Fact Check: ಭಾರತದ ಮೇಲೆ ಕ್ಷಿಪಣಿ ದಾಳಿ ಮಾಡುವಾಗ ಪಾಕಿಸ್ತಾನಿಗಳು ವಿಡಿಯೋ ಮಾಡಿದ್ರಾ? ಅಸಲಿ ವಿಚಾರ ಬಯಲು
ಭಾರತ ಮತ್ತು ಪಾಕಿಸ್ತಾನದ ನಡುವಿನ ಗಡಿಯಲ್ಲಿ ಉದ್ವಿಗ್ನತೆ ತಾರಕಕ್ಕೇರಿರುವಾಗ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್ ಮತ್ತು ಎಕ್ಸ್‌ನಲ್ಲಿ ಸಾಕಷ್ಟು ಸುಳ್ಳು ಮಾಹಿತಿಗಳು ಹರಿದಾಡುತ್ತಿವೆ. ತಪ್ಪು ಮಾಹಿತಿಯ ವಿಡಿಯೊಗಳು, ಹಳೆಯ ಫೋಟೊಗಳು, ಸುಳ್ಳು ಹೇಳಿಕೆಗಳು ಮತ್ತು ಸುಳ್ಳು ಸಾರ್ವಜನಿಕ ಸಲಹೆಗಳು ಪ್ರವಾಹದ ರೂಪದಲ್ಲಿ ಹರಿದಾಡುತ್ತಿವೆ.

ಕ್ಷಿಪಣಿ ದಾಳಿಯ ವಿಡಿಯೊ.

ನವದೆಹಲಿ: ಭಾರತ (India) ಮತ್ತು ಪಾಕಿಸ್ತಾನದ (Pakistan) ನಡುವಿನ ಗಡಿಯಲ್ಲಿ ಉದ್ವಿಗ್ನತೆ ತಾರಕಕ್ಕೇರಿರುವಾಗ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್ (Facebook) ಮತ್ತು ಎಕ್ಸ್‌ನಲ್ಲಿ ಸಾಕಷ್ಟು ಸುಳ್ಳು ಮಾಹಿತಿಗಳು (False Information) ಹರಿದಾಡುತ್ತಿವೆ. ತಪ್ಪು ಮಾಹಿತಿಯ ವಿಡಿಯೊಗಳು, ಹಳೆಯ ಫೋಟೊಗಳು, ಸುಳ್ಳು ಹೇಳಿಕೆಗಳು ಮತ್ತು ಸುಳ್ಳು ಸಾರ್ವಜನಿಕ ಸಲಹೆಗಳು ಪ್ರವಾಹದ ರೂಪದಲ್ಲಿ ಹರಿದಾಡುತ್ತಿವೆ. ಜನರಿಗೆ ಮಾತ್ರ ಯಾವುದನ್ನು ನಂಬಬೇಕು? ಯಾವುದನ್ನು ಬಿಡಬೇಕು ಎಂಬುದೇ ದೊಡ್ಡ ಸಮಸ್ಯೆ ಆಗಿದೆ.
ಪಾಕಿಸ್ತಾನವು ಭಾರತದ ಗಡಿಯ ಕಡೆಗೆ ಇತ್ತೀಚೆಗೆ ಕ್ಷಿಪಣಿಗಳನ್ನು ಉಡಾಯಿಸಿದೆ ಎಂದು ಹೇಳಿಕೊಳ್ಳಲಾದ ವಿಡಿಯೊವೊಂದು ವೈರಲ್ ಆಗುತ್ತಿದೆ. ಎಕ್ಸ್ ಬಳಕೆದಾರ ಅಂಕುರ್ ಸಿಂಗ್ ಎಂಬವರು ಮೇ 10ರಂದು ಈ ವಿಡಿಯೊವನ್ನು ಶೇರ್ ಮಾಡಿ, "ಪಾಕಿಸ್ತಾನಿಗಳು ಭಾರತದ ಮೇಲೆ ಕ್ಷಿಪಣಿಗಳನ್ನು ಉಡಾಯಿಸುವಾಗ ವಿಡಿಯೋ ರೆಕಾರ್ಡ್ ಮಾಡುತ್ತಿದ್ದಾರೆ. ತಮ್ಮ ಕೊನೆಯ ಕ್ಷಣಗಳನ್ನು ರೆಕಾರ್ಡ್ ಮಾಡುತ್ತಿದ್ದಾರಾ?" ಎಂದು ಕೇಳಿದ್ದರು.
Pakistanis are recording video while firing missiles at India.
— Ankur Singh (@iAnkurSingh) May 10, 2025
Recording their last moments? pic.twitter.com/2kW3GzYOkF
ಆದರೆ ಈ ವಿಡಿಯೊ ಕ್ಷಿಪಣಿ ದಾಳಿಯದ್ದೇ ಎಂದು ಕಂಡರೂ, ಸಂದೇಹಗೊಂಡ ಒಬ್ಬ ಬಳಕೆದಾರರು ಇಲಾನ್ ಮಸ್ಕ್‌ರ ಎಐ ಚಾಟ್‌ಬಾಟ್ ಗ್ರಾಕ್‌ಗೆ ಸತ್ಯತೆಯನ್ನು ಪರಿಶೀಲಿಸಲು ಕೇಳಿದ್ದಾರೆ. ಆಗ ಆ ವಿಡಿಯೊ 2019ರಲ್ಲಿ ಪಾಕಿಸ್ತಾನದ ನಸ್ರ್ ಕ್ಷಿಪಣಿ ಪರೀಕ್ಷೆಯ ಸಂದರ್ಭದ್ದು ಎನ್ನುವ ಸತ್ಯ ಬಯಲಾಗಿದೆ. "ಭಾರತ-ಪಾಕಿಸ್ತಾನದ ಉದ್ವಿಗ್ನತೆ ನಿಜವಾದರೂ, 2025ರ ಮೇಯಲ್ಲಿ ಕ್ಷಿಪಣಿ ದಾಳಿಗಳು ನಡೆದಿದ್ದರೂ, ಈ ವಿಡಿಯೋ ತಪ್ಪು ಮಾಹಿತಿಯಿಂದ ಕೂಡಿದೆ. ಇದು ಪ್ರಸ್ತುತ ಘಟನೆಗೆ ಸಂಬಂಧಿಸಿಲ್ಲ” ಎಂದು ಗ್ರಾಕ್ ಸ್ಪಷ್ಟಪಡಿಸಿದೆ.
ಈ ಸುದ್ದಿಯನ್ನು ಓದಿ: Operation Sindoor: ಭಾರತದ ನಿಖರ ದಾಳಿಗೆ ಉಗ್ರರ ತಾಣ, ಪಾಕ್ ವಾಯು ನೆಲೆ ಛಿದ್ರ ಛಿದ್ರ; ಇಲ್ಲಿದೆ ಸ್ಯಾಟ್‌ಲೈಟ್ ಚಿತ್ರಗಳು
ಬೇರೆಯವರೂ ಕೂಡ ಕಾಮೆಂಟ್‌ಗಳಲ್ಲಿ ವಿಡಿಯೊದ ಸತ್ಯಾಸತ್ಯತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಒಬ್ಬರು, "ಇದು ಲೆಬನಾನ್ ಅಥವಾ ಯೆಮನ್‌ನ ವಿಡಿಯೊದಂತಿದೆʼʼ ಎಂದು ಬರೆದಿದ್ದಾರೆ. ಕಾಮೆಂಟ್‌ಗಳಲ್ಲಿ ಹಲವು ಜನ ಪಾಕಿಸ್ತಾನದ ಸೇನೆಯನ್ನು ಗೇಲಿ ಮಾಡಿದ್ದಾರೆ. ಹಾಸ್ಯಮಯವಾಗಿ ಟೀಕಿಸಿ ಪಕ್ಕದ ದೇಶವನ್ನು ಲೇವಡಿ ಮಾಡಿದ್ದಾರೆ.
ಸುಳ್ಳು ಮಾಹಿತಿಗಳನ್ನು ಹರಡಿದ ಹಲವು ವಿಡಿಯೊಗಳಲ್ಲಿ ಇದೂ ಕೂಡ ಒಂದು. ಹಲವು ವಿಡಿಯೊಗಳು ಡಿಜಿಟಲ್ ತಪ್ಪು ಮಾಹಿತಿಯ ದಾಳಿ ಉಂಟು ಮಾಡಿವೆ. ಈ ಸುಳ್ಳುಗಳು ಕೇವಲ ಗೊಂದಲ ಉಂಟುಮಾಡಲು ಮಾತ್ರವಲ್ಲ, ಪಾಕಿಸ್ತಾನದ ತಾನೇ ಪ್ರಚೋದಿಸುತ್ತಿರುವ ಕೃತ್ಯಗಳನ್ನು ಮರೆಮಾಚಲು ಕೂಡ ಬಳಸಲಾಗುತ್ತಿವೆ. ಇಂತಹ ಹಲವು ವಿಡಿಯೊಗಳು ಮತ್ತು ಫೋಟೊಗಳನ್ನು ಪಿಐಬಿ ಫ್ಯಾಕ್ಟ್ ಚೆಕ್ ಮೂಲಕ ಸ್ಪಷ್ಟಪಡಿಸಿದೆ. ಜಮ್ಮು ವಾಯುನೆಲೆಯಲ್ಲಿ ಒಂದಕ್ಕಿಂತ ಹೆಚ್ಚು ಸ್ಫೋಟಗಳಾದವು ಎಂದು ಹೇಳಿಕೊಂಡ ಒಂದು ಫೋಟೊ ವೈರಲ್ ಆಗಿದ್ದು, ಅದು 2021ರ ಆಗಸ್ಟ್‌ನಲ್ಲಿ ಕಾಬೂಲ್ ವಿಮಾನ ನಿಲ್ದಾಣದ ಬಾಂಬ್ ಸ್ಫೋಟದ್ದಾಗಿತ್ತು ಎಂದು ಪಿಐಬಿ ತಿಳಿಸಿದೆ.
ಪರಿಶೀಲನೆ ಮಾಡದ ಸಾಕಷ್ಟು ವಿಡಿಯೊಗಳು ಮತ್ತು ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಹಿನ್ನಲೆಯಲ್ಲಿ, ಭಾರತ ಸರ್ಕಾರವು ಸಾರ್ವಜನಿಕರಿಗೆ ಕೇವಲ ಅಧಿಕೃತ ಮೂಲಗಳನ್ನು ಮಾತ್ರ ನಂಬುವಂತೆ ಮತ್ತು ಪರಿಶೀಲಿಸದೆ ಇರುವ ಮಾಹಿತಿಯನ್ನು ಶೇರ್ ಮಾಡದಂತೆ ಸಲಹೆ ನೀಡಿದೆ.