ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕೋಟ್ಯಂತರ ರುಪಾಯಿ ನಗದು, ಮದ್ಯದ ಬಾಟಲಿ, ಕಾಂಡೋ, ಬೆಡ್‌ರೂಮ್: ಇದು ಯಾವುದೇ ಲಾಡ್ಜ್‌ ಅಲ್ಲ; ಪಶ್ಚಿಮ ಬಂಗಾಳದ ಶಾಲೆಯಲ್ಲಿ ಕಂಡುಬಂದ ದೃಶ್ಯ!

ಪಶ್ಚಿಮ ಬಂಗಾಳದ ಕಾಂಚ್ರಾಪಾರಾದ ಖಾಸಗಿ ಶಾಲೆಯೊಂದರಿಂದ ಪೊಲೀಸರು 1.77 ಕೋಟಿ ರುಪಾಯಿ ನಗದು, ಮದ್ಯದ ಬಾಟಲಿಗಳು ಹಾಗೂ ಬೆಡ್‌ರೂಮ್ ಮಾದರಿಯ ಕೋಣೆಯನ್ನು ಪತ್ತೆ ಹಚ್ಚಿದ್ದಾರೆ. ಹಣಕಾಸು ಅಕ್ರಮದ ದೂರಿನ ಆಧಾರದ ಮೇಲೆ ನಡೆದ ದಾಳಿಯಲ್ಲಿ ಹಲವು ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿದ್ದು, ಪ್ರಕರಣ ರಾಜಕೀಯ ವಿವಾದಕ್ಕೂ ಕಾರಣವಾಗಿದೆ.

ಪಶ್ಚಿಮ ಬಂಗಾಳದ ನಾರ್ತ್ 24 ಪರಗಣ ಜಿಲ್ಲೆಯ ಕಾಂಚ್ರಾಪಾರಾದ ಶಾಲೆಯಲ್ಲಿ ಪತ್ತೆಯಾದ ನಗದು

ಕೋಲ್ಕತ್ತಾ, ಜೂ. 11: ಪಶ್ಚಿಮ ಬಂಗಾಳದ ನಾರ್ತ್ 24 ಪರಗಣ ಜಿಲ್ಲೆಯ ಕಾಂಚ್ರಾಪಾರಾದಲ್ಲಿರುವ ಹಾರ್ನೆಟ್ ಇಂಗ್ಲಿಷ್ ಮೀಡಿಯಂ ಶಾಲೆಯಿಂದ (Harnett English Medium School) ಪೊಲೀಸರು ಬರೋಬ್ಬರಿ 1.77 ಕೋಟಿ ರುಪಾಯಿ ನಗದು, ಮದ್ಯದ ಬಾಟಲಿ, ಕಾಂಡಂ ಹಾಗೂ ಬೆಡ್‌ರೂಮ್ ಮಾದರಿಯ ಕೋಣೆಯನ್ನು ಪತ್ತೆಹಚ್ಚಿದ್ದು, ರಾಜ್ಯಾದ್ಯಂತ ಭಾರಿ ವಿವಾದ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಸರಸ್ವತಿ ದೇಗುಲದಂತಿರಬೇಕಾದ ಶಿಕ್ಷಣ ಸಂಸ್ಥೆಯೊಂದು ಇಂತಹ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿರುವುದು ಪೋಷಕರಲ್ಲಿ ತೀವ್ರ ಆತಂಕ ಮೂಡಿಸಿದೆ.

ಶಾಲೆಯ ಹಣಕಾಸು ಅಕ್ರಮಗಳ ಕುರಿತು ಜೂನ್ 10ರಂದು ಪ್ರಭಾರ ಪ್ರಾಂಶುಪಾಲ ಬಿಕಾಶ್ ಚಂದ್ರ ಪಾಲ್ ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಕೈಗೊಂಡಿದ್ದರು. ಶಾಲೆಯ ಅಕೌಂಟೆಂಟ್ ಅಭೀಕ್ ಕುಮಾರ್ ನಾಗ್ ಸಮ್ಮುಖದಲ್ಲೇ ಲಾಕರ್ ತೆರೆದಾಗ ಈ ಬೃಹತ್ ಮೊತ್ತದ ನಗದು ಪತ್ತೆಯಾಗಿದೆ. ಹಣವನ್ನು ಎಣಿಸಲು ಪೊಲೀಸರು ನಗದು ಎಣಿಕೆ ಯಂತ್ರವನ್ನು ಬಳಸಬೇಕಾಯಿತು. ಪ್ರಸ್ತುತ ಅಕೌಂಟೆಂಟ್ ಮತ್ತು ಜೂನಿಯರ್ ಅಕೌಂಟೆಂಟ್‌ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಗುತ್ತಿದ್ದು, ಶಾಲೆಯ ಕಂಪ್ಯೂಟರ್ ಹಾಗೂ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪಶ್ಚಿಮ ಬಂಗಾಳದ ಬಿಕ್ಕಟ್ಟಿನ ನಡುವೆ ಟಿಎಂಸಿ ವಿಲೀನದ ವದಂತಿ ತಿರಸ್ಕರಿಸಿದ ಕಾಂಗ್ರೆಸ್

ವಿದ್ಯಾರ್ಥಿಗಳ ಸಿಕ್ ರೂಮ್‌ನಲ್ಲಿ ಬೆಡ್‌ರೂಮ್ ಮಾದರಿ ಸೌಲಭ್ಯ!

ದಾಳಿಯ ವೇಳೆ ಶಾಲೆಯೊಳಗೆ ಮದ್ಯದ ಬಾಟಲಿಗಳು ಹಾಗೂ ಕಾಂಡೋ ಪ್ಯಾಕೆಟ್‌ಗಳು ಸಿಕ್ಕಿರುವುದು ಇಡೀ ಸಮಾಜವನ್ನು ಆಘಾತಕ್ಕೀಡು ಮಾಡಿದೆ. ವಿದ್ಯಾರ್ಥಿಗಳ ತುರ್ತು ಆರೋಗ್ಯದ ಹಿತದೃಷ್ಟಿಯಿಂದ ಇಡಲಾಗಿದ್ದ ಸಿಕ್ ರೂಮ್ ಅನ್ನು ಸುಸಜ್ಜಿತ ಬೆಡ್‌ರೂಮ್ ಆಗಿ ಮಾರ್ಪಡಿಸಲಾಗಿತ್ತು. ಈ ಬಗ್ಗೆ ತಮಗೇನೂ ತಿಳಿದಿಲ್ಲ ಮತ್ತು ತಾವೂ ಆಘಾತಕ್ಕೊಳಗಾಗಿದ್ದೇವೆ ಎಂದು ಪ್ರಾಂಶುಪಾಲರು ಹೇಳಿಕೊಂಡಿದ್ದಾರೆ. ಏಪ್ರಿಲ್‌ನಿಂದ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಶುಲ್ಕದ ಹಣವನ್ನು ಬ್ಯಾಂಕ್‌ಗೆ ಜಮಾ ಮಾಡದೆ ಅಕೌಂಟೆಂಟ್ ವಂಚಿಸಿದ್ದಾರೆ ಎಂದು ಅವರು ಆಡಳಿತ ಮಂಡಳಿ ವಿರುದ್ಧವೇ ಆರೋಪಿಸಿದ್ದಾರೆ.

ರಾಜಕೀಯ ವಿವಾದ ಮತ್ತು ತನಿಖೆಗೆ ಒತ್ತಾಯ

ಈ ಘಟನೆ ಈಗ ತೀವ್ರ ರಾಜಕೀಯ ತಿರುವು ಪಡೆದುಕೊಂಡಿದೆ. ಶಾಲೆಗೆ ಭೇಟಿ ನೀಡಿದ ಬಿಜೆಪಿ ಶಾಸಕ ಸುದೀಪ್ತಾ ದಾಸ್, "ಶಿಕ್ಷಣ ಸಂಸ್ಥೆಯೊಂದನ್ನು ಇಂತಹ ದಂಧೆಗಳ ಅಡ್ಡೆಯನ್ನಾಗಿ ಮಾರ್ಪಡಿಸಿರುವುದನ್ನು ನೋಡಿ ನನಗೆ ತೀವ್ರ ಮಾನಸಿಕ ಆಘಾತವಾಗಿದೆ. ಇದು ಕೇವಲ ಶಾಲೆಯ ಶುಲ್ಕದ ಹಣವಾಗಿರಲು ಸಾಧ್ಯವೇ ಇಲ್ಲ. ಇದರ ಹಿಂದೆ ಆಡಳಿತಾರೂಢ ಟಿಎಂಸಿ ನಾಯಕರ ಕಪ್ಪು ಹಣದ ಕೈವಾಡವಿದ್ದು, ಪಶ್ಚಿಮ ಬಂಗಾಳಕ್ಕೆ ಇದೊಂದು ಶಾಪ" ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ಪೊಲೀಸರು ಪ್ರಸ್ತುತ ಈ ನಗದಿನ ನೈಜ ಮೂಲ ಮತ್ತು ಶಾಲೆಯೊಳಗಿನ ಇತರ ಅಕ್ರಮ ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ಆಳವಾದ ತನಿಖೆ ಮುಂದುವರಿಸಿದ್ದಾರೆ.