ್ನು ಕೌಟುಂಬಿಕ ನ್ಯಾಯಾಲಯಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಪರಸ್ಪರ ಒಪ್ಪಿಗೆಯ ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಿರುವುದಾಗಿ ಕಾನೂನು ತಜ್ಞರು ಹೇಳುತ್ತಾರೆ. ಜೀವನ ಶೈಲಿ, ಕೆಲಸದ ಒತ್ತಡ, ವೈಯಕ್ತಿಕ ಭಿನ್ನಾಭಿಪ್ರಾಯಗಳು ಮತ್ತು ಹೊಸ ಸಂಬಂಧಗಳು ಇದಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ಅವರು ಅಭಿಪ್ರಾಯಪಡುತ್ತಾರೆ.