ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅತ್ಯಾಚಾರ ಆರೋಪಿ ಜ್ಯೋತಿಷಿಯೊಂದಿಗೆ ಕಾಣಿಸಿಕೊಂಡ ಮಹಾರಾಷ್ಟ್ರದ ಮಹಿಳಾ ಅಧಿಕಾರಿ; ಫೋಟೊ ವೈರಲ್

ಅತ್ಯಾಚಾರ ಆರೋಪಿಯೊಂದಿಗೆ ಕಾಣಿಸಿಕೊಂಡ ಫೋಟೊ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಕಂಕರ್ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ರಾಜೀನಾಮೆಗೆ ಒತ್ತಾಯ ಕೇಳಿಬಂದಿದೆ. ಅಶೋಕ್ ಖರತ್ ಜತೆಗಿರುವ ಫೋಟೊ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಭಾರಿ ವಿವಾದಕ್ಕೆ ಕಾರಣವಾಗಿದೆ.

ಅಶೋಕ್ ಖರತ್ - ರೂಪಾಲಿ ಚಕಂಕರ್ (ಸಂಗ್ರಹ ಚಿತ್ರ)

ಮುಂಬೈ, ಮಾ. 20: ಮಹಾರಾಷ್ಟ್ರ (Maharashtra) ರಾಜ್ಯ ಮಹಿಳಾ ಆಯೋಗದ (Women Commission) ಅಧ್ಯಕ್ಷೆ ರೂಪಾಲಿ ಚಕಂಕರ್ (Rupali Chakankar) ಇದೀಗ ಭಾರಿ ವಿವಾದ ಹುಟ್ಟು ಹಾಕಿದ್ದಾರೆ. ಅತ್ಯಾಚಾರ ಆರೋಪಿ (Rape Accused) ಮತ್ತು ಸ್ವಯಂಘೋಷಿತ ಜ್ಯೋತಿಷಿ ಅಶೋಕ್ ಖರತ್ (Ashok Kharat) ಜತೆಗಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ರಾಜ್ಯದಲ್ಲಿ ಭಾರಿ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಚಕಂಕರ್ ಅವರ ರಾಜೀನಾಮೆಹೆ ಹಲವರು ಆಗ್ರಹಿಸುತ್ತಿದ್ದಾರೆ.

ನಿವೃತ್ತ ಮರ್ಚೆಂಟ್ ನೇವಿ ಅಧಿಕಾರಿಯಾಗಿದ್ದ ಅಶೋಕ್ ಖರತ್, ಜ್ಯೋತಿಷಿಯ ಸೋಗಿನಲ್ಲಿ 35 ವರ್ಷದ ಮಹಿಳೆಯ ಮೇಲೆ ಸತತ ಮೂರು ವರ್ಷಗಳ ಕಾಲ ಅತ್ಯಾಚಾರ ಎಸಗಿದ ಆರೋಪದ ಮೇಲೆ ನಾಸಿಕ್ ಜಿಲ್ಲೆಯಲ್ಲಿ ಬಂಧಿತನಾಗಿದ್ದಾನೆ. ತನಿಖೆಯ ವೇಳೆ ಪೊಲೀಸರು ಆತನ ಬಳಿಯಿದ್ದ ಪೆನ್ ಡ್ರೈವ್‌ನಲ್ಲಿ 58 ಆಕ್ಷೇಪಾರ್ಹ ವಿಡಿಯೊ ಪತ್ತೆಹಚ್ಚಿದ್ದಾರೆ. ಧಾರ್ಮಿಕ ವಿಧಿವಿಧಾನಗಳ ಹೆಸರಿನಲ್ಲಿ ಮಹಿಳೆಯರ ನಂಬಿಕೆಯನ್ನು ಗಳಿಸಿ, ನಂತರ ಅವರನ್ನು ಲೈಂಗಿಕವಾಗಿ ಶೋಷಿಸುತ್ತಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ. ಈತನ ಮೇಲೆ ಭಾರತೀಯ ನ್ಯಾಯ ಸಂಹಿತೆ ಮತ್ತು ಮಹಾರಾಷ್ಟ್ರದ ಮಾಟಮಂತ್ರ ವಿರೋಧಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಅಶೋಕ್ ಖರತ್‌ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಕಂಕರ್:



ರೂಪಾಲಿ ಚಕಂಕರ್ ಅವರೊಂದಿಗಿನ ನಂಟು

ಖರತ್ ಜತೆ ಚಕಂಕರ್ ಧಾರ್ಮಿಕ ವಿಧಿಗಳಲ್ಲಿ ಭಾಗವಹಿಸುತ್ತಿರುವ ಮತ್ತು ಆತನಿಗೆ ಗೌರವ ಸೂಚಕವಾಗಿ ಛತ್ರಿ ಹಿಡಿದಿರುವ ವಿಡಿಯೊ, ಫೋಟೊ ವಿವಾದವನ್ನು ಮತ್ತಷ್ಟು ಕೆರಳಿಸಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ರೂಪಾಲಿ, "ನನ್ನ ಮತ್ತು ಆತನ ಒಡನಾಟ ಅತ್ಯಂತ ಸೀಮಿತವಾಗಿದ್ದು, ಆತನ ವೈಯಕ್ತಿಕ ಜೀವನ ಅಥವಾ ಅಪರಾಧ ಕೃತ್ಯಗಳ ಬಗ್ಗೆ ನನಗೆ ಯಾವುದೇ ಮಾಹಿತಿ ಇರಲಿಲ್ಲ. ಕೇವಲ ಸಾಮಾಜಿಕ ಜಾಲತಾಣದ ದೃಶ್ಯಗಳನ್ನು ನೋಡಿ ತೀರ್ಮಾನಕ್ಕೆ ಬರಬೇಡಿ" ಎಂದು ಮನವಿ ಮಾಡಿದ್ದಾರೆ.

ಪ್ಲಂಬರ್ ಕೆಲಸ ಮಾಡುವ ವ್ಯಕ್ತಿಯ ವಾರ್ಷಿಕ ಆದಾಯ ಗೊತ್ತಾ?

ರಾಜಕೀಯ ಪ್ರತಿರೋಧ ಮತ್ತು ರಾಜೀನಾಮೆಗೆ ಒತ್ತಾಯ

ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವತ್, ಸುಷ್ಮಾ ಅಂಧಾರೆ ಮತ್ತು ಕಾಂಗ್ರೆಸ್ ನಾಯಕ ವಿಜಯ್ ವಡೆಟ್ಟಿವಾರ್ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಮಹಿಳೆಯರಿಗೆ ನ್ಯಾಯ ಒದಗಿಸಬೇಕಾದ ಸಾಂವಿಧಾನಿಕ ಸ್ಥಾನದಲ್ಲಿರುವವರು ಇಂತಹ ಆರೋಪಿಯೊಂದಿಗೆ ನಿಕಟ ಸಂಬಂಧ ಹೊಂದಿರುವುದು ನೈತಿಕವಾಗಿ ಸರಿಯಲ್ಲ ಎಂದು ಅವರು ವಾದಿಸಿದ್ದಾರೆ. ಎನ್‌ಸಿಪಿ (ಶರದ್ ಪವಾರ್ ಬಣ) ಸದಸ್ಯೆ ಮತ್ತು ಸಾಮಾಜಿಕ ಕಾರ್ಯಕರ್ತೆ ಅಂಜಲಿ ದಮಾನಿಯಾ ಕೂಡ ಚಕಂಕರ್ ತಕ್ಷಣವೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ. ಇಷ್ಟು ದೊಡ್ಡ ಹಗರಣದಲ್ಲಿ ಭಾಗಿಯಾದ ವ್ಯಕ್ತಿಯೊಂದಿಗೆ ಮಹಿಳಾ ಆಯೋಗದ ಅಧ್ಯಕ್ಷರೇ ಗುರುತಿಸಿಕೊಂಡರೆ ಮಹಿಳೆಯರು ನ್ಯಾಯವನ್ನು ಹೇಗೆ ನಿರೀಕ್ಷಿಸಲು ಸಾಧ್ಯ ಎಂದು ಪ್ರತಿಪಕ್ಷಗಳು ಪ್ರಶ್ನಿಸಿವೆ.