ಗಾಂಧಿನಗರ, ಸೆ. 8: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ(Rahul Gandi) ಅವರ ‘ಛಾತ್ರೋಂ ಕಿ ಗೂಂಜ್’ ವಿದ್ಯಾರ್ಥಿ ಸಂಪರ್ಕ ಅಭಿಯಾನಕ್ಕೆ ಪರೋಕ್ಷವಾಗಿ ತಿರುಗೇಟು ನೀಡಿರುವ ಪ್ರಧಾನಿ ನರೇಂದ್ರ ಮೋದಿ(PM Modi), ಭಾರತದ ಯುವಕರ ಧ್ವನಿ ಮತ್ತು ಆಶಯಗಳು ‘ಸುಳ್ಳಿನ ಪ್ರತಿಧ್ವನಿ’ಗಿಂತ ಮೇಲುಗೈ ಸಾಧಿಸಲಿವೆ ಎಂದು ಹೇಳಿದ್ದಾರೆ. ಗುಜರಾತ್‌ನ ವಡೋದರಾದಲ್ಲಿ ನಡೆದ ‘ನಮೋ ಫಾರ್ ವಿಕಸಿತ ಭಾರತ’ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಜನರನ್ನು ದಾರಿ ತಪ್ಪಿಸಲು ಪ್ರಯತ್ನಿಸುವವರು ಪ್ರತಿಯೊಂದು ಬೀದಿ ಮೂಲೆಗಳಲ್ಲೂ ಸಿಗುತ್ತಾರೆ. ಆದರೆ ಭಾರತದ ಯುವಕರು ಸತ್ಯದ ಧ್ವನಿಯಿಂದ ಪ್ರೇರಿತರಾಗಿ ಮುಂದೆ ಸಾಗುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗುಜರಾತ್‌ನಲ್ಲಿ ₹35,000 ಕೋಟಿಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಚಾಲನೆ ನೀಡಿದರು. ವೆಸ್ಟರ್ನ್ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್‌ನ (WDFC) ಅಂತಿಮ ಮೂರು ವಿಭಾಗಗಳಾದ ನ್ಯೂ ಸನಂದ್–ನ್ಯೂ ಮಕರಪುರ, ನ್ಯೂ ಉಂಬರ್‌ಗಾಂವ್–ನ್ಯೂ ಸಫಾಲೆ ಹಾಗೂ ನ್ಯೂ ಸಫಾಲೆ–ಜೆಎನ್‌ಪಿಟಿ ವಿಭಾಗಗಳನ್ನು ಅವರು ಉದ್ಘಾಟಿಸಿದರು. ಒಟ್ಟು 326 ಕಿ.ಮೀ. ಉದ್ದದ ಈ ಮೂರು ವಿಭಾಗಗಳಿಗೆ ₹20,700 ಕೋಟಿಗೂ ಹೆಚ್ಚು ವೆಚ್ಚವಾಗಿದೆ.
ವಡೋದರದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ:
2014ಕ್ಕೂ ಮುನ್ನ ಫ್ರೈಟ್ ಕಾರಿಡಾರ್ ಯೋಜನೆಯ ಕಡತಗಳು ಕಚೇರಿಗಳ ನಡುವೆ ಓಡಾಡುತ್ತಿದ್ದವು ಎಂದು ಆರೋಪಿಸಿದ ಮೋದಿ, ತಮ್ಮ ಸರ್ಕಾರದ ಅವಧಿಯಲ್ಲಿ ದೇಶದ ‘ವರ್ಕ್ ಕಲ್ಚರ್’ ಬದಲಾಗಿದೆ ಎಂದು ಹೇಳಿದರು.
ಯುವಕರಿಗೆ AI ಕೌಶಲ್ಯಕ್ಕೆ ಒತ್ತು
ಭಾರತದ ಯುವ ಪೀಳಿಗೆಯನ್ನು ಕೃತಕ ಬುದ್ಧಿಮತ್ತೆ (AI) ಆಧಾರಿತ ಭವಿಷ್ಯದ ಆರ್ಥಿಕತೆಗೆ ಸಿದ್ಧಪಡಿಸುವುದು ಸರ್ಕಾರದ ಪ್ರಮುಖ ಗುರಿಯಾಗಿದೆ ಎಂದು ಮೋದಿ ಹೇಳಿದರು. ಆರೋಗ್ಯ, ಉತ್ಪಾದನೆ, ರೋಬೋಟಿಕ್ಸ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಯುವಕರು AI ಬಳಸುವ ಅಗತ್ಯವಿದೆ ಎಂದರು.
ರೂಫ್ಟಾಪ್ ಸೋಲಾರ್ ಯೋಜನೆಯಿಂದಲೂ ಯುವಕರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ ಎಂದು ಅವರು ಹೇಳಿದರು. ದೇಶದಲ್ಲಿ 55 ಲಕ್ಷ ಕುಟುಂಬಗಳು ಸೌರ ವಿದ್ಯುತ್ ಘಟಕಗಳನ್ನು ಅಳವಡಿಸಿಕೊಂಡಿದ್ದು, ಗುಜರಾತ್‌ನಲ್ಲೇ 11 ಲಕ್ಷ ಕುಟುಂಬಗಳು ಇದರಲ್ಲಿ ಸೇರಿವೆ ಎಂದು ಪ್ರಧಾನಿ ತಿಳಿಸಿದರು.
ಮುಂಬರುವ ದಿನಗಳಲ್ಲಿ ಭಾರತ ‘ಚಿಪ್ಸ್‌ನಿಂದ ಹಡಗುಗಳವರೆಗೆ’ ಉತ್ಪಾದನಾ ಸಾಮರ್ಥ್ಯವನ್ನು ವಿಸ್ತರಿಸುತ್ತಿದ್ದು, ಸ್ವಾವಲಂಬನೆಗಾಗಿ ದೇಶೀಯ ಪೂರೈಕೆ ಸರಪಳಿಗಳನ್ನು ಬಲಪಡಿಸಲಾಗುತ್ತಿದೆ ಎಂದು ಮೋದಿ ಹೇಳಿದರು.
ವಡೋದರಾ ಕಾರ್ಯಕ್ರಮದ ಬಳಿಕ ಪ್ರಧಾನಿ ಮೋದಿ ಮುಂಬೈಗೆ ತೆರಳಿ ಗ್ಲೋಬಲ್ ಫಿನ್‌ಟೆಕ್ ಫೆಸ್ಟ್ 2026ರಲ್ಲಿ ಭಾಗವಹಿಸಲಿದ್ದಾರೆ. ಸೆಪ್ಟೆಂಬರ್ 8ರಿಂದ 11ರವರೆಗೆ ನಡೆಯುತ್ತಿರುವ ಈ ಸಮ್ಮೇಳನದ ಈ ವರ್ಷದ ವಿಷಯ 'Potential to Impact: Agentic AI, Tokenisation, Quantum - Trusted, Connected, Global Systems for Inclusive Finance'.