ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕಳಚಿದ ಪ್ರಮುಖ ಸಾಂಸ್ಕೃತಿಕ ಕೊಂಡಿ: ಐತಿಹಾಸಿಕ ಸೆಂಗೋಲ್ ನಿರ್ಮಿಸಿದ ಆಭರಣ ವ್ಯಾಪಾರಿ ವುಮ್ಮಿಡಿ ಎಥಿರಾಜ್ ನಿಧನ; ಪ್ರಧಾನಿ ನರೇಂದ್ರ ಮೋದಿ ಸಂತಾಪ

Vummidi Ethiraj Passed Away: ತಮಿಳುನಾಡಿನ ಖ್ಯಾತ ಆಭರಣ ವ್ಯಾಪಾರಿ ಹಾಗೂ ವುಮ್ಮಿಡಿ ಬಂಗಾರು ಜ್ಯುವೆಲ್ಲರ್ಸ್ ಕುಟುಂಬದ ಹಿರಿಯರಾದ ವುಮ್ಮಿಡಿ ಎಥಿರಾಜ್ (99) ನಿಧನರಾಗಿದ್ದಾರೆ. 1947ರಲ್ಲಿ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರಿಗೆ ಹಸ್ತಾಂತರಿಸಲಾದ ಐತಿಹಾಸಿಕ ಸೆಂಗೋಲ್ ನಿರ್ಮಾಣದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಸಂತಾಪ ಸೂಚಿಸಿದ್ದಾರೆ.

ವುಮ್ಮಿಡಿ ಎಥಿರಾಜ್ ಜತೆ ನರೇಂದ್ರ ಮೋದಿ (ಸಂಗ್ರಹ ಚಿತ್ರ)

ಚೆನ್ನೈ, ಅ. 21: ಭಾರತದ ಖ್ಯಾತ ಆಭರಣ ವ್ಯಾಪಾರಿ, 125 ವರ್ಷಗಳ ಇತಿಹಾಸ ಹೊಂದಿರುವ ವುಮ್ಮಿಡಿ ಬಂಗಾರು ಜ್ಯುವೆಲ್ಲರ್ಸ್‌ನ (Vummidi Bangaru Jewellers) ಹಿರಿಯರಾದ ವುಮ್ಮಿಡಿ ಎಥಿರಾಜ್ (Vummidi Ethiraj) ಬುಧವಾರ ತಮಿಳುನಾಡಿನ ಚೆನ್ನೈನಲ್ಲಿ ನಿಧನರಾಗಿದ್ದಾರೆ (Vummidi Ethiraj Passed Away). ಅವರಿಗೆ 99 ವರ್ಷ ವಯಸ್ಸಾಗಿತ್ತು. ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ (C.P. Radhakrishnan) ಸೇರಿ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸಂತಾಪ ಸೂಚಿಸಿ, ಭಾರತದ ಐತಿಹಾಸಿಕ ಸೆಂಗೋಲ್ ನಿರ್ಮಾಣದಲ್ಲಿ ಎಥಿರಾಜ್ ವಹಿಸಿದ್ದ ಪಾತ್ರವನ್ನು ಸ್ಮರಿಸಿದ್ದಾರೆ. ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರಿಗೆ ಹಸ್ತಾಂತರಿಸಲಾದ ಐತಿಹಾಸಿಕ ಸೆಂಗೋಲ್ (ರಾಜದಂಡ) ನಿರ್ಮಾಣಕ್ಕೆ ಸಹಕರಿಸಿದ್ದಕ್ಕಾಗಿ ಎಥಿರಾಜ್ ಸದಾ ಸ್ಮರಣೀಯರಾಗಿರುತ್ತಾರೆ ಎಂದು ಹೇಳಿದ್ದಾರೆ.

ನರೇಂದ್ರ ಮೋದಿ ಅವರ ಎಕ್ಸ್‌ ಪೋಸ್ಟ್‌:



ಭಾರತದ ಸಂಪ್ರದಾಯ ಮತ್ತು ಸಂಸ್ಕೃತಿಯೊಂದಿಗೆ ನಿಕಟ ಸಂಬಂಧ ಹೊಂದಿದ್ದ ಎಥಿರಾಜ್ ಅವರ ನಿಧನದಿಂದ ತೀವ್ರ ದುಃಖವಾಗಿದೆ. 2023ರಲ್ಲಿ ಹೊಸ ಸಂಸತ್ ಭವನದಲ್ಲಿ ಸೆಂಗೋಲ್‌ಗೆ ಗೌರವಯುತ ಸ್ಥಾನ ಕಲ್ಪಿಸುವ ಅವಕಾಶ ನಮ್ಮ ಸರ್ಕಾರಕ್ಕೆ ದೊರೆತಿತ್ತು. ಆ ಸಂದರ್ಭದಲ್ಲಿ ಎಥಿರಾಜ್ ಅವರನ್ನು ಭೇಟಿಯಾಗಿ ದೇಶ ಮತ್ತು ಸಂಸ್ಕೃತಿಗೆ ಅವರು ನೀಡಿದ ಕೊಡುಗೆಗಾಗಿ ಕೃತಜ್ಞತೆ ಸಲ್ಲಿಸುವ ಗೌರವವೂ ನನಗೆ ಲಭಿಸಿತ್ತು ಎಂದು ಮೋದಿ ತಿಳಿಸಿದ್ದಾರೆ.

ಅವರ ಜೀವನ ಮತ್ತು ಕರಕುಶಲ ಕೌಶಲ್ಯ ಭಾರತದ ಶ್ರೀಮಂತ ಪರಂಪರೆ ಹಾಗೂ ದೇಶದ ಐತಿಹಾಸಿಕ ಪಯಣದ ನಡುವಿನ ಮಹತ್ವದ ಕೊಂಡಿಯಾಗಿವೆ. ಅವರ ಕುಟುಂಬದವರು ಮತ್ತು ಅಭಿಮಾನಿಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು ಎಂದು ಪ್ರಧಾನಿ ಹೇಳಿದ್ದಾರೆ.

ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಕೂಡ ಎಥಿರಾಜ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಭಾರತದ ನಾಗರಿಕತೆಯ ಪರಂಪರೆಯ ಪವಿತ್ರ ಸಂಕೇತ ಐತಿಹಾಸಿಕ ಸೆಂಗೋಲ್ ನಿರ್ಮಾಣದಲ್ಲಿ ಅವರು ನೀಡಿದ ಕೊಡುಗೆ ಸದಾ ಗೌರವದಿಂದ ಸ್ಮರಿಸಲ್ಪಡುತ್ತದೆ ಎಂದು ತಿಳಿಸಿದ್ದಾರೆ.

CJP ನಾಯಕರಾದ ಆಶುತೋಷ್ ರಂಕಾ, ಸೌರವ್ ದಾಸ್ ನ್ಯಾಯಾಂಗ ಬಂಧನ 2 ದಿನ ವಿಸ್ತರಣೆ

ಭಾರತದ ಶ್ರೀಮಂತ ಆಭರಣ ತಯಾರಿಕಾ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಎಥಿರಾಜ್ ಅವರ ಕೊಡುಗೆ ಅಮೂಲ್ಯವಾದುದು. ಅವರ ಸಾಧನೆ ಶಾಶ್ವತ ಪರಂಪರೆಯಾಗಿ ಉಳಿಯಲಿದೆ ಎಂದು ಉಪರಾಷ್ಟ್ರಪತಿ ಹೇಳಿದ್ದಾರೆ.

ಯಾರು ಈ ವುಮ್ಮಿಡಿ ಎಥಿರಾಜ್?

ಸುದ್ದಿಸಂಸ್ಥೆ ಪಿಟಿಐ ವರದಿಯ ಪ್ರಕಾರ, ವುಮ್ಮಿಡಿ ಎಥಿರಾಜ್ 125 ವರ್ಷಗಳ ಇತಿಹಾಸ ಹೊಂದಿರುವ ಪ್ರಸಿದ್ಧ ವುಮ್ಮಿಡಿ ಬಂಗಾರು ಜ್ಯುವೆಲ್ಲರ್ಸ್ ಕುಟುಂಬದ ಹಿರಿಯರಾಗಿದ್ದರು. ಆಭರಣ ತಯಾರಿಕೆಯಲ್ಲಿ ಪರಿಣತಿ ಹೊಂದಿದ್ದ ಅವರು, ಭಾರತದ ಸ್ವಾತಂತ್ರ್ಯದ ಇತಿಹಾಸದಲ್ಲಿ ಮಹತ್ವ ಪಡೆದಿರುವ ಸೆಂಗೋಲ್ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಏನಿದು ಸೆಂಗೋಲ್?

ಸೆಂಗೋಲ್ ಎಂಬುದು ಚಿನ್ನದ ಲೇಪನ ಹೊಂದಿರುವ ಬೆಳ್ಳಿಯ ರಾಜದಂಡ. 1947ರಲ್ಲಿ ಬ್ರಿಟಿಷರಿಂದ ಭಾರತಕ್ಕೆ ಅಧಿಕಾರ ಹಸ್ತಾಂತರವಾದ ಸಂದರ್ಭದ ಸಂಕೇತವಾಗಿ ಇದನ್ನು ರೂಪಿಸಲಾಗಿತ್ತು. ಭಾರತ ಸ್ವಾತಂತ್ರ್ಯ ಪಡೆಯುವ ಮುನ್ನಾದಿನ ತಮಿಳುನಾಡಿನ ತಿರುವಾವಡುವತ್ತುರೈ ಅಧೀನಂ ಮಠದ ಧಾರ್ಮಿಕ ಮುಖಂಡರು ವಿಶೇಷವಾಗಿ ಪ್ರಯಾಣಿಸಿ ಈ ಸೆಂಗೋಲ್ ಅನ್ನು ಜವಾಹರಲಾಲ್ ನೆಹರೂ ಅವರಿಗೆ ಹಸ್ತಾಂತರಿಸಿದ್ದರು.

ದಶಕಗಳ ಬಳಿಕ, 2023ರಲ್ಲಿ ನೂತನ ಸಂಸತ್ ಭವನದಲ್ಲಿ ಸೆಂಗೋಲ್‌ಗೆ ಗೌರವಯುತ ಸ್ಥಾನ ಕಲ್ಪಿಸಲಾಯಿತು. ಭಾರತದ ಐತಿಹಾಸಿಕ ಪರಂಪರೆ ಮತ್ತು ಸ್ವಾತಂತ್ರ್ಯದ ನೆನಪನ್ನು ಪ್ರತಿನಿಧಿಸುವ ಈ ಸೆಂಗೋಲ್ ನಿರ್ಮಾಣದಲ್ಲಿ ಎಥಿರಾಜ್ ಅವರ ಕೊಡುಗೆ ಮಹತ್ವದ್ದಾಗಿದೆ.