ನವದೆಹಲಿ, ಮೇ 19: ಸೆಪ್ಟೆಂಬರ್ 12 ಮತ್ತು 13ರಂದು ನಡೆಯಲಿರುವ ಬ್ರಿಕ್ಸ್ ಶೃಂಗಸಭೆಗಾಗಿ (BRICS Summit) ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ನವದೆಹಲಿಗೆ ಆಗಮಿಸಲಿದ್ದಾರೆ. ಭಾರತ ಮತ್ತು ರಷ್ಯಾ ನಡುವಿನ ಕಾರ್ಯತಂತ್ರ ಮತ್ತು ರಕ್ಷಣಾ ಸಹಕಾರವು ಗಟ್ಟಿಯಾಗುತ್ತಿರುವ ಮಧ್ಯೆ ಪುಟಿನ್ ದೇಶಕ್ಕೆ ಆಗಮಿಸುತ್ತಿದ್ದಾರೆ. ವರ್ಷದೊಳಗೆ ಪುಟಿನ್ ಅವರ ಎರಡನೇ ಭಾರತ ಭೇಟಿ ಇದಾಗಿದ್ದು, ಉಭಯ ದೇಶಗಳ ನಡುವಿನ ಉನ್ನತ ಮಟ್ಟದ ಒಡನಾಟವನ್ನು ಎತ್ತಿ ತೋರಿಸಿದೆ.
2025ರ ಡಿಸೆಂಬರ್‌ನಲ್ಲಿ ನಡೆದ 23ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಗಾಗಿ ಪುಟಿನ್ ಭಾರತಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರು ಪ್ರಮುಖ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ವಿಸ್ತರಿಸುವ ಕುರಿತು ಪ್ರಧಾನಿ ನರೇಂದ್ರ ಮೋದಿ ಜತೆ ಮಾತುಕತೆ ನಡೆಸಿದ್ದರು.
2025ರ ಈ ಭೇಟಿಯು ಮಹತ್ವದ್ದಾಗಿತ್ತು. ಏಕೆಂದರೆ 2022ರಲ್ಲಿ ರಷ್ಯಾ-ಉಕ್ರೇನ್ ಯುದ್ಧ ಆರಂಭವಾದ ಬಳಿಕ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಭಾರತದ ಮೊದಲ ಭೇಟಿ ಇದಾಗಿತ್ತು. ಇದಕ್ಕೂ ಮೊದಲು, ಪುಟಿನ್ ಕೊನೆಯಾಗಿ 2021ರಲ್ಲಿ ನವದೆಹಲಿಗೆ ಆಗಮಿಸಿದ್ದರು.
ಅಮೆರಿಕ ಉಕ್ರೇನ್‌ಗೆ ಸಹಾಯ ಮಾಡುವುದನ್ನು ನಿಲ್ಲಿಸಿದರೆ ಇರಾನ್ ಜೊತೆಗಿನ ಸಂಬಂಧ ಕಡಿತ?
ಬ್ರಿಕ್ಸ್ ವಿದೇಶಾಂಗ ಸಚಿವರ ಸಭೆಗಾಗಿ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ನವದೆಹಲಿಗೆ ಭೇಟಿ ನೀಡಿದ ಕೆಲವು ದಿನಗಳ ನಂತರ ಪುಟಿನ್ ಭೇಟಿ ನೀಡಲಿದ್ದಾರೆ. ಮೇ 14 ಮತ್ತು 15ರಂದು ನಿಗದಿಯಾಗಿದ್ದ ಎರಡು ದಿನಗಳ ಮಾತುಕತೆಯನ್ನು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ನವದೆಹಲಿಯಲ್ಲಿ ಮುಂಬರುವ ಬ್ರಿಕ್ಸ್ ಶೃಂಗಸಭೆಯು ಜಾಗತಿಕ ಭದ್ರತಾ ಸವಾಲುಗಳು, ಆರ್ಥಿಕ ಸಹಕಾರ ಮತ್ತು ಬಹುಧ್ರುವೀಯ ವಿಶ್ವ ವ್ಯವಸ್ಥೆಯನ್ನು ಬಲಪಡಿಸುವುದರ ಮೇಲೆ ಗಮನಹರಿಸುವ ನಿರೀಕ್ಷೆಯಿದೆ.
ರಷ್ಯಾ ವಿದೇಶಾಂಗ ಸಚಿವ ಲಾವ್ರೊವ್ ಜತೆ ಎಸ್. ಜೈಶಂಕರ್ ಮಾತುಕತೆ
ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಮತ್ತು ರಷ್ಯಾದ ವಿದೇಶಾಂಗ ಸಚಿವ ಸರ್ಗೆ ಲಾವ್ರೊವ್ ಬುಧವಾರ (ಮೇ 13) ನವದೆಹಲಿಯಲ್ಲಿ ಮಾತುಕತೆ ನಡೆಸಿದರು. ಜಾಗತಿಕ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳ ನಡುವೆಯೂ ಉಭಯ ದೇಶಗಳ ನಡುವಿನ ವ್ಯಾಪಾರ ಮತ್ತು ಇಂಧನ ಸಹಕಾರವನ್ನು ಹೆಚ್ಚಿಸುವ ಕುರಿತು ಈ ಸಭೆಯಲ್ಲಿ ಚರ್ಚಿಸಲಾಯಿತು.
ಮೇ 14ರಂದು ಆರಂಭವಾದ ಎರಡು ದಿನಗಳ ಬ್ರಿಕ್ಸ್ (BRICS) ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲು ಲಾವ್ರೊವ್ ದೆಹಲಿಗೆ ಆಗಮಿಸಿದ ಬೆನ್ನಲ್ಲೇ ಈ ಭೇಟಿ ನಡೆದಿದೆ. ಬ್ರಿಕ್ಸ್ ವಿದೇಶಾಂಗ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ, ಬ್ರೆಜಿಲ್‌ನ ಮೌರೊ ವಿಯೆರಾ ಮತ್ತು ದಕ್ಷಿಣ ಆಫ್ರಿಕಾದ ಅಂತಾರಾಷ್ಟ್ರೀಯ ಸಂಬಂಧಗಳ ಸಚಿವ ಓಜಿ ಲಮೋಲಾ ಮೇ 13ರಂದೇ ದೆಹಲಿಗೆ ಬಂದಿಳಿದಿದ್ದರು.
ಜೈಶಂಕರ್ ಮತ್ತು ಲಾವ್ರೊವ್ ಪಶ್ಚಿಮ ಏಷ್ಯಾ ಬಿಕ್ಕಟ್ಟು ಹಾಗೂ ಉಕ್ರೇನ್ ಸಂಘರ್ಷದ ಬಗ್ಗೆ ಚರ್ಚಿಸಿದ್ದಾರೆಂದು ತಿಳಿದುಬಂದಿದೆ. ಈ ಕುರಿತು ಅವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ, ಉಭಯ ದೇಶಗಳ ನಡುವಿನ ಸುದೃಢ ಸಂಬಂಧ ಮತ್ತು ಪ್ರಾದೇಶಿಕ ವಿಷಯಗಳ ಕುರಿತು ನಡೆಸಿದ ಸಮಾಲೋಚನೆಯು ಅತ್ಯಂತ ಸಕಾರಾತ್ಮಕವಾಗಿತ್ತು ಎಂದು ಹಂಚಿಕೊಂಡಿದ್ದಾರೆ.