ನವದೆಹಲಿ: ಸೋನಮ್ ವಾಂಗ್ಚುಕ್ (Sonam Wangchuk) ಅವರು ಕೊನೆಗೂ ತಮ್ಮ 26 ದಿನಗಳ ಉಪವಾಸ ಸತ್ಯಾಗ್ರಹವನ್ನು (hunger strike) ಕೊನೆಗೊಳಿಸಿದ್ದಾರೆ. ಕಳೆದ ಜೂನ್ 28ರಿಂದ ಉಪವಾಸ ಸತ್ಯಾಗ್ರಹದಲ್ಲಿರುವ ಅವರು ಗುರುವಾರ ರಾತ್ರಿ ಕೇಂದ್ರದ ಹಿರಿಯ ಸಚಿವರಾದ ಜೆ.ಪಿ. ನಡ್ಡಾ (JP Nadda) ಮತ್ತು ಜಿತೇಂದ್ರ ಸಿಂಗ್ ( Jitendra Singh) ಅವರ ಸಮ್ಮುಖದಲ್ಲಿ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದರು. ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಂಡಿದ್ದು ಇದರೊಂದಿಗೆ ಸೋನಮ್ ವಾಂಗ್ಚುಕ್ ಅವರ ಆರೋಗ್ಯದ ಬಗ್ಗೆ ಕಳವಳ ಹೆಚ್ಚಾಗಿದ್ದರಿಂದ ಕೇಂದ್ರ ಸರ್ಕಾರ ಬಿರುಸಿನ ಮಾತುಕತೆಯನ್ನು ನಡೆಸಿ ಸೋನಮ್ ವಾಂಗ್ಚುಕ್ ಅವರ ಎತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗುವುದಾಗಿ ಭರವಸೆ ನೀಡಿದ್ದರಿಂದ ಅವರು ಉಪವಾಸ ಸತ್ಯಾಗ್ರಹವನ್ನು ಅಂತಿಮಗೊಳಿಸಿದರು.
ಗುರುಗ್ರಾಮ್‌ನ ಮೇದಾಂತ ಆಸ್ಪತ್ರೆಯಲ್ಲಿ ಹಿರಿಯ ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರ ಸಮ್ಮುಖದಲ್ಲಿ ಗುರುವಾರ ರಾತ್ರಿ ಸೋನಮ್ ವಾಂಗ್ಚುಕ್ ಅವರು ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದರು. ಇದಕ್ಕೂ ಮೊದಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಆರೋಗ್ಯ ಸಚಿವ ಜೆ.ಪಿ. ನಡ್ಡಾ ಮತ್ತು ಪ್ರಧಾನಿ ಕಚೇರಿಯ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಅವರೊಂದಿಗೆ ಸುಮಾರು ನಾಲ್ಕು ಗಂಟೆಗಳ ಕಾಲ ಸಭೆ ನಡೆಸಿದರು.
ಮಧ್ಯರಾತ್ರಿ ಮೋದಿ ಸೆಲ್ಫಿ ವಿಡಿಯೊ: ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಇಂದು ಸಂಪುಟ ಸಭೆಯಲ್ಲಿ ಮಹತ್ತರ ನಿರ್ಧಾರ!
ಈ ಸಂದರ್ಭದಲ್ಲಿ ಅವರು ಸೋನಮ್ ವಾಂಗ್ಚುಕ್ ಎತ್ತಿರುವ ಬೇಡಿಕೆಗಳಿಗೆ ಸರ್ಕಾರ ಸಕಾರಾತ್ಮಕ ವಿಧಾನದ ಮೂಲಕ ಪರಿಹಾರ ಕ್ರಮಕೈಗೊಳ್ಳಲು ನಿರ್ಧರಿಸಿದರು. ಇದಕ್ಕೂ ಮೊದಲು ಅವರ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಆದ್ಯತೆ ನೀಡಲು ಸೂಚಿಸಿದ ಗೃಹ ಸಚಿವರ ನಿರ್ದೇಶನಗಳನ್ನು ಅನುಸರಿಸಿ ಡಾ. ಜಿತೇಂದ್ರ ಸಿಂಗ್ ಅವರು ಸೋನಮ್ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಆಂಗ್ಮೋ ಅವರೊಂದಿಗೆ ಮಾತನಾಡಿ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.
ಬಳಿಕ ಸೋನಮ್ ವಾಂಗ್ಚುಕ್ ಅವರ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸುವಂತೆ ಮನವೊಲಿಸಲು ಗೀತಾಂಜಲಿ ಆಂಗ್ಮೋ ಅವರನ್ನು ಒತ್ತಾಯಿಸಿದರು. ಇದರ ಬಳಿಕ ಸೋನಮ್ ಅವರು ತಮ್ಮ ಉಪವಾಸ ಸತ್ಯಾಗ್ರಹ ಕೊನೆಗೊಳಿಸಲು ಒಪ್ಪಿಕೊಂಡಿದ್ದರಿಂದ ಸಂಜೆ ವೇಳೆಗೆ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರು ಮೇದಾಂತ ಆಸ್ಪತ್ರೆಯಲ್ಲಿ ಅವರನ್ನು ಭೇಟಿ ಮಾಡಿ ಸರ್ಕಾರದ ಭರವಸೆ ಪತ್ರವನ್ನು ಅವರಿಗೆ ಹಸ್ತಾಂತರಿಸಿದರು.
ಸರ್ಕಾರ ನೀಡಿರುವ ಭರವಸೆ ಪ್ರಕಾರ ಶುಕ್ರವಾರ ಶಾಂತಿಯುತವಾದ ನಿರ್ದಿಷ್ಟ ಸ್ಥಳದಲ್ಲಿ ಸಿಜೆಪಿ ನಿಯೋಗವನ್ನು ಮಾತುಕತೆಗೆ ಸರ್ಕಾರ ಆಹ್ವಾನಿಸಲಿದೆ. ಈಗಾಗಲೇ ಜೆ.ಪಿ. ನಡ್ಡಾ ಅವರ ನಿವಾಸ ಅಥವಾ ಅವರ ಕಚೇರಿಯಲ್ಲಿ ಮಾತುಕತೆ ನಡೆಸುವ ಕುರಿತು ಕೇಂದ್ರದ ಪ್ರಸ್ತಾಪವನ್ನು ಸಿಜೆಪಿ ನಾಯಕರು ನಿರಾಕರಿಸಿದ್ದಾರೆ. ಅವರು ದೆಹಲಿಯ ಜಂತರ್ ಮಂತರ್ ಅಥವಾ ಅವರು ಸೂಚಿಸುವ ಸ್ಥಳದಲ್ಲಿ ಮಾತುಕತೆಗೆ ಬರುವಂತೆ ಸಚಿವರನ್ನು ಒತ್ತಾಯಿಸಿದ್ದಾರೆ.
ಇದರೊಂದಿಗೆ ವಾಂಗ್ಚುಕ್ ಅವರಿಗೆ ನೀಡಿರುವ ಮಾತಿನಂತೆ ಸಂಸತ್ತಿನಲ್ಲಿ ಮುಂದಿನ ವಾರ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ನಿಯಮದಡಿಯಲ್ಲಿ ವಿದ್ಯಾರ್ಥಿಗಳ ಬೇಡಿಕೆ ಕುರಿತು ಹೊಸ ಮಸೂದೆಯನ್ನು ಮಂಡಿಸಲಾಗುವುದು. ಇದಕ್ಕೆ ಸಂಪುಟದ ಅನುಮೋದನೆ ದೊರೆಯುವ ನಿರೀಕ್ಷೆಯಿದೆ.
ಇನ್ನು ಪ್ರತಿಭಟನಾ ನಿರತ ವಿದ್ಯಾರ್ಥಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಿರುವುದು ಸೇರಿದಂತೆ ಇತರ ಬೇಡಿಕೆಗಳ ಬಗ್ಗೆ ಕ್ರಮ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ.
ಸೋನಮ್ ಅವರ ಪತ್ನಿ ಗೀತಾಂಜಲಿ ಆಂಗ್ಮೋ ಮತ್ತು ಇತರರ ಸಮ್ಮುಖದಲ್ಲಿ ಸರ್ಕಾರದ ಭರವಸೆಗಳನ್ನು ಓದಿದ ಜೆಪಿ ನಡ್ಡಾ, ದೆಹಲಿಯ ಜಂತರ್ ಮಂತರ್‌ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವವರು ಮತ್ತು ಜುಲೈ 20ರಂದು ಸಂಸತ್ತಿಗೆ ನಡೆದ ಮೆರವಣಿಗೆಯಲ್ಲಿ ಭಾಗವಹಿಸಿದವರ ವಿರುದ್ಧ ಪ್ರಕರಣಗಳನ್ನು ದಾಖಲಿಸದಿರಲು ಸರ್ಕಾರ ನಿರ್ಧರಿಸಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಪರೀಕ್ಷೆಗಳಿಗೆ ಶಿಕ್ಷಣ ಸುಧಾರಣೆಗಳ ಕುರಿತು ಸಂಸತ್ತಿನಲ್ಲಿ ಚರ್ಚೆಗಳು ನಡೆಯಲಿದೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಆತ್ಮಹತ್ಯೆ ಮಾಡಿಕೊಂಡವರಿಗೆ ಸೂಕ್ತ ಪರಿಹಾರವನ್ನು ನೀಡಲಾಗುವುದು ಎಂದು ತಿಳಿಸಿದರು.
ಇದರ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಮಾಧ್ಯಮದ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡು, ಸೋನಮ್ ಜಿ ಅವರು ವೈದ್ಯರ ಸಲಹೆಯಂತೆ ತಮ್ಮ ದಿನಚರಿಯನ್ನು ಅನುಸರಿಸಬೇಕು ಮತ್ತು ಸಾಧ್ಯವಾದಷ್ಟು ಬೇಗ ತಮ್ಮ ತೂಕವನ್ನು ಮರಳಿ ಪಡೆಯಬೇಕೆಂದು ಒತ್ತಾಯಿಸುತ್ತೇನೆ. ಅವರು ಆರೋಗ್ಯವಾಗಿರಲಿ ಎಂದು ನಾನು ಸರ್ವಶಕ್ತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.
26 ದಿನಗಳ ಉಪವಾಸ ಕೊನೆಗೊಳಿಸಿದ ಸೋನಮ್ ವಾಂಗ್ಚುಕ್; ಕೊನೆಗೂ ಕೇಂದ್ರ ಸರ್ಕಾರದ ಸಂಧಾನ ಯಶಸ್ವಿ
ಉಪವಾಸ ಕೊನೆಗೊಳಿಸಿರುವ ಸೋನಮ್ ವಾಂಗ್ಚುಕ್ ಅವರು ಲಡಾಖ್‌ಗೆ ತೆರಳುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಇದಕ್ಕೂ ಮೊದಲು ಅವರು ಚಳುವಳಿಗೆ ಸಂಬಂಧಿಸಿದ ವಿದ್ಯಾರ್ಥಿಗಳು ಮತ್ತು ಬೆಂಬಲಿಗರೊಂದಿಗೆ ಸಂವಹನ ನಡೆಸುವುದಾಗಿ ತಿಳಿಸಿದ್ದಾರೆ.